
ಮೃತ ಉದ್ಯಮಿ ರಾಯ್ ಸಿ.ಜೆ.
ರಾಯ್ ಸಿ ಜೆ ಆತ್ಮಹತ್ಯೆಗೆ ಖಿನ್ನತೆಯೂ ಕಾರಣವೇ, ಮನೋವೈದ್ಯರಿಂದ ಕೌನ್ಸೆಲಿಂಗ್ ಪಡೆಯುತ್ತಿದ್ದರೇ?
ಕಳೆದ ಕೆಲ ತಿಂಗಳುಗಳಿಂದ ತೀವ್ರ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದ ರಾಯ್ ಸಿ.ಜೆ, ತಮ್ಮ ಒತ್ತಡ, ಖಿನ್ನತೆ ನಿವಾರಣೆಗಾಗಿ ಬೆಂಗಳೂರಿನ ಮನೋವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ರಾಯ್ ಸಿ.ಜೆ. ಅವರ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿವೆ. ಉದ್ಯಮಿಯ ಈ ದಿಢೀರ್ ನಿರ್ಧಾರಕ್ಕೆ ಮಾನಸಿಕ ಖಿನ್ನತೆಯೂ ಪ್ರಮುಖ ಕಾರಣ ಎಂಬ ಮಾಹಿತಿ ಈಗ ಗೊತ್ತಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ, ರಾಯ್ ಅವರು ಘಟನೆ ನಡೆಯುವ ಹಿಂದಿನ ದಿನವೂ ಮನೋವೈದ್ಯರಿಂದ ಕೌನ್ಸೆಲಿಂಗ್ ಪಡೆದಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ, ರಾಯ್ ಸಿ.ಜೆ. ಕಳೆದ ಕೆಲ ತಿಂಗಳುಗಳಿಂದ ತೀವ್ರ ಮಾನಸಿಕ ಒತ್ತಡ ಹಾಗೂ ಖಿನ್ನತೆಗೆ ಒಳಗಾಗಿದ್ದರು. ಇದಕ್ಕಾಗಿ ಅವರು ಬೆಂಗಳೂರಿನ ಜಯನಗರ 8ನೇ ಬ್ಲಾಕ್‌ನಲ್ಲಿರುವ ಮನೋವೈದ್ಯರೊಬ್ಬರಲ್ಲಿ ನಿರಂತರ ಚಿಕಿತ್ಸೆ ಪಡೆಯುತ್ತಿದ್ದರು. ದುರಂತವೆಂದರೆ, ಪ್ರಾಣ ಕಳೆದುಕೊಳ್ಳುವ ಹಿಂದಿನ ದಿನವಷ್ಟೇ ಅವರು ಕ್ಲಿನಿಕ್‌ಗೆ ಭೇಟಿ ನೀಡಿ ಕೌನ್ಸೆಲಿಂಗ್ ಪಡೆದಿದ್ದರು ಎನ್ನಲಾಗಿದೆ. ವೈದ್ಯರ ಬಳಿ ತಮ್ಮ ಜೀವನದ ಸಂಕಷ್ಟಗಳು ಹಾಗೂ ಒತ್ತಡದ ಬಗ್ಗೆ ರಾಯ್ ಮನಬಿಚ್ಚಿ ಮಾತನಾಡಿದ್ದರು ಎಂಬುದಾಗಿ ಅವರ ಕುಟುಂಬದ ಮೂಲಗಳು ತಿಳಿಸಿವೆ.
ಸಾಮಾಜಿಕ ಜಾಲತಾಣಗಳಲ್ಲಿಯೂ ಅವರು ಇತ್ತೀಚೆಗೆ ಜೀವನ ಮತ್ತು ಸಾವಿನ ಕುರಿತು ಪದೇ ಪದೇ ಪ್ರಸ್ತಾಪಿಸುತ್ತಿದ್ದರು. ಹೊರಜಗತ್ತಿಗೆ ಲವಲವಿಕೆಯಿಂದ ಕಾಣಿಸಿಕೊಳ್ಳುತ್ತಿದ್ದ ರಾಯ್, ಅಂತರಾಳದಲ್ಲಿ ಮಾನಸಿಕ ಸಂಘರ್ಷ ನಡೆಸುತ್ತಿದ್ದರು ಎಂಬುದಾಗಿ ಹೇಳಲಾಗುತ್ತಿದೆ. ಹೀಗಾಗಿ ಚಿಕಿತ್ಸೆಯ ಹೊರತಾಗಿಯೂ ತಾವು ಎದುರಿಸುತ್ತಿದ್ದ ಖಿನ್ನತೆ ನಿಯಂತ್ರಿಸಲು ಸಾಧ್ಯವಾಗದೆ ಕೆಟ್ಟ ನಿರ್ಧಾರಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ.
ಸದ್ದು ಮಾಡದ ‘ಸೌಂಡ್ ಪ್ರೂಫ್’ ಕೊಠಡಿ!
ರಾಯ್ ಸಿ.ಜೆ. ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಕುಸಿದು ಬಿದ್ದಿದ್ದರೂ ಸುಮಾರು 20 ನಿಮಿಷಗಳ ಕಾಲ ಹೊರಗಿದ್ದ ಸಿಬ್ಬಂದಿಗೆ ಇದರ ಬಗ್ಗೆ ಗೊತ್ತೇ ಆಗಿರಲಿಲ್ಲ. ಇದಕ್ಕೆ ಕಾರಣ ಅವರ ಕಚೇರಿಯ ವಿನ್ಯಾಸ. ರಾಯ್ ಅವರ ಚೇಂಬರ್ ಸಂಪೂರ್ಣವಾಗಿ 'ಸೌಂಡ್ ಪ್ರೂಫ್' (ಶಬ್ದ ನಿರೋಧಕ) ಆಗಿತ್ತು. ದೈನಂದಿನ ವ್ಯವಹಾರಗಳ ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ವಿಶೇಷ ಇಂಟೀರಿಯರ್ ಮಾಡಿಸಿದ್ದರು. ಹೀಗಾಗಿ ಗುಂಡಿನ ಮೊರೆತ ಹೊರಗಿದ್ದವರಿಗೆ ಕಾಣಿಸಿರಲಿಲ್ಲ.
ಚೇಂಬರ್‌ಗೆ ಹೋದ ಬಾಸ್ ಎಷ್ಟು ಹೊತ್ತಾದರೂ ಹೊರಗೆ ಬಾರದಿರುವುದನ್ನು ಗಮನಿಸಿದ ಸಿಬ್ಬಂದಿ, ಬಾಗಿಲು ತಟ್ಟಿದ್ದಾರೆ. ಒಳಗಿನಿಂದ ಪ್ರತಿಕ್ರಿಯೆ ಬಾರದಿದ್ದಾಗ ಬಾಗಿಲು ತೆಗೆದು ನೋಡಿದ್ದಾರೆ ಈ ವೇಳೆ ರಾಯ್ ಅವರು ಕುರ್ಚಿಯ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಸಿಬ್ಬಂದಿ ತಿಳಿಸಿದ್ದಾರೆ.

