
ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದ ಗಿಲ್ಲಿನಟ ಈ ಚಿತ್ರದ ಮೂಲಕ ಗಂಭೀರ ನಟನಾಗಿ ಹೊಸ ಇಮೇಜ್ ಸೃಷ್ಟಿಸಿಕೊಳ್ಳುತ್ತಿದ್ದಾರೆ.
ಗಿಲ್ಲಿ ನಟ ಅಭಿನಯದ 'ಸರ್ಕಾರಿ ಶಾಲೆ- H8' ಫೆ.6ರಂದು ರಿಲೀಸ್
ಬಿಗ್ ಬಾಸ್ ವಿಜೇತ ಹಾಗೂ ಹಾಸ್ಯ ನಟ ಗಿಲ್ಲಿ ನಟ ಅವರ ಜೊತೆ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್, ಸುಚೇಂದ್ರ ಪ್ರಸಾದ್ ಮತ್ತು ಮೇಘಶ್ರೀ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ವಿಜೇತ ಹಾಗೂ ತಮ್ಮ ವಿಭಿನ್ನ ಕಾಮಿಡಿ ಸೆನ್ಸ್ ಮೂಲಕ ಕನ್ನಡಿಗರ ಮನೆಮಾತಾಗಿರುವ ಗಿಲ್ಲಿ ನಟ ಅಭಿನಯದ ಬಹುನಿರೀಕ್ಷಿತ ಚಿತ್ರ 'ಸರ್ಕಾರಿ ಶಾಲೆ- H8' ಇದೇ ಫೆಬ್ರವರಿ 6ರ ಶುಕ್ರವಾರದಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರವು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದ್ದು, ಪ್ರಾರಂಭದಿಂದಲೇ ಸಿನಿರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಈ ಸಿನಿಮಾವನ್ನು ಗುಣ ಹರಿಯಬ್ಬೆ ನಿರ್ದೇಶನ ಮಾಡಿದ್ದು, ಗಿರಿಚಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ತೇಜಸ್ವಿನಿ ಎಸ್. ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಕಥೆಯು ಒಂದು ಪುರಾತನ ವಿಗ್ರಹದ ಸುತ್ತ ಸಾಗಲಿದ್ದು, ಅದರ ಹಿನ್ನೆಲೆಯಲ್ಲಿ ನಡೆಯುವ ನಿಗೂಢ ಘಟನೆಗಳು ಎನ್ನಲಾಗುತ್ತಿದ್ದು, ಚಿತ್ರಕ್ಕಾಗಿ ಬೆಂಗಳೂರು, ಚಿತ್ರದುರ್ಗ, ಶಿರಾ ಹಾಗೂ ಶಿವಮೊಗ್ಗದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಈ ಚಿತ್ರದಲ್ಲಿ ಗಿಲ್ಲಿ ನಟ ಅವರು ಕೇವಲ ಹಾಸ್ಯಕ್ಕಷ್ಟೇ ಸೀಮಿತವಾಗದೆ, ಒಂದು ನಿಗೂಢ ಪ್ರಕರಣವನ್ನು ಬೆನ್ನಟ್ಟುವ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ವಿಜೇತರಾದ ನಂತರ ಗಿಲ್ಲಿ ನಟ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದ್ದು, ಬೆಳ್ಳಿತೆರೆಯ ಮೇಲೆ ಅವರನ್ನು ನೋಡಲು ಅಭಿಮಾನಿಗಳು ಕಾತುರಾಗಿದ್ದಾರೆ.
ಗಿಲ್ಲಿ ನಟನ ಜೊತೆಗೆ ಸ್ವತಃ ನಿರ್ದೇಶಕ ಗುಣ ಹರಿಯಬ್ಬೆ, ಮೇಘಶ್ರೀ ಹಾಗೂ ಜನಪದ ಕಲಾವಿದ ಮೋಹನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷವಾಗಿ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್, ಸುಚೇಂದ್ರ ಪ್ರಸಾದ್, ಜಗಪ್ಪ, ನವಾಜ್, ಸುಶ್ಮಿತಾ ಜಗಪ್ಪ, ಕಡ್ಡಿ ವಿಶ್ವ, ಜೋತಿರಾಜ್ ಹಾಗೂ ನಮ್ರತಾ ಅವರಂತಹ ಪ್ರತಿಭಾವಂತ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ.
ವಿಜೇತ್ ಮಂಜಯ್ಯ ಸಂಯೋಜಿಸಿರುವ ಮೂರು ಹಾಡುಗಳಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ನಟ ಶರಣ್ ಹಾಗೂ ಮೆಹಬೂಬ್ ಸಾಬ್ ಹಾಡಿಗೆ ಧ್ವನಿ ನೀಡಿದ್ದಾರೆ. ರವಿ ರಾಮದುರ್ಗ ಮತ್ತು ವೀನಸ್ ಮೂರ್ತಿ ಅವರ ಛಾಯಾಗ್ರಹಣ ಹಾಗೂ ರವಿತೇಜ ಸಿ.ಹೆಚ್ ಅವರ ಸಂಕಲನ ಚಿತ್ರಕ್ಕಿದೆ.ಈ ಸಿನಿಮಾದ ಪೋಸ್ಟರ್ ಅನ್ನು ಇತ್ತೀಚೆಗೆ ಗಿಲ್ಲಿ ನಟನ ಊರಿನ ಮಳವಳ್ಳಿ ತಾಲೂಕಿನ ದಡದಪುರದಲ್ಲಿರುವ ಗಿಲ್ಲಿ ನಟ ಓದಿದ ಸರ್ಕಾರಿ ಶಾಲೆಯಲ್ಲಿ ಆತನ ತಂದೆ ಮತ್ತು ತಾಯಿ ಬಿಡುಗಡೆ ಮಾಡಿದ್ದರು.

