Even a box shop needs registration, doesnt RSS?: Congress spokesperson M. Laxman
x

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹಾಗೂ ಕಾಂಗ್ರೆಸ್‌ ವಕ್ತಾರ ಎಂ. ಲಕ್ಷ್ಮಣ್‌

"ಪೆಟ್ಟಿ ಅಂಗಡಿಗೂ ನೋಂದಣಿ ಬೇಕು, ಆರ್‌ಎಸ್‌ಎಸ್‌ಗೆ ಬೇಡವೇ?": ಕಾಂಗ್ರೆಸ್‌ ವಕ್ತಾರ ಎಂ. ಲಕ್ಷ್ಮಣ್

ಆರ್‌ಎಸ್‌ಎಸ್‌ನ ಆರ್ಥಿಕ ಮೂಲಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಲಕ್ಷ್ಮಣ್, "ದೆಹಲಿಯಲ್ಲಿ ಸುಮಾರು 300 ಕೋಟಿ ರೂ. ವೆಚ್ಚದಲ್ಲಿ 13 ಅಂತಸ್ತಿನ 'ಕೇಶವ ಕುಂಜ' ಎಂಬ ಬೃಹತ್ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದರು.


Click the Play button to hear this message in audio format

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ನೋಂದಣಿ ಮತ್ತು ಕಾನೂನುಬದ್ಧ ಸ್ಥಿತಿಗತಿಯ ಕುರಿತಾದ ಚರ್ಚೆ ಕರ್ನಾಟಕ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಘದ ನೋಂದಣಿ ಮತ್ತು ಆರ್ಥಿಕ ವಹಿವಾಟುಗಳ ಕುರಿತು ಪ್ರಶ್ನಿಸಿ ಪತ್ರ ಬರೆದಿರುವ ಬೆನ್ನಲ್ಲೇ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಎಂ. ಲಕ್ಷ್ಮಣ್, ಸಂಘದ ಪಾರದರ್ಶಕತೆಯನ್ನು ಪ್ರಶ್ನಿಸಿದರು. "ದೇಶದಲ್ಲಿ ರಸ್ತೆ ಬದಿಯ ಒಂದು ಸಣ್ಣ ಪೆಟ್ಟಿ ಅಂಗಡಿ ಇಟ್ಟುಕೊಳ್ಳಬೇಕೆಂದರೂ ನೋಂದಣಿ ಮಾಡಿಸಿಕೊಳ್ಳಬೇಕು ಎಂಬ ಕಾನೂನಿದೆ. ಹಾಗಿರುವಾಗ ಆರ್‌ಎಸ್‌ಎಸ್‌ನಂತಹ ಬೃಹತ್ ಸಂಘಟನೆಗೆ ನೋಂದಣಿಯ ಅವಶ್ಯಕತೆಯಿಲ್ಲವೇ? ಸಮಾಜಗಳ ಕಾಯ್ದೆಯಡಿ ಇವರು ಏಕೆ ನೋಂದಣಿ ಮಾಡಿಸಿಕೊಳ್ಳುತ್ತಿಲ್ಲ?" ಎಂದು ಅವರು ಪ್ರಶ್ನಿಸಿದರು.

ಆರ್ಥಿಕ ವಹಿವಾಟಿನ ಬಗ್ಗೆ ಪ್ರಶ್ನೆ

ಆರ್‌ಎಸ್‌ಎಸ್‌ನ ಆರ್ಥಿಕ ಮೂಲಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಲಕ್ಷ್ಮಣ್, "ದೆಹಲಿಯಲ್ಲಿ ಸುಮಾರು 300 ಕೋಟಿ ರೂ. ವೆಚ್ಚದಲ್ಲಿ 13 ಅಂತಸ್ತಿನ 'ಕೇಶವ ಕುಂಜ' ಎಂಬ ಬೃಹತ್ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಬೃಹತ್ ಮೊತ್ತ ಇವರಿಗೆ ಎಲ್ಲಿಂದ ಬಂತು? ಇದಕ್ಕೆ ತೆರಿಗೆ ಪಾವತಿಸಲಾಗಿದೆಯೇ? ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಮತ್ತು ಫೆಮಾ ಕಾನೂನುಗಳು ಇವರಿಗೆ ಅನ್ವಯಿಸುವುದಿಲ್ಲವೇ?" ಎಂದು ತರಾಟೆಗೆ ತೆಗೆದುಕೊಂಡರು.

ಮಿಲಿಟರಿ ತಂದು ನಿಲ್ಲಿಸುತ್ತಾರಾ?

"ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ನೋಂದಣಿಯ ಅಗತ್ಯವಿಲ್ಲ ಎಂದು ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮಣ್, "ಕಾನೂನು ಪಾಲಿಸದಿದ್ದರೆ ನೋಟಿಸ್ ನೀಡಲಾಗುವುದು ಮತ್ತು ತೆರವುಗೊಳಿಸುವ ಪ್ರಕ್ರಿಯೆ ನಡೆಯಲಿದೆ. ಒಂದು ವೇಳೆ ನಾವು ಕಾನೂನು ಜಾರಿಗೊಳಿಸಲು ಮುಂದಾದಾಗ ಇವರು ಮಿಲಿಟರಿ ತಂದು ನಿಲ್ಲಿಸುತ್ತಾರಾ? ನಮ್ಮ ರಾಜ್ಯದಲ್ಲಿ ಸಂವಿಧಾನ ಮತ್ತು ಕಾನೂನಿಗಿಂತ ಯಾರೂ ಮೇಲಲ್ಲ," ಎಂದು ಗುಡುಗಿದರು.

ಪಥ ಸಂಚಲನಕ್ಕೆ ಅನುಮತಿ ಅನಿವಾರ್ಯ

ಕಲಬುರಗಿ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿದ ಅವರು, ಪಥ ಸಂಚಲನ ನಡೆಸಲು ಪೋಲೀಸ್ ಅನುಮತಿ ಕಡ್ಡಾಯವಾಗಿದೆ. "ಕೇವಲ ಹಿಂದೂ ಸಂಘಟನೆ ಎಂಬ ಕಾರಣಕ್ಕೆ ಕಾನೂನಿನಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಲ್ಲಿ ಎಲ್ಲರಿಗೂ ಒಂದೇ ಕಾನೂನಿದೆ. ಮುಸ್ಲಿಂ ಅಥವಾ ಕ್ರಿಶ್ಚಿಯನ್ ಸಂಘಟನೆಗಳಿಗೆ ಅನ್ವಯವಾಗುವ ನಿಯಮಗಳೇ ಆರ್‌ಎಸ್‌ಎಸ್‌ಗೂ ಅನ್ವಯವಾಗಬೇಕು," ಎಂದು ವಾದಿಸಿದರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರ್ಧಾರವನ್ನು ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ತಿಳಿಸಿದ ಲಕ್ಷ್ಮಣ್, ಮುಂಬರುವ ದಿನಗಳಲ್ಲಿ ಕಾನೂನು ಚೌಕಟ್ಟಿನಲ್ಲೇ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂಬ ಎಚ್ಚರಿಕೆಯನ್ನು ನೀಡಿದರು.

Read More
Next Story