I have always been pro-Ahinda, Minister Satish Jarkiholi has his eyes on the 2028 elections
x

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ನೋಟಿಸ್ ನೀಡುವ ಸಾಧ್ಯತೆಯಿದೆ. 

ಸತೀಶ್ ಜಾರಕಿಹೊಳಿಗೆ ಇಡಿ ನೊಟೀಸ್‌ ಸಾಧ್ಯತೆ: ಲೋಕಾಯುಕ್ತಕ್ಕೆ ಪತ್ರ?

ದೆಹಲಿಯ ಇಡಿ ಕೇಂದ್ರ ಕಚೇರಿಯ ಉನ್ನತ ಅಧಿಕಾರಿಗಳ ತಂಡವೊಂದು ದಿಢೀರ್ ಎಂದು ಬೆಂಗಳೂರಿಗೆ ಆಗಮಿಸಿರುವುದು ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.


Click the Play button to hear this message in audio format

ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಅವರ ಕುಟುಂಬ ಮತ್ತು ಆಪ್ತರಿಗೆ ಸೇರಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ಶೋಧ ಕಾರ್ಯಾಚರಣೆ ಇದೀಗ ಮತ್ತೊಂದು ಹಂತಕ್ಕೆ ತಲುಪುವ ಸಾಧ್ಯತೆ ಇದೆ. ದಾಳಿಯ ವೇಳೆ ವಶಪಡಿಸಿಕೊಂಡ ದಾಖಲೆಗಳು, ಹಣಕಾಸು ವ್ಯವಹಾರಗಳು ಹಾಗೂ ಗುತ್ತಿಗೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಇಡಿ ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಮುಂದಿನ ಹಂತದಲ್ಲಿ ಸಚಿವರಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಆದರೆ, ನೋಟಿಸ್ ನೀಡಲಾಗಿದೆ ಎಂಬ ಅಧಿಕೃತ ಮಾಹಿತಿ ಸದ್ಯಕ್ಕೆ ಹೊರಬಿದ್ದಿಲ್ಲ. ಸ್ವತಃ ಸತೀಶ್ ಜಾರಕಿಹೊಳಿ ಕೂಡ ನೋಟಿಸ್ ನೀಡಿದರೆ ಉತ್ತರಿಸುವುದಾಗಿ ಹೇಳಿದ್ದಾರೆ.

21 ಸ್ಥಳಗಳಲ್ಲಿ ಇಡಿ ಶೋಧ; ನಗದು, ದಾಖಲೆ ವಶ

ಸೆಪ್ಟೆಂಬರ್ 9 ಮತ್ತು 10ರಂದು ಬೆಂಗಳೂರು, ಬೆಳಗಾವಿ, ಗೋಕಾಕ್ ಹಾಗೂ ಕೋಲ್ಕತ್ತಾದಲ್ಲಿ ಸತೀಶ್ ಜಾರಕಿಹೊಳಿ, ಅವರ ಕುಟುಂಬ ಸದಸ್ಯರು ಹಾಗೂ ಆಪ್ತರಿಗೆ ಸಂಬಂಧಿಸಿದ 21 ಸ್ಥಳಗಳಲ್ಲಿ ಇಡಿ ಶೋಧ ನಡೆಸಿತ್ತು. ಕಾರ್ಯಾಚರಣೆಯಲ್ಲಿ 3.3 ಕೋಟಿ ರೂಪಾಯಿ ಮೌಲ್ಯದ ಲೆಕ್ಕಕ್ಕೆ ಸಿಗದ ಭಾರತೀಯ ಕರೆನ್ಸಿ, ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ, ಡಿಜಿಟಲ್ ಸಾಧನಗಳು ಮತ್ತು ವಿವಿಧ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.

ಇಡಿ ಹೇಳಿಕೆಯ ಪ್ರಕಾರ, ಕೆಲವು ದಾಖಲೆಗಳು ಕರ್ನಾಟಕದ ಲೋಕೋಪಯೋಗಿ ಇಲಾಖೆಯ ಗುತ್ತಿಗೆಗಳಿಗೆ ಸಂಬಂಧಿಸಿದ ಸಂಭಾವ್ಯ ಲಂಚದ ಹಣ ಮತ್ತು ವಿದೇಶಿ ಹೂಡಿಕೆಗಳ ನಡುವಿನ ಹಣದ ಹರಿವಿನ ಬಗ್ಗೆ ಸುಳಿವು ನೀಡುತ್ತವೆ. ಆಫ್ರಿಕಾದಲ್ಲಿ ಗಣಿಗಾರಿಕೆ ಕಂಪನಿಗಳಲ್ಲಿನ ಹೂಡಿಕೆ ಹಾಗೂ ವಿದೇಶಿ ಹಣಕಾಸು ವ್ಯವಹಾರಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಭ್ರಷ್ಟಾಚಾರದ ದಾಖಲೆಗಳ ಮಾಹಿತಿ ಲೋಕಾಯುಕ್ತ, ಸಿಬಿಐಗೆ?

ಇದರ ನಡುವೆ, ದಾಳಿಯಲ್ಲಿ ಪತ್ತೆಯಾದ ಗುತ್ತಿಗೆ ಅಕ್ರಮ ಮತ್ತು ಲಂಚಕ್ಕೆ ಸಂಬಂಧಿಸಿದ ದಾಖಲೆಗಳ ಮಾಹಿತಿಯನ್ನು ಲೋಕಾಯುಕ್ತ ಹಾಗೂ ಸಿಬಿಐಗೆ ಕಳುಹಿಸುವ ಸಾಧ್ಯತೆ ಇದೆ ಎಂಬುದಾಗಿ ವರದಿಯಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ರಾಜ್ಯ ಸರ್ಕಾರಿ ಅಧಿಕಾರಿಗಳು ಅಥವಾ ಸಾರ್ವಜನಿಕ ಸೇವಕರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆಗೆ ಸಂಬಂಧಿಸಿದ ಅಧಿಕಾರವನ್ನು ಇಡಿ ನೇರವಾಗಿ ಬಳಸುವುದಕ್ಕೆ ಮಿತಿಗಳಿರುವ ಹಿನ್ನೆಲೆಯಲ್ಲಿ, ತನ್ನ ಶೋಧದಲ್ಲಿ ಸಿಕ್ಕ ಮಾಹಿತಿಯನ್ನು ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ದಾಳಿಯಲ್ಲಿ ಸಿಕ್ಕ ದಾಖಲೆಗಳಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಅಂಶಗಳು ದೃಢಪಟ್ಟರೆ, ಅವುಗಳ ವಿವರಗಳನ್ನು ಒಳಗೊಂಡಂತೆ ಲೋಕಾಯುಕ್ತ ಅಥವಾ ಸಿಬಿಐಗೆ ಪತ್ರ ಬರೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಈ ಕುರಿತು ಇಡಿಯಿಂದ ಅಧಿಕೃತವಾಗಿ ಪತ್ರ ರವಾನೆಯಾಗಿದೆ ಎಂಬ ಮಾಹಿತಿ ಇನ್ನೂ ಪ್ರಕಟವಾಗಿಲ್ಲ.

ದೆಹಲಿಯಿಂದ ಇಡಿ ಉನ್ನತ ಅಧಿಕಾರಿಗಳ ಬೆಂಗಳೂರಿಗೆ ಭೇಟಿ

ಈ ಬೆಳವಣಿಗೆಗಳ ನಡುವೆಯೇ ಇಡಿ ನಿರ್ದೇಶಕ ರಾಹುಲ್ ನವೀನ್ ಸೇರಿದಂತೆ ದೆಹಲಿಯ ಹಿರಿಯ ಅಧಿಕಾರಿಗಳು ಬೆಂಗಳೂರಿಗೆ ಆಗಮಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ 13ರಂದು ಬೆಂಗಳೂರಿಗೆ ಬಂದಿರುವ ಇಡಿ ನಿರ್ದೇಶಕರು ರಾಜ್ಯದಲ್ಲಿ ನಡೆಯುತ್ತಿರುವ ಪ್ರಮುಖ ಪ್ರಕರಣಗಳ ತನಿಖೆಯ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ ಎಂದು ವರದಿಯಾಗಿದೆ. ಸತೀಶ್ ಜಾರಕಿಹೊಳಿ ಪ್ರಕರಣವೂ ಇಂತಹ ಪ್ರಮುಖ ಪ್ರಕರಣಗಳಲ್ಲೊಂದಾಗಿರುವುದರಿಂದ, ಈ ಭೇಟಿಗೆ ರಾಜಕೀಯ ಮತ್ತು ತನಿಖಾ ವಲಯದಲ್ಲಿ ಹೆಚ್ಚಿನ ಮಹತ್ವ ಸಿಕ್ಕಿದೆ.

ನೋಟಿಸ್ ಬಂದರೆ ಕಾನೂನು ಹೋರಾಟಕ್ಕೆ ಸಿದ್ಧ

ಇಡಿ ದಾಳಿ ಕುರಿತು ಸತೀಶ್ ಜಾರಕಿಹೊಳಿ ಈಗಾಗಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ತಾವು ಉತ್ತರಿಸಿದ್ದು, ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರಿಸಲು ಸಮಯ ಕೇಳಿರುವುದಾಗಿ ಹೇಳಿದ್ದಾರೆ. ನೋಟಿಸ್ ನೀಡಿದರೆ ಅದಕ್ಕೆ ದಾಖಲೆಗಳೊಂದಿಗೆ ಉತ್ತರಿಸುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ, ಇಡಿ ಮಾಡಿರುವುದು ಅಂತಿಮ ಆರೋಪವಲ್ಲ; ಸಂಸ್ಥೆಯೇ ತನ್ನ ಹೇಳಿಕೆಯಲ್ಲಿ ವ್ಯವಹಾರಗಳನ್ನು ‘ಸಂದೇಹಾಸ್ಪದ’ ಅಥವಾ ‘ಆರೋಪ’ದ ಹಂತದಲ್ಲಿದೆ ಎಂದು ಹೇಳಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ವಿದೇಶಿ ಹೂಡಿಕೆಗಳ ಆರೋಪವನ್ನೂ ಸಚಿವರು ತಳ್ಳಿಹಾಕಿದ್ದಾರೆ. ತಮ್ಮ ಕುಟುಂಬ ವಿದೇಶದಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಇಡಿ ಪ್ರಶ್ನಿಸಿದ್ದು, ತಾವು ಯಾವುದೇ ವಿದೇಶಿ ಹೂಡಿಕೆ ಮಾಡಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದ್ದಾರೆ. ನೋಟಿಸ್ ಬಂದರೆ ಕಾನೂನುಬದ್ಧವಾಗಿ ಉತ್ತರಿಸುವುದಾಗಿ ಅವರು ಹೇಳಿದ್ದಾರೆ.

ಕಾನೂನು ತಜ್ಞರೊಂದಿಗೆ ಸಮಾಲೋಚನೆ?

ಈ ನಡುವೆ, ಮುಂದಿನ ಕಾನೂನು ಕ್ರಮಗಳ ಕುರಿತು ಸತೀಶ್ ಜಾರಕಿಹೊಳಿ ಅವರು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಒಂದು ವೇಳೆ ಇಡಿಯಿಂದ ಅಧಿಕೃತ ನೋಟಿಸ್ ಬಂದರೆ, ದಾಳಿಯಲ್ಲಿ ವಶಪಡಿಸಿಕೊಂಡ ದಾಖಲೆಗಳ ಕುರಿತು ಸ್ಪಷ್ಟನೆ ನೀಡುವುದು, ಹಣದ ಮೂಲವನ್ನು ವಿವರಿಸುವುದು ಹಾಗೂ ವಿದೇಶಿ ಹೂಡಿಕೆಗಳ ಕುರಿತ ದಾಖಲೆಗಳನ್ನು ಸಲ್ಲಿಸುವುದು ಮುಂದಿನ ಹಂತವಾಗಬಹುದು.

Read More
Next Story