
ತಮಿಳುನಾಡಿನಲ್ಲಿ ಉಚಿತ ಶಿಕ್ಷಣ, ಆರೋಗ್ಯ ಸೇವೆಯ ಬೃಹತ್ ವಿಸ್ತರಣೆ: ಸದ್ಗುರು ಶ್ರೀ ಮಧುಸೂದನ ಸಾಯಿ ಮಹತ್ವದ ಘೋಷಣೆ
ದಿಂಡಿಗಲ್ನ ಗುರುಕುಲದಲ್ಲಿ 54 ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣದ ಜತೆಗೆ ವಸತಿ, ಆಹಾರ ಒದಗಿಸಲಾಗುತ್ತಿದ್ದರೆ, ಕೊಡೈಕೆನಾಲ್ನ ಆನಂದನಿಕೇತನದಲ್ಲಿ 46 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಜಗತ್ತಿನಾದ್ಯಂತ ನೂರಕ್ಕೂ ಹೆಚ್ಚು ದೇಶಗಳಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ಉಚಿತ ಆರೋಗ್ಯ ಹಾಗೂ ಶಿಕ್ಷಣ ಸೇವೆಗಳನ್ನು ಒದಗಿಸುತ್ತಿರುವ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್' ಇದೀಗ ನೆರೆಯ ತಮಿಳುನಾಡಿನಲ್ಲಿ ತನ್ನ ಸೇವಾ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ.
ಮದುರೈ ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ "ಹೃದಯದಿಂದ ಹೃದಯಕ್ಕೆ ಸಂವಾದ” ಎಂಬ ವಿಶೇಷ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಈ ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಹೊಸ ಸೇವಾ ಯೋಜನೆಗಳ ರೂಪುರೇಷೆ
ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮವನ್ನು ಕೇಂದ್ರಸ್ಥಾನವಾಗಿರಿಸಿಕೊಂಡು ಕಾರ್ಯಾಚರಿಸುತ್ತಿರುವ ಈ ಮಿಷನ್, ತಮಿಳುನಾಡಿನಾದ್ಯಂತ ಹಲವಾರು ಹೊಸ ಯೋಜನೆಗಳಿಗೆ ಚಾಲನೆ ನೀಡಲಿದೆ. ಅಧೀನಾಮ್ ಸಂಸ್ಥೆಯ ಸಹಯೋಗದೊಂದಿಗೆ ಮಯಿಲಾಡುತುರೈನಲ್ಲಿ ನೂತನವಾಗಿ 60 ಹಾಸಿಗೆಗಳ ಉಚಿತ ಆಸ್ಪತ್ರೆಯನ್ನು ನಿರ್ಮಿಸಲಾಗುವುದು. ಇದರೊಂದಿಗೆ ತೆಂಕಾಸಿಯಲ್ಲಿ ಹೊಸ ಉಚಿತ ಗುರುಕುಲವನ್ನು ಆರಂಭಿಸಲಾಗುತ್ತಿದ್ದು, ದಿಂಡಿಗಲ್ನಲ್ಲಿ ಪ್ರಸ್ತುತ ಕಾರ್ಯಾಚರಿಸುತ್ತಿರುವ ಶ್ರೀ ಸತ್ಯ ಸಾಯಿ ಮೀನಾಕ್ಷಿನಿಕೇತನ ಗುರುಕುಲವನ್ನು ಉನ್ನತೀಕರಿಸಿ ವಿಶ್ವವಿದ್ಯಾಲಯ ಮಟ್ಟಕ್ಕೆ ಏರಿಸುವ ಬೃಹತ್ ಗುರಿಯನ್ನು ಹೊಂದಲಾಗಿದೆ ಎಂದು ಸದ್ಗುರುಗಳು ಸಭೆಗೆ ವಿವರಿಸಿದರು.
ಉದ್ಯಮಿಗಳು ಸಮಾಜಕ್ಕೆ ಮರಳಿ ನೀಡಬೇಕು
ಖ್ಯಾತ ಉದ್ಯಮಿ ಹರಿ ತ್ಯಾಗರಾಜನ್ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ಮಧುಸೂದನ ಸಾಯಿ ಅವರು, ಉದ್ಯಮಿಗಳು ಹಾಗೂ ಸಮಾಜದ ನಡುವಿನ ಸಂಬಂಧವನ್ನು ಅತ್ಯಂತ ಮಾರ್ಮಿಕವಾಗಿ ವಿವರಿಸಿದರು. ಉದ್ಯಮಿಗಳು ದೇಹದ ಹೊಟ್ಟೆಯಿದ್ದಂತೆ, ಹೊಟ್ಟೆಯು ತಾನು ಸ್ವೀಕರಿಸಿದ ಆಹಾರವನ್ನು ಜೀರ್ಣಿಸಿಕೊಂಡು ದೇಹದ ಎಲ್ಲ ಅಂಗಗಳಿಗೂ ಶಕ್ತಿಯಾಗಿ ಹಂಚುವಂತೆ, ಉದ್ಯಮಿಗಳು ತಾವು ಸಂಪಾದಿಸಿದ ಸಂಪತ್ತನ್ನು ಸಮಾಜದ ಒಳಿತಿಗಾಗಿ ಮರಳಿ ನೀಡಬೇಕು. ಪಾಶ್ಚಾತ್ಯರ ಕೇವಲ ಸಂಪಾದನೆಯ ಸಂಸ್ಕೃತಿಯ ಬದಲು, ಭಾರತೀಯ ಉದಾರ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇಂದಿನ ಎಲ್ಲ ಜಾಗತಿಕ ಸಮಸ್ಯೆಗಳಿಗೆ ಆಧ್ಯಾತ್ಮಿಕತೆಯೇ ಸೂಕ್ತ ಪರಿಹಾರವಾಗಿದ್ದು, ಉಪನಿಷತ್ತಿನಂತಹ ಪಾರಂಪರಿಕ ಮೌಲ್ಯಗಳು ಪಠ್ಯಕ್ರಮದ ಭಾಗವಾಗಬೇಕು ಎಂದು ಅವರು ಪ್ರತಿಪಾದಿಸಿದರು.
ಜಾಗತಿಕ ಸೇವೆ ಮತ್ತು ನೈಜ ಪರಿವರ್ತನೆ
ಶ್ರೀಲಂಕಾದಲ್ಲಿ ನಡೆಯುತ್ತಿರುವ ಉಚಿತ ಆರೋಗ್ಯ ಸೇವೆಯನ್ನು ಸಮರ್ಥಿಸಿಕೊಂಡ ಅವರು, ಯುದ್ಧದ ದುರಂತದಿಂದಾಗಿ ಜಾಫ್ನಾ ಸೇರಿದಂತೆ ಹಲವೆಡೆ ಸಾವಿರಾರು ಮಂದಿ ವಿಧವೆಯರಾಗಿದ್ದು, ಮಕ್ಕಳು ಶಿಕ್ಷಣ ಮತ್ತು ಆರೋಗ್ಯದಿಂದ ವಂಚಿತರಾಗಿದ್ದಾರೆ. ಅಂತಹ ಬಡತನದ ಬೇಗೆಯಲ್ಲಿರುವವರಿಗೆ ಸೇವೆ ಒದಗಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು. ಫಿಜಿ, ಆಫ್ರಿಕಾ ಹಾಗೂ ಅಮೆರಿಕದಂತಹ ರಾಷ್ಟ್ರಗಳಲ್ಲೂ ತಮ್ಮ ಮಿಷನ್ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ ಎಂದು ಮಾಹಿತಿ ನೀಡಿದರು. ಇದೇ ವೇದಿಕೆಯಲ್ಲಿ ಮಾತನಾಡಿದ ದಿಂಡಿಗಲ್ ಗುರುಕುಲದ ವಿದ್ಯಾರ್ಥಿನಿ ಸಂಘವಿ, ಕಡುಬಡತನದಿಂದ ಬಂದ ತನಗೆ ಈ ಸಂಸ್ಥೆ ಜಾಗತಿಕ ಮಟ್ಟದ ಚಿಂತನೆಯನ್ನು ಬೆಳೆಸಿದೆ ಎಂದು ತನ್ನ ಪರಿವರ್ತನೆಯ ಹಾದಿಯನ್ನು ಹಂಚಿಕೊಂಡಳು.
ತಮಿಳುನಾಡಿನಲ್ಲಿ ಮುಂದುವರಿದ ಸೇವಾ ಕಾರ್ಯಗಳು
ಈಗಾಗಲೇ ತಮಿಳುನಾಡಿನ ದಿಂಡಿಗಲ್ ಮತ್ತು ಕೊಡೈಕೆನಾಲ್ನಲ್ಲಿ ಮೌಲ್ಯಾಧಾರಿತ ಉಚಿತ ಶಿಕ್ಷಣ ನೀಡುವ ಗುರುಕುಲಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ದಿಂಡಿಗಲ್ನ ಗುರುಕುಲದಲ್ಲಿ 54 ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣದ ಜತೆಗೆ ವಸತಿ, ಆಹಾರ ಒದಗಿಸಲಾಗುತ್ತಿದ್ದರೆ, ಕೊಡೈಕೆನಾಲ್ನ ಆನಂದನಿಕೇತನದಲ್ಲಿ 46 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅಲ್ಲದೆ, ಕೊಡೈಕೆನಾಲ್ನ ಸಾಯಿ ಸ್ವಾಸ್ಥ್ಯ ಕೇಂದ್ರದ ಮೂಲಕ ಪ್ರತಿ ತಿಂಗಳು ಸುಮಾರು 600ಕ್ಕೂ ಹೆಚ್ಚು ಮಂದಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 13,000ಕ್ಕೂ ಅಧಿಕ ರೋಗಿಗಳು ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮುಂಬರುವ ಮಯಿಲಾಡುತುರೈ ಆಸ್ಪತ್ರೆಯು ತಾಯಿ ಮತ್ತು ಶಿಶು ಆರೈಕೆಗೆ ವಿಶೇಷ ಒತ್ತು ನೀಡಲಿದ್ದು, ಆ ಭಾಗದ ಸುಮಾರು 11.8 ಲಕ್ಷ ಜನರಿಗೆ ಸಂಜೀವಿನಿಯಾಗಲಿದೆ.
ಈ ಮಹತ್ವದ ಕಾರ್ಯಕ್ರಮದಲ್ಲಿ ಧರ್ಮೈ ಅಧೀನಂ ಶಿವ ಗುರುನಾಥ ತಂಬಿರಾನ್, ಚೆನ್ನೈ ಹೈಕೋರ್ಟ್ ನ್ಯಾಯಮೂರ್ತಿ ಕಾರ್ತಿಕ್ ಕೆ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಎಸ್. ಗೋಕುಲ ಪ್ರಿಯಾ ಕಾರ್ಯಕ್ರಮವನ್ನು ನಿರೂಪಿಸಿದರು.

