
ಸಚಿವ ಸತೀಶ್ ಜಾರಕಿಹೊಳಿ
ಇ.ಡಿ.ಗೆ ಸವಾಲು ಹಾಕುವ ಪ್ರಶ್ನೆ ಇಲ್ಲ; ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟನೆ
ಇ.ಡಿ ಯಾವುದೇ ಖಾಸಗಿ ತನಿಖಾ ಸಂಸ್ಥೆಯಲ್ಲ, ಅದು ಅಧಿಕೃತ ತನಿಖಾ ಸಂಸ್ಥೆ. ಹೀಗಾಗಿ ಅದರ ಕಾರ್ಯವಿಧಾನವನ್ನು ಪ್ರಶ್ನಿಸುವ ಅಥವಾ ಸವಾಲು ಹಾಕುವ ಉದ್ದೇಶ ನಮಗಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಜಾರಿ ನಿರ್ದೇಶನಾಲಯವು ಒಂದು ಕೇಂದ್ರೀಯ ತನಿಖಾ ಸಂಸ್ಥೆಯಾಗಿದ್ದು, ಅದರ ಕಾರ್ಯವೈಖರಿಗೆ ಸವಾಲು ಹಾಕುವ ಪ್ರಶ್ನೆಯೇ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ತಮ್ಮ ನಿವಾಸ ಹಾಗೂ ಆಪ್ತರ ಮೇಲೆ ಇ.ಡಿ ಅಧಿಕಾರಿಗಳ ನಡೆಸಿದ ದಾಳಿಯ ಬಗ್ಗೆ ತಾವು ನೀಡಿದ ಪ್ರತಿಕ್ರಿಯೆಯಲ್ಲಿ ಯಾವುದೇ ಸವಾಲು ಹಾಕಿಲ್ಲ. ವಿದೇಶದಲ್ಲಿ ಚಿನ್ನದ ಗಣಿಗಾರಿಕೆಯಲ್ಲಿ ಶೇ40 ರಷ್ಟು ಪಾಲು ಹೊಂದಿರುವುದಾಗಿ ಇಡಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಆದರೆ, ನಾವು ಯಾವುದೇ ಹೂಡಿಕೆ ಮಾಡಿಲ್ಲ, ಹೂಡಿಕೆಗಾಗಿ ಸೂಕ್ತ ಸ್ಥಳ ಹುಡುಕುತ್ತಿದ್ದೇವೆ. ಇಡಿ ಅಧಿಕಾರಿಗಳು ಕರೆದಾಗ ಹೋಗಿ ಸ್ಪಷ್ಟಪಡಿಸುತ್ತೇನೆ ಎಂದಷ್ಟೇ ಹೇಳಿದ್ದೆ. ಮಾಧ್ಯಮಗಳು ಇದನ್ನೇ ತಿರುಚಿ ವರದಿ ಮಾಡಿವೆ ಎಂದು ಭಾನುವಾರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಇ.ಡಿ ಯಾವುದೇ ಖಾಸಗಿ ತನಿಖಾ ಸಂಸ್ಥೆಯಲ್ಲ, ಅದು ಅಧಿಕೃತ ತನಿಖಾ ಸಂಸ್ಥೆ. ಹೀಗಾಗಿ ಅದರ ಕಾರ್ಯವಿಧಾನವನ್ನು ಪ್ರಶ್ನಿಸುವ ಅಥವಾ ಸವಾಲು ಹಾಕುವ ಉದ್ದೇಶ ನಮಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಡಿ ದಾಳಿ ನಡೆದ ಬಳಿಕ ನಾನೇ ಸ್ವಯಂಪ್ರೇರಿತರಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದೇನೆ. ಆದರೆ, ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾವು ಅಧಿಕೃತವಾಗಿ ನೀಡುವ ಹೇಳಿಕೆಗಳನ್ನು ಯಾವುದೇ ತಿರುಚುವಿಕೆ ಇಲ್ಲದೆ ಯಥಾವತ್ತಾಗಿ ರಾಜ್ಯದ ಜನರಿಗೆ ತಲುಪಿಸಬೇಕು. ಇಲ್ಲವಾದರೆ ಸಾರ್ವಜನಿಕರಲ್ಲಿ ಅನಗತ್ಯ ಗೊಂದಲಗಳಿಗೆ ಕಾರಣವಾಗುತ್ತದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

