ಶೀಘ್ರದಲ್ಲೇ 7,925 ಹುದ್ದೆಗಳ ಭರ್ತಿ; ಇಲಾಖೆ ಆಧುನೀಕರಣಕ್ಕೆ 147 ಕೋಟಿರೂ. ಅನುದಾನ
x

ಶೀಘ್ರದಲ್ಲೇ 7,925 ಹುದ್ದೆಗಳ ಭರ್ತಿ; ಇಲಾಖೆ ಆಧುನೀಕರಣಕ್ಕೆ 147 ಕೋಟಿರೂ. ಅನುದಾನ

ಶಾಲೆ-ಕಾಲೇಜುಗಳ ಸುತ್ತಮುತ್ತ, ಪಬ್‌ಗಳು ಹಾಗೂ ಹೊರರಾಜ್ಯಗಳಿಂದ ಡ್ರಗ್ಸ್ ಸರಬರಾಜು ಮಾಡುವ ಜಾಲ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲು ಹಾಗೂ ಸಾರ್ವಜನಿಕರ ರಕ್ಷಣೆಗೆ ಹಗಲಿರುಳು ಶ್ರಮಿಸುವ ಪೊಲೀಸ್ ಇಲಾಖೆಯನ್ನು ಸರ್ವಸನ್ನದ್ಧಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯಲ್ಲಿ ಖಾಲಿ ಇರುವ 7,925 ಹುದ್ದೆಗಳನ್ನು ಶೀಘ್ರದಲ್ಲೇ ಪಾರದರ್ಶಕವಾಗಿ ಭರ್ತಿ ಮಾಡಲಾಗುವುದು ಮತ್ತು ಇಲಾಖೆಯ ತಾಂತ್ರಿಕ ಆಧುನೀಕರಣಕ್ಕಾಗಿ 147 ಕೋಟಿ ರೂಪಾಯಿಗಳ ವಿಶೇಷ ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಹುತಾತ್ಮರ ಸ್ಮರಣಾರ್ಥ ಕವಾಯತು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹುತಾತ್ಮ ಪೊಲೀಸರ ಸ್ಮಾರಕಕ್ಕೆ ಪುಷ್ಪಗುಚ್ಛ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. ಕಳೆದ ಮೂರು ವರ್ಷಗಳ ಅವಧಿಯಲ್ಲಿ ವಿವಿಧ ಶ್ರೇಣಿಯ ಒಟ್ಟು 5,911 ಪೊಲೀಸ್ ಹುದ್ದೆಗಳನ್ನು ಯಶಸ್ವಿಯಾಗಿ ಭರ್ತಿ ಮಾಡಲಾಗಿದೆ. ಪ್ರಸ್ತುತ ಇಲಾಖೆಯಲ್ಲಿ ಬಾಕಿ ಉಳಿದಿರುವ 7,925 ಹುದ್ದೆಗಳನ್ನು ಹಂತ-ಹಂತವಾಗಿ ನೇಮಕ ಮಾಡಿಕೊಳ್ಳಲು ಈಗಾಗಲೇ ಆಡಳಿತಾತ್ಮಕ ಪ್ರಕ್ರಿಯೆಗಳು ಚುರುಕುಗೊಂಡಿವೆ. ಹಿಂದಿನ ನೇಮಕಾತಿಗಳಲ್ಲಿ ಕೇಳಿಬರುತ್ತಿದ್ದ ಅಕ್ರಮ ಮತ್ತು ಭ್ರಷ್ಟಾಚಾರದ ದೂರುಗಳಿಗೆ ಶಾಶ್ವತ ಕಡಿವಾಣ ಹಾಕಲು ಕ್ರಾಂತಿಕಾರಿ ಹೆಜ್ಜೆ ಇಡಲಾಗಿದೆ. ಪೊಲೀಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ, ನಿಷ್ಪಕ್ಷಪಾತತೆ ಮತ್ತು ಅರ್ಹರಿಗೆ ಮಾತ್ರ ಅವಕಾಶ ಸಿಗುವುದನ್ನು ಖಚಿತಪಡಿಸಲು ರಾಜ್ಯದಲ್ಲಿ ಶಾಶ್ವತ ಪೊಲೀಸ್ ನೇಮಕಾತಿ ಮಂಡಳಿಯನ್ನು ಸ್ಥಾಪಿಸಲಾಗಿದೆ. ಬಡ ಪ್ರತಿಭಾವಂತ ಯುವಕ-ಯುವತಿಯರು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ತಮ್ಮ ಸ್ವಂತ ಸಾಮರ್ಥ್ಯದ ಮೇಲೆ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಲು ಇದು ದಾರಿ ಮಾಡಿಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

147 ಕೋಟಿ ರೂ. ವೆಚ್ಚದಲ್ಲಿ ಪೊಲೀಸ್ ಆಧುನೀಕರಣ ಮತ್ತು ಮೂಲಸೌಕರ್ಯ

ಬದಲಾಗುತ್ತಿರುವ ಅಪರಾಧ ಜಗತ್ತನ್ನು ಎದುರಿಸಲು ಪೊಲೀಸರು ಹಳೆಯ ಪದ್ಧತಿಗಳಿಗೆ ಜೋತುಬೀಳದೆ ಹೈಟೆಕ್ ಆಗುವುದು ಅನಿವಾರ್ಯವಾಗಿದೆ. ಇಲಾಖೆಯ ಮೂಲಸೌಕರ್ಯ ಅಭಿವೃದ್ಧಿಗೆ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಸೈಬರ್ ಅಪರಾಧ, ವಿಧಿವಿಜ್ಞಾನ, ಡ್ರೋನ್ ಕಣ್ಗಾವಲು, ಕೃತಕ ಬುದ್ಧಿಮತ್ತೆ ಆಧಾರಿತ ಸಿಸಿಟಿವಿ ನೆಟ್‌ವರ್ಕ್ ಮತ್ತು ಅತ್ಯಾಧುನಿಕ ಸಂವಹನ ಸಾಧನಗಳನ್ನು ಇಲಾಖೆಗೆ ಅಳವಡಿಸಲು 147 ಕೋಟಿ ರೂ. ಮೀಸಲಿಡಲಾಗಿದೆ. ಸಿಬ್ಬಂದಿಯ ನೆಮ್ಮದಿಯ ಬದುಕಿಗೆ ಉತ್ತಮ ವಸತಿ ಅತ್ಯಗತ್ಯ. ಹೀಗಾಗಿ ಪೊಲೀಸ್ ಗೃಹ ಯೋಜನೆಯಡಿ ಸುಸಜ್ಜಿತ ಕ್ವಾರ್ಟರ್ಸ್‌ಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಸಾರ್ವಜನಿಕರು ನಿರ್ಭಯವಾಗಿ ಬಂದು ದೂರು ನೀಡುವಂತೆ ರಾಜ್ಯದ ಹಳೆಯ ಪೊಲೀಸ್ ಠಾಣೆಗಳನ್ನು ನವೀಕರಿಸಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ತುರ್ತು ಸ್ಪಂದನೆಗಾಗಿ ಹೊಯ್ಸಳ ಮತ್ತು ಗಸ್ತು ವಾಹನಗಳ ಆಧುನೀಕರಣಕ್ಕೆ ಹೊಸ ವಾಹನಗಳನ್ನು ಖರೀದಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಭಾವಿಗಳಿಗೊಂದು, ಜನಸಾಮಾನ್ಯರಿಗೊಂದು ನ್ಯಾಯ ಸಲ್ಲದು

ಸಮವಸ್ತ್ರ ಧರಿಸಿದ ಪ್ರತಿಯೊಬ್ಬ ಅಧಿಕಾರಿಯೂ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕು. ಪೊಲೀಸರು ತಮ್ಮ ಕರ್ತವ್ಯವನ್ನು ಕೇವಲ ಉದ್ಯೋಗವೆಂದು ಭಾವಿಸದೆ, ಸಮಾಜ ಸೇವೆಯೆಂದು ಪ್ರೀತಿಯಿಂದ ನಿರ್ವಹಿಸಬೇಕು. ಕರ್ತವ್ಯದ ಮೇಲಿನ ಶ್ರದ್ಧೆ, ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ಠಾಣೆಯ ಮೆಟ್ಟಿಲೇರುವ ಪ್ರಭಾವಿಗಳು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಸಮಾಜದ ಕಟ್ಟಕಡೆಯ ಸಾಮಾನ್ಯ ಬಡ ಪ್ರಜೆಯನ್ನು ಕಾನೂನಿನ ದೃಷ್ಟಿಯಲ್ಲಿ ಸಮಾನವಾಗಿ ಕಾಣಬೇಕು. ಸಾಮಾನ್ಯರಿಗೆ ನ್ಯಾಯ ಸಿಕ್ಕಾಗ ಮಾತ್ರ ಪೊಲೀಸ್ ಇಲಾಖೆಯ ಗೌರವ ಹೆಚ್ಚಾಗುತ್ತದೆ. ಹೊಸ ತಂತ್ರಜ್ಞಾನಗಳು, ಅಪರಾಧ ತನಿಖಾ ಕೌಶಲಗಳನ್ನು ನಿರಂತರವಾಗಿ ಕಲಿಯುವ ಮೂಲಕ ಪೊಲೀಸರು ತಮ್ಮ ಸಾಮರ್ಥ್ಯವನ್ನು ನವೀಕರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಾದಕ ವಸ್ತುಗಳ ವಿರುದ್ಧ 'ವಿಶೇಷ ಕಾರ್ಯಪಡೆ' ರಚನೆ

ಯುವಜನರನ್ನು ಮತ್ತು ವಿದ್ಯಾರ್ಥಿ ಸಮುದಾಯವನ್ನು ಹಾಳುಮಾಡುತ್ತಿರುವ ಮಾದಕ ದ್ರವ್ಯ ಜಾಲದ ವಿರುದ್ಧ ರಾಜ್ಯ ಸರ್ಕಾರ ಯುದ್ಧ ಸಾರಿದೆ. ರಾಜ್ಯದ ಭವಿಷ್ಯವಾಗಿರುವ ಯುವಪೀಳಿಗೆಯನ್ನು ಡ್ರಗ್ಸ್ ಪಿಡುಗಿನಿಂದ ರಕ್ಷಿಸಲು ಇಲಾಖೆಯ ಅಡಿಯಲ್ಲಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಶಾಲೆ-ಕಾಲೇಜುಗಳ ಸುತ್ತಮುತ್ತ, ಪಬ್‌ಗಳು ಹಾಗೂ ಹೊರರಾಜ್ಯಗಳಿಂದ ಡ್ರಗ್ಸ್ ಸರಬರಾಜು ಮಾಡುವ ಜಾಲಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಅಹಿತಕರ ಘಟನೆಗಳನ್ನು ಸಹಿಸುವುದಿಲ್ಲ, ಈ ವಿಚಾರದಲ್ಲಿ ಸರ್ಕಾರ ಪೊಲೀಸರಿಗೆ ಸಂಪೂರ್ಣ ಮುಕ್ತ ಅಧಿಕಾರ ನೀಡಿದೆ ಎಂದು ಸ್ಪಷ್ಟಪಡಿಸಿದರು.

ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆ ಮತ್ತು ಕಾನೂನು ಸುವ್ಯವಸ್ಥೆಯ ಸವಾಲುಗಳ ಕುರಿತು ಸುದೀರ್ಘವಾಗಿ ಮಾತನಾಡಿದ ಅವರು, ಆಡಳಿತಾತ್ಮಕ ವಿಕೇಂದ್ರೀಕರಣದ ಮಹತ್ವದ ಯೋಜನೆಯನ್ನು ಪ್ರಸ್ತಾಪಿಸಿದರು. ಬೆಂಗಳೂರು ಇಂದು ಸುಮಾರು 1.40 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಜಾಗತಿಕ ಮಹಾನಗರವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ವಾಹನಗಳ ಸಂಖ್ಯೆಯೂ ಕೋಟಿ ದಾಟಿದೆ. ಇಂತಹ ಬೃಹತ್ ನಗರದಲ್ಲಿ ಸಂಚಾರ ನಿರ್ವಹಣೆ ಮತ್ತು ಅಪರಾಧ ನಿಯಂತ್ರಣ ಪೊಲೀಸರಿಗೆ ಅಗ್ನಿಪರೀಕ್ಷೆಯಾಗಿದೆ. ಸಂಚಾರ ದಟ್ಟಣೆಯನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು ಮತ್ತು ಪೊಲೀಸ್ ಆಡಳಿತವನ್ನು ಜನರ ಮನೆಬಾಗಿಲಿಗೆ ತಲುಪಿಸಲು ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯವಸ್ಥೆಯನ್ನು ಐದು ಪ್ರಮುಖ ಆಡಳಿತಾತ್ಮಕ ಭಾಗಗಳಾಗಿ (ವಲಯಗಳಾಗಿ) ಪುನರ್‌ವ್ಯವಸ್ಥೆಗೊಳಿಸಲು ಸರ್ಕಾರ ಗಂಭೀರ ಕ್ರಮ ಕೈಗೊಂಡಿದೆ. ಇದರಿಂದ ಆಯಾ ಭಾಗದ ಡಿಸಿಪಿ ಹಾಗೂ ಜಂಟಿ ಆಯುಕ್ತರಿಗೆ ಹೆಚ್ಚಿನ ಹೊಣೆಗಾರಿಕೆ ಮತ್ತು ಅಧಿಕಾರ ಸಿಗಲಿದ್ದು, ಸಂಚಾರ ನಿರ್ವಹಣೆ ಅತ್ಯಂತ ಸುಲಭವಾಗಲಿದೆ ಎಂದರು.

Read More
Next Story