ರೈಸ್‌ ಸಮಾವೇಶ ; ವಿಕಸಿತ ಭಾರತ 2047ರ ಕನಸಿಗೆ ನಾವೀನ್ಯತೆ, ಉದ್ಯಮಶೀಲತೆಯ ಬಲ
x

ರೈಸ್‌ ಸಮಾವೇಶ ; ವಿಕಸಿತ ಭಾರತ 2047ರ ಕನಸಿಗೆ ನಾವೀನ್ಯತೆ, ಉದ್ಯಮಶೀಲತೆಯ ಬಲ

ಶೈಕ್ಷಣಿಕ ವಲಯ, ಸಂಶೋಧನಾ ಸಂಸ್ಥೆಗಳು, ಎಂಎಸ್‌ಎಂಇ ಮತ್ತು ಸ್ಟಾರ್ಟ್-ಅಪ್ ಸಮುದಾಯದ ದಿಗ್ಗಜರನ್ನು ಒಂದೇ ವೇದಿಕೆಯಡಿ ತಂದ ಈ ಕಾರ್ಯಕ್ರಮವು ದೇಶದ ಹೋಲ್-ಆಫ್-ಸೈನ್ಸ್ ದೃಷ್ಟಿಕೋನವನ್ನು ಸಾಕಾರಗೊಳಿಸಲು ಮಹತ್ವದ ಹೆಜ್ಜೆಯಾಗಿದೆ.


Click the Play button to hear this message in audio format

ದೇಶದ ಭವಿಷ್ಯದ ಆರ್ಥಿಕ ಮತ್ತು ತಾಂತ್ರಿಕ ಪ್ರಗತಿಯ ಪಥವನ್ನು ನಿರ್ಧರಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ರೈಸ್‌ ಸಮಾವೇಶ ಬೆಂಗಳೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಶೈಕ್ಷಣಿಕ ವಲಯ, ಸಂಶೋಧನಾ ಸಂಸ್ಥೆಗಳು, ಕೈಗಾರಿಕೆಗಳು, ಎಂಎಸ್‌ಎಂಇ ಮತ್ತು ಸ್ಟಾರ್ಟ್-ಅಪ್ ಸಮುದಾಯದ ದಿಗ್ಗಜರನ್ನು ಒಂದೇ ವೇದಿಕೆಯಡಿ ತಂದ ಈ ಕಾರ್ಯಕ್ರಮವು, ಭಾರತದ 'ಹೋಲ್-ಆಫ್-ಸೈನ್ಸ್' ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.

ವಿಜ್ಞಾನ, ನಾವೀನ್ಯತೆ, ಉದ್ಯಮ ಮತ್ತು ನೀತಿ ನಿರೂಪಣೆಗಳನ್ನು ಬೆಸೆಯುವ ಮೂಲಕ ದೇಶದ ಅಭಿವೃದ್ಧಿಗೆ ವೇಗ ನೀಡುವುದು ಈ ಸಮಾವೇಶದ ಪ್ರಮುಖ ಗುರಿಯಾಗಿತ್ತು. ಕಾರ್ಯತಂತ್ರದ ಪಾಲುದಾರಿಕೆಗಳು, ಹೂಡಿಕೆಯ ಹೊಸ ದಾರಿಗಳು ಮತ್ತು ಉದ್ಯೋಗ ಸೃಷ್ಟಿಯನ್ನೇ ಗುರಿಯಾಗಿಸಿಕೊಂಡಿರುವ ಇನ್‌ಕ್ಯುಬೇಶನ್ ಕೇಂದ್ರಗಳನ್ನು ಉತ್ತೇಜಿಸುವುದು ಈ ಸಂವಾದದ ಕೇಂದ್ರಬಿಂದುವಾಗಿತ್ತು. ಬೆಂಗಳೂರು ಆವೃತ್ತಿಯ ರೈಸ್‌ ಸಮಾವೇಶವು ಮೂರು ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಿತ್ತು. ಭವಿಷ್ಯದ ಬೆಳವಣಿಗೆಗಾಗಿ ಬಾಹ್ಯಾಕಾಶ ಮತ್ತು ವೈಮಾನಿಕ ತಂತ್ರಜ್ಞಾನಗಳ ಅಳವಡಿಕೆ. ತಂತ್ರಜ್ಞಾನ, ಸಮಾಜ ಮತ್ತು ನೈತಿಕತೆಯ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ. ಕೃಷಿ ಮತ್ತು ಆಹಾರ ತಂತ್ರಜ್ಞಾನವನ್ನು ಪ್ರಯೋಗಾಲಯದಿಂದ ಮಾರುಕಟ್ಟೆಗೆ ತಲುಪಿಸುವ ಪ್ರಕ್ರಿಯೆಯಾಗಿತ್ತು.

ಬಾಷ್, ಟಿಎಎಸ್ಎಲ್, ಎಲ್&ಟಿ, ಶ್ನೈಡರ್, ಐಬಿಎಂ, ಲಿಸಿಯಸ್, ಇಸ್ರೋ, ಜಿಕೆವಿಕೆ-ಯುಎಎಸ್, ಐಐಎಂ-ಬೆಂಗಳೂರು, ಐಐಎಂ-ನಾಗಪುರ ಮತ್ತು ಐಐಟಿ-ಧಾರವಾಡದಂತಹ ಪ್ರತಿಷ್ಠಿತ ಸಂಸ್ಥೆಗಳ ಸುಮಾರು 25ಕ್ಕೂ ಹೆಚ್ಚು ಪರಿಣಿತರು 8 ಪ್ರಮುಖ ಅಧಿವೇಶನಗಳಲ್ಲಿ ಭಾಗವಹಿಸಿ, ಕೈಗಾರಿಕಾ ಪಾಲುದಾರಿಕೆಯ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಚರ್ಚಿಸಿದರು.

ಸರ್ಕಾರದ ದೂರದೃಷ್ಟಿ

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಸಮಾವೇಶವನ್ನು ಉದ್ಘಾಟಿಸಿದ್ದು, ಭಾರತದ ಸ್ಟಾರ್ಟ್-ಅಪ್ ವ್ಯವಸ್ಥೆಯು ಇನ್ನು ಮುಂದೆ ಕೇವಲ 'ಯೂನಿಕಾರ್ನ್' ಕಂಪನಿಗಳನ್ನು ಸೃಷ್ಟಿಸುವುದಕ್ಕೆ ಸೀಮಿತವಾಗಿಲ್ಲ. ಇದು ದೇಶದ ನೈಜ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಜಾಗತಿಕ ಮಟ್ಟದ ತಂತ್ರಜ್ಞಾನವನ್ನು ನಿರ್ಮಿಸುವತ್ತ ಸಾಗಿದೆ ಎಂದು ಬಣ್ಣಿಸಿದರು. ಕಳೆದ ದಶಕದಲ್ಲಿ ದೇಶವು ಸ್ಟಾರ್ಟ್-ಅಪ್ ಮೂವ್‌ಮೆಂಟ್‌ನಿಂದ ಪರಿಪೂರ್ಣ ಇನ್ನೋವೇಶನ್ ಎಕಾನಮಿ'ಯಾಗಿ ಬೆಳೆದಿದೆ ಎಂದು ಅವರು ಶ್ಲಾಘಿಸಿದರು. ಬೆಂಗಳೂರು, ಮುಂಬೈ, ದೆಹಲಿಯಷ್ಟೇ ಅಲ್ಲದೆ, ಸೂರತ್, ಜೈಪುರ, ಇಂದೋರ್, ಕೊಚ್ಚಿ ಮತ್ತು ಲಕ್ನೋದಂತಹ ಟೈರ್-2 ಮತ್ತು ಟೈರ್-3 ನಗರಗಳಿಂದಲೂ ಹೊಸ ಉದ್ಯಮಿಗಳು ಹೊರಹೊಮ್ಮುತ್ತಿರುವುದು ಭಾರತದ ಬೆಳವಣಿಗೆಯ ಸಂಕೇತವಾಗಿದೆ ಎಂದು ಹೇಳಿದರು.

ನಾವೀನ್ಯತೆಯ ಪ್ರದರ್ಶನ

ಸಮಾವೇಶದ ಪ್ರಮುಖ ಆಕರ್ಷಣೆಯಾದ ಸ್ಟಾರ್ಟ್-ಅಪ್ ಎಕ್ಸ್‌ಪೋದಲ್ಲಿ ಸುಮಾರು 100 ಸ್ಟಾರ್ಟ್-ಅಪ್‌ಗಳು ಪಾಲ್ಗೊಂಡಿದ್ದವು. ಇವುಗಳು ಸಿಎಸ್ಐಆರ್ ಪ್ರಯೋಗಾಲಯಗಳಾದ ಎನ್‌ಎಎಲ್, ಸಿಎಫ್‌ಟಿಆರ್‌ಐ ಮತ್ತು 4ಪಿಐ ತಂತ್ರಜ್ಞಾನಗಳನ್ನು ಬಳಸಿ ಅಭಿವೃದ್ಧಿಪಡಿಸಿದ ಉತ್ಪನ್ನಗಳನ್ನು ಪ್ರದರ್ಶಿಸಿದವು. ಏರೋಸ್ಪೇಸ್, ಡೇಟಾ ಸೈನ್ಸ್ ಮತ್ತು ಫುಡ್ ಟೆಕ್ನಾಲಜಿ ಕ್ಷೇತ್ರಗಳಲ್ಲಿನ ಈ ನಾವೀನ್ಯತೆಗಳು, ಸಿಎಸ್ಐಆರ್‌ನ ತಂತ್ರಜ್ಞಾನ ವರ್ಗಾವಣೆ ಮತ್ತು ವಾಣಿಜ್ಯೀಕರಣದ ಯಶಸ್ಸನ್ನು ಸಾಬೀತುಪಡಿಸಿದವು. ಸಮಾವೇಶದ ಭಾಗವಾಗಿ ಹಲವು ಐಐಟಿಗಳು, ವಿಶ್ವವಿದ್ಯಾಲಯಗಳು ಮತ್ತು ಐಸಿಎಆರ್ ಸಂಸ್ಥೆಗಳೊಂದಿಗೆ ಜಂಟಿ ಸಂಶೋಧನೆ ಮತ್ತು ಉದ್ಯಮಶೀಲತೆ ಉತ್ತೇಜಿಸುವ ನಿಟ್ಟಿನಲ್ಲಿ ಎಂಒಯುಗಳಿಗೆ ಸಹಿ ಹಾಕಲಾಯಿತು.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಭಾಗವಹಿಸಿ ಮಾತನಾಡಿದರು. ಭಾರತ ಇಂದು ಆಹಾರ ಭದ್ರತೆಯ ಚಿಂತೆಯಿಂದ ಹೊರಬಂದು, ಜಾಗತಿಕ ಉತ್ಪಾದನಾ ಮತ್ತು ನಾವೀನ್ಯತೆಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.

ಸಚಿವರು ಯುವ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸಾಹಸಗಳನ್ನು ಮಾಡಲು ಹಿಂಜರಿಯಬೇಡಿ. ದೇಶದ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರಗಳನ್ನು ಹುಡುಕುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ. ನಮ್ಮ ಯುವ ಜನಸಂಖ್ಯೆಯೇ ಭಾರತದ ಅತಿದೊಡ್ಡ ಬಂಡವಾಳ. ಸರ್ಕಾರದ ನೀತಿಗಳು, ಮೂಲಸೌಕರ್ಯ ಮತ್ತು ಬೆಂಬಲಿತ ವಾತಾವರಣವನ್ನು ಬಳಸಿಕೊಂಡು 2047ರ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸಲು ನೀವೆಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಈ ಸಮಾವೇಶದಲ್ಲಿ ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್, ಸಿಎಸ್ಐಆರ್-ಎನ್‌ಎಎಲ್ ನಿರ್ದೇಶಕ ಡಾ. ಅಭಯ್ ಎ. ಪಾಶೀಲ್ಕರ್, ಸಿಎಸ್ಐಆರ್-ಸಿಎಫ್‌ಟಿಆರ್ಐ ನಿರ್ದೇಶಕ ಡಾ. ಗಿರಿಧರ್ ಪರ್ವತಂ ಮತ್ತು ಸಿಎಸ್ಐಆರ್-4ಪಿಐ ನಿರ್ದೇಶಕ ಡಾ. ಜಿ. ಕೆ. ಪಾತ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಒಟ್ಟಾರೆ, 'ರೈಸ್‌ ಸಮಾವೇಶ 2026' ವಿಜ್ಞಾನ ಮತ್ತು ಉದ್ಯಮಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ ಭಾರತವನ್ನು ಜಾಗತಿಕ ನಾವೀನ್ಯತೆಯ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಒಂದು ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಿದೆ. ಈ ಸಮಾವೇಶದಲ್ಲಿ ಮೂಡಿಬಂದ ವಿಚಾರಗಳು ಮತ್ತು ನಿರ್ಧಾರಗಳು, ಮುಂಬರುವ ದಿನಗಳಲ್ಲಿ ದೇಶದ ಆರ್ಥಿಕತೆಗೆ ಭದ್ರ ಬುನಾದಿ ಹಾಕುವುದರಲ್ಲಿ ಸಂಶಯವಿಲ್ಲ.

Read More
Next Story