ರಾಜ್ಯ ಸರ್ಕಾರಿ ಪಿಂಚಣಿದಾರರಿಗೆ ‘ಸಂಧ್ಯಾ ಕಿರಣ’ ನಗದುರಹಿತ ಆರೋಗ್ಯ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ
x

ರಾಜ್ಯ ಸರ್ಕಾರಿ ಪಿಂಚಣಿದಾರರಿಗೆ ‘ಸಂಧ್ಯಾ ಕಿರಣ’ ನಗದುರಹಿತ ಆರೋಗ್ಯ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ

‘ಸಂಧ್ಯಾ ಕಿರಣ’ ಕೊಡುಗೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆಯಾಗಿದ್ದು, ಅರ್ಹ ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 5 ಲಕ್ಷ ರೂಪಾಯಿ ವರೆಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯ ದೊರೆಯಲಿದೆ.


Click the Play button to hear this message in audio format

70 ವರ್ಷಕ್ಕಿಂತ ಕಡಿಮೆ ವಯಸ್ಸಿನ ರಾಜ್ಯ ಸರ್ಕಾರಿ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಹಾಗೂ ಅರ್ಹ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶದ ‘ಸಂಧ್ಯಾ ಕಿರಣ’ ಕೊಡುಗೆ ಆಧಾರಿತ ಆರೋಗ್ಯ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ರಾಜ್ಯ ಸರ್ಕಾರಿ ಸೇವೆಯಿಂದ ನಿವೃತ್ತರಾದವರು ಹಾಗೂ ಅವರ ಅರ್ಹ ಅವಲಂಬಿತರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವಂತೆ ಈ ಯೋಜನೆಯನ್ನು ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ (ಎಬಿ–ಎಆರ್‌ಕೆ) ಯೋಜನೆಯ ನಿಯಮಾವಳಿಗಳ ಅಡಿಯಲ್ಲಿ ರೂಪಿಸಲಾಗಿದೆ.

ಮೊದಲ ಹಂತದಲ್ಲಿ 4.93 ಲಕ್ಷ ಮಂದಿಗೆ ಪ್ರಯೋಜನ

ಯೋಜನೆಯ ಮೊದಲ ಹಂತದಲ್ಲಿ 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 3.11 ಲಕ್ಷ ರಾಜ್ಯ ಸರ್ಕಾರಿ ಪಿಂಚಣಿದಾರರು ಹಾಗೂ ಅವರ ಅರ್ಹ ಅವಲಂಬಿತ ಕುಟುಂಬ ಸದಸ್ಯರು ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ. ಒಟ್ಟಾರೆ ಸುಮಾರು 4.93 ಲಕ್ಷ ಮಂದಿ ಇದರ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.

ನಿವೃತ್ತ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬಗಳಿಗೆ ವೈದ್ಯಕೀಯ ವೆಚ್ಚದಿಂದ ಉಂಟಾಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿ ವರೆಗೆ ನಗದುರಹಿತ ಚಿಕಿತ್ಸೆ

‘ಸಂಧ್ಯಾ ಕಿರಣ’ ಕೊಡುಗೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆಯಾಗಿದ್ದು, ಅರ್ಹ ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 5 ಲಕ್ಷ ರೂಪಾಯಿ ವರೆಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯ ದೊರೆಯಲಿದೆ.

ದ್ವಿತೀಯ ಹಂತದ ಚಿಕಿತ್ಸೆ, ತೃತೀಯ ಹಂತದ ಚಿಕಿತ್ಸೆ ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ. ಕುಟುಂಬದ ಯಾವುದೇ ಅರ್ಹ ಸದಸ್ಯರು ಚಿಕಿತ್ಸೆಗೆ ಒಳಗಾದಾಗ ಒಟ್ಟು ನಿಗದಿತ ಮೊತ್ತವನ್ನು ಕುಟುಂಬದ ಹಂಚಿಕೆಯ ಆಧಾರದ ಮೇಲೆ ಬಳಸಿಕೊಳ್ಳುವ ವ್ಯವಸ್ಥೆ ಇರಲಿದೆ.

ಎಬಿ–ಎಆರ್‌ಕೆ ಯೋಜನೆಯಡಿ ಈಗಾಗಲೇ ನಿಗದಿಪಡಿಸಿರುವ ಚಿಕಿತ್ಸಾ ಪ್ಯಾಕೇಜ್‌ಗಳು ಮತ್ತು ಪರಿಷ್ಕೃತ ಪ್ಯಾಕೇಜ್ ದರಗಳನ್ನೇ ‘ಸಂಧ್ಯಾ ಕಿರಣ’ ಯೋಜನೆಗೂ ಅನ್ವಯಿಸಲಾಗುತ್ತದೆ. ಯೋಜನೆಯಡಿ ನೋಂದಾಯಿತ ಅಥವಾ ಅನುಮೋದಿತ ಆಸ್ಪತ್ರೆಗಳಲ್ಲಿ ಫಲಾನುಭವಿಗಳು ನಗದು ಪಾವತಿಸದೆ ಚಿಕಿತ್ಸೆ ಪಡೆಯಬಹುದಾಗಿದೆ.

ಪಿಂಚಣಿದಾರರಿಂದ ಕೊಡುಗೆ ಸಂಗ್ರಹ

ಯೋಜನೆ ಕೊಡುಗೆ ಆಧಾರಿತವಾಗಿರುವುದರಿಂದ ಫಲಾನುಭವಿಗಳು ತಮ್ಮ ಪಿಂಚಣಿಯ ನಿರ್ದಿಷ್ಟ ಪ್ರಮಾಣವನ್ನು ಕೊಡುಗೆಯಾಗಿ ಪಾವತಿಸಬೇಕು.

ಸೇವಾ ಪಿಂಚಣಿದಾರರು ತಮ್ಮ ಮೂಲ ಪಿಂಚಣಿಯ ಶೇ 1.25ರಷ್ಟು ಮೊತ್ತವನ್ನು ಕೊಡುಗೆಯಾಗಿ ನೀಡಬೇಕು. ಕುಟುಂಬ ಪಿಂಚಣಿದಾರರು ತಮ್ಮ ಮೂಲ ಕುಟುಂಬ ಪಿಂಚಣಿಯ ಶೇ 0.75ರಷ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಈ ಮೂಲಕ ಫಲಾನುಭವಿಗಳ ಕೊಡುಗೆಯೊಂದಿಗೆ ರಾಜ್ಯ ಸರ್ಕಾರದ ಪಾಲುದಾರಿಕೆಯಲ್ಲೂ ಯೋಜನೆ ನಿರ್ವಹಿಸಲಾಗುತ್ತದೆ.

ರ್ಷಕ್ಕೆ 117 ಕೋಟಿ ರೂಪಾಯಿ ಪ್ರೀಮಿಯಂ ಸಂಗ್ರಹ ನಿರೀಕ್ಷೆ

ಯೋಜನೆಯಡಿ ವಾರ್ಷಿಕವಾಗಿ ಸುಮಾರು 117 ಕೋಟಿ ರೂಪಾಯಿ ಪ್ರೀಮಿಯಂ ಸಂಗ್ರಹವಾಗುವ ನಿರೀಕ್ಷೆಯಿದೆ. ಚಿಕಿತ್ಸಾ ವೆಚ್ಚವು ವರ್ಷಕ್ಕೆ ಸುಮಾರು 81.75 ಕೋಟಿ ರೂಪಾಯಿ ಇರಲಿದೆ ಎಂದು ಅಂದಾಜಿಸಲಾಗಿದೆ.

ಎಬಿ–ಎಆರ್‌ಕೆ ನೀತಿಯ ಅನ್ವಯ ಚಿಕಿತ್ಸಾ ವೆಚ್ಚದಲ್ಲಿ ಶೇ 70ರಷ್ಟು ಫಲಾನುಭವಿಗಳ ಪಾಲಿನಿಂದ ಹಾಗೂ ಶೇ 30ರಷ್ಟು ರಾಜ್ಯ ಸರ್ಕಾರದ ಪಾಲಿನಿಂದ ಭರಿಸಲಾಗುತ್ತದೆ. ಇದರಂತೆ ವಾರ್ಷಿಕ ಚಿಕಿತ್ಸಾ ವೆಚ್ಚದಲ್ಲಿ ಫಲಾನುಭವಿಗಳ ಪಾಲು ಸುಮಾರು 57.22 ಕೋಟಿ ರೂಪಾಯಿ ಹಾಗೂ ರಾಜ್ಯ ಸರ್ಕಾರದ ಪಾಲು ಸುಮಾರು 24.53 ಕೋಟಿ ರೂಪಾಯಿ ಆಗಲಿದೆ.

ನಿಧಿ ಬಳಕೆ ಶೇ 85 ದಾಟಿದರೆ ಕೊಡುಗೆ ಹೆಚ್ಚಳ

ಯೋಜನೆಯ ದೀರ್ಘಕಾಲೀನ ಆರ್ಥಿಕ ಸ್ಥಿರತೆ ಮತ್ತು ನಿಧಿಯ ಸಮರ್ಪಕ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ವ್ಯವಸ್ಥೆಯನ್ನೂ ರೂಪಿಸಲಾಗಿದೆ. ಯೋಜನೆಯ ನಿಧಿ ಬಳಕೆ ಶೇ 85ಕ್ಕಿಂತ ಹೆಚ್ಚಾದ ಸಂದರ್ಭದಲ್ಲಿ ಪ್ರಸ್ತುತ ಪ್ರೀಮಿಯಂ ದರವನ್ನು ಸ್ವಯಂಚಾಲಿತವಾಗಿ ಶೇ. 0.05ರಷ್ಟು ಹೆಚ್ಚಿಸುವ ಪ್ರಸ್ತಾವವಿದೆ.

ನಿಧಿಯ ಬಳಕೆ ಮತ್ತು ಯೋಜನೆಯ ಆರ್ಥಿಕ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಯೋಜನೆಯನ್ನು ಸುಸ್ಥಿರವಾಗಿ ನಿರ್ವಹಿಸಲು ಈ ವ್ಯವಸ್ಥೆ ನೆರವಾಗಲಿದೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಅನುಷ್ಠಾನ

‘ಸಂಧ್ಯಾ ಕಿರಣ’ ಯೋಜನೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ (SAST) ವಹಿಸಲಿದೆ. ಫಲಾನುಭವಿಗಳ ನೋಂದಣಿ, ಪ್ರೀಮಿಯಂ ಸಂಗ್ರಹ, ಆಸ್ಪತ್ರೆಗಳ ಜಾಲದ ನಿರ್ವಹಣೆ, ನಗದುರಹಿತ ಚಿಕಿತ್ಸೆ, ಚಿಕಿತ್ಸಾ ವೆಚ್ಚದ ಕ್ಲೇಮ್‌ಗಳ ನಿರ್ವಹಣೆ ಸೇರಿದಂತೆ ಯೋಜನೆಯ ವಿವಿಧ ಕಾರ್ಯಗಳನ್ನು ಎಬಿ–ಎಆರ್‌ಕೆ ವ್ಯವಸ್ಥೆಯೊಂದಿಗೆ ಸಮನ್ವಯಗೊಳಿಸಲಾಗುತ್ತದೆ.

ನಿವೃತ್ತ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರಿಗೆ ಅನಿರೀಕ್ಷಿತ ವೈದ್ಯಕೀಯ ವೆಚ್ಚದಿಂದ ಉಂಟಾಗುವ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ನಗದುರಹಿತ ಚಿಕಿತ್ಸೆಯ ವ್ಯವಸ್ಥೆಯ ಮೂಲಕ ಅರ್ಹ ಫಲಾನುಭವಿಗಳು ಅನುಮೋದಿತ ಆಸ್ಪತ್ರೆಗಳಲ್ಲಿ ನಿಗದಿತ ಚಿಕಿತ್ಸಾ ಸೌಲಭ್ಯಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.

Read More
Next Story