ಕೃಷಿ ನಷ್ಟ ತಡೆಯಲು, ರೈತರ ಆದಾಯ ಹೆಚ್ಚಿಸಲು ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್
x

ಕೃಷಿ ನಷ್ಟ ತಡೆಯಲು, ರೈತರ ಆದಾಯ ಹೆಚ್ಚಿಸಲು ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್

ರೈತರ ಆರ್ಥಿಕ ನಷ್ಟವಾಗಿ ಪರಿಗಣಿಸಿ, ಇದಕ್ಕೆ ತಂತ್ರಜ್ಞಾನ ಆಧಾರಿತ ಹಾಗೂ ತಂತ್ರಜ್ಞಾನೇತರ ಪರಿಹಾರಗಳನ್ನು ಕಂಡುಕೊಳ್ಳುವುದು ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್ ವೇದಿಕೆಯ ಮೂಲ ಉದ್ದೇಶವಾಗಿದೆ.


Click the Play button to hear this message in audio format

ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಕಟಾವಿನ ನಂತರದ ನಷ್ಟವನ್ನು ತಡೆಗಟ್ಟುವ, ರೈತರ ಆದಾಯವನ್ನು ದ್ವಿಗುಣಗೊಳಿಸುವ ಮತ್ತು ಆಹಾರ ವ್ಯರ್ಥವಾಗುವುದನ್ನು ತಡೆಯುವ ಮಹತ್ವದ ಗುರಿಯೊಂದಿಗೆ ರಾಜ್ಯ ಸರ್ಕಾರವು ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್ 2026 ಎಂಬ ನಾವೀನ್ಯತಾ ವೇದಿಕೆಯನ್ನು ಆರಂಭಿಸಿದೆ. ವಿಧಾನಸೌಧದಲ್ಲಿ ನಡೆದ ಉನ್ನತ ಮಟ್ಟದ ಸ್ಟೀರಿಂಗ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಇದರ ರೂಪುರೇಷೆಗಳನ್ನು ಹಂಚಿಕೊಂಡಿದ್ದಾರೆ.

ರಾಜ್ಯದ ಕೃಷಿ ಮತ್ತು ತೋಟಗಾರಿಕೆ ವಲಯದಲ್ಲಿ ಬೆಳೆಯುವ ಉತ್ಪನ್ನಗಳು ಮಾರುಕಟ್ಟೆ ತಲುಪುವಷ್ಟರಲ್ಲಿ ಕಟಾವಿನ ನಂತರದ ಅಡಚಣೆಗಳಿಂದಾಗಿ ದೊಡ್ಡ ಪ್ರಮಾಣದಲ್ಲಿ ವ್ಯರ್ಥವಾಗುತ್ತವೆ. ಇದನ್ನು ಕೇವಲ ವ್ಯರ್ಥದ ಸಮಸ್ಯೆಯಾಗಿ ನೋಡದೆ, ರೈತರ ಆರ್ಥಿಕ ನಷ್ಟವಾಗಿ ಪರಿಗಣಿಸಿ, ಇದಕ್ಕೆ ತಂತ್ರಜ್ಞಾನ ಆಧಾರಿತ ಹಾಗೂ ತಂತ್ರಜ್ಞಾನೇತರ ಪರಿಹಾರಗಳನ್ನು ಕಂಡುಕೊಳ್ಳುವುದು ಈ ವೇದಿಕೆಯ ಮೂಲ ಉದ್ದೇಶವಾಗಿದೆ. ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಆರ್. ಗಿರೀಶ್ ಅವರ ಮಾರ್ಗದರ್ಶನದಲ್ಲಿ ಈ ಯೋಜನೆ ರೂಪುಗೊಂಡಿದೆ.

ಆರು ನಾವೀನ್ಯತಾ ಪರಿಹಾರಗಳ ಆಯ್ಕೆ

ಈ ಸವಾಲಿಗೆ ದೇಶಾದ್ಯಂತ ಕೃಷಿ-ಉದ್ಯಮಗಳು, ಎಫ್‌ಪಿಒ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಉದ್ಯಮಿಗಳಿಂದ ಭಾರಿ ಸ್ಪಂದನೆ ಸಿಕ್ಕಿದೆ. ಒಟ್ಟು 210 ಅರ್ಜಿಗಳು ಸಲ್ಲಿಕೆಯಾಗಿದ್ದು, 10ಕ್ಕೂ ಹೆಚ್ಚು ವೆಬಿನಾರ್‌ಗಳು ಮತ್ತು ಸಮಗ್ರ ಮೌಲ್ಯಮಾಪನದ ನಂತರ 14 ಸದಸ್ಯರ ತಜ್ಞರ ಸಮಿತಿಯು ಅಂತಿಮವಾಗಿ ಆರು ಅತ್ಯುತ್ತಮ ನಾವೀನ್ಯತಾ ಪರಿಹಾರಗಳನ್ನು ಆಯ್ಕೆ ಮಾಡಿದೆ. ಈ ಆರು ಪರಿಹಾರಗಳು ಕೇವಲ ಪ್ರಾಯೋಗಿಕ ಹಂತದಲ್ಲಿ ಉಳಿಯುವುದಿಲ್ಲ. ಇವುಗಳಿಗೆ ಸರ್ಕಾರದ ಬೆಂಬಲ, ಮಾರುಕಟ್ಟೆ ಸಂಪರ್ಕ ಮತ್ತು ಬಂಡವಾಳ ಹೂಡಿಕೆಯ ಅವಕಾಶಗಳನ್ನು ಒದಗಿಸುವ ಮೂಲಕ ರೈತರ ಹೊಲಗಳಲ್ಲಿ ನೈಜವಾಗಿ ಅನುಷ್ಠಾನಕ್ಕೆ ತರುವುದು ಸರ್ಕಾರದ ಯೋಜನೆಯಾಗಿದೆ.

‘ಸಂಪೂರ್ಣ 2026’ ಎಂಬುದು ಸರ್ಕಾರ, ಶಿಕ್ಷಣ ಕ್ಷೇತ್ರ, ಹೂಡಿಕೆದಾರರು ಮತ್ತು ನಾವೀನ್ಯಕಾರರನ್ನು ಒಂದೇ ವೇದಿಕೆಯಡಿ ತರುವ ಒಂದು ಬಹು-ಕ್ಷೇತ್ರೀಯ ಪ್ರಯತ್ನವಾಗಿದೆ. ಈ ಸಭೆಯಲ್ಲಿ ಆಹಾರ ಮತ್ತು ಪಾನೀಯ, ಅಗ್ರಿಟೆಕ್, ಕೃಷಿ-ವ್ಯಾಪಾರ ಮತ್ತು ಪರಿಸರ ವಿಜ್ಞಾನ ಕ್ಷೇತ್ರದ ದಿಗ್ಗಜರು ಭಾಗವಹಿಸಿದ್ದರು. ಡಾ. ಪರುಲ್ ಸೋನಿ ಮತ್ತು ಡಾ. ಭುವನೇಶ್ವರಿ ಬಾಲಸುಬ್ರಮಣಿಯನ್ ಅವರಂತಹ ತಜ್ಞರು ಈ ಕಾರ್ಯಕ್ರಮದ ರೂಪುರೇಷೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ರೈತರ ಆರ್ಥಿಕ ಭದ್ರತೆಗೆ ಒತ್ತು

ಆಹಾರ ನಷ್ಟ ಕಡಿಮೆಯಾದಷ್ಟೂ ರೈತರ ಉತ್ಪನ್ನಗಳ ಮೌಲ್ಯ ಹೆಚ್ಚುತ್ತದೆ. ಕಟಾವಿನ ನಂತರ ಸರಿಯಾದ ಸಂಸ್ಕರಣೆ ಅಥವಾ ಶೇಖರಣೆ ಇಲ್ಲದಿದ್ದಾಗ ರೈತರು ಕಡಿಮೆ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗುತ್ತದೆ. ಸಂಪೂರ್ಣ ಯೋಜನೆಯು ಕಟಾವಿನ ನಂತರದ ನಷ್ಟವನ್ನು ಕಡಿಮೆ ಮಾಡುವ ಮೂಲಕ ರೈತರಿಗೆ ಹೆಚ್ಚಿನ ಆದಾಯ ದೊರಕಿಸಿಕೊಡುವುದು. ಕೃಷಿ ಉತ್ಪನ್ನಗಳ ಶೇಖರಣಾ ತಂತ್ರಜ್ಞಾನದಲ್ಲಿ ಸುಧಾರಣೆ ತರುವುದು. ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಮಾರುಕಟ್ಟೆ ಮತ್ತು ಹೂಡಿಕೆದಾರರನ್ನು ತಲುಪುವ ಅವಕಾಶ ಕಲ್ಪಿಸುವುದಾಗಿದೆ.

ಇದರ ಸಮಾರೋಪ ಸಮಾರಂಭ ಮತ್ತು ವಿಜೇತ ಪರಿಹಾರಗಳ ಘೋಷಣೆಯು ಅ.15 ರಿಂದ 18 ರವರೆಗೆ ಬೆಂಗಳೂರಿನ ಜಿಪಿಕೆಕೆ ಕ್ಯಾಂಪಸ್‌ನಲ್ಲಿ ನಡೆಯಲಿರುವ ಕೃಷಿಮೇಳ 2026 ಸಂದರ್ಭದಲ್ಲಿ ನಡೆಯಲಿದೆ. ಅಂದು ಆಯ್ಕೆಯಾದ ಪರಿಹಾರಗಳಿಗೆ ಪ್ರಶಸ್ತಿ ನೀಡುವ ಜೊತೆಗೆ, ಸರ್ಕಾರದ ವಿವಿಧ ಯೋಜನೆಗಳಲ್ಲಿ ಇವುಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುತ್ತದೆ. ಈ ಉಪಕ್ರಮಕ್ಕೆ ಎಂಎಂ ಆ್ಯಕ್ಟಿವ್ ಸೈ-ಟೆಕ್ ಕಮ್ಯುನಿಕೇಷನ್ಸ್ ಮತ್ತು ಕೃಷಿ ಕಲ್ಪ ಫೌಂಡೇಶನ್ ಸಹಯೋಗ ನೀಡುತ್ತಿವೆ. ಸರ್ಕಾರಿ ಯಂತ್ರಗಳು ಮತ್ತು ಖಾಸಗಿ ನಾವೀನ್ಯಕಾರರ ನಡುವೆ ಈ ಯೋಜನೆಯು ಸೇತುವೆಯಾಗಿ ಕೆಲಸ ಮಾಡಲಿದೆ.

Read More
Next Story