ಬಾಲ್ಯ ವಿವಾಹಕ್ಕೆ ಪ್ರಚೋದನೆ ನೀಡಿದರೂ ಕಠಿಣ ಕ್ರಮ; ಶಿವಮೊಗ್ಗ ಡಿಸಿ ಎಚ್ಚರಿಕೆ
x

ಬಾಲ್ಯ ವಿವಾಹಕ್ಕೆ ಪ್ರಚೋದನೆ ನೀಡಿದರೂ ಕಠಿಣ ಕ್ರಮ; ಶಿವಮೊಗ್ಗ ಡಿಸಿ ಎಚ್ಚರಿಕೆ

ಬಾಲ್ಯ ವಿವಾಹ ಕೇವಲ ಕಾನೂನು ಉಲ್ಲಂಘನೆಯಲ್ಲ, ಅದೊಂದು ಅಪರಾಧ. ಬಾಲ್ಯ ವಿವಾಹಕ್ಕೆ ಪ್ರಚೋದನೆ ನೀಡುವವರು ಮತ್ತು ನೆರವಾಗುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಎಫ್‌ಐಆರ್ ದಾಖಲಿಸುವಂತೆ ಸೂಚಿಸಲಾಗಿದೆ.


Click the Play button to hear this message in audio format

ಶಿವಮೊಗ್ಗ ಜಿಲ್ಲೆಯಲ್ಲಿ ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗನ್ನು ಬೇರುಸಹಿತ ಕಿತ್ತೊಗೆಯಲು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಜಿಲ್ಲಾಡಳಿತ ಸಮರ ಸಾರಿದೆ. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮನ್ವಯ ಸಮಿತಿ ಸಭೆಯಲ್ಲಿ, ಬಾಲ್ಯ ವಿವಾಹದಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಶಾಲೆ ಬಿಟ್ಟ ಹೆಣ್ಣುಮಕ್ಕಳ ಬಗ್ಗೆ ನಿರಂತರ ಮೇಲ್ವಿಚಾರಣೆ ನಡೆಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, "ಸಮಾಜದ ಸ್ವಾಸ್ಥ್ಯ ಕೆಡಿಸುವ ಬಾಲ್ಯ ವಿವಾಹ ಕೇವಲ ಕಾನೂನು ಉಲ್ಲಂಘನೆಯಲ್ಲ, ಅದೊಂದು ಅಪರಾಧ. ಇನ್ನು ಮುಂದೆ ಬಾಲ್ಯ ವಿವಾಹ ನಡೆಸುವವರು, ಅದಕ್ಕೆ ಪ್ರಚೋದನೆ ನೀಡುವವರು ಮತ್ತು ನೆರವಾಗುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಎಫ್‌ಐಆರ್ ದಾಖಲಿಸಬೇಕು" ಎಂದು ನಿರ್ದೇಶನ ನೀಡಿದ್ದಾರೆ. ವಿಶೇಷವಾಗಿ ಶಾಲಾ-ಕಾಲೇಜುಗಳಿಗೆ ಸತತವಾಗಿ ಗೈರಾಗುವ ಹೆಣ್ಣುಮಕ್ಕಳನ್ನು ಗುರುತಿಸಿ, ಅವರ ಮನೆಗೆ ಭೇಟಿ ನೀಡಿ ಪೋಷಕರೊಂದಿಗೆ ಸಮಾಲೋಚನೆ ನಡೆಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮಂಜುನಾಥ್ ಮಾತನಾಡಿ, 2026-27ರ ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 79 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 61 ಪೋಕ್ಸೋ ಪ್ರಕರಣಗಳು ಮತ್ತು 18 ಬಾಲ್ಯ ವಿವಾಹ ಸಂಬಂಧಿತ ಪ್ರಕರಣಗಳು ಸೇರಿವೆ. ಈವರೆಗೆ 12 ಬಾಲ್ಯ ವಿವಾಹಗಳನ್ನು ಯಶಸ್ವಿಯಾಗಿ ತಡೆಗಟ್ಟಲಾಗಿದೆ. ಆದರೆ, ಜಿಲ್ಲೆಯಲ್ಲಿ 23 ಬಾಲ ಗರ್ಭಿಣಿಯರ ಪ್ರಕರಣಗಳು ಪತ್ತೆಯಾಗಿರುವುದು ಜಿಲ್ಲಾಡಳಿತದ ಕಳವಳಕ್ಕೆ ಕಾರಣವಾಗಿದೆ. ಈ ಎಲ್ಲ ಪ್ರಕರಣಗಳಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಜಾಗೃತಿ ಅಭಿಯಾನ

ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಬಗ್ಗೆ ಗ್ರಾಮ ಸಭೆಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಮಕ್ಕಳ ಸಹಾಯವಾಣಿ ಸಂಖ್ಯೆಗಳಾದ 1098 ಮತ್ತು 112ರ ಕುರಿತು ಪ್ರತಿಯೊಂದು ಹಳ್ಳಿಯ ಮನೆಮನೆಗೂ ಮಾಹಿತಿ ತಲುಪಿಸಬೇಕು. ಮನೆ ಬಿಟ್ಟು ಓಡಿಹೋಗುವ ಮಕ್ಕಳ ಪ್ರಕರಣಗಳನ್ನು ತಡೆಯಲು ಪೋಷಕರು ಮತ್ತು ಸ್ಥಳೀಯ ಸಮಿತಿಗಳು ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದರು.

ಅಂಗನವಾಡಿ ಕೇಂದ್ರಗಳ ಬಲವರ್ಧನೆ

ಜಿ.ಪಂ ಸಿಇಒ ಹೇಮಂತ್ ಅವರು ಜಿಲ್ಲೆಯ ಅಂಗನವಾಡಿ ಕೇಂದ್ರಗಳ ಕಾರ್ಯವೈಖರಿಯನ್ನು ಪರಾಮರ್ಶಿಸಿದರು. ಜಿಲ್ಲೆಯಲ್ಲಿ ಒಟ್ಟು 2,563 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ 237 ಕೇಂದ್ರಗಳು ಸ್ವಂತ ಕಟ್ಟಡವಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಇವುಗಳಿಗೆ ಸೂಕ್ತ ಜಾಗ ಗುರುತಿಸಿ ವರದಿ ಸಲ್ಲಿಸಲು ಸಿಡಿಪಿಓಗಳಿಗೆ ಸೂಚಿಸಲಾಗಿದೆ. ಅಮೃತ ನಗರೋತ್ಥಾನ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ಸೆಪ್ಟೆಂಬರ್ ಒಳಗಾಗಿ ಪೂರ್ಣಗೊಳಿಸಬೇಕು ಮತ್ತು ಭದ್ರಾವತಿಯಲ್ಲಿ ಮರು ಟೆಂಡರ್ ಮೂಲಕ ಬಾಕಿ ಕಾಮಗಾರಿಗಳನ್ನು ತುರ್ತಾಗಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಅಪೌಷ್ಟಿಕತೆ ನಿವಾರಣೆಗೆ ವಿಶೇಷ ಗಮನ

ಜಿಲ್ಲೆಯಲ್ಲಿ ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿರುವ 1,037 ಮಕ್ಕಳು ಮತ್ತು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 52 ಮಕ್ಕಳ ಆರೋಗ್ಯದ ಬಗ್ಗೆ ಜಿಲ್ಲಾಡಳಿತ ಗಂಭೀರ ಗಮನ ಹರಿಸಿದೆ. ಈ 52 ಮಕ್ಕಳನ್ನು ಎನ್‌ಆರ್‌ಸಿ ಕೇಂದ್ರಗಳಿಗೆ ದಾಖಲಿಸಿ ಉತ್ತಮ ಪೌಷ್ಟಿಕ ಆಹಾರ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಒಂದು ವೇಳೆ ಎನ್‌ಆರ್‌ಸಿಗೆ ಬರಲು ಸಾಧ್ಯವಾಗದಿದ್ದರೆ, ಆಶಾ ಕಾರ್ಯಕರ್ತೆಯರು ಪ್ರತಿ ಮೂರು ದಿನಕ್ಕೊಮ್ಮೆ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 36 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 14 ಪ್ರಕರಣಗಳನ್ನು ಈಗಾಗಲೇ ಇತ್ಯರ್ಥಗೊಳಿಸಲಾಗಿದೆ. ಉಳಿದ ಪ್ರಕರಣಗಳ ತನಿಖೆಯನ್ನು ತ್ವರಿತಗೊಳಿಸಿ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಬಾಲ್ಯ ವಿವಾಹ ತಡೆ ಟಾಸ್ಕ್ ಫೋರ್ಸ್ ಸಭೆಗಳನ್ನು ತಪ್ಪದೇ ನಡೆಸಬೇಕು. ವರದಿಗಳನ್ನು ಕಟ್ಟುನಿಟ್ಟಾಗಿ ಸಲ್ಲಿಸಬೇಕು. ಇಲಾಖೆಗಳ ನಡುವಿನ ಸಮನ್ವಯತೆಯ ಕೊರತೆಯಿಂದಾಗಿ ಹಲವು ಯೋಜನೆಗಳು ಅರ್ಹರಿಗೆ ತಲುಪುತ್ತಿಲ್ಲ, ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

Read More
Next Story