ಗುಂಡೇಟು ಎದುರಿಸಿ ಬೆಳೆದ ಎಸ್. ವರಲಕ್ಷ್ಮಿ ಅವರ ಹೋರಾಟದ ಹಾದಿ
1994ರಲ್ಲಿ ಸಿಐಟಿಯು ಪೂರ್ಣಾವಧಿ ಕಾರ್ಯಕರ್ತೆಯಾದ ವರಲಕ್ಷ್ಮಿ, ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರ ಸಂಘಟನೆಗೆ ಜೀವ ತುಂಬಿ
ಕೇವಲ 300 ರೂಪಾಯಿ ಮಾಸಿಕ ವೇತನಕ್ಕೆ ದಿನಕ್ಕೆ ಹತ್ತು ಗಂಟೆಗಳ ಕಾಲ ದುಡಿಯುತ್ತಿದ್ದ ಸಾಮಾನ್ಯ ಕಾರ್ಖಾನೆ ಕಾರ್ಮಿಕಳೊಬ್ಬಳು, ಇಂದು ದೇಶದ ಪ್ರಮುಖ ಕಾರ್ಮಿಕ ಸಂಘಟನೆಯಾದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಷ್ಟ್ರೀಯ ಕಾರ್ಯದರ್ಶಿಯಾಗಿ ಬೆಳೆದು ನಿಂತಿರುವುದು ರೋಚಕ ಇತಿಹಾಸ. 'ದ ಫೆಡರಲ್ ಕರ್ನಾಟಕ' ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಎಸ್. ವರಲಕ್ಷ್ಮಿ ಅವರು, ತಮ್ಮ ಬದುಕಿನ ಕಡುಬಡತನ, ಪೊಲೀಸ್ ದೌರ್ಜನ್ಯ, ಜೈಲುವಾಸ ಹಾಗೂ ಲಕ್ಷಾಂತರ ಅಸಂಘಟಿತ ಕಾರ್ಮಿಕರಿಗೆ ನ್ಯಾಯ ಕೊಡಿಸಿದ ರೋಮಾಂಚಕಾರಿ ಹಾದಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬರಗಾಲದ ನಾಡಿನಿಂದ ಬೆಂಗಳೂರಿನ ಕಾರ್ಖಾನೆಗೆ
ಕೋಲಾರ ಜಿಲ್ಲೆಯ ವೀರಕಪುತ್ರ ಗ್ರಾಮದ ಬಡ ಕುಂಬಾರ ಕುಟುಂಬದಲ್ಲಿ ಜನಿಸಿದ ವರಲಕ್ಷ್ಮಿ ಅವರಿಗೆ ಬಾಲ್ಯದಿಂದಲೇ ಬಡತನ ಹಾಸುಹೊಕ್ಕಾಗಿತ್ತು. 1989ರಲ್ಲಿ ದ್ವಿತೀಯ ಪಿಯುಸಿ ಮುಗಿಸಿದರೂ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ಪರಿಸ್ಥಿತಿ ಅಡ್ಡಿಯಾಯಿತು. ಹೀಗಾಗಿ 1990ರಲ್ಲಿ ಬೆಂಗಳೂರಿನ ಕುಂಬಳಗೋಡು ಕೈಗಾರಿಕಾ ಪ್ರದೇಶದ 'ಸಿಸ್ಟಮ್ ಡೈಮೆನ್ಶನ್ಸ್' ಎಂಬ ಎಲೆಕ್ಟ್ರಾನಿಕ್ಸ್ ಕಾರ್ಖಾನೆಗೆ ಕಾರ್ಮಿಕಳಾಗಿ ಸೇರಿದರು. ಅಲ್ಲಿ ಕೇವಲ 300 ರೂಪಾಯಿ ಸಂಬಳ, ರಜೆಯಿಲ್ಲದ ದುಡಿಮೆ ಹಾಗೂ ಮ್ಯಾನೇಜ್‌ಮೆಂಟ್‌ನ ಅಮಾನವೀಯ ವರ್ತನೆ ಕಂಡು ಬೇಸತ್ತ ಅವರು, ಕಾರ್ಖಾನೆಯ ಹಿರಿಯ ಕಾರ್ಮಿಕರು ಕಟ್ಟಿದ್ದ ಸಂಘಟನೆಯಲ್ಲಿ ಸಕ್ರಿಯರಾದರು. ಮೊದಲ ಸಂಧಾನದಲ್ಲೇ ವೇತನ 600 ರೂಪಾಯಿಗೆ ಏರಿಕೆಯಾದಾಗ, ಸಂಘಟಿತ ಹೋರಾಟದ ಶಕ್ತಿಯ ಅರಿವು ಅವರಿಗೆ ಆಯಿತು.
ಲಾಠಿ ಚಾರ್ಜ್, ಗೋಲಿಬಾರ್ ಮತ್ತು ಅಪಮಾನಗಳ ಸರಮಾಲೆ
1993ರಲ್ಲಿ ಕುಂಬಳಗೋಡು ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಹಕ್ಕುಗಳಿಗಾಗಿ ನಡೆದ ಹೋರಾಟ ವರಲಕ್ಷ್ಮಿ ಅವರ ಬದುಕಿಗೆ ದೊಡ್ಡ ತಿರುವು ನೀಡಿತು. ಪೊಲೀಸರು ನಡೆಸಿದ ಭೀಕರ ಲಾಠಿ ಚಾರ್ಜ್‌ನಲ್ಲಿ ತೀವ್ರವಾಗಿ ಗಾಯಗೊಂಡು ಬಂಧನಕ್ಕೊಳಗಾದ ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ಅಮಾನುಷ ಹಲ್ಲೆ ನಡೆಯಿತು. ಇದರಿಂದಾಗಿ ಕಾರ್ಖಾನೆಯ ಕೆಲಸವನ್ನೂ ಕಳೆದುಕೊಂಡರು. 1996-97ರಲ್ಲಿ ಮೈಸೂರು ರಸ್ತೆಯ ಹೆಜ್ಜಾಲ ಬಳಿಯ 'ವೆಳ್ಳಿಯಪ್ಪ ಟೆಕ್ಸ್‌ಟೈಲ್' ಕಾರ್ಮಿಕರ ಹೋರಾಟದ ವೇಳೆ ಪೊಲೀಸ್ ಜೀಪ್ ಇವರ ತೊಡೆಯ ಮೇಲೆಯೇ ಹರಿಯುವ ಹಂತ ತಲುಪಿತ್ತು. ಆ ದಿನ ನಡೆದ ಗೋಲಿಬಾರ್‌ನಲ್ಲಿ ಮೂವರು ಕಾರ್ಮಿಕರು ಮೃತಪಟ್ಟು, 21 ಜನರಿಗೆ ಗುಂಡೇಟು ತಗುಲಿತ್ತು. ಗಾಯಾಳುಗಳನ್ನು ಮತ್ತು ಮೃತದೇಹಗಳನ್ನು ಸ್ವತಃ ವರಲಕ್ಷ್ಮಿ ಅವರೇ ಆಸ್ಪತ್ರೆಗೆ ಸಾಗಿಸಿದ್ದರು.
ಆ ದಿನಗಳಲ್ಲಿ ಮಹಿಳೆಯೊಬ್ಬಳು ಹೋರಾಟಕ್ಕಿಳಿದು ಜೈಲಿಗೆ ಹೋದರೆ ಸಮಾಜ ನೋಡುವ ದೃಷ್ಟಿಯೇ ಬೇರೆಯಾಗಿತ್ತು. ಊರಿನವರು ಇವರ ತಾಯಿಗೆ ಬೆದರಿಕೆ ಹಾಕಿ ಅವಮಾನಿಸಿದಾಗ, "ನನ್ನ ಮಗಳು ಕೆಟ್ಟ ಕೆಲಸ ಮಾಡಿ ಜೈಲಿಗೆ ಹೋಗಿಲ್ಲ, ನ್ಯಾಯಕ್ಕಾಗಿ ಹೋರಾಡಲು ಹೋಗಿದ್ದಾಳೆ" ಎಂದು ತಾಯಿ ದಿಟ್ಟ ಉತ್ತರ ನೀಡಿದ್ದು ವರಲಕ್ಷ್ಮಿ ಅವರಿಗೆ ಆನೆಬಲ ತಂದಿತು.
ಅಂಗನವಾಡಿ ಮತ್ತು ಬಿಸಿಯೂಟ ನೌಕರರ ಪಾಲಿನ ಆಶಾಕಿರಣ
1994ರಲ್ಲಿ ಸಿಐಟಿಯು ಪೂರ್ಣಾವಧಿ ಕಾರ್ಯಕರ್ತೆಯಾದ ವರಲಕ್ಷ್ಮಿ, ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರ ಸಂಘಟನೆಗೆ ಜೀವ ತುಂಬಿದರು. ಕೇವಲ ಮೂರು ತಾಲೂಕುಗಳಲ್ಲಿದ್ದ ಅಂಗನವಾಡಿ ಸಂಘಟನೆಯನ್ನು 156 ತಾಲೂಕುಗಳಿಗೆ ವಿಸ್ತರಿಸಿ, 60 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಒಗ್ಗೂಡಿಸಿದರು. 400 ರೂಪಾಯಿ ಗೌರವಧನ ಪಡೆಯುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರ ವೇತನ 12 ಸಾವಿರ ರೂಪಾಯಿಗೆ ಏರಲು ಹಾಗೂ ಸುಪ್ರೀಂ ಕೋರ್ಟ್ ಮೂಲಕ ಅವರಿಗೆ ಗ್ರಾಚ್ಯುಟಿ ಸೌಲಭ್ಯ ಸಿಗಲು ಇವರ ನಿರಂತರ ಹೋರಾಟವೇ ಕಾರಣ. ಅಲ್ಲದೆ, ಕೆಲಸದಿಂದ ವಜಾಗೊಂಡಿದ್ದ 10 ಸಾವಿರ ಬಿಸಿಯೂಟ ನೌಕರರಿಗೆ ಇಡುಗಂಟು ಕೊಡಿಸುವಲ್ಲಿ ಹಾಗೂ ಕೆಪಿಟಿಸಿಎಲ್ ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಜಾರಿಯಾಗುವಲ್ಲಿ ವರಲಕ್ಷ್ಮಿ ಅವರ ಪಾತ್ರ ಮಹತ್ವದ್ದಾಗಿದೆ. ವೈಯಕ್ತಿಕ ಬದುಕಿನ ಸುಖಗಳನ್ನು ತ್ಯಾಗ ಮಾಡಿ, ಇಂದಿಗೂ 20ಕ್ಕೂ ಹೆಚ್ಚು ಪೊಲೀಸ್ ಪ್ರಕರಣಗಳನ್ನು ಎದುರಿಸುತ್ತಾ ಕಾರ್ಮಿಕರ ಧ್ವನಿಯಾಗಿ ಇವರು ಮುನ್ನಡೆಯುತ್ತಿದ್ದಾರೆ.

