ಫಾರ್ಮ್ 7 ದುರ್ಬಳಕೆ ತಡೆಯುವಂತೆ ಚುನಾವಣಾ ಆಯೋಗಕ್ಕೆ ಸಚಿವ ರಿಜ್ವಾನ್ ಅರ್ಷದ್ ದೂರು
x

ಫಾರ್ಮ್ 7' ದುರ್ಬಳಕೆ ತಡೆಯುವಂತೆ ಚುನಾವಣಾ ಆಯೋಗಕ್ಕೆ ಸಚಿವ ರಿಜ್ವಾನ್ ಅರ್ಷದ್ ದೂರು

ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಅಧಿಕೃತವಾಗಿ ದೂರು ಹಾಗೂ ಸಮಗ್ರ ಮನವಿ ಪತ್ರವನ್ನು ಸಲ್ಲಿಸಿರುವ ಅವರು, ಖಾಸಗಿ ವ್ಯಕ್ತಿಗಳು ಸಲ್ಲಿಸುವ ಫಾರ್ಮ್ 7 ಆಕ್ಷೇಪಣೆಗಳನ್ನು ಸ್ವೀಕರಿಸುವುದನ್ನು ಹಾಗೂ ಪ್ರಕ್ರಿಯೆಗೊಳಿಸುವುದನ್ನು ತಕ್ಷಣವೇ ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ 'ಫಾರ್ಮ್ 7' ಅನ್ನು ದುರ್ಬಳಕೆ ಮಾಡಿಕೊಂಡು ವ್ಯವಸ್ಥಿತವಾಗಿ ಮುಸ್ಲಿಂ ಹಾಗೂ ಅಲ್ಪಸಂಖ್ಯಾತ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಅಧಿಕೃತವಾಗಿ ದೂರು ಹಾಗೂ ಸಮಗ್ರ ಮನವಿ ಪತ್ರವನ್ನು ಸಲ್ಲಿಸಿರುವ ಅವರು, ಖಾಸಗಿ ವ್ಯಕ್ತಿಗಳು ಸಲ್ಲಿಸುವ ಫಾರ್ಮ್ 7 ಆಕ್ಷೇಪಣೆಗಳನ್ನು ಸ್ವೀಕರಿಸುವುದನ್ನು ಹಾಗೂ ಪ್ರಕ್ರಿಯೆಗೊಳಿಸುವುದನ್ನು ತಕ್ಷಣವೇ ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ.


ಆಘಾತಕಾರಿ ಅಂಕಿ-ಅಂಶಗಳು ಹಾಗೂ ಸಂಘಟಿತ ಷಡ್ಯಂತ್ರ

ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಲು ಚುನಾವಣಾ ಆಯೋಗವು ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಮನೆ-ಮನೆ ಸಮೀಕ್ಷೆ ನಡೆಸಿ, ಮೃತಪಟ್ಟ ಹಾಗೂ ಸ್ಥಳಾಂತರಗೊಂಡ 1.07 ಕೋಟಿಗೂ ಹೆಚ್ಚು ಅನರ್ಹ ನಮೂದುಗಳನ್ನು ಈಗಾಗಲೇ ಅಳಿಸಿದೆ. ಈ ಮೂಲಕ ಶೇಕಡಾ 19.31 ರಷ್ಟು ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇಷ್ಟೆಲ್ಲಾ ಕಠಿಣ ಪರಿಶೀಲನೆಗಳ ನಂತರವೂ, ಆಗಸ್ಟ್ 20 ಮತ್ತು ಸೆಪ್ಟೆಂಬರ್ 24ರ ನಡುವೆ ಬರೋಬ್ಬರಿ 29,360 ಫಾರ್ಮ್ 7 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಇದರಲ್ಲಿ ಶೇಕಡಾ 93ರಷ್ಟು ಆಕ್ಷೇಪಣೆಗಳನ್ನು ಖಾಸಗಿ ವ್ಯಕ್ತಿಗಳೇ ಸಲ್ಲಿಸಿದ್ದು, ಇದು ನೈಜ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿಸುವ ಬಹುದೊಡ್ಡ ಸಂಘಟಿತ ಷಡ್ಯಂತ್ರವಾಗಿದೆ ಎಂದು ಸಚಿವರು ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.

ನಿರ್ದಿಷ್ಟ ಸಮುದಾಯಗಳನ್ನೇ ಗುರಿಯಾಗಿಸಿದ ಅಕ್ರಮ

ರಾಜ್ಯದ ಭಾಲ್ಕಿ ಮತ್ತು ಬಬಲೇಶ್ವರ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿರುವ ಫಾರ್ಮ್ 7 ಸಲ್ಲಿಕೆಯು ವ್ಯವಸ್ಥಿತ ದುರ್ಬಳಕೆಯ ಸ್ವರೂಪವನ್ನು ಬಯಲು ಮಾಡಿದೆ. ಕೇವಲ ಮೂರು ದಿನಗಳ ಅಂತರದಲ್ಲಿ ಈ ಕ್ಷೇತ್ರಗಳಲ್ಲಿ 4,726 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಶೇಕಡಾ 87.6ರಷ್ಟು ಅರ್ಜಿಗಳು ಮುಸ್ಲಿಂ, ಅಲ್ಪಸಂಖ್ಯಾತ ಹಾಗೂ ಅಂಚಿನಲ್ಲಿರುವ ಸಮುದಾಯಗಳ ಮತದಾರರನ್ನು ಗುರಿಯಾಗಿಸಿವೆ.

ಆಘಾತಕಾರಿ ಎಂದರೆ, ಈ ಎರಡು ಕ್ಷೇತ್ರಗಳಲ್ಲಿ ಕೇವಲ 14 ವ್ಯಕ್ತಿಗಳು ಸೇರಿಕೊಂಡು 2,894 ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಬಬಲೇಶ್ವರ ಕ್ಷೇತ್ರದಲ್ಲಿ ಒಬ್ಬನೇ ವ್ಯಕ್ತಿ 493 ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಿದ್ದು, ಅದರಲ್ಲಿ 444 ಮುಸ್ಲಿಂ ಮತದಾರರನ್ನೇ ಗುರಿಯಾಗಿಸಲಾಗಿದೆ. ಇದು ಯಾವುದೇ ಭೌತಿಕ ಪರಿಶೀಲನೆಯಿಲ್ಲದೆ, ದುರುದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತರ ಮತಗಳನ್ನು ಕಿತ್ತುಕೊಳ್ಳುವ ಕೃತ್ಯವಾಗಿದೆ ಎಂದು ರಿಜ್ವಾನ್ ಅರ್ಷದ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಉನ್ನತ ಮಟ್ಟದ ತನಿಖೆ ಹಾಗೂ ಕಠಿಣ ಕ್ರಮಕ್ಕೆ ಒತ್ತಾಯ

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟವಾಗುವವರೆಗೆ ಖಾಸಗಿ ವ್ಯಕ್ತಿಗಳಿಂದ ಫಾರ್ಮ್ 7 ಆಕ್ಷೇಪಣೆಗಳನ್ನು ಸ್ವೀಕರಿಸುವುದನ್ನು ಸಂಪೂರ್ಣವಾಗಿ ತಡೆಹಿಡಿಯಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ. ಜೊತೆಗೆ, ಭಾಲ್ಕಿ ಮತ್ತು ಬಬಲೇಶ್ವರ ಕ್ಷೇತ್ರಗಳಲ್ಲಿ ಬೃಹತ್ ಪ್ರಮಾಣದಲ್ಲಿ ಸುಳ್ಳು ಹಾಗೂ ದುರುದ್ದೇಶಪೂರಿತ ಆಕ್ಷೇಪಣೆಗಳನ್ನು ಸಲ್ಲಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಂತಹ ನೂರಾರು ಅರ್ಜಿಗಳನ್ನು ಯಾವುದೇ ರೀತಿಯಲ್ಲಿ ಪರಿಶೀಲನೆ ನಡೆಸದೆ ಕಣ್ಮುಚ್ಚಿಕೊಂಡು ಸ್ವೀಕರಿಸಿ, ಅಪ್‌ಲೋಡ್ ಮಾಡಿರುವ ಅಧಿಕಾರಿಗಳ ಪಾತ್ರದ ಬಗ್ಗೆಯೂ ಉನ್ನತ ಮಟ್ಟದ ತನಿಖೆ ನಡೆಸಿ, ಲೋಪವೆಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

Read More
Next Story