
ಆರ್‌ಎಸ್‌ಎಸ್ ನೋಂದಣಿ ಮಾಡಲ್ಲ, ಮುಂದೆಯೂ ಮಾಡಿಸಲ್ಲ; ಖರ್ಗೆಗೆ ಬಿ.ಎಲ್. ಸಂತೋಷ್ ತಿರುಗೇಟು
ಸಂಘವು ಸಮಾಜದ ರಕ್ಷಣೆ ಮತ್ತು ನಿಸ್ವಾರ್ಥ ಸೇವೆಗೆ ಬದ್ಧವಾಗಿದ್ದು, ಅದನ್ನು ನೋಂದಣಿಯ ಷರತ್ತುಗಳಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ಬಿ.ಎಲ್.ಸಂತೋಷ್ ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆಗಳಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕಠಿಣ ಪದಗಳಲ್ಲಿ ತಿರುಗೇಟು ನೀಡಿದ್ದಾರೆ.
ಆರ್‌ಎಸ್‌ಎಸ್ ನೋಂದಣಿಯಾಗಿಲ್ಲ, ಮುಂದೆಯೂ ಆಗುವುದಿಲ್ಲ. ಪ್ರತಿಯೊಂದಕ್ಕೂ ನೋಂದಣಿಯೇ ಮಾನದಂಡವಲ್ಲ. ನಿಮ್ಮ ಕುಟುಂಬ ಕಲಬುರಗಿಗೆ ಓಡಿ ಬಂದಾಗ ರಜಾಕಾರರ ದೌರ್ಜನ್ಯದ ವಿರುದ್ಧ ನಿಂತು ರಕ್ಷಣೆ ನೀಡಿದ್ದು ಇದೇ ಆರ್‌ಎಸ್‌ಎಸ್‌ನ ಹುಡುಗರು ಎಂಬುದನ್ನು ಮರೆಯದಿರಿ ಎಂದು ಹರಿಹಾಯ್ದಿದ್ದಾರೆ.
80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಬನ್ನಪ್ಪ ಪಾರ್ಕ್‌ನಲ್ಲಿ ಹಿಂದೂ ಜಾಗರಣ ವೇದಿಕೆ ಹಮ್ಮಿಕೊಂಡಿದ್ದ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಸಂಘವು ಸಮಾಜದ ರಕ್ಷಣೆ ಮತ್ತು ನಿಸ್ವಾರ್ಥ ಸೇವೆಗೆ ಬದ್ಧವಾಗಿದ್ದು, ಅದನ್ನು ನೋಂದಣಿಯ ಷರತ್ತುಗಳಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಲಿದಾನದಿಂದ ಬಂದ ಸ್ವಾತಂತ್ರ್ಯ
ಸ್ವಾತಂತ್ರ್ಯ ಹೋರಾಟ ಮತ್ತು ದೇಶದ ಇತಿಹಾಸವನ್ನು ಸ್ಮರಿಸಿದ ಸಂತೋಷ್, "ನಮಗೆ ಬರಿ ಉಪ್ಪು ತಯಾರಿಕೆ ಮತ್ತು ಚರಕದಿಂದ ಮಾತ್ರವೇ ಸ್ವಾತಂತ್ರ್ಯ ಬಂದಿತು ಎಂದು ತಪ್ಪಾಗಿ ಬೋಧಿಸಲಾಗಿದೆ. ಆದರೆ, 35 ಲಕ್ಷಕ್ಕೂ ಹೆಚ್ಚು ಹಿಂದೂಗಳ ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. 1200 ವರ್ಷಗಳ ಸುದೀರ್ಘ ಅವಧಿಯಲ್ಲಿ ಖಿಲ್ಜಿ, ಕುಶಾನರು, ಅರಬರು, ಯುರೋಪಿಯನ್ನರು ಹಾಗೂ ಬ್ರಿಟಿಷರ ನಿರಂತರ ಆಕ್ರಮಣಗಳನ್ನು ಎದುರಿಸಿ ನಮ್ಮ ಸಮಾಜವನ್ನು ರಕ್ಷಿಸಲಾಗಿದೆ" ಎಂದು ಪ್ರತಿಪಾದಿಸಿದ್ದಾರೆ.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ತಜ್ಞ ಹಾಗೂ ಪ್ಯಾರಿಸ್ ಬ್ರಿಕ್ಸ್ ಅಂತರಾಷ್ಟ್ರೀಯ ಉಪಾಧ್ಯಕ್ಷ ಡಾ. ಕೆ.ಜೆ. ಪುರುಷೋತ್ತಮ್, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಕಿಡ್ನಿ ಫೌಂಡೇಷನ್ ಆಸ್ಪತ್ರೆ ನಿರ್ದೇಶಕ ಡಾ. ಹೆಚ್.ಕೆ. ನಾಗರಾಜ್ ,ಬಿಜೆಪಿ ಮುಖಂಡರಾದ ಜಯನಗರ ರಾಮಮೂರ್ತಿ, ಚಿ.ನಾ.ರಾಮು, ನಂದೀಶ್ ರೆಡ್ಡಿ ಇದ್ದರು.

