
ಕನ್ನಡ ಚಿತ್ರರಂಗದ ನಡುವೆ ಸಂವಾದ: ನಿರ್ಮಾಪಕರ ಸಂಕಷ್ಟಗಳಿಗೆ ಸಿಗಲಿದೆಯೇ ಮುಕ್ತಿ?
ಕನ್ನಡ ಚಿತ್ರರಂಗದ ದಿಗ್ಗಜರು, ನಿರ್ಮಾಪಕರು ಮತ್ತು ತಂತ್ರಜ್ಞರು ಪಾಲ್ಗೊಂಡಿದ್ದ ಸಭೆಯಲ್ಲಿ, ಸಿನೆಮಾ ನಿರ್ಮಾಣ ಮತ್ತು ಸೆನ್ಸಾರ್ ಪ್ರಕ್ರಿಯೆಗಳ ಕುರಿತಂತೆ ಹಲವು ಮಹತ್ವದ ವಿಚಾರಗಳು ಚರ್ಚೆಯಾದವು.
ಸಿನಿಮಾಟೋಗ್ರಾಫ್ ಕಾಯ್ದೆಯಲ್ಲಿ ಆಗಿರುವ ನೂತನ ಬದಲಾವಣೆಗಳು ಮತ್ತು ಕನ್ನಡ ಚಿತ್ರರಂಗ ಎದುರಿಸುತ್ತಿರುವ ಪ್ರಾಯೋಗಿಕ ಸವಾಲುಗಳನ್ನು ಚರ್ಚಿಸುವ ನಿಟ್ಟಿನಲ್ಲಿ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಪ್ರಾದೇಶಿಕ ಕಚೇರಿಯು ಮಲ್ಲೇಶ್ವರಂನ ಎಸ್‌ಆರ್‌ವಿ ಥಿಯೇಟರ್‌ನಲ್ಲಿ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕನ್ನಡ ಚಿತ್ರರಂಗದ ದಿಗ್ಗಜರು, ನಿರ್ಮಾಪಕರು ಮತ್ತು ತಂತ್ರಜ್ಞರು ಪಾಲ್ಗೊಂಡಿದ್ದ ಈ ಸಭೆಯಲ್ಲಿ, ಸಿನೆಮಾ ನಿರ್ಮಾಣ ಮತ್ತು ಸೆನ್ಸಾರ್ ಪ್ರಕ್ರಿಯೆಗಳ ಕುರಿತಂತೆ ಹಲವು ಮಹತ್ವದ ವಿಚಾರಗಳು ಚರ್ಚೆಯಾದವು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಬಿಎಫ್‌ಸಿ ಸದಸ್ಯ ಹಾಗೂ ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ, ನೂತನ ಸಿನಿಮಾಟೋಗ್ರಾಫ್ ಕಾಯ್ದೆಯು ಈಗ ಜಾರಿಗೆ ಬಂದಿದ್ದು, ಅದರ ಕಟ್ಟುನಿಟ್ಟಿನ ಪಾಲನೆ ಪ್ರತಿಯೊಬ್ಬ ಸಿನೆಮಾ ನಿರ್ಮಾತೃಗಳ ಜವಾಬ್ದಾರಿ ಎಂದರು. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವುದರೊಂದಿಗೆ ಕನ್ನಡ ಚಿತ್ರರಂಗದ ಉತ್ತೇಜನಕ್ಕೆ ತುರ್ತಾಗಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ನಾವು ಅವಲೋಕಿಸಿಕೊಳ್ಳಬೇಕಿದೆ. ಇಂದಿನ ಸಾಮಾಜಿಕ ಜಾಲತಾಣಗಳು ಮತ್ತು ಡಿಜಿಟಲ್ ಯುಗದಲ್ಲಿ ಸಿನೆಮಾದ ಜವಾಬ್ದಾರಿ ಹೆಚ್ಚಾಗಿದೆ ಎಂದು ಅವರು ಪ್ರತಿಪಾದಿಸಿದರು. ಸಿನೆಮಾ ಮಂದಿರಗಳು ಸಮಾಜದ ಎಲ್ಲ ವರ್ಗದ ಜನರನ್ನು ಒಳಗೊಳ್ಳಬೇಕು ಎಂದರು. ಮೂಕ ಮತ್ತು ಕಿವುಡರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಥಿಯೇಟರ್‌ಗಳಲ್ಲಿ ಒದಗಿಸಬೇಕು. ದೃಷ್ಟಿ ವಿಕಲಚೇತನರಿಗಾಗಿ ಬ್ರೈಲ್ ಲಿಪಿಯ ಬಳಕೆ ಮತ್ತು ಆಡಿಯೋ ಡಿಸ್ಕ್ರಿಪ್ಶನ್ ಕುರಿತಂತೆ ನ್ಯಾಯಾಲಯದ ನಿರ್ದೇಶನಗಳಿವೆ. ಇಂತಹ ಸೂಕ್ಷ್ಮ ಸಮುದಾಯಗಳನ್ನು ಚಿತ್ರಮಂದಿರಗಳ ಮುಖ್ಯವಾಹಿನಿಗೆ ತರುವುದು ಸೃಜನಶೀಲ ನಿರ್ಮಾತೃಗಳ ಕರ್ತವ್ಯ ಎಂದು ವಿಮಾತು ಹೇಳಿದರು.
ಸಿಬಿಎಫ್‌ಸಿ ಅಧ್ಯಕ್ಷರ ಭರವಸೆ
ಸಿಬಿಎಫ್‌ಸಿ ಅಧ್ಯಕ್ಷ ಶಶಿಶೇಖರ್ ವೇಂಪಾಟಿ ಮಾತನಾಡಿ, ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ನೇರವಾಗಿ ಅರ್ಥಮಾಡಿಕೊಳ್ಳಲು ಈ ಸಂವಾದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ನಿರ್ಮಾಪಕರು, ನಿರ್ದೇಶಕರು ಮತ್ತು ತಂತ್ರಜ್ಞರು ವ್ಯಕ್ತಪಡಿಸಿದ ಸಲಹೆಗಳು ಅತ್ಯಂತ ಮೌಲ್ಯಯುತವಾಗಿವೆ. ಈ ಎಲ್ಲ ಅಂಶಗಳನ್ನು ಉನ್ನತ ಮಟ್ಟದ ಸಮಿತಿಯಲ್ಲಿ ಚರ್ಚಿಸಿ, ಚಿತ್ರೋದ್ಯಮಕ್ಕೆ ಪೂರಕವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂವಾದದಲ್ಲಿ ಪಾಲ್ಗೊಂಡಿದ್ದ ನಿರ್ಮಾಪಕ ಕೃಷ್ಣೇಗೌಡ, ಹಿರಿಯ ನಟ ಎಂ.ಕೆ. ಸುಂದರರಾಜನ್, ನಿರ್ದೇಶಕ ಪಿ. ಶೇಷಾದ್ರಿ, ನಟ-ನಿರ್ಮಾಪಕ ಡಾಲಿ ಧನಂಜಯ್, ತರುಣ್ ಸುಧೀರ್, ಪ್ರಮೀಳಾ ಕುಲಕರ್ಣಿ ಮತ್ತು ವಿಶ್ವನಾಥ್ ಎನ್.ಆರ್.ಕೆ ಅವರು ಉದ್ಯಮದ ವಾಸ್ತವ ಸಮಸ್ಯೆಗಳನ್ನು ಹಂಚಿಕೊಂಡರು. ಪ್ರಮುಖ ಬೇಡಿಕೆಗಳನ್ನು ಸಭೆಯ ಮುಂದಿಟ್ಟರು. ಗ್ರಾಮೀಣ ಕಥಾವಸ್ತುವಿನ ಚಿತ್ರಗಳಲ್ಲಿ ದನ-ಕರುಗಳನ್ನು ಹಾಲು ಕರೆಯುವಂತಹ ದೃಶ್ಯಗಳನ್ನು ತೋರಿಸುವುದು ಸಹಜ. ಇಂತಹ ಸಾಮಾನ್ಯ ದೃಶ್ಯಗಳಿಗೂ ಪ್ರಾಣಿ ಕಲ್ಯಾಣ ಮಂಡಳಿಯ ಅನುಮತಿ ಪಡೆಯುವುದು ಕಷ್ಟದಾಯಕವಾಗಿದೆ. ಕಥೆಯಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡದಿದ್ದಲ್ಲಿ ಅಥವಾ ಅವು ಪ್ರಮುಖ ಪಾತ್ರವಾಗಿರದಿದ್ದಲ್ಲಿ, ಇಂತಹ ಅನುಮತಿಯಿಂದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಲಾಯಿತು. ಎಲ್ಲಾ ಚಿತ್ರಗಳಿಗೆ ಎಡಿಸಿಸಿ ಪಡೆಯುವುದನ್ನು ಕಡ್ಡಾಯಗೊಳಿಸಿರುವುದು ನಿರ್ಮಾಪಕರಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತಿದೆ. ಇದನ್ನು ಮರುಪರಿಶೀಲಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಸೆನ್ಸಾರ್ ಪ್ರಮಾಣೀಕರಣಕ್ಕಾಗಿ ಅರ್ಜಿ ಸಲ್ಲಿಸಿದ ನಂತರ, ಅದು ಯಾವ ಹಂತದಲ್ಲಿದೆ ಎಂದು ತಿಳಿಯಲು ಆನ್‌ಲೈನ್ ಟ್ರ್ಯಾಕಿಂಗ್ ವ್ಯವಸ್ಥೆ ಇರಬೇಕು. ಅಲ್ಲದೆ, ತುರ್ತು ಚಿತ್ರಗಳಿಗೆ ಆದ್ಯತೆಯ ಪ್ರಮಾಣೀಕರಣ ಸೌಲಭ್ಯ ಬೇಕೆಂದು ನಿರ್ಮಾಪಕರು ಮನವಿ ಮಾಡಿದರು. ನೀತಿಗಳನ್ನು ಜಾರಿಗೊಳಿಸುವ ಮುನ್ನ ಚಿತ್ರರಂಗದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಬೇಕೆಂದು ನಿರ್ದೇಶಕ ಪಿ. ಶೇಷಾದ್ರಿ ಒತ್ತಾಯಿಸಿದರು.
ಸಭೆಯಲ್ಲಿ ವ್ಯಕ್ತವಾದ ಎಲ್ಲ ಸಲಹೆಗಳನ್ನು ಸಿಬಿಎಫ್‌ಸಿ ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದೆ. ತಾಂತ್ರಿಕ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಚಿತ್ರರಂಗಕ್ಕೆ ಅನಿವಾರ್ಯವಾದರೂ, ಆ ಪ್ರಕ್ರಿಯೆ ನಿರ್ಮಾಪಕರ ಪಾಲಿಗೆ ಕಿರುಕುಳವಾಗಬಾರದು ಎಂಬುದು ಈ ಸಂವಾದದ ಪ್ರಮುಖ ಸಾರಾಂಶವಾಗಿತ್ತು.

