ಮಹಾರಾಷ್ಟ್ರದಲ್ಲಿ ಮಳೆ ಆರ್ಭಟ: ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ
x

ಮಹಾರಾಷ್ಟ್ರದಲ್ಲಿ ಮಳೆ ಆರ್ಭಟ: ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

ದೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಾರದಗಾ-ಬೋಜ್ ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ಸೇತುವೆ ಜಲಾವೃತಗೊಂಡಿದೆ. ಬಾರವಾಡ-ಕನ್ನೂರ ಹಾಗೂ ಬೋಜವಾಡಿ-ಗಜವರವಾಡಿ ಗ್ರಾಮಗಳ ನಡುವಿನ ಸಂಪರ್ಕ ಸೇತುವೆಗಳೂ ಸಂಪೂರ್ಣ ಮುಳುಗಡೆಯಾಗಿವೆ.


ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಧಾರಾಕಾರ ಮಳೆಯ ಪರಿಣಾಮ ವೇದಗಂಗಾ ಮತ್ತು ದೂದಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದಾಗಿ ತಾಲೂಕಿನ ಪ್ರಮುಖ ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

ನಿಪ್ಪಾಣಿ ತಾಲೂಕಿನ ಮೂರು ಕೆಳಹಂತದ ಸೇತುವೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿವೆ. ಉಕ್ಕಿ ಹರಿಯುತ್ತಿರುವ ದೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಾರದಗಾ-ಬೋಜ್ ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ಸೇತುವೆ ಜಲಾವೃತಗೊಂಡಿದೆ. ಅಲ್ಲದೇ ವೇದಗಂಗಾ ನದಿಪಾತ್ರದ ಬಾರವಾಡ-ಕನ್ನೂರ ಹಾಗೂ ಬೋಜವಾಡಿ-ಗಜವರವಾಡಿ ಗ್ರಾಮಗಳ ನಡುವಿನ ಸಂಪರ್ಕ ಸೇತುವೆಗಳೂ ಸಂಪೂರ್ಣ ಮುಳುಗಡೆಯಾಗಿವೆ.

ಈ ಪ್ರಮುಖ ಸೇತುವೆಗಳು ಮುಳುಗಡೆಯಾದ ಹಿನ್ನೆಲೆ ಹಲವು ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಸಾರ್ವಜನಿಕರು, ರೈತರು ಹಾಗೂ ವಾಹನ ಸವಾರರಿಗೆ ಪರ್ಯಾಯ ಮಾರ್ಗ ಬಳಸುವಂತೆ ತಾಲೂಕು ಆಡಳಿತ ಸೂಚಿಸಿದೆ.

ಮಹಾರಾಷ್ಟ್ರದಲ್ಲೂ ಜಲಾವೃತ

ಇತ್ತ ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ವ್ಯಾಪ್ತಿಯಲ್ಲಿ ಬರುವ ರಾಜಾಪುರ-ಜುಗಳ ಸೇತುವೆ ಮೇಲೆಯೂ ಮಳೆ ನೀರು ಉಕ್ಕಿ ಹರಿಯುತ್ತಿದೆ.

ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆ ಬಿಡುವು ನೀಡದೆ ಮುಂದುವರಿದರೆ ಕೃಷ್ಣಾ, ವೇದಗಂಗಾ ಹಾಗೂ ದೂದಗಂಗಾ ನದಿಗಳ ನೀರಿನ ಮಟ್ಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರು, ಪ್ರವಾಸಿಗರು ಹಾಗೂ ಯುವಕರು ಯಾವುದೇ ಕಾರಣಕ್ಕೂ ಈಜಲು, ರೀಲ್ಸ್ ಮಾಡಲು ಅಥವಾ ಮೀನುಗಾರಿಕೆಗೆಂದು ನದಿಗೆ ಇಳಿಯಬಾರದು. ಜಾನುವಾರುಗಳನ್ನು ನದಿ ಪಾತ್ರಕ್ಕೆ ಬಿಡಬಾರದು ಎಂದು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ನೀಡಿದೆ.

Read More
Next Story