ರಿಂಗ್ ರೋಡ್ ಶುಭಾ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಸಚಿವ ಸಂಪುಟ ಸಭೆ
x

ರಿಂಗ್ ರೋಡ್ ಶುಭಾ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಸಚಿವ ಸಂಪುಟ ಸಭೆ

ಶುಭಾ ಮತ್ತು ಅರುಣ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ಕಾನೂನು ಚೌಕಟ್ಟಿನೊಳಗೆ ಇಲ್ಲ. ಹೀಗಾಗಿ, ಈ ಅರ್ಜಿಯನ್ನು ತಿರಸ್ಕರಿಸಿದ್ದು, ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.


Click the Play button to hear this message in audio format

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ 2003ರ ಬಹುಚರ್ಚಿತ ರಿಂಗ್ ರೋಡ್ ಶುಭಾ ಕೊಲೆ ಪ್ರಕರಣದ ಅಪರಾಧಿಗಳಿಗೆ ಹಿನ್ನಡೆಯಾಗಿದೆ. ಈ ಪ್ರಕರಣದ ಅಪರಾಧಿಗಳು ಸಲ್ಲಿಸಿದ್ದ ಕ್ಷಮಾಧಾನ ಅರ್ಜಿಯನ್ನು ರಾಜ್ಯ ಸಚಿವ ಸಂಪುಟ ಸಭೆಯು ತಿರಸ್ಕರಿಸಿದೆ.

2003ರಲ್ಲಿ ನಡೆದ ಬಿ.ವಿ. ಗಿರೀಶ್ ಕೊಲೆ ಪ್ರಕರಣ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಬಿ.ವಿ. ಗಿರೀಶ್ ಅವರನ್ನು ಅವರ ನಿಶ್ಚಿತಾರ್ಥದ ಹುಡುಗಿ ಶುಭಾ ಮತ್ತು ಆಕೆಯ ಪ್ರಿಯಕರ ಅರುಣ್ ವರ್ಮ ಹಾಗೂ ಇತರರು ಸೇರಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಾದ ಶುಭಾ, ಅರುಣ್ ವರ್ಮ ಮತ್ತು ವೆಂಕಟೇಶ್ ಅವರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಸುದೀರ್ಘ ಕಾಲ ಜೈಲುವಾಸ ಅನುಭವಿಸಿರುವ ಈ ಅಪರಾಧಿಗಳು, ತಮ್ಮ ಶಿಕ್ಷೆಯನ್ನು ಮನ್ನಾ ಮಾಡುವಂತೆ ಅಥವಾ ಕಡಿಮೆ ಮಾಡುವಂತೆ ಕೋರಿ ಸರ್ಕಾರಕ್ಕೆ ಕ್ಷಮಾಧಾನ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಪರಿಶೀಲನೆ ನಡೆಸಿತು. ಗಿರೀಶ್ ಅವರ ಕೊಲೆಯ ಕೃತ್ಯವು ಅತ್ಯಂತ ಅಮಾನವೀಯ ಮತ್ತು ಪೂರ್ವನಿಯೋಜಿತವಾಗಿದ್ದರಿಂದ, ಇವರಿಗೆ ಕ್ಷಮಾಧಾನ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅದರಂತೆ, ಅಪರಾಧಿಗಳ ಅರ್ಜಿಯನ್ನು ತಿರಸ್ಕರಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಸಚಿವ ಸಂಪುಟದಲ್ಲಿ ಚರ್ಚೆ

ಅಪರಾಧಿಗಳು ರಾಜ್ಯಪಾಲರ ಮುಂದೆ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಪ್ರಕರಣದ ಗಂಭೀರತೆ ಮತ್ತು ಕಾನೂನಾತ್ಮಕ ತೊಡಕುಗಳನ್ನು ವಿಶ್ಲೇಷಿಸಲು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರನ್ನು ಸಭೆಗೆ ಕರೆಸಲಾಗಿತ್ತು. ಅವರ ಸಲಹೆ ಮತ್ತು ಪ್ರಕರಣದ ಹಿನ್ನೆಲೆಯನ್ನು ಅವಲೋಕಿಸಿದ ಬಳಿಕ, ಕ್ಷಮಾದಾನ ನೀಡುವ ಯಾವುದೇ ಸಮರ್ಥನೀಯ ಕಾರಣಗಳಿಲ್ಲ ಎಂದು ಸಂಪುಟ ಅಭಿಪ್ರಾಯಪಟ್ಟಿದೆ. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, "ಶುಭಾ ಶಂಕರನಾರಾಯಣ ಮತ್ತು ಅರುಣ್ ವರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಗಳು ಕಾನೂನು ಚೌಕಟ್ಟಿನೊಳಗೆ ಇಲ್ಲ. ಹೀಗಾಗಿ, ಸಚಿವ ಸಂಪುಟವು ಈ ಅರ್ಜಿಯನ್ನು ತಿರಸ್ಕರಿಸಲು ನಿರ್ಧರಿಸಿದೆ. ಈ ನಿರ್ಧಾರವನ್ನು ರಾಜ್ಯಪಾಲರಿಗೆ ಕಳುಹಿಸಲಾಗುವುದು" ಎಂದು ಸ್ಪಷ್ಟಪಡಿಸಿದ್ದಾರೆ.

ಏನಿದು ರಿಂಗ್ ರೋಡ್ ಶುಭಾ ಪ್ರಕರಣ?

2003ರ ನವೆಂಬರ್ 30ರಂದು ಗಿರೀಶ್ ಮತ್ತು ಶುಭಾ ಅವರ ನಿಶ್ಚಿತಾರ್ಥ ನೆರವೇರಿತ್ತು. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಗಿರೀಶ್ ಮತ್ತು ಕಾನೂನು ವಿದ್ಯಾರ್ಥಿನಿಯಾಗಿದ್ದ ಶುಭಾ ಅವರ ಮದುವೆಗೆ ಎರಡೂ ಕುಟುಂಬಗಳು ಸಮ್ಮತಿಸಿದ್ದವು. ಎಲ್ಲವೂ ಸುಗಮವಾಗಿ ಸಾಗುತ್ತಿದೆ ಎಂದು ಭಾವಿಸಲಾಗಿತ್ತು, ಆದರೆ ತೆರೆಮರೆಯಲ್ಲಿ ನಡೆಯುತ್ತಿದ್ದ ಸಂಚು ಬೇರೆಯೇ ಆಗಿತ್ತು. ತನಿಖೆಯ ವೇಳೆ ಬೆಳಕಿಗೆ ಬಂದ ಸತ್ಯವೆಂದರೆ, ಶುಭಾ ತನ್ನ ಕಾಲೇಜಿನ ಜೂನಿಯರ್ ವಿದ್ಯಾರ್ಥಿ ಅರುಣ್ ವರ್ಮಾ ಜೊತೆ ಪ್ರೇಮ ಸಂಬಂಧ ಹೊಂದಿದ್ದಳು. ಅರುಣ್‌ನನ್ನೇ ಮದುವೆಯಾಗಬೇಕೆಂದು ತೀರ್ಮಾನಿಸಿದ್ದ ಶುಭಾ, ತನ್ನ ಭಾವಿ ಪತಿ ಗಿರೀಶ್‌ಗೆ ಅಡ್ಡಗಾಲು ಹಾಕಬಾರದೆಂದು ಹತ್ಯೆಗೆ ಪ್ಲ್ಯಾನ್ ಮಾಡಿದ್ದಳು. 2003ರ ಡಿಸೆಂಬರ್ 3ರ ರಾತ್ರಿ ಗಿರೀಶ್ ತನ್ನ ಭಾವಿ ಪತ್ನಿ ಶುಭಾಳನ್ನು ಊಟಕ್ಕೆ ಕರೆದುಕೊಂಡು ಹೋಗಿದ್ದನು. ಊಟದ ನಂತರ ವಿಮಾನಗಳ ಹಾರಾಟ ವೀಕ್ಷಿಸುವ ನೆಪದಲ್ಲಿ ಶುಭಾ ಆತನನ್ನು ಬೆಂಗಳೂರಿನ ರಿಂಗ್ ರೋಡ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಳು. ಅಲ್ಲಿ ಹೊಂಚು ಹಾಕಿದ್ದ ಅರುಣ್ ವರ್ಮಾ ಮತ್ತು ಆತನ ಸಹಚರರು ಗಿರೀಶ್ ಮೇಲೆ ಭೀಕರವಾಗಿ ದಾಳಿ ನಡೆಸಿದರು. ಬೈಕ್‌ನ ಶಾಕ್ ಅಬ್ಸಾರ್ಬರ್ ಬಳಸಿ ಗಿರೀಶ್ ತಲೆಗೆ ಹೊಡೆದು ಹತ್ಯೆ ಮಾಡಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಮರುದಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ತನಿಖೆಯ ತಿರುವು

ಆರಂಭದಲ್ಲಿ ಇದು ದರೋಡೆಕೋರರ ಕೃತ್ಯ ಅಥವಾ ಅಪರಿಚಿತರ ದಾಳಿ ಎಂದು ನಂಬಿಸಲು ಆರೋಪಿಗಳು ಯತ್ನಿಸಿದ್ದರು. ಆದರೆ ಅಂದಿನ ವಿವೇಕನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ.ಎ. ನಾಣಯ್ಯ ಅವರು ನಡೆಸಿದ ಅತ್ಯಂತ ಚುರುಕಿನ ತನಿಖೆ ಈ ಪ್ರಕರಣದ ಸತ್ಯವನ್ನು ಹೊರತಂದಿತು. ಮೊಬೈಲ್ ಕರೆಗಳ ವಿವರ ಪರಿಶೀಲಿಸಿದಾಗ ಶುಭಾ ಮತ್ತು ಅರುಣ್ ವರ್ಮಾ ನಡುವಿನ ನಿರಂತರ ಸಂಭಾಷಣೆ ಮತ್ತು ಕೊಲೆಗೆ ಬಳಸಿದ ಸಂಚು ಬಯಲಾಗಿತ್ತು. ಅಂತಿಮವಾಗಿ ಶುಭಾ, ಅರುಣ್ ವರ್ಮಾ, ವೆಂಕಟೇಶ್ ಮತ್ತು ದಿನೇಶ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು. ನ್ಯಾಯಾಲಯವು ನಾಲ್ವರಿಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು.

ಸುಪ್ರೀಂ ಕೋರ್ಟ್ ಅಂಕಿತ

ಕೋರ್ಟ್ ವಿಧಿಸಿದ ಶಿಕ್ಷೆಯನ್ನು ಪ್ರಶ್ನಿಸಿ ಆರೋಪಿಗಳು ಸುಪ್ರೀಂಕೋರ್ಟ್ ವರೆಗೂ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಜುಲೈ 2025ರಲ್ಲಿ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದು ಅಂತಿಮ ಆದೇಶ ನೀಡಿತು. ನ್ಯಾಯಾಲಯದ ಎಲ್ಲಾ ಕಾನೂನು ಬಾಗಿಲುಗಳು ಮುಚ್ಚಿದ ನಂತರ, ಅಪರಾಧಿಗಳು ಕಡೆಯ ಪ್ರಯತ್ನವಾಗಿ ರಾಜ್ಯಪಾಲರ ಮೂಲಕ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದ್ದರು. ರಾಜ್ಯಪಾಲರು ಈ ಅರ್ಜಿಯನ್ನು ಸಂಪುಟಕ್ಕೆ ರವಾನಿಸಿದ್ದು, ಈಗ ರಾಜ್ಯ ಸರ್ಕಾರ ಅದನ್ನು ತಿರಸ್ಕರಿಸುವ ಮೂಲಕ ಗಿರೀಶ್ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವ ದೃಢತೆಯನ್ನು ಪ್ರದರ್ಶಿಸಿದೆ. ಈ ನಿರ್ಧಾರವು ಕಠಿಣ ಅಪರಾಧಗಳಲ್ಲಿ ಭಾಗಿಯಾದವರಿಗೆ ಸರ್ಕಾರದ ಕಠಿಣ ನಿಲುವನ್ನು ತೋರಿಸುತ್ತದೆ. ಪ್ರೇಮ ವೈಫಲ್ಯ ಅಥವಾ ವೈಯಕ್ತಿಕ ಉದ್ದೇಶಗಳಿಗಾಗಿ ಮನುಷ್ಯತ್ವ ಮರೆತು ಹತ್ಯೆ ಮಾಡುವಂತಹ ಅಮಾನವೀಯ ಕೃತ್ಯಗಳಿಗೆ ಕಾನೂನಿನಲ್ಲಿ ಕ್ಷಮೆಯಿಲ್ಲ ಎಂಬುದನ್ನು ಸಂಪುಟದ ಈ ತೀರ್ಮಾನ ಎತ್ತಿ ಹಿಡಿದಿದೆ. ಜೀವಾವಧಿ ಶಿಕ್ಷೆಯು ತನ್ನ ಸಂಪೂರ್ಣ ಅವಧಿಯನ್ನು ಪೂರೈಸಬೇಕೆಂಬ ಕಳಕಳಿ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಈ ಮೂಲಕ, ಬರೋಬ್ಬರಿ ಎರಡು ದಶಕಗಳ ಹಿಂದಿನ ಪ್ರಕರಣವು ಮತ್ತೊಮ್ಮೆ ಸಮಾಜದ ಗಮನ ಸೆಳೆದಿದೆ. ಅಪರಾಧಿಗಳ ಕ್ಷಮಾದಾನ ಅರ್ಜಿಯ ತಿರಸ್ಕಾರವು, ನ್ಯಾಯದಾನ ವ್ಯವಸ್ಥೆಯಲ್ಲಿ ಜನರಿಗಿರುವ ನಂಬಿಕೆಯನ್ನು ಗಟ್ಟಿಗೊಳಿಸಿದೆ.

Read More
Next Story