x

ಡಿಕೆಶಿ ಪರ ಜಾರಕಿಹೊಳಿ, ಶಂಕಿತ ಉಗ್ರ ಬಂಧನ, ಚಾರ್ಜ್‌ಶೀಟ್‌ನಿಂದ ಪ್ರದೋಷ್‌ ಹೆಸರು ಔಟ್‌

ಕರ್ನಾಟಕದಲ್ಲಿ ಮೂರು ಪ್ರಮುಖ ಬೆಳವಣಿಗೆಗಳು ಗಮನ ಸೆಳೆದಿವೆ. 2028ರ ಮುಖ್ಯಮಂತ್ರಿ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಪರ ಸತೀಶ್ ಜಾರಕಿಹೊಳಿ ಹೇಳಿಕೆ, ಚಿಕ್ಕಬಳ್ಳಾಪುರದಲ್ಲಿ ಶಂಕಿತ ಉಗ್ರ ಚಟುವಟಿಕೆ ಆರೋಪದ ಮೇಲೆ ಯುವಕನ ಬಂಧನ ಹಾಗೂ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ ಎಸ್. ರಾವ್ ಮಾಫಿ ಸಾಕ್ಷಿಯಾಗಿರುವ ಬೆಳವಣಿಗೆಯ ಸಂಪೂರ್ಣ ಮಾಹಿತಿ ಇಲ್ಲಿದೆ.


Click the Play button to hear this message in audio format

ಕರ್ನಾಟಕದಲ್ಲಿ ರಾಜಕೀಯ, ಭದ್ರತೆ ಹಾಗೂ ಪ್ರಮುಖ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಹತ್ವದ ಬೆಳವಣಿಗೆಗಳು ಗಮನ ಸೆಳೆದಿವೆ. 2028ರ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಕಾಂಗ್ರೆಸ್‌ನೊಳಗಿನ ನಾಯಕತ್ವದ ಚರ್ಚೆಗೆ ಮತ್ತೆ ಕಾವು ನೀಡಿದೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರ ಪ್ರಯತ್ನದಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ, 2028ರಲ್ಲೂ ಅವರೇ ಮುಖ್ಯಮಂತ್ರಿ ಆಗುವುದಕ್ಕೆ ತಮ್ಮ ವಿರೋಧವಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಅವರೇ ಈಗಲೂ ತಮ್ಮ ‘ಆರ್ಮಿ ಕ್ಯಾಪ್ಟನ್’ ಎಂದು ಜಾರಕಿಹೊಳಿ ಹೇಳಿದ್ದಾರೆ. ಹೀಗಾಗಿ ಅವರ ಹೇಳಿಕೆ ಬಣ ಬದಲಾವಣೆಯೇ ಅಥವಾ ನಾಯಕತ್ವದ ಕುರಿತ ನಿಲುವಿನ ಬದಲಾವಣೆಯೇ ಎಂಬ ಚರ್ಚೆಗೆ ಕಾರಣವಾಗಿದೆ.

ಇತ್ತ ಚಿಕ್ಕಬಳ್ಳಾಪುರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ಬಾಪೂಜಿನಗರದ ಶಬ್ಬೀರ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಟೆಲಿಗ್ರಾಂ ಗುಂಪಿನಲ್ಲಿ ಉಗ್ರ ಚಟುವಟಿಕೆ, ರಾಜಕೀಯ ನಾಯಕರನ್ನು ಗುರಿಯಾಗಿಸುವುದು ಹಾಗೂ ಹಣ ಸಂಗ್ರಹಿಸುವ ಕುರಿತು ಚರ್ಚೆ ನಡೆದಿತ್ತು ಎಂಬ ಆರೋಪಗಳಿದ್ದು, ಪೊಲೀಸರು ಈ ಸಂಪರ್ಕಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಮತ್ತೊಂದೆಡೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್ ಎಸ್. ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ. ಸಹ-ಆರೋಪಿಗಳಿಗೆ ಮಾಫಿ ಸಾಕ್ಷಿಯಾಗುವುದನ್ನು ಪ್ರಶ್ನಿಸುವ ಹಕ್ಕಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ್ದು, ಪ್ರದೋಷ್ ಅವರನ್ನು ಪ್ರತಿಪ್ರಶ್ನೆ ಮಾಡಲು ದರ್ಶನ್ ಸೇರಿದಂತೆ ಆರೋಪಿಗಳಿಗೆ ಅವಕಾಶವಿದೆ.

Read More
Next Story