x

ಸತೀಶ್ ಜಾರಕಿಹೊಳಿ ಮೇಲೆ ED ದಾಳಿ: ರಾಜಕೀಯ ದಾಳವಾಗಿ ಬಳಕೆಯಾಯಿತೇ ಇಡಿ?

ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಚರ್ಚೆ ಈಗ ಜಾರಕಿಹೊಳಿ ಪ್ರಕರಣದ ಮೂಲಕ ಮತ್ತೆ ಮುನ್ನೆಲೆಗೆ ಬಂದಿದೆ.


ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿದ ದಾಳಿಯ ನಂತರ ವಿದೇಶಗಳಲ್ಲಿ ಹೂಡಿಕೆ ಮಾಡಿರುವ ಕುರಿತು ಹಾಗೂ ಟೆಂಡರ್ ನೀಡಲು ಗುತ್ತಿಗೆದಾರರಿಂದ ಲಂಚ ಪಡೆದಿರುವ ಆರೋಪಗಳು ಕೇಳಿಬಂದಿವೆ.

ಕಾಂಗೋ ದೇಶದ ಚಿನ್ನದ ಗಣಿಗಾರಿಕೆ ಕಂಪನಿಯಲ್ಲಿ ಶೇ. 40ರಷ್ಟು ಪಾಲು ಹಾಗೂ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಮತ್ತು ಸಂಬಂಧಿ ಮಹಾದೇವಿ ಮಂಜುನಾಥ್ ಹೆಸರಿನಲ್ಲಿ ಕಾಂಗೋ ಹಾಗೂ ಜಾಂಬಿಯಾದಲ್ಲಿ ಷೇರುಗಳಿರುವ ದಾಖಲೆಗಳು ಪತ್ತೆಯಾಗಿವೆ ಎಂದು ಇಡಿ ತಿಳಿಸಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಬಳಸಿದ್ದ ಶೇ.40 ರಷ್ಟು ಕಮಿಷನ್ ಅಸ್ತ್ರವನ್ನು ಈಗ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾಂಗ್ರೆಸ್ ವಿರುದ್ಧವೇ ತಿರುಗಿಸಿದ್ದಾರೆ. ವಾಲ್ಮೀಕಿ ನಿಗಮದ ಹಗರಣ ಸೇರಿ ಹಲವು ವಿವಾದಗಳ ಬೆನ್ನಲ್ಲೇ ದಾಳಿ ನಡೆದಿರುವುದು ಸರ್ಕಾರಕ್ಕೆ ರಾಜಕೀಯ ಒತ್ತಡ ತಂದಿದೆ. ಮತ್ತೊಂದೆಡೆ, ಇದು ರಾಜಕೀಯ ಪ್ರೇರಿತ ದಾಳಿ ಎಂದು ಕಾಂಗ್ರೆಸ್ ಖಂಡಿಸಿದೆ. ಅಲ್ಲದೇ ಇಡಿ ದಾಖಲಿಸಿದ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಎಷ್ಟು ಎಂಬುದನ್ನು ಕಾಂಗ್ರೆಸ್‌ ನಾಯಕರು ಪ್ರಶ್ನಿಸಿದ್ದಾರೆ. ನ್ಯಾಯಾಲಯದಲ್ಲಿ ಆರೋಪ ಸಾಬೀತಾಗುವವರೆಗೆ ಇವು ಕೇವಲ ಆರೋಪಗಳಷ್ಟೇ ಎಂದು ವಿಶ್ಲೇಷಿಸಲಾಗಿದೆ.

ರಾಜ್ಯದಲ್ಲಿ ಈ ಹಿಂದೆಯೂ ಕಾಂಗ್ರೆಸ್ ನಾಯಕರ ಮೇಲೆ ಇಡಿ ದಾಳೀ ನಡೆಸಿತ್ತು. ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಂಧನ, ಮಾಜಿ ಸಚಿವ ಬಿ. ನಾಗೇಂದ್ರ ಬಂಧನ (ವಾಲ್ಮೀಕಿ ನಿಗಮ ಹಗರಣ), ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ತನಿಖೆ, ಜಮೀರ್ ಅಹ್ಮದ್ ಖಾನ್ ಹಾಗೂ ಎನ್.ಎ. ಹ್ಯಾರಿಸ್ ಕುಟುಂಬದವರ ಮೇಲಿನ ಶೋಧಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ದೇಶಾದ್ಯಂತ ಇಡಿ ದಾಖಲಿಸಿರುವ ಸಾವಿರಾರು ಪ್ರಕರಣಗಳಲ್ಲಿ, ವಿಚಾರಣೆ ಪೂರ್ಣಗೊಂಡಿರುವ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ, ಪೂರ್ಣಗೊಂಡ ಕಡೆಗಳಲ್ಲಿ ಶಿಕ್ಷೆಯ ಪ್ರಮಾಣ ಶೇ. 93ಕ್ಕಿಂತ ಹೆಚ್ಚಿದೆ ಎಂದು ಇಡಿ ಅಂಕಿ-ಅಂಶಗಳು ತಿಳಿಸುತ್ತವೆ. ಆದರೆ, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಚರ್ಚೆ ಈಗ ಜಾರಕಿಹೊಳಿ ಪ್ರಕರಣದ ಮೂಲಕ ಮತ್ತೆ ಮುನ್ನೆಲೆಗೆ ಬಂದಿದೆ.

ಸತೀಶ್ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬರುವ ದಿನಗಳಲ್ಲಿ ತನಿಖಾ ಸಂಸ್ಥೆಗಳು ಮಂಡಿಸಲಿರುವ ಸಾಕ್ಷ್ಯಾಧಾರಗಳು ಮತ್ತು ನ್ಯಾಯಾಲಯದ ತೀರ್ಪು ಕರ್ನಾಟಕದ ಅಹಿಂದ ರಾಜಕಾರಣದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದು ಕುತೂಹಲ ಮೂಡಿಸಿದೆ.

Read More
Next Story