Bangalore Rain Tragedy| ರಾಜಧಾನಿಯಲ್ಲಿ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ ಸೇರಿ ಒಟ್ಟು ಎಂಟು ಸಾವು
x
ಶಿವಾಜಿನಗರ ಬೌರಿಂಗ್‌ ಆಸ್ಪತ್ರೆಯ ಗೋಡೆ ಕುಸಿದ ಸ್ಥಳದಲ್ಲಿ ಸಿಎಂ ಪರಿಶೀಲಿಸಿದರು

Bangalore Rain Tragedy| ರಾಜಧಾನಿಯಲ್ಲಿ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ ಸೇರಿ ಒಟ್ಟು ಎಂಟು ಸಾವು

ಗುಡುಗು, ಸಿಡಿಲು ಸಹಿತ ಜೋರು ಮಳೆಯಾದ್ದರಿಂದ ರಕ್ಷಣೆಗಾಗಿ ನಿಂತಿದ್ದ ವ್ಯಾಪಾರಿಗಳು ಮತ್ತು ಪಾದಾಚಾರಿಗಳ ಮೇಲೆ ಗೋಡೆ ಕುಸಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಯುವಕ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ.


ಬೆಂಗಳೂರಿನಲ್ಲಿ ಬುಧವಾರ ಸಂಜೆ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್‌ ಕುಸಿದು ಏಳು ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಯಾರಬ್ ನಗರದಲ್ಲಿ ಬೈಕ್ ಪಾರ್ಕ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಯುವಕ ಮೃತಪಟ್ಟಿದ್ದಾರೆ. ಬೆಂಗಳೂರಿನ ಹಲವೆಡೆ ಮರಗಳು ಧರೆಗುರುಳಿದ್ದು, ಅಪಾರ ಹಾನಿ‌ ಸಂಭವಿಸಿದೆ.

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತದಲ್ಲಿ ಬೀದಿ ಬದಿ ವ್ಯಾಪಾರಿಗಳು ಹಾಗೂ ಪಾದಚಾರಿಗಳು ಮೃತಪಟ್ಟಿದ್ದು, ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ.

ಮಳೆ ಜೋರಾದ ಹಿನ್ನೆಲೆ ಎಲ್ಲರೂ ಅಂಗಡಿ ನೆನೆಯದಂತೆ ಟಾರ್ಪಲ್ ಹಾಕಿ ಅದರಡಿ ನಿಂತುಕೊಂಡಿದ್ದರು. ಈ ವೇಳೆ ರಭಸ ಮಳೆ ಹಾಗೂ ಗಾಳಿಗೆ ಗೋಡೆ ಏಕಾಏಕಿ ಕುಸಿದುಬಿದ್ದಿದೆ. ಘಟನೆ ಬೆನ್ನಲ್ಲೇ ಕಾರ್ಯಾಚರಣೆ ಚುರುಕುಗೊಳಿಸಲಾಯಿತು. ಅವಶೇಷಗಳಡಿ ಸಿಲುಕಿದವರನ್ನು ಸ್ಥಳೀಯರು, ಪೊಲೀಸರು ರಕ್ಷಿಸಿದರು.

ಶಾಂತಿನಗರ, ಜಯನಗರ, ಮೆಜೆಸ್ಟಿಕ್, ರಿಚ್‌ಮಂಡ್‌ ಸರ್ಕಲ್‌, ಕಾರ್ಪೊರೇಷನ್, ಎಂ.ಜಿ.ರಸ್ತೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಗುಡುಗು, ಸಿಡಿಲಿನ ಆರ್ಭಟ ವಿಪರೀತವಾಗಿತ್ತು. ಹಲವೆಡೆ ಮರದ ಕೊಂಬೆಗಳು ಗಾಳಿಗೆ ಮುರಿದು ಬಿದ್ದಿವೆ.

ಬೌರಿಂಗ್‌ ಆಸ್ಪತ್ರೆ ಗೋಡೆ ಕುಸಿತ ಕುರಿತ ಲೈವ್‌ ವಿಡಿಯೋ ಇಲ್ಲಿದೆ.


ಕೇವಲ ಅರ್ಧ ತಾಸಿನ ಭಾರೀ ಮಳೆಗೆ ನಗರದ ರಸ್ತೆಗಳು ತುಂಬಿ ಹರಿದವು. 40 ರಿಂದ 50 ಕಿ.ಮೀ ವೇಗದಲ್ಲಿ ಬೀಸಿದ ಗಾಳಿಗೆ ಪೊಲೀಸ್‌ ಆಯುಕ್ತರ ಕಚೇರಿ ಬಳಿ ಮರದ ಕೊಂಬೆ ಮುರಿದು ಬಿದ್ದಿದೆ.

ಉತ್ತರ ಮತ್ತು ಪೂರ್ವ ಬೆಂಗಳೂರಿನಲ್ಲಿ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದ್ದು, ಉಳಿದ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಹೊರಡಿಸಿದೆ. ಪೀಣ್ಯ, ಕಲ್ಯಾಣ ನಗರ, ಗೊರಗುಂಟೆ ಪಾಳ್ಯ, ಶಿವಾನಂದ ಸರ್ಕಲ್ ಮತ್ತು ನೆಲಮಂಗಲದ ಹಲವೆಡೆ ಮರಗಳು ಮರಗಳು ಧರೆಗುಳಿರುವ ಕುರಿತು ವರದಿಯಾಗಿದೆ. ಮರ ಬಿದ್ದು ಶೇಷಾದ್ರಿಪುರಂ-ಮಲ್ಲೇಶ್ವರಂ ರಸ್ತೆ ಬಂದ್ ಆಗಿದೆ. ಗೊರಗುಂಟೆಪಾಳ್ಯದಲ್ಲಿ ಗಾಳಿ ಮಳೆಯಿಂದಾಗಿ ಮರ ಬಿದ್ದ ಹಿನ್ನೆಲೆ ರಸ್ತೆ ಬದಿ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಕಾರಿನಲ್ಲಿ ಯಾರೂ ಇಲ್ಲದ ಹಿನ್ನೆಲೆ ಅನಾಹುತ ತಪ್ಪಿದೆ.

ಜಯನಗರ, ಜೆ.ಪಿ. ನಗರ ಮತ್ತು ದಕ್ಷಿಣ ಬೆಂಗಳೂರಿನ ಭಾಗಗಳಲ್ಲಿ ಚರಂಡಿಗಳು ಉಕ್ಕಿ ಹರಿದ ಪರಿಣಾಮ ವಾಹನ ಸವಾರರು ಪರಿತಪಿಸಬೇಕಾಯಿತು. ದೇವನಹಳ್ಳಿ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲ ಪ್ರದೇಶಗಳು, ಪೀಣ್ಯ ಮತ್ತು ಅಂಧ್ರಹಳ್ಳಿ ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಮುಂದಿನ ಕೆಲ ದಿನಗಳವರೆಗೆ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ (IMD) ನೀಡಿತ್ತು. ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ನಗರಕ್ಕೆ ಪೂರ್ವ ಮುಂಗಾರು ಮಳೆಯಿಂದ ತುಸು ತಂಪಾಗಿದೆ.

Live Updates

  • ಮಳೆಗಾಲದಲ್ಲಿ ಮುನ್ನೆಚ್ಚರಿಕೆ ವಹಿಸಲು ಮಾಜಿ ಪ್ರಧಾನಿ ಮನವಿ
    29 April 2026 10:15 PM IST

    ಮಳೆಗಾಲದಲ್ಲಿ ಮುನ್ನೆಚ್ಚರಿಕೆ ವಹಿಸಲು ಮಾಜಿ ಪ್ರಧಾನಿ ಮನವಿ

    ಬೆಂಗಳೂರಿನಲ್ಲಿ ಮಳೆ ಅನಾಹುತದಿಂದ ಬೋರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಎಂಟು ಮಂದಿ ಮೃತಪಟ್ಟಿರುವ ದುರದೃಷ್ಟಕರ ಘಟನೆ ನನಗೆ ಅತ್ಯಂತ ನೋವು ತಂದಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಪ್ರಧಾನಿಗಳು; ಈ ಘಟನೆ ನನಗೆ ಬಹಳ ದುಃಖ ತಂದಿದೆ. ದಯವಿಟ್ಟು ಮಳೆಯ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

    ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ವರ್ಗದವರಿಗೆ ನೋವುನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿರುವ ದೇವೇಗೌಡರು; ಸಾರ್ವಜನಿಕರು ದಯವಿಟ್ಟು ಗಾಳಿ, ಮಳೆ, ಗುಡುಗು, ಸಿಡಿಲಿನಂತಹ ಸಂದರ್ಭಗಳಲ್ಲಿ ಎಚ್ಚರದಿಂದ ಇರಬೇಕು. ರಕ್ಷಣೆಗಾಗಿ ಮರಗಳು, ಶೆಡ್, ಕಾಂಪೌಂಡ್ ಸೇರಿದಂತೆ ಹಳೆಯದಾದ ಕಟ್ಟಡಗಳ ಬಳಿ ನಿಲ್ಲಬೇಡಿ. ಪ್ರತಿಯೊಂದು ಜೀವವೂ ಅಮೂಲ್ಯ. ನಿಮ್ಮ ಪ್ರೀತಿ ಪಾತ್ರರೂ ನಿಮಗಾಗಿ ಕಾದಿರುತ್ತಾರೆ ಎಂಬುದನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

    ಇನ್ನು ಕೆಲವು ದಿನಗಳಲ್ಲಿ ಮಳೆಗಾಲ ಶುರುವಾಗಲಿದೆ. ರಾಜ್ಯ ಸರ್ಕಾರವು ಸಹ ಮಳೆ ಅನಾಹುತಗಳನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ.

    ಮೃತರ ಕುಟುಂಬಕ್ಕೆ ಮಾನವೀಯ ನೆಲೆಗಟ್ಟಿನಲ್ಲಿ ಮುಖ್ಯಮಂತ್ರಿಗಳು ಸೂಕ್ತ ಪರಿಹಾರವನ್ನು ಕೊಡಬೇಕೆಂದು ವಿನಂತಿ ಮಾಡುತ್ತೇನೆ ಎಂದು ಮಾಜಿ ಪ್ರಧಾನಿಗಳು ಮನವಿ ಮಾಡಿದ್ದಾರೆ.

  • ದುರಂತ ಮರುಕಳಿಸಿದಂತೆ ಶಾಶ್ವತ ಪರಿಹಾರ ರೂಪಿಸಲು ಎಚ್‌ಡಿಕೆ ಆಗ್ರಹ
    29 April 2026 10:14 PM IST

    ದುರಂತ ಮರುಕಳಿಸಿದಂತೆ ಶಾಶ್ವತ ಪರಿಹಾರ ರೂಪಿಸಲು ಎಚ್‌ಡಿಕೆ ಆಗ್ರಹ

    ಬೆಂಗಳೂರಿನಲ್ಲಿ ಬುಧವಾರ ಸುರಿದ ಭಾರಿ ಮಳೆಗೆ ಏಳು ಜನರ ತೀವ್ರ ಆಘಾತ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಮಳೆ ಅನಾಹುತಗಳು ಸಂಭವಿಸಿದಂತೆ ಶಾಶ್ವತ ಪರಿಹಾರೋಪಾಯಗಳನ್ನು ರೂಪಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು; ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ ಸಂದರ್ಭದಲ್ಲಿ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಮಕ್ಕಳು ಸೇರಿ ಏಳು ಜನರು ದುರ್ಮರಣಕ್ಕೆ ತುತ್ತಾಗಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಈ ಹೃದಯವಿದ್ರಾವಕ ದುರಂತ ನನ್ನ ಮನ ಕಲಕಿದೆ ಎಂದಿದ್ದಾರೆ.

    ಮೃತರ ಕುಟುಂಬಗಳಿಗೆ ನನ್ನ ಪ್ರಗಾಢ ಸಂತಾಪಗಳು ಹಾಗೂ ರಾಜ್ಯ ಸರಕಾರವು ಗಾಯಾಳುಗಳಿಗೆ ಎಲ್ಲಾ ಬಗೆಯ ತುರ್ತುಚಿಕಿತ್ಸೆ ನೀಡಿ ಅವರ ಕುಟುಂಬಗಳಿಗೆ ಅಗತ್ಯ ನೆರವು ನೀಡಬೇಕು ಮತ್ತು ಎಲ್ಲಾ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವರು ಹೇಳಿದಾರೆ.

    ಪ್ರತಿ ಬಾರಿ ಮಳೆ ಬಂದಾಗಲೂ ದುರಂತಗಳು ಸಂಭವಿಸುತ್ತಿವೆ. ಸರಕಾರ ಪಾಠ ಕಲಿಯುತ್ತಿಲ್ಲ. ನಗರದಲ್ಲಿ ಇಂತಹ ಅನಾಹುತಗಳು ಸಂಭವಿಸಿದಂತೆ ಶಾಶ್ವತ ಪರಿಹಾರಗಳನ್ನು ರೂಪಿಸುವ ಅಗತ್ಯವಿದೆ. ಇಷ್ಟಕ್ಕೂ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದಿದ್ದು ಹೇಗೆ? ಅದನ್ನು ಯಾವಾಗ ನಿರ್ಮಿಸಿದ್ದರು? ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಇದು ಯಾರ ನಿರ್ಲಕ್ಷ ಎಂಬುದನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು ಎಂದು ಕೇಂದ್ರ ಸಚಿವರು ಆಗ್ರಹಿಸಿದ್ದಾರೆ.

    ಸರಕಾರವು ಮೃತರ ಕುಟುಂಬಗಳ ನೆರವಿಗೆ ಧಾವಿಸುವುದು ಎಂದರೆ ಪರಿಹಾರ ನೀಡಿ ಕೈ ತೊಳೆದುಕೊಳ್ಳುವುದಲ್ಲ. ಇಂತಹ ಘೋರ ಘಟನೆಗಳು ಮರುಕಳಿಸದಂತೆ ಕಠಿಣ ಮುನ್ನೆಚ್ಚರಿಕೆ ವಹಿಸಬೇಕು. ಮಳೆ ನಿರ್ವಹಣೆ, ಕಟ್ಟೆಚ್ಚರ ಎಂದರೆ ನಿರಂತರ ಪ್ರಕ್ರಿಯೆ. ಆದರೆ, ಇಲ್ಲಿ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ನಡೆಯುತ್ತಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

  • 29 April 2026 9:34 PM IST

    ವಿದ್ಯುತ್‌ ಸ್ಪರ್ಶಿಸಿ ಯುವಕ ಸಾವು

    ಬೆಂಗಳೂರಿನ ಯಾರಬ್‌ ನಗರದಲ್ಲಿ ರಣ ಮಳೆಗೆ ವಿದ್ಯಾರ್ಥಿಯೊಬ್ಬರು ಬಲಿಯಾಗಿದ್ದಾರೆ. ಬೌರಿಂಗ್‌ ಆಸ್ಪತ್ರೆ ಗೋಡೆ ಕುಸಿತ ಪ್ರಕರಣದಲ್ಲಿ ಏಳು ಮಂದಿ ಸಾವಿಗೀಡಾದ ಬೆನ್ನಲ್ಲೇ ಯಾರಬ್‌ ನಗರದಲ್ಲಿ ಬೈಕ್‌ ಪಾರ್ಕ್‌ ಮಾಡುವಾಗ ವಿದ್ಯುತ್‌ ಸ್ಪರ್ಶಿಸಿ ಯುವಕ ಮೃತಪಟ್ಟಿದ್ದಾರೆ. 


  • ಜಿಬಿಎ ಅಧಿಕಾರಿಗಳಿಗೆ ಸಿಎಂ ಕ್ಲಾಸ್‌
    29 April 2026 8:09 PM IST

    ಜಿಬಿಎ ಅಧಿಕಾರಿಗಳಿಗೆ ಸಿಎಂ ಕ್ಲಾಸ್‌

    ಬೆಂಗಳೂರಿನ ಶಿವಾಜಿನಗರದಲ್ಲಿ ಮಳೆಯಿಂದ ಕಾಂಪೌಂಡ್ ಕುಸಿದು ಏಳು ಮಂದಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. 

    ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡರು.

    ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿತ ಪ್ರಕರಣದಲ್ಲಿ 7 ಮಂದಿ ಮೃತಪಟ್ಟಿರುವುದನ್ನು ಅಧಿಕಾರಿಗಳು ಖಚಿತಪಡಿಸಿದರು. ವ್ಯಾಪಾರ ಮಾಡುತ್ತಿದ್ದವರ ಮೇಲೆ ಗೋಡೆ ಕುಸಿದ ಘಟನೆ ಬಗ್ಗೆ ಆಕ್ರೋಶಗೊಂಡ ಸಿಎಂ ಸ್ಥಳದಲ್ಲೇ ತನಿಖೆಗೆ ಆದೇಶ ನೀಡಿದರು.

    ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ ಸಿಎಂ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.

    ಬೌರಿಂಗ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಸಿಎಂ ಭೇಟಿ ನೀಡಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.  

    "ಏನ್ ಕ್ರಮ ಕೈಗೊಂಡಿದ್ದೀರಿ ಎಂದು ಸಿಎಂ ಕ್ಲಾಸ್ ತೆಗೆದುಕೊಂಡರು, ಹಳೆ ಗೋಡೆ ನೋಡೋಕಾಗಲ್ವಾ...? ನಿಮ್ಮ ಮಧ್ಯೆ ಕೋ ಆರ್ಡಿನೇಷನ್ ಇರಲ್ವಾ? ಎಚ್ಚರವಹಿಸಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತು ಎಂದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತರಾಟೆ ತೆಗೆದುಕೊಂಡರು.

  • ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ
    29 April 2026 7:48 PM IST

    ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

    ಬೌರಿಂಗ್‌ ಆಸ್ಪತ್ರೆ ಗೋಡೆ ಕುಸಿತ ಪ್ರಕರಣದಲ್ಲಿ ಏಳು ಮಂದಿ ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಮೃತರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ. ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದ ವತಿಯಿಂದ ತಲಾ 5ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. 

    ಇನ್ನು ಗೋಡೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಿಎಂ ಆದೇಶಿಸಿದ್ದಾರೆ.  

  • ಮೃತರ ಕುಟುಂಬಗಳಿಗೆ ಅಗತ್ಯ ನೆರವು: ಡಿಕೆಶಿ
    29 April 2026 7:36 PM IST

    ಮೃತರ ಕುಟುಂಬಗಳಿಗೆ ಅಗತ್ಯ ನೆರವು: ಡಿಕೆಶಿ

    ಬೆಂಗಳೂರಿನಲ್ಲಿ ಬುಧವಾರ ಸಂಜೆ ಭಾರೀ ಮಳೆಯಾಗಿದೆ. ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆ ಬಳಿ ಗೋಡೆ ಕುಸಿದು ಏಳು ಮಂದಿ ಮೃತಪಟ್ಟಿದ್ದು, ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ನಾನು ಕನಕಪುರದಲ್ಲಿ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ತೆರಳುತ್ತಿದ್ದೇನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು. ಮೃತರ ಕುಟುಂಬಗಳಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು. 


  • ಬೌರಿಂಗ್‌ ಆಸ್ಪತ್ರೆ ಗೋಡೆ ಕುಸಿತ; ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಿಎಂ
    29 April 2026 7:27 PM IST

    ಬೌರಿಂಗ್‌ ಆಸ್ಪತ್ರೆ ಗೋಡೆ ಕುಸಿತ; ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಿಎಂ

    ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಎಂಟು ಮಂದಿ ಸಾವನ್ನಪ್ಪಿದ ಹಿನ್ನೆಲೆ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಬೌರಿಂಗ್‌ ಆಸ್ಪತ್ರೆಗೆ ತುರ್ತು ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.


  • ಬೆಂಗಳೂರಿನ 50 ಕಡೆ ಧರೆಗುರುಳಿದ ಮರಗಳು
    29 April 2026 7:22 PM IST

    ಬೆಂಗಳೂರಿನ 50 ಕಡೆ ಧರೆಗುರುಳಿದ ಮರಗಳು

    ಬಿಬಿಎಂಪಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಪ್ರಕಾರ ಬೆಂಗಳೂರಿನ 50 ಸ್ಥಳಗಳಲ್ಲಿ ಮರಗಳು ಧರೆಗೆ ಉರುಳಿವೆ. ಮೆಜೆಸ್ಟಿಕ್‌, ಕೆ.ಆರ್‌.ಮಾರ್ಕೆಟ್‌, ಕಾರ್ಪೊರೇಷನ್‌, ಪೀಣ್ಯ, ಜಯನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ರಭಸದ ಮಳೆಯಾಗಿದೆ. ಇದರಿಂದ ಹಲವು ಕಡೆ ಮರಗಳು ಬುಡಸಮೇತ ರಸ್ತೆಗೆ ಉರುಳಿವೆ.  

    ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ಸಿಬ್ಬಂದಿ ಮರಗಳನ್ನು ತೆರವು ಮಾಡುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

  • ಗೋಡೆ ಕುಸಿತ: ಘಟನಾ ಸ್ಥಳಕ್ಕೆ ಸಿಎಂ ಭೇಟಿ, ಪರಿಶೀಲನೆ
    29 April 2026 7:17 PM IST

    ಗೋಡೆ ಕುಸಿತ: ಘಟನಾ ಸ್ಥಳಕ್ಕೆ ಸಿಎಂ ಭೇಟಿ, ಪರಿಶೀಲನೆ

    ಬೆಂಗಳೂರಿನ ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆ ಬಳಿ ಗೋಡೆ ಕುಸಿತ ಪ್ರಕರಣದಲ್ಲಿ ಮೃತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ ಗಾಯಾಳುಗಳು ಹಾಗೂ ಮೃತರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. 

    ಘಟನಾ ಸ್ಥಳದಲ್ಲಿ ಅವಶೇಷಗಳಡಿ ಇನ್ನಷ್ಟು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಘಟನೆ ಕುರಿತಂತೆ ಕೂಲಂಕಷ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.

Read More
Next Story