RSS ನೋಂದಣಿ ಕಡ್ಡಾಯವೇ?  ಹಿರಿಯ ವಕೀಲರಾದ ವಿಕ್ರಂ ಪಡಕೆ ಹೇಳುವುದೇನು?
x

RSS ನೋಂದಣಿ ಕಡ್ಡಾಯವೇ? ಹಿರಿಯ ವಕೀಲರಾದ ವಿಕ್ರಂ ಪಡಕೆ ಹೇಳುವುದೇನು?

"ಸಂವಿಧಾನದಲ್ಲಾಗಲಿ ಅಥವಾ ದೇಶದ ಯಾವುದೇ ಕಾನೂನಿನಲ್ಲಾಗಲಿ ಆರ್‌ಎಸ್‌ಎಸ್‌ನಂತಹ ಸಂಸ್ಥೆಗಳು ನೋಂದಣಿ ಮಾಡಿಕೊಳ್ಳಲೇಬೇಕು ಎಂಬ ಯಾವುದೇ ಕಡ್ಡಾಯ ನಿಯಮವಿಲ್ಲ" ಎಂದು ತಿಳಿಸಿದರು.


Click the Play button to hear this message in audio format

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿಗೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬರೆದಿರುವ ಪತ್ರ ಸದ್ಯ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಕಾನೂನು ಏನು ಹೇಳುತ್ತದೆ? ಆರ್‌ಎಸ್‌ಎಸ್ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವೇ? ಎಂಬ ಸಾರ್ವಜನಿಕ ಕುತೂಹಲಕ್ಕೆ ಖ್ಯಾತ ಹಿರಿಯ ವಕೀಲರಾದ ವಿಕ್ರಂ ಪಡಕೆ ಅವರು ಸುದೀರ್ಘ ಕಾನೂನು ವಿಶ್ಲೇಷಣೆ ನೀಡಿದ್ದಾರೆ.

ನೋಂದಣಿ ಐಚ್ಛಿಕ, ಕಡ್ಡಾಯವಲ್ಲ

ʼದ ಫೆಡರಲ್‌ ಕರ್ನಾಟಕʼದ ಜೊತೆ ಮಾತನಾಡಿದ ಅವರು, "ಸಂವಿಧಾನದಲ್ಲಾಗಲಿ ಅಥವಾ ದೇಶದ ಯಾವುದೇ ಕಾನೂನಿನಲ್ಲಾಗಲಿ ಆರ್‌ಎಸ್‌ಎಸ್‌ನಂತಹ ಸಂಸ್ಥೆಗಳು ನೋಂದಣಿ ಮಾಡಿಕೊಳ್ಳಲೇಬೇಕು ಎಂಬ ಯಾವುದೇ ಕಡ್ಡಾಯ ನಿಯಮವಿಲ್ಲ. ಇದು ಸಂಪೂರ್ಣವಾಗಿ ಐಚ್ಛಿಕ. ಆದ್ದರಿಂದ ಯಾರೂ ಕೂಡ ಇದನ್ನು ಬಲವಂತವಾಗಿ ಮಾಡಿಸುವ ಅಧಿಕಾರ ಹೊಂದಿಲ್ಲ" ಎಂದು ಸ್ಪಷ್ಟಪಡಿಸಿದರು.

ಸಂವಿಧಾನದ ಮೂಲಭೂತ ಹಕ್ಕುಗಳ ರಕ್ಷಣೆ

ಸಂವಿಧಾನದ ವಿಧಿ 19(1)(ಸಿ) ಅಡಿಯಲ್ಲಿ ನಾಗರಿಕರಿಗೆ ಸಂಘ-ಸಂಸ್ಥೆಗಳನ್ನು ರಚಿಸುವ ಮತ್ತು ಮುನ್ನಡೆಸುವ ಮೂಲಭೂತ ಹಕ್ಕನ್ನು ನೀಡಲಾಗಿದೆ. "ನೋಂದಣಿ ಮಾಡಿಕೊಂಡಿಲ್ಲ ಎಂಬ ಒಂದೇ ಕಾರಣಕ್ಕೆ ಯಾವುದೇ ಸಂಘಟನೆಯ ಸಾರ್ವಜನಿಕ ಕಾರ್ಯಕ್ರಮಗಳನ್ನು ಅಥವಾ ಚಟುವಟಿಕೆಗಳನ್ನು ತಡೆಯಲು ಸರ್ಕಾರಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಅಧಿಕಾರ ಯಾರಿಗೂ ಇರುವುದಿಲ್ಲ" ಎಂದು ಅವರು ವಿವರಿಸಿದರು.

ದೇಣಿಗೆ ಮತ್ತು ಆದಾಯ ತೆರಿಗೆ ನಿಯಮವೇನು?

ಆರ್‌ಎಸ್‌ಎಸ್‌ನ ನಿಧಿ ಮತ್ತು ಉತ್ತರದಾಯಿತ್ವದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಆದಾಯ ತೆರಿಗೆ ಕಾಯ್ದೆಯನ್ನು ಉಲ್ಲೇಖಿಸಿದರು. ಬಾಡಿ ಆಫ್ ಇಂಡಿವಿಜುವಲ್ಸ್ ಪ್ರಕಾರ ಇನ್‌ಕಮ್ ಟ್ಯಾಕ್ಸ್ ಆಕ್ಟ್ ಅಡಿಯಲ್ಲಿ ನೋಂದಾಯಿತ ಮತ್ತು ನೋಂದಾಯಿತವಲ್ಲದ ಸಂಸ್ಥೆಗಳೆರಡನ್ನೂ ಪರಿಗಣಿಸಲಾಗುತ್ತದೆ. ಮ್ಯೂಚುಯಾಲಿಟಿ ತತ್ವದ ಪ್ರಕಾರ ಆರ್‌ಎಸ್‌ಎಸ್ ಸ್ವಯಂಸೇವಕರು ಪ್ರತಿವರ್ಷ ಗುರುಪೂರ್ಣಿಮೆಯ ಸಂದರ್ಭದಲ್ಲಿ ನೀಡುವ 'ಗುರುದಕ್ಷಿಣೆ' ನಿಧಿಯಿಂದಲೇ ಸಂಸ್ಥೆ ನಡೆಯುತ್ತದೆ. ಸದಸ್ಯರೇ ತಮಗಾಗಿ ಹಣ ಸಂಗ್ರಹಿಸಿ ತಮ್ಮದೇ ಚಟುವಟಿಕೆಗೆ ಬಳಸುವುದರಿಂದ, ಇದು ಮ್ಯೂಚುಯಾಲಿಟಿ ತತ್ವದ ಅಡಿಯಲ್ಲಿ ಬರುತ್ತದೆ ಮತ್ತು ತೆರಿಗೆ ಪರಿಧಿಯಿಂದ ಹೊರಗುಳಿಯುತ್ತದೆ. ಈ ವಿಚಾರ ಈಗಾಗಲೇ ಕಾನೂನಾತ್ಮಕವಾಗಿ ಹಲವು ವರ್ಷಗಳ ಹಿಂದೆಯೇ ತಾರ್ಕಿಕ ಅಂತ್ಯ ಕಂಡಿದೆ.

ಕುಟುಂಬಕ್ಕೆ ನೋಂದಣಿ ಇದೆಯೇ?

"ಸಣ್ಣ ಅಂಗಡಿಗಳು ಅಥವಾ ಬಾಳೆಹಣ್ಣು ಮಾರುವವರು ಸರ್ಕಾರದ ಸವಲತ್ತು ಪಡೆಯಲು ನೋಂದಣಿ ಮಾಡಿಕೊಳ್ಳುತ್ತಾರೆ. ಆದರೆ ಸಮಾಜದ ಬುನಾದಿಯಾಗಿರುವ ಕುಟುಂಬ ವ್ಯವಸ್ಥೆಗೆ ಯಾವುದೇ ನೋಂದಣಿ ಇರುವುದಿಲ್ಲ. ಹಾಗೆಯೇ ಲಾಭದ ಉದ್ದೇಶವಿಲ್ಲದೆ, ಕೇವಲ ಸಾರ್ವಜನಿಕ ಜಾಗದಲ್ಲಿ ಯೋಗ, ಪ್ರಾರ್ಥನೆ ಹಾಗೂ ದೇಶದ ಹಿತದ ಬಗ್ಗೆ ಯೋಚಿಸುವ ಸಂಘಟನೆಗೆ ನೋಂದಣಿ ಕೇಳುವುದು ಹಾಸ್ಯಾಸ್ಪದ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆ" ಎಂದು ವಿಕ್ರಂ ಪಡಕೆ ಉದಾಹರಣೆ ನೀಡಿದರು.

ಕೋರ್ಟ್‌ಗೆ ಹೋದರೆ ಏನಾಗಬಹುದು?

ಒಂದು ವೇಳೆ ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿದರೆ ಏನಾಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ವಕೀಲರು, ಕೋರ್ಟ್ ಮುಖ್ಯವಾಗಿ ಎರಡು ಅಂಶಗಳನ್ನು ಗಮನಿಸುತ್ತದೆ ಎಂದರು. ಪ್ರಶ್ನೆ ಎತ್ತುತ್ತಿರುವ ವ್ಯಕ್ತಿಗೆ ಇದರಿಂದ ವೈಯಕ್ತಿಕವಾಗಿ ಏನು ತೊಂದರೆಯಾಗಿದೆ ಅಥವಾ ಸಾರ್ವಜನಿಕವಾಗಿ ಏನು ಹಾನಿಯಾಗಿದೆ ಎಂಬುದನ್ನು ಕೋರ್ಟ್ ಮೊದಲು ಕೇಳುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ನೋಡುವುದಾದರೆ ನೋಂದಣಿ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಎಲ್ಲಿದೆ ಎಂದು ಕೋರ್ಟ್ ಪರಿಶೀಲಿಸುತ್ತದೆ. ಸಂವಿಧಾನವೇ ದೇಶದಲ್ಲಿ ಸರ್ವೋಚ್ಚವಾಗಿರುವುದರಿಂದ, ಕಾನೂನಿನಲ್ಲಿ ಇಲ್ಲದ ನಿಯಮವನ್ನು ಪಾಲಿಸುವಂತೆ ನ್ಯಾಯಾಂಗವಾಗಲಿ, ಕಾರ್ಯಾಂಗವಾಗಲಿ ಅಥವಾ ಶಾಸಕಾಂಗವಾಗಲಿ ಬಲವಂತಪಡಿಸಲು ಸಾಧ್ಯವಿಲ್ಲ.

ಇದು ಸರ್ಕಾರದ ನೋಟಿಸ್ ಅಲ್ಲ!

ಗೃಹ ಸಚಿವರ ಪತ್ರದ ಕಾನೂನು ಮಾನ್ಯತೆ ಕುರಿತು ಮಾತನಾಡಿದ ಅವರು, "ಪ್ರಿಯಾಂಕ್ ಖರ್ಗೆ ಅವರು ಬರೆದಿರುವ ಪತ್ರವು ಸರ್ಕಾರದ ಅಧಿಕೃತ 'ನೋಟಿಸ್' ಅಲ್ಲ. ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಒಬ್ಬ ಜನಪ್ರತಿನಿಧಿಯಾಗಿ ಅವರು ಕೇಳಿರುವ ಪ್ರಶ್ನೆ ಅಥವಾ ವ್ಯಕ್ತಪಡಿಸಿರುವ ಅಭಿಪ್ರಾಯವಷ್ಟೇ. ಅದಕ್ಕೆ ಉತ್ತರಿಸುವುದು ಅಥವಾ ಬಿಡುವುದು ಆ ಸಂಘಟನೆಗೆ ಬಿಟ್ಟ ವಿಚಾರ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಾಗ ಮಾತ್ರ ಗೃಹ ಸಚಿವರ ಅಧಿಕಾರ ವ್ಯಾಪ್ತಿ ಬರುತ್ತದೆ, ಅದನ್ನು ಹೊರತುಪಡಿಸಿ ಇಂತಹ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲು ಹೋದರೆ ಅದು ಅಸಾಂವಿಧಾನಿಕ ಎನಿಸಿಕೊಳ್ಳುತ್ತದೆ" ಎಂದರು.

ಅಂತಿಮವಾಗಿ, ಸಾರ್ವಜನಿಕರು ಎಲ್ಲವನ್ನೂ ಗಮನಿಸುತ್ತಿದ್ದು, ಯಾವುದು ರಾಜಕೀಯ ಪ್ರೇರಿತ ಮತ್ತು ಯಾವುದು ಸತ್ಯ ಎಂಬುದು ಜನರಿಗೆ ಚೆನ್ನಾಗಿ ಅರ್ಥವಾಗುತ್ತದೆ ಎಂದು ವಿಕ್ರಂ ಪಡಕೆ ತಿಳಿಸಿದರು.

Read More
Next Story