ಮೀಸಲಾತಿ ಹೆಚ್ಚಳಕ್ಕೆ ಹೈಕೋರ್ಟ್ ತಡೆ: ಸುಪ್ರೀಂ ಮೆಟ್ಟಿಲೇರಲು ಸರ್ಕಾರ ಸಿದ್ಧತೆ
x

ಮೀಸಲಾತಿ ಹೆಚ್ಚಳಕ್ಕೆ ಹೈಕೋರ್ಟ್ ತಡೆ: ಸುಪ್ರೀಂ ಮೆಟ್ಟಿಲೇರಲು ಸರ್ಕಾರ ಸಿದ್ಧತೆ

ತಮಿಳುನಾಡಿನಲ್ಲಿ ಶೇ. 69ರಷ್ಟು ಮೀಸಲಾತಿ ಜಾರಿಯಲ್ಲಿರುವಾಗ, ರಾಜ್ಯದ ಪರಿಸ್ಥಿತಿಯನ್ನೂ ಅದೇ ರೀತಿ ವಿಶೇಷ ಪ್ರಕರಣವೆಂದು ಕೋರ್ಟ್‌ ಪರಿಗಣಿಸಬಹುದಿತ್ತು ಎಂದು‌ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.


Click the Play button to hear this message in audio format

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಕುರಿತು ಸಚಿವ ಸಂಪುಟದಲ್ಲಿ ಸಮಗ್ರವಾಗಿ ಚರ್ಚಿಸಿ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದು ಸೇರಿದಂತೆ ಮುಂದಿನ ಕಾನೂನಾತ್ಮಕ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಹೆಚ್ಚಿಸುವ ವಿಷಯವು ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರವು ಎಸ್‌ಸಿ ಮೀಸಲಾತಿಯನ್ನು ಶೇ. 15ರಿಂದ ಶೇ. 17ಕ್ಕೆ ಮತ್ತು ಎಸ್‌ಟಿ ಮೀಸಲಾತಿಯನ್ನು ಶೇ. 3ರಿಂದ ಶೇ. 7ಕ್ಕೆ ಹೆಚ್ಚಿಸಿ, ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ. 56ಕ್ಕೆ ಏರಿಕೆ ಮಾಡಿತ್ತು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿಯನ್ನು ಕೇವಲ ಆಡಳಿತಾತ್ಮಕ ಆದೇಶವಾಗಿ ನೋಡಲಿಲ್ಲ, ಅದೊಂದು ಸಾಮಾಜಿಕ ನ್ಯಾಯದ ಹಕ್ಕು ಎಂದು ಪರಿಗಣಿಸಿದರು. ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾದ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕೆಂಬುದು ಸಂವಿಧಾನದ ಮೂಲ ಆಶಯ. ಈ ದೃಷ್ಟಿಯಿಂದ ನೋಡಿದಾಗ, ಅಸಾಧಾರಣ ಸಂದರ್ಭಗಳನ್ನು ಪರಿಗಣಿಸಿ ಮೀಸಲಾತಿಯನ್ನು ಶೇ. 50ರ ಮಿತಿಗಿಂತ ಹೆಚ್ಚಿಸುವ ಅವಕಾಶ ಇತ್ತು. ತಮಿಳುನಾಡಿನಲ್ಲಿ ಶೇ. 69ರಷ್ಟು ಮೀಸಲಾತಿ ಜಾರಿಯಲ್ಲಿರುವಾಗ, ಕರ್ನಾಟಕದ ಪರಿಸ್ಥಿತಿಯನ್ನೂ ಅದೇ ರೀತಿ ವಿಶೇಷ ಪ್ರಕರಣವೆಂದು ಪರಿಗಣಿಸಬಹುದಿತ್ತು ಎಂದು ಹೇಳಿದರು.

ಅಡ್ವೊಕೇಟ್ ಜನರಲ್ ಮತ್ತು ಕಾನೂನು ತಜ್ಞರೊಂದಿಗೆ ಚರ್ಚಿಸಿ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಈ ತೀರ್ಪಿನಿಂದ ಈಗಾಗಲೇ ನೇಮಕಗೊಂಡವರು ಮತ್ತು ಪ್ರವೇಶ ಪಡೆದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಆಗುವ ಪರಿಣಾಮಗಳ ಕುರಿತು ಗಂಭೀರ ಚಿಂತನೆ ನಡೆಸುತ್ತಿದ್ದೇವೆ ಎಂದರು.

ಮತದಾರರ ಪಟ್ಟಿ ಪರಿಷ್ಕರಣೆ

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಗೊಂದಲಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪರಮೇಶ್ವರ ಅವರು, ಚುನಾವಣಾ ಆಯೋಗವು ಸಂಪೂರ್ಣ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕೆಂದು ಆಗ್ರಹಿಸಿದರು. ರಾಜ್ಯದಲ್ಲಿ ಸುಮಾರು 1.08 ಕೋಟಿ ಜನರನ್ನು ವಿವಿಧ ಕಾರಣಗಳಿಂದ 'ಪಟ್ಟಿ ಪರಿಷ್ಕರಣೆ'ಗೆ ಗುರಿಪಡಿಸಿರುವುದು ಗಂಭೀರ ವಿಷಯವಾಗಿದೆ. ಶೇ. 11ರಷ್ಟು ಜನಸಂಖ್ಯೆಯನ್ನು ಸ್ಥಳಾಂತರಗೊಂಡವರು ಎಂದು ಗುರುತಿಸಿರುವುದು ಎಂತಹ ಅಚ್ಚರಿ? ಅವರು ಸ್ಥಳಾಂತರಗೊಂಡಿದ್ದರೆ ಬೇರೆ ಕಡೆ ಮತದಾರರಾಗಿರಬೇಕು, ಇಲ್ಲವಾದರೆ ಮತದಾನದ ಹಕ್ಕಿನಿಂದ ವಂಚಿತರಾಗುತ್ತಾರೆ. ಇದರ ಹಿಂದಿನ ಉದ್ದೇಶವೇನು? ಅದರಲ್ಲೂ ಫಾರಂ-7 ಅರ್ಜಿಗಳನ್ನು ಗಮನಿಸಿದರೆ, ಒಬ್ಬ ವ್ಯಕ್ತಿ 50 ಅರ್ಜಿಗಳಿಗೆ ಅವಕಾಶವಿರುವಾಗ 400 ಅರ್ಜಿಗಳನ್ನು ಸಲ್ಲಿಸುತ್ತಿರುವುದು ಮತ್ತು ಅದರಲ್ಲಿಯೂ ನಿರ್ದಿಷ್ಟ ಸಮುದಾಯದವರ ಹೆಸರನ್ನು ಗುರಿಯಾಗಿಸುವುದು ವ್ಯವಸ್ಥಿತ ಪಿತೂರಿಯಂತೆ ಕಾಣುತ್ತಿದೆ ಎಂದು ಆರೋಪಿಸಿದರು. ಚುನಾವಣಾ ಆಯೋಗವು ಇಂತಹ ಪಾರದರ್ಶಕವಲ್ಲದ ಪ್ರಕ್ರಿಯೆಗಳಿಗೆ ಉತ್ತರ ನೀಡಬೇಕೆಂದು ಅವರು ಆಗ್ರಹಿಸಿದರು. ಪೊಲೀಸರು ದಾಖಲಿಸಿರುವ ಪ್ರಕರಣಗಳ ಬಗ್ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಕುರಿತು ಮಾತನಾಡುತ್ತಾ, ತಮ್ಮ ಹೋರಾಟವು ನ್ಯಾಯಾಲಯದ ವಿರುದ್ಧವಲ್ಲ, ಬದಲಿಗೆ ಆಯೋಗದ ಕಾರ್ಯವಿಧಾನದ ಪಾರದರ್ಶಕತೆಯ ಬಗ್ಗೆ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಗಳ ಭದ್ರತೆ ಹಾಗೂ ಶಿಷ್ಟಾಚಾರದ ಮಿತಿ

ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭದ್ರತಾ ಸಿಬ್ಬಂದಿ ತಳ್ಳಿದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿಗಳು, ಭದ್ರತಾ ದೃಷ್ಟಿಯಿಂದ ಇಂತಹ ಘಟನೆಗಳು ಅನಿವಾರ್ಯವಾಗಬಹುದು ಎಂದು ಸಮರ್ಥಿಸಿಕೊಂಡರು. ಜನಸಂದಣಿ ಹೆಚ್ಚಾದಾಗ ಸಿಬ್ಬಂದಿ ವ್ಯಕ್ತಿಗಳಿಗಿಂತ ಭದ್ರತೆಗೆ ಮೊದಲ ಆದ್ಯತೆ ನೀಡುತ್ತಾರೆ. ರಾಹುಲ್ ಗಾಂಧಿ ಅವರ ಭದ್ರತೆಯನ್ನು ಕಾಯುವ ಒತ್ತಡದಲ್ಲಿ ಸಿಬ್ಬಂದಿ ಸ್ವಲ್ಪ ಕಠಿಣವಾಗಿ ವರ್ತಿಸಿರಬಹುದು, ಆದರೆ ಇದು ಉದ್ದೇಶಪೂರ್ವಕವಲ್ಲ ಎಂದು ತಿಳಿಸಿದರು.

Read More
Next Story