
ದೂರು ಬಂದ ನ್ಯಾಯಬೆಲೆ ಅಂಗಡಿಗಳ ಅಮಾನತು: ಸಚಿವ ರಿಜ್ವಾನ್ ಅರ್ಷದ್
ಪಡಿತರ ವಿತರಣೆಯಲ್ಲಿ ಅಕ್ರಮ ನಡೆಸಿದರೇ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅಕ್ರಮದ ಕುರಿತು ದೂರುಗಳು ಬಂದ ನ್ಯಾಯಬೆಲೆ ಅಂಗಡಿಗಳನ್ನು ಅಮಾನತುಪಡಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ರಾಜ್ಯದಲ್ಲಿ ಪಡಿತರ ವಿತರಣೆಯಲ್ಲಿ ಯಾವುದೇ ರೀತಿಯ ಅಕ್ರಮ ಸಹಿಸಲು ಅಸಾಧ್ಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ರಾಜ್ಯದಲ್ಲಿ ಪಡಿತರ ವಿತರಣೆ ಬಗ್ಗೆ ದೂರುಗಳ ಕುರಿತು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಡಿತರ ವಿತರಣೆಯಲ್ಲಿ ಯಾವುದೇ ರೀತಿಯಲ್ಲಿ ಅಕ್ರಮಗಳಾಗಬಾರದು. ಅಕ್ರಮ ನಡೆಸಿದರೇ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅಕ್ರಮದ ಕುರಿತು ದೂರುಗಳು ಬಂದ ನ್ಯಾಯಬೆಲೆ ಅಂಗಡಿಗಳನ್ನು ಅಮಾನತುಪಡಿಸಲಾಗುತ್ತದೆ. ನಂತರ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು ವಿಚಾರಣೆ ನಡೆಸಿ, ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಂಡು, ಉಲ್ಲಂಘನೆ ದೃಢಪಟ್ಟರೇ ಲೈಸೆನ್ಸ್ ರದ್ದುಗೊಳಿಸಲಾಗುತ್ತದೆ ಎಂದು ಉತ್ತರ ನೀಡಿದರು.
ರಾಜ್ಯದಲ್ಲಿ ಒಟ್ಟು 20, 547 ನ್ಯಾಯಬೆಲೆ ಅಂಗಡಿಗಳಿವೆ. ಪಾರದರ್ಶಕ ಪಡಿತರ ವಿತರಣೆಗಾಗಿ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲಾಗಿದೆ. ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಜಾಗೃತಿ ಸಮಿತಿ ರಚಿಸಲಾಗಿದೆ. ಅಲ್ಲದೇ ಅಕ್ರಮಗಳು ಕಂಡುಬಂದರೇ ಸಹಾಯವಾಣಿ ಸಂಖ್ಯೆ 1967 ಕ್ಕೆ ಕರೆ ಮಾಡಿ ದೂರು ಸಲ್ಲಿಸಲು ಅವಕಾಶ ಇದೆ. ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ, ಪಡಿತರದಲ್ಲಿನ ಗೋಲ್‌ಮಾಲ್‌ಗೆ ಕಡಿವಾಣ ಹಾಕಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಎಲ್ಲಾ ಗೋದಾಮುಗಳಲ್ಲಿ ಸಿಸಿಟಿವಿ ಅಳವಡಿಕೆ, ಪಡಿತರ ಧಾನ್ಯಗಳ ಸರಬರಾಜು ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಕೆಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಆದ್ಯತಾ ಮತ್ತು ಆದ್ಯತೇರ ಸೇರಿದಂತೆ ಒಟ್ಟು 1,54,64,000 ಕಾರ್ಡ್‌ಗಳಿವೆ. ರಾಜ್ಯಕ್ಕೆ ಪ್ರತಿ ತಿಂಗಳು ಕೇಂದ್ರದ ಎನ್‌ಎಫ್‌ಎಸ್‌ಎ ಆಹಾರ ಹಂಚಿಕೆ ಪ್ರಮಾಣದಂತೆ 2,17,403 ಮೆಟ್ರಿಕ್ ಟನ್ ಆಹಾರ ಧಾನ್ಯ ಪೂರೈಕೆಯಾಗುತ್ತಿದೆ. ರಾಗಿ ಮತ್ತು ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೆಎಫ್‌ಸಿಎಸ್‌ಸಿ, ಕೆಎಸ್‌ಸಿಎಂಎಫ್, ಕೆಎಸ್‌ಎಎಂಬಿ ಸಂಸ್ಥೆಗಳ ಮೂಲಕ ರಾಜ್ಯದ ರೈತರಿಂದ ಖರೀದಿಸಿ ವಿತರಿಸಲಾಗುತ್ತಿದೆ. ರಾಜ್ಯ ಯೋಜನೆಗಳಿಗೆ ಓಪನ್ ಮಾರ್ಕೆಟ್ ಮೂಲಕ ಅಕ್ಕಿ ಖರೀದಿಸಲಾಗುತ್ತಿದೆ. ಕಳೆದ ಮೂರು ವರ್ಷದಲ್ಲಿ 96,16,988 ಮೆಟ್ರಿಕ್ ಟನ್ ಅಕ್ಕಿ, 9,90,516 ಮೆ.ಟನ್ ರಾಗಿ, 4,54,243 ಮೆಟ್ರಿಕ್ ಟನ್ ಬಿಳಿ ಜೋಳವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಪಡಿತರ ಚೀಟಿಗಳು ಹಾಗೂ ಹೆಚ್ಚುವರಿ 5 ಕೆಜಿ ಅಕ್ಕಿ ಹಂಚಲು ಕಳೆದ ಮೂರು ವರ್ಷಗಳಲ್ಲಿ 22,756 ಕೋಟಿ ಭರಿಸಲಾಗಿದೆ ಎಂದರು.
3.70 ಲಕ್ಷ ಹೊಸ ಕಾರ್ಡ್ ವಿತರಣೆ
ಕೇಂದ್ರ ಸರ್ಕಾರವೂ ರಾಜ್ಯದಲ್ಲಿ 7,76,206 ಶಂಕಾಸ್ಪದ ಕಾರ್ಡ್‌ಗಳನ್ನು ಗುರುತಿಸಿದ್ದು ಕೇಂದ್ರ ಸರ್ಕಾರದ ಸೂಚನೆಯಂತೆ ಸುಮಾರು 4.94 ಲಕ್ಷ ಕಾರ್ಡ್‌ಗಳನ್ನು ಪರಿಷ್ಕರಿಸಲಾಗುತ್ತಿದೆ. ಕಾರ್ಡ್‌ಗಳ ಪರಿಷ್ಕರಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಹಂಚಿಕೆಯಾಗಿರುವ ಆಧಾರದ ಮೇಲೆ ಹೊಸ ಫಲಾನುಭವಿಗಳಿಗೆ ಕಾರ್ಡ್ ನೀಡಲಾಗುತ್ತಿದೆ. ಜೂನ್ 1, 2023 ರಿಂದ ಜುಲೈ 31, 2026 ರವರೆಗೂ 3,70,803 ಆದ್ಯತಾ ಕಾರ್ಡ್‌ಗಳು ಹಾಗೂ 6358 ಆದ್ಯತೇರ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

