
‘ಎಥೆನಾಲ್ ಪ್ರಮಾಣ ಕಂಡುಹಿಡಿಯಲು ಅದೇನು ರಾಕೆಟ್ ಸೈನ್ಸಾ?’: ರಿಜ್ವಾನ್ ಅರ್ಷದ್ ಆಕ್ರೋಶ
ನಮ್ಮ ವರದಿಗೆ ಬದ್ಧರಾಗಿದ್ದೇವೆ. ಬೇಕಿದ್ದರೆ ತೈಲ ಕಂಪನಿಗಳು ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲೇ ಜಂಟಿ ಪರೀಕ್ಷೆ ನಡೆಸಲಿ ಎಂದು ಸಚಿವ ರಿಜ್ವಾನ್ ಅರ್ಷದ್ ಸವಾಲು ಹಾಕಿದ್ದಾರೆ.
ರಾಜ್ಯದಲ್ಲಿ ಪೆಟ್ರೋಲ್ಗೆ ನಿಗದಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಸರ್ಕಾರದ ವರದಿ ಇದೀಗ ರಾಷ್ಟ್ರಮಟ್ಟದಲ್ಲಿ ಭಾರೀ ರಾಜಕೀಯ ಹಾಗೂ ತಾಂತ್ರಿಕ ಚರ್ಚೆಗೆ ಗ್ರಾಸವಾಗಿದೆ. ಪೆಟ್ರೋಲ್ನಲ್ಲಿ ಶೇ. 30ಕ್ಕೂ ಹೆಚ್ಚು ಎಥೆನಾಲ್ ಬೆರೆಸಿ ಸಾಮಾನ್ಯ ಜನರ ವಾಹನಗಳ ಇಂಜಿನ್ಗಳನ್ನು ಹಾಳುಮಾಡಲಾಗುತ್ತಿದೆ. ಈ ಹಗರಣದ ಬಗ್ಗೆ ಸತ್ಯ ಹೊರಬರುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಜಾಣ ಮೌನಕ್ಕೆ ಶರಣಾಗಿದೆ. ಪೆಟ್ರೋಲ್ನಲ್ಲಿರುವ ಎಥೆನಾಲ್ ಪ್ರಮಾಣ ಅಳೆಯಲು ಅದೇನು ರಾಕೆಟ್ ಸೈನ್ಸಾ?" ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ತೈಲ ಕಂಪನಿಗಳ ಜಾಣತನ ಮತ್ತು ಕೇಂದ್ರ ಸರ್ಕಾರದ ನಿಲುವನ್ನು ತರಾಟೆಗೆ ತೆಗೆದುಕೊಂಡರು. ಕರ್ನಾಟಕದ ಬೆನ್ನಲ್ಲೇ ನೆರೆಯ ಕೇರಳ ರಾಜ್ಯವೂ ಪೆಟ್ರೋಲ್ ಬಂಕ್ಗಳ ಮೇಲೆ ದಾಳಿ ನಡೆಸಿ ಮಾದರಿ ಸಂಗ್ರಹಕ್ಕೆ ಮುಂದಾಗಿರುವುದು ಈ ವಿವಾದವನ್ನು ದಕ್ಷಿಣ ಭಾರತದಾದ್ಯಂತ ವಿಸ್ತರಿಸಿದೆ.
ಕಳೆದ ಶುಕ್ರವಾರ ಸರ್ಕಾರದ ಕಾನೂನು ಮಾಪನಶಾಸ್ತ್ರ ಇಲಾಖೆಯು ರಾಜ್ಯದ ವಿವಿಧ ಪೆಟ್ರೋಲ್ ಬಂಕ್ಗಳಿಂದ ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ, ಅಧಿಕೃತ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಈ ವೇಳೆ ಪೆಟ್ರೋಲ್ನಲ್ಲಿ ಬರೋಬ್ಬರಿ ಶೇ. 31.2 ರಷ್ಟು ಎಥೆನಾಲ್ ಇರುವುದು ದೃಢಪಟ್ಟಿತ್ತು. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಪ್ರಸ್ತುತ ಗರಿಷ್ಠ ಶೇ. 12 ರಿಂದ 15 (ಕೆಲವೆಡೆ ಶೇ. 20) ರಷ್ಟು ಮಾತ್ರ ಎಥೆನಾಲ್ ಮಿಶ್ರಣಕ್ಕೆ ಅವಕಾಶವಿದೆ. ಆದರೆ ಶೇ. 30ಕ್ಕೂ ಹೆಚ್ಚು ಮಿಶ್ರಣವಾಗುತ್ತಿರುವುದು ಗ್ರಾಹಕರಿಗೆ ಮಾಡುತ್ತಿರುವ ನೇರ ದ್ರೋಹ ಎಂದು ಸಚಿವರು ಕಿಡಿಕಾರಿದರು. "ನಾವು ಅಧಿಕೃತ ವರದಿ ಬಿಡುಗಡೆ ಮಾಡಿದ ನಂತರ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ನೇರವಾಗಿ ಉತ್ತರ ನೀಡಬೇಕಿತ್ತು. ಆದರೆ ಕೇಂದ್ರ ಸರ್ಕಾರ ತೈಲ ಮಾರಾಟ ಕಂಪನಿಗಳನ್ನು ಮುಂದೆ ಬಿಟ್ಟು ಉತ್ತರ ಕೊಡಿಸುತ್ತಿದೆ. ಇಲ್ಲಿ ಕೇಂದ್ರ ಸರ್ಕಾರ ಹೇಳಿದ್ದೇ ಸತ್ಯ, ಬೇರೆಯವರು ಸತ್ಯ ಹೇಳಿದರೆ ಅವರ ಮೇಲೆ ಒತ್ತಡ ಹೇರುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಎನ್ಎಬಿಎಲ್ ಮಾನ್ಯತೆ ಪಡೆದ ಲ್ಯಾಬ್ನಲ್ಲಿ ಪರೀಕ್ಷೆ ಮಾಡಿಸಿದ್ದೇವೆ. ಆದರೆ ತೈಲ ಕಂಪನಿಗಳು ನಿಮ್ಮ ಸ್ಯಾಂಪಲ್ ಸರಿಯಿಲ್ಲ, ಪರೀಕ್ಷಾ ವಿಧಾನ ಸರಿಯಿಲ್ಲ ಎಂದು ಕುಂಟು ನೆಪ ಹೇಳುತ್ತಿವೆ. ತಪ್ಪು ಮಾಡಿರುವ ಕಂಪನಿಗಳೇ ತೀರ್ಪುಗಾರರಾದರೆ ನ್ಯಾಯ ಹೇಗೆ ಸಿಗುತ್ತದೆ? ಎಥೆನಾಲ್ ಪತ್ತೆ ಹಚ್ಚಲು ಅದೇನು ದೊಡ್ಡ ರಾಕೆಟ್ ವಿಜ್ಞಾನವೇ? ನಾವು ಕೇಳಿದ್ದು ಎಷ್ಟು ಪ್ರಮಾಣದಲ್ಲಿ ಎಥೆನಾಲ್ ಬೆರೆಸುತ್ತಿದ್ದೀರಿ ಎಂದು? ಆದರೆ ತೈಲ ಕಂಪನಿಗಳು ತಾಂತ್ರಿಕ ಸಬೂಬು ಹೇಳುತ್ತಿವೆಯೇ ಹೊರತು ನೇರ ಉತ್ತರ ನೀಡುತ್ತಿಲ್ಲ. 6 ಪ್ರಮುಖ ಜಂಕ್ಷನ್ಗಳಲ್ಲಿ ಕಂಪನಿಗಳೇ ಆಟೋಮ್ಯಾಟಿಕ್ ಆಗಿ ಹೆಚ್ಚುವರಿ ಎಥೆನಾಲ್ ಬೆರೆಸುತ್ತಿವೆ. ಆದರೆ ಕಂಪನಿಗಳು ಇದು ಡೀಲರ್ಗಳ ತಪ್ಪು ಎಂದು ನುಣುಚಿಕೊಳ್ಳುತ್ತಿವೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಂಜಿನ್ಗಳ ಮೇಲೆ ಮಾರಕ ಪರಿಣಾಮ: ವಾಹನ ಮಾಲೀಕರ ಸಂಕಷ್ಟ
ಪೆಟ್ರೋಲ್ನಲ್ಲಿ ಅಧಿಕ ಪ್ರಮಾಣದ ಎಥೆನಾಲ್ ಮಿಶ್ರಣದಿಂದ ವಾಹನಗಳ ಇಂಜಿನ್ಗಳಿಗೆ ಆಗುತ್ತಿರುವ ಹಾನಿಯ ಬಗ್ಗೆ ಸಚಿವರು ತಾಂತ್ರಿಕ ವಿವರಗಳನ್ನು ಮುಂದಿಟ್ಟರು. "ಎಥೆನಾಲ್ನಲ್ಲಿ ಕ್ಲೋರೈಡ್ ಮತ್ತು ಸಲ್ಫರ್ ಅಂಶಗಳು ಅಧಿಕವಾಗಿರುತ್ತವೆ. ಶೇ. 20ಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣವಾದರೆ ವಾಹನದ ಇಂಜಿನ್ ಭಾಗಗಳು, ರಬ್ಬರ್ ಪೈಪ್ಗಳು ಹಾಗೂ ಫ್ಯೂಯಲ್ ಇಂಜೆಕ್ಟರ್ಗಳು ತುಕ್ಕು ಹಿಡಿದು ಹಾಳಾಗುತ್ತವೆ. ಪ್ರತಿಷ್ಠಿತ ಬಿಎಂಡಬ್ಲ್ಯೂ ಕಂಪನಿಯೇ ಶೇ. 30ರಷ್ಟು ಎಥೆನಾಲ್ ಮಿಶ್ರಣ ಮಾಡಿದರೆ ಇಂಜಿನ್ ದೀರ್ಘಕಾಲ ಬಾಳಿಕೆ ಬರುವುದಿಲ್ಲ ಎಂದು ಎಚ್ಚರಿಕೆ ನೀಡಿದೆ" ಎಂದು ವಿವರಿಸಿದರು. ಸಾಮಾನ್ಯ ನಾಗರಿಕರು ಲಕ್ಷಾಂತರ ರೂಪಾಯಿ ಕೊಟ್ಟು ದ್ವಿಚಕ್ರ ವಾಹನ, ಕಾರುಗಳನ್ನು ಖರೀದಿಸುತ್ತಾರೆ. ಲೀಟರ್ಗೆ 100 ರೂ.ಗಿಂತ ಹೆಚ್ಚು ಹಣ ನೀಡಿ ಖರೀದಿಸುವ ಪೆಟ್ರೋಲ್ನಲ್ಲಿ ಶೇ.30ಕ್ಕೂ ಹೆಚ್ಚು ನೀರು ಹೀರಿಕೊಳ್ಳುವ ಎಥೆನಾಲ್ ಇದ್ದರೆ ಮೈಲೇಜ್ ಗಣನೀಯವಾಗಿ ಕುಸಿಯುತ್ತದೆ. ವಾಹನಗಳು ಪದೇ ಪದೇ ರಿಪೇರಿಗೆ ಬಂದು ಜನಸಾಮಾನ್ಯರು ಆರ್ಥಿಕವಾಗಿ ಕಂಗಾಲಾಗುತ್ತಿದ್ದಾರೆ ಎಂದು ಅವರು ಹೇಳಿದರು.
ವರದಿ ತಿರುಚಲು ತೈಲ ಕಂಪನಿಗಳ ಯತ್ನ? – ಸಚಿವರ ಸವಾಲು
ರಾಜ್ಯ ಸರ್ಕಾರದ ವರದಿಯನ್ನು ತಳ್ಳಿಹಾಕಲು ಯತ್ನಿಸುತ್ತಿರುವ ತೈಲ ಕಂಪನಿಗಳ ಧೋರಣೆಯನ್ನು ರಿಜ್ವಾನ್ ಅರ್ಷದ್ ತೀವ್ರವಾಗಿ ಖಂಡಿಸಿದರು. "ಸರ್ಕಾರ ಸಂಗ್ರಹಿಸಿದ ಮಾದರಿ ಸರಿಯಿಲ್ಲ, ಖಾಸಗಿ ಲ್ಯಾಬ್ನಲ್ಲಿ ಟೆಸ್ಟ್ ಮಾಡಲಾಗಿದೆ ಎಂದೆಲ್ಲಾ ಅಪಪ್ರಚಾರ ಮಾಡಲಾಗುತ್ತಿದೆ. ಭಾರತೀಯ ಮಾನಕ ಸಂಸ್ಥೆ ಮತ್ತು ಎನ್ಎಬಿಎಲ್ ಮಾನ್ಯತೆ ಪಡೆದ ಸರ್ಕಾರಿ ವ್ಯವಸ್ಥೆಯಡಿಯಲ್ಲೇ ಪರೀಕ್ಷೆ ನಡೆಸಲಾಗಿದೆ. ಸರ್ಕಾರಿ ಸಂಸ್ಥೆ ನಡೆಸಿದ ಪರೀಕ್ಷೆಯೇ ತಪ್ಪೆಂದರೆ, ದೇಶದ ಆಡಳಿತ ವ್ಯವಸ್ಥೆಯನ್ನು ತೈಲ ಕಂಪನಿಗಳು ಅಣಕಿಸುತ್ತಿವೆಯೇ? ನಮ್ಮ ವರದಿ ನೂರಕ್ಕೆ ನೂರು ಸತ್ಯ. ನಾವು ವರದಿಗೆ ಬದ್ಧರಾಗಿದ್ದೇವೆ. ಬೇಕಿದ್ದರೆ ತೈಲ ಕಂಪನಿಗಳು ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲೇ ಜಂಟಿ ಪರೀಕ್ಷೆ ನಡೆಸಲಿ" ಎಂದು ಸಚಿವರು ಸವಾಲು ಹಾಕಿದರು.
ಕೇರಳದಲ್ಲೂ ಸಂಚಲನ: ಬಂಕ್ಗಳನ್ನು ಸೀಲ್ ಮಾಡುವ ಎಚ್ಚರಿಕೆ!
ರಾಜ್ಯ ಸರ್ಕಾರದ ವರದಿಯ ಬೆನ್ನಲ್ಲೇ, ನೆರೆಯ ಕೇರಳ ರಾಜ್ಯದಲ್ಲೂ ತಲ್ಲಣ ಸೃಷ್ಟಿಯಾಗಿದೆ. ಕರ್ನಾಟಕದಲ್ಲಿ ಶೇ. 31.2 ರಷ್ಟು ಎಥೆನಾಲ್ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಕೇರಳ ನಾಗರಿಕ ಸರಬರಾಜು ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತವಾಗಿದೆ. ತಿರುವನಂತಪುರಂ, ಎರ್ನಾಕುಲಂ, ಕೋಝಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ತಲಾ 5 ಪ್ರಮುಖ ಪೆಟ್ರೋಲ್ ಬಂಕ್ಗಳಿಂದ ಆಯ್ದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಸರ್ಕಾರಿ ಲ್ಯಾಬ್ಗೆ ರವಾನೆ: ಈ ಸ್ಯಾಂಪಲ್ಗಳನ್ನು ಸರ್ಕಾರದ ಅಧಿಕೃತ ವಿಧಿವಿಜ್ಞಾನ ಹಾಗೂ ಮಾಪನಶಾಸ್ತ್ರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಮುಂದಿನ 10 ದಿನಗಳ ಒಳಗೆ ಸಮಗ್ರ ಪರೀಕ್ಷಾ ವರದಿ ಕೈಸೇರಲಿದೆ. ಪೆಟ್ರೋಲ್ನಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಗರಿಷ್ಠ ಮಿತಿ (ಶೇ. 20) ಗಿಂತ ಒಂದು ಹನಿ ಹೆಚ್ಚುವರಿ ಎಥೆನಾಲ್ ಕಂಡುಬಂದರೂ ಅಂತಹ ಪೆಟ್ರೋಲ್ ಬಂಕ್ಗಳ ಲೈಸೆನ್ಸ್ ರದ್ದುಗೊಳಿಸಿ, ತಕ್ಷಣವೇ ಬಂಕ್ಗಳನ್ನು ಸೀಲ್ ಮಾಡಲಾಗುವುದು ಎಂದು ಕೇರಳ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಗ್ರೀನ್ ಫ್ಯೂಯೆಲ್ ಹೆಸರಿನಲ್ಲಿ ನಡೆಯುತ್ತಿದೆಯೇ ಭಾರೀ ದಂಧೆ?
ಕೇಂದ್ರ ಸರ್ಕಾರವು ಮಾಲಿನ್ಯ ನಿಯಂತ್ರಣ ಮತ್ತು ಕಚ್ಚಾ ತೈಲ ಆಮದು ವೆಚ್ಚ ತಗ್ಗಿಸುವ ಉದ್ದೇಶದಿಂದ ರಾಷ್ಟ್ರೀಯ ಜೈವಿಕ ಇಂಧನ ನೀತಿಯಡಿ ಎಥೆನಾಲ್ ಮಿಶ್ರಣವನ್ನು ಪ್ರೋತ್ಸಾಹಿಸುತ್ತಿದೆ. ಆದರೆ, ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಈ ನೀತಿಯು ಗ್ರಾಹಕರ ಜೇಬಿಗೆ ಕನ್ನ ಹಾಕುವ ದಂಧೆಯಾಗಿ ಮಾರ್ಪಟ್ಟಿದೆಯೇ ಎಂಬ ಸಂಶಯ ಮೂಡುತ್ತಿದೆ. ಮಾರುಕಟ್ಟೆಯಲ್ಲಿ ಶುದ್ಧ ಪೆಟ್ರೋಲ್ ದರ ಲೀಟರ್ಗೆ 100 ರೂ. ದಾಟಿದ್ದರೆ, ಎಥೆನಾಲ್ ಉತ್ಪಾದನಾ ವೆಚ್ಚ ಲೀಟರ್ಗೆ ಸುಮಾರು 60 ರೂ. ರಿಂದ 65 ರೂ. ಮಾತ್ರ. ಪೆಟ್ರೋಲ್ಗೆ ಕಡಿಮೆ ಬೆಲೆಯ ಎಥೆನಾಲ್ ಅನ್ನು ಶೇ. 30 ಕ್ಕಿಂತ ಹೆಚ್ಚು ಮಿಶ್ರಣ ಮಾಡಿದರೆ ತೈಲ ಕಂಪನಿಗಳಿಗೆ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಕೋಟ್ಯಂತರ ರೂಪಾಯಿ ಹೆಚ್ಚುವರಿ ಲಾಭವಾಗುತ್ತದೆ. ಆದರೆ ಗ್ರಾಹಕರು ಮಾತ್ರ ಪೂರ್ಣ 100 ರೂ. ಪೆಟ್ರೋಲ್ ಬೆಲೆಯನ್ನೇ ಪಾವತಿಸುತ್ತಿದ್ದಾರೆ! ಗ್ರಾಹಕರಿಗೆ ತಾವು ಖರೀದಿಸುವ ಇಂಧನದಲ್ಲಿ ಎಷ್ಟು ಪ್ರಮಾಣದ ಎಥೆನಾಲ್ ಇದೆ ಎಂಬ ಮಾಹಿತಿ ಬಂಕ್ಗಳಲ್ಲಿ ಲಭ್ಯವಿರುವುದಿಲ್ಲ. ಇದು ಗ್ರಾಹಕರ ಹಕ್ಕುಗಳ ನೇರ ಉಲ್ಲಂಘನೆಯಾಗಿದೆ.

