x

ಎಸ್​ಐಆರ್​ನ ಫಾರ್ಮ್​ 7 ಮೂಲಕ ಅಲ್ಪಸಂಖ್ಯಾತರ ಟಾರ್ಗೆಟ್ ಆರೋಪ

ಸಗಟಾಗಿ ಫಾರ್ಮ್ 7 ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ತಕ್ಷಣವೇ ತಿರಸ್ಕರಿಸಬೇಕು ಮತ್ತು ಸುಳ್ಳು ಮಾಹಿತಿ ನೀಡಿರುವವರ ವಿರುದ್ಧ ಪ್ರಜಾಪ್ರಾತಿನಿಧ್ಯ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗಟ್ಟಬೇಕು ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನಿಯೋಗ ಒತ್ತಾಯಿಸಿದೆ.


Click the Play button to hear this message in audio format

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ 'ಫಾರ್ಮ್ 7' ಅನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಮತಗಳನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ಗಂಭೀರ ಆರೋಪ ಮಾಡಿದ್ದಾರೆ. ದ 'ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ಪ್ರಕ್ರಿಯೆಯ ಹಿಂದಿರುವ ಲೋಪಗಳು ಮತ್ತು ಷಡ್ಯಂತ್ರಗಳ ಬಗ್ಗೆ ಚುನಾವಣಾ ಆಯೋಗಕ್ಕೆ ದಾಖಲೆ ಸಮೇತ ದೂರು ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಏನಿದು ಫಾರ್ಮ್ 7 ಗೊಂದಲ?

ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅಥವಾ ಆಕ್ಷೇಪಣೆ ಸಲ್ಲಿಸಲು ಫಾರ್ಮ್ 7 ಅನ್ನು ಬಳಸಲಾಗುತ್ತದೆ. ನಿಯಮಗಳ ಪ್ರಕಾರ, ಕುಟುಂಬದ ಸದಸ್ಯರು ಮೃತಪಟ್ಟಾಗ ಅಥವಾ ಒಬ್ಬ ವ್ಯಕ್ತಿ ಬೇರೆ ಕಡೆಗೆ ಸ್ಥಳಾಂತರಗೊಂಡಾಗ ಮಾತ್ರ ಈ ಫಾರ್ಮ್ ಮೂಲಕ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲು ಅವಕಾಶವಿರುತ್ತದೆ. ಆದರೆ, ಪ್ರಸ್ತುತ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ವೈಯಕ್ತಿಕವಾಗಿ ಒಬ್ಬೊಬ್ಬರೇ 500, 700 ಹಾಗೂ 1500 ಫಾರ್ಮ್ 7 ಅರ್ಜಿಗಳನ್ನು ಸಗಟಾಗಿ (Bulk) ಭರ್ತಿ ಮಾಡಿ ಸಲ್ಲಿಸುತ್ತಿದ್ದಾರೆ. ಈ ಮೂಲಕ ನಿರ್ದಿಷ್ಟ ಸಮುದಾಯಗಳ ಮತದಾರರು ಆಯಾ ವಿಳಾಸದಲ್ಲಿ ವಾಸಿಸುತ್ತಿಲ್ಲ ಎಂಬ ಸುಳ್ಳು ಮಾಹಿತಿ ನೀಡಿ, ಅವರ ಹೆಸರುಗಳನ್ನು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕುವ ವ್ಯವಸ್ಥಿತ ಜಾಲವೊಂದು ಸಕ್ರಿಯವಾಗಿದೆ ಎಂದು ಸಚಿವರು ಆರೋಪಿಸಿದ್ದಾರೆ.

ಬಿಎಲ್‌ಓ ಪರಿಶೀಲನೆ ನಂತರವೂ ಅಕ್ರಮದ ಶಂಕೆ

ಚುನಾವಣಾ ಆಯೋಗದ ಅಧಿಕಾರಿಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳು (BLO) ಈಗಾಗಲೇ ಮನೆ ಮನೆಗೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿ ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಈ ಪ್ರಕ್ರಿಯೆ ಮುಗಿದ ಬಳಿಕವೂ ಕೇವಲ ಕಾಗುಣಿತದ ತಪ್ಪುಗಳು, ಮ್ಯಾಪಿಂಗ್ ಸಮಸ್ಯೆಗಳ ನೆಪವೊಡ್ಡಿ ರಾಜ್ಯದಲ್ಲಿ ಬರೋಬ್ಬರಿ 44 ಲಕ್ಷ ಜನರಿಗೆ ನೋಟಿಸ್ ನೀಡಲಾಗಿದೆ. ಇಷ್ಟೆಲ್ಲಾ ಅಧಿಕೃತ ಪ್ರಕ್ರಿಯೆಗಳು ನಡೆದ ಬಳಿಕವೂ, ಎಲ್ಲೋ ಕುಳಿತ ವ್ಯಕ್ತಿಗಳು ಸಗಟಾಗಿ ಫಾರ್ಮ್ 7 ಸಲ್ಲಿಸಲು ಆಯೋಗ ಅವಕಾಶ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಿಎಲ್‌ಓಗಳು ಮನೆಗೆ ಭೇಟಿ ನೀಡಿದಾಗ ಆಕ್ಷೇಪ ವ್ಯಕ್ತಪಡಿಸದವರು, ಈಗ ಏಕಾಏಕಿ ನೂರಾರು ಸಂಖ್ಯೆಯಲ್ಲಿ ಫಾರ್ಮ್ 7 ಸಲ್ಲಿಸುತ್ತಿರುವುದು ಚುನಾವಣಾ ಆಯೋಗದ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತೆ ಮಾಡಿದೆ ಎಂದು ರಿಜ್ವಾನ್ ಅರ್ಷದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿರ್ದಿಷ್ಟ ಜಿಲ್ಲೆಗಳಲ್ಲಿ ತೀವ್ರವಾಗಿರುವ ಸಮಸ್ಯೆ

ಬಾಗಲಕೋಟೆ, ವಿಜಯಪುರ, ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಫಾರ್ಮ್ 7 ದುರ್ಬಳಕೆ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ಈಗಾಗಲೇ ಸರಿಸುಮಾರು 49,000ಕ್ಕೂ ಹೆಚ್ಚು ಫಾರ್ಮ್ 7 ಅರ್ಜಿಗಳು ಸಲ್ಲಿಕೆಯಾಗಿವೆ. ಇದರ ಹಿಂದೆ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರ ಕೈವಾಡವಿದ್ದು, ಅಲ್ಪಸಂಖ್ಯಾತ, ಕ್ರಿಶ್ಚಿಯನ್ ಹಾಗೂ ದಲಿತ ಸಮುದಾಯಗಳ ಮತಗಳನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗುತ್ತಿದೆ ಎಂಬುದು ಕಾಂಗ್ರೆಸ್ ಪಕ್ಷದ ಪ್ರಮುಖ ಆರೋಪವಾಗಿದೆ. ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಮೂಲಭೂತ ಹಕ್ಕಾಗಿದ್ದು, ಈ ಹಕ್ಕನ್ನು ಕಸಿದುಕೊಳ್ಳುವ ಯತ್ನವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಕ್ರಿಮಿನಲ್ ಪ್ರಕರಣ ದಾಖಲಿಸಲು ಆಗ್ರಹ

ಸಗಟಾಗಿ ಫಾರ್ಮ್ 7 ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ತಕ್ಷಣವೇ ತಿರಸ್ಕರಿಸಬೇಕು ಮತ್ತು ಸುಳ್ಳು ಮಾಹಿತಿ ನೀಡಿರುವವರ ವಿರುದ್ಧ ಪ್ರಜಾಪ್ರಾತಿನಿಧ್ಯ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗಟ್ಟಬೇಕು ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನಿಯೋಗ ಒತ್ತಾಯಿಸಿದೆ. ಆಯೋಗವು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ, ಸಗಟು ರದ್ದತಿಗೆ ಅವಕಾಶ ನೀಡುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಅಧಿಕಾರ ಕೇಂದ್ರ ಚುನಾವಣಾ ಆಯೋಗಕ್ಕೆ ಮಾತ್ರ ಇದೆ. ಒಂದು ವೇಳೆ ರಾಜ್ಯ ಚುನಾವಣಾ ಆಯೋಗವು ಈ ಅಕ್ರಮಗಳನ್ನು ತಡೆಗಟ್ಟಿ, ಅರ್ಹ ಮತದಾರರನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳಲು ವಿಫಲವಾದರೆ, ಮುಂದಿನ ದಿನಗಳಲ್ಲಿ ತೀವ್ರವಾದ ಕಾನೂನು ಹೋರಾಟವನ್ನು ರೂಪಿಸಲಾಗುವುದು ಎಂದು ಸಚಿವ ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದ್ದಾರೆ.

Read More
Next Story