
ನಶಾಮುಕ್ತ ಕರ್ನಾಟಕದತ್ತ ಹೆಜ್ಜೆ: ಕಲಬುರಗಿಯಲ್ಲಿ ಬೃಹತ್ ಜಾಗೃತಿ ಅಭಿಯಾನ
ಮಾದಕ ವಸ್ತುಗಳ ಮಾರಾಟ, ಸೇವನೆಯ ವಿರುದ್ಧ ಕೇವಲ ಕಾನೂನಾತ್ಮಕ ಹೋರಾಟವಷ್ಟೇ ಸಾಲದು, ಯುವಕರ ಮನಸ್ಥಿತಿಯನ್ನು ಬದಲಿಸುವ ಸಾಮಾಜಿಕ ಜಾಗೃತಿ ಅನಿವಾರ್ಯ ಎಂಬುದನ್ನು ಅಭಿಯಾನ ಹೇಳಿದೆ.
ಇಂದಿನ ಯುವಜನತೆ ದೇಶದ ಭವಿಷ್ಯದ ಆಧಾರಸ್ತಂಭಗಳು. ಅಂತಹ ಭವಿಷ್ಯವನ್ನು ನಶೆಯ ಕರಾಳ ಹಸ್ತದಿಂದ ರಕ್ಷಿಸಿ, ಆರೋಗ್ಯವಂತ ಮತ್ತು ಸಶಕ್ತ ಸಮಾಜವನ್ನು ನಿರ್ಮಿಸುವ ಸಂಕಲ್ಪದೊಂದಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು (ಆರ್‌ಜಿಯುಎಚ್‌ಎಸ್) ರಾಜ್ಯಾದ್ಯಂತ ಹಮ್ಮಿಕೊಂಡಿರುವ 'ನಶಾಮುಕ್ತ ಯುವ-ನಶಾ ಮುಕ್ತ ಕ್ಯಾಂಪಸ್' ಅಭಿಯಾನವು ಇದೀಗ ಕಲಬುರಗಿಗೆ ತಲುಪಿದೆ. ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮವು ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಯೊಂದಿಗೆ ಬೃಹತ್ ಜನಜಾಗೃತಿ ಆಂದೋಲನವಾಗಿ ಮಾರ್ಪಟ್ಟಿತು.
'ಬೇಡ ಬ್ರೋ' - ಹೊಸ ತಲೆಮಾರಿನ ಜಾಗೃತಿಯ ಸಂಕೇತ
ರಾಜ್ಯ ಗೃಹ ಇಲಾಖೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ವಿವಿಧ ಜಿಲ್ಲಾ ಮಟ್ಟದ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ "ಬೇಡ ಬ್ರೋ - ಆಪರೇಶನ್ ರೈಸ್" ಎಂಬ ಘೋಷವಾಕ್ಯದಡಿ ಈ ಅಭಿಯಾನವನ್ನು ರೂಪಿಸಲಾಗಿದೆ. ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯ ವಿರುದ್ಧ ಕೇವಲ ಕಾನೂನಾತ್ಮಕ ಹೋರಾಟವಷ್ಟೇ ಸಾಲದು, ಯುವಕರ ಮನಸ್ಥಿತಿಯನ್ನು ಬದಲಿಸುವ ಸಾಮಾಜಿಕ ಜಾಗೃತಿ ಅನಿವಾರ್ಯ ಎಂಬುದನ್ನು ಈ ಅಭಿಯಾನ ಒತ್ತಿ ಹೇಳುತ್ತಿದೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರ್.ಜಿ.ಯು.ಎಚ್.ಎಸ್ ಕುಲಪತಿ ಡಾ. ಭಗವಾನ್ ಬಿ.ಸಿ., "ನಮ್ಮ ನಾಡು, ನಮ್ಮ ಸಮಾಜ ಆರೋಗ್ಯವಾಗಿರಬೇಕೆಂದರೆ ಮೊದಲು ನಮ್ಮ ಕಾಲೇಜು ಆವರಣಗಳು ನಶಾಮುಕ್ತವಾಗಬೇಕು. ಇದು ಕೇವಲ ಸರ್ಕಾರ ಅಥವಾ ಪೊಲೀಸ್ ಇಲಾಖೆಯ ಕೆಲಸವಲ್ಲ; ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೈಜೋಡಿಸಿದರೆ ಮಾತ್ರ ಈ ಬದಲಾವಣೆ ಸಾಧ್ಯ" ಎಂದು ಕರೆ ನೀಡಿದರು.
ರಾಜ್ಯದ ಅತ್ಯಂತ ದೊಡ್ಡ ಆರೋಗ್ಯ ವಿಶ್ವವಿದ್ಯಾಲಯವಾಗಿರುವ ಆರ್.ಜಿ.ಯು.ಎಚ್.ಎಸ್, ತನ್ನ ಶೈಕ್ಷಣಿಕ ಕರ್ತವ್ಯದೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ಈವರೆಗೆ ರಾಜ್ಯದ 16 ಜಿಲ್ಲೆಗಳಲ್ಲಿ ವಾಕಥಾನ್ ನಡೆಸಲಾಗಿದ್ದು, 600ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳ 1,41,000 ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಕಲಬುರಗಿ ಈ ಅಭಿಯಾನದ 17ನೇ ಜಿಲ್ಲೆಯಾಗಿದ್ದು, ಇಲ್ಲಿನ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಹಭಾಗಿತ್ವವು ಅಭಿಯಾನಕ್ಕೆ ಮತ್ತಷ್ಟು ಬಲ ತುಂಬಿದೆ ಎಂದರು.
ಯುವಜೀವನವೇ ಬಲಿಪಶು: ಗಂಭೀರ ಆತಂಕ
18ರಿಂದ 30 ವರ್ಷದೊಳಗಿನ ಯುವಕರು ನಶೆಯ ಜಾಲಕ್ಕೆ ಸುಲಭವಾಗಿ ಸಿಲುಕುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಈ ವಯಸ್ಸು ಕನಸುಗಳನ್ನು ಕಟ್ಟಿಕೊಳ್ಳುವ, ಶಿಕ್ಷಣ ಮತ್ತು ಉದ್ಯೋಗದ ಮೂಲಕ ತಮ್ಮ ಕುಟುಂಬಕ್ಕೆ ಆಧಾರವಾಗುವ ಪ್ರಮುಖ ಹಂತ. ಆದರೆ, ಒಂದು ಕ್ಷಣದ ಕುತೂಹಲ ಅಥವಾ ತಪ್ಪು ಸ್ನೇಹದ ಕಾರಣಕ್ಕೆ ಇಡೀ ಕುಟುಂಬವೇ ಅತಂತ್ರವಾಗುವ ಸಾಧ್ಯತೆ ಇದೆ. ಒಬ್ಬ ಯುವಕ ನಶೆಗೆ ಬಲಿಯಾದಾಗ ಕೇವಲ ಆ ವ್ಯಕ್ತಿಯ ಬದುಕು ಮುಗಿಯುವುದಿಲ್ಲ, ಬದಲಾಗಿ ಒಂದು ತಾಯಿಯ ನಿದ್ರೆ, ತಂದೆಯ ಭರವಸೆ ಮತ್ತು ಸಹೋದರ-ಸಹೋದರಿಯರ ಭವಿಷ್ಯವೂ ಕಮರಿಹೋಗುತ್ತದೆ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, "ನಿಮ್ಮ ಆರೋಗ್ಯ ಎಂದರೆ ನಿಮ್ಮ ದೈಹಿಕ ಹಾಗೂ ಮಾನಸಿಕ ದೃಢತೆ. ಪ್ರತಿದಿನ ಕನಿಷ್ಠ ಒಂದು ಗಂಟೆಯನ್ನು ಕ್ರೀಡೆ, ವ್ಯಾಯಾಮ ಅಥವಾ ಸೃಜನಾತ್ಮಕ ಚಟುವಟಿಕೆಗಳಿಗಾಗಿ ಮೀಸಲಿಡಿ. ಇದು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಬದುಕನ್ನು ಸಕಾರಾತ್ಮಕವಾಗಿ ನೋಡುವ ದೃಷ್ಟಿಯನ್ನು ನೀಡುತ್ತದೆ ಎಂದು ಸಲಹೆ ನೀಡಿದರು.
ಕಾನೂನಿನ ಕಟ್ಟುನಿಟ್ಟಿನ ಕ್ರಮ
ಕಲಬುರಗಿ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಮಾತನಾಡಿ, ಇಲಾಖೆಯು ಡ್ರಗ್ಸ್ ಮಾಫಿಯಾದ ವಿರುದ್ಧ ಅಕ್ಷರಶಃ ಯುದ್ಧ ಸಾರಿದೆ ಎಂದು ತಿಳಿಸಿದರು. ಈ ಹಿಂದೆ ಮಾದಕ ವಸ್ತುಗಳ ಮಾರಾಟಗಾರರ ಮೇಲೆ ಮಾತ್ರ ಪ್ರಕರಣ ದಾಖಲಿಸಲಾಗುತ್ತಿತ್ತು. ಆದರೆ ಈಗ ಬಳಕೆದಾರರ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಯುವಸಮುದಾಯವು ಕಾನೂನು ಸಂಕಷ್ಟಕ್ಕೆ ಸಿಲುಕುವ ಬದಲು, ಸ್ವಯಂ ಪ್ರೇರಣೆಯಿಂದ ಈ ಚಟಗಳಿಂದ ದೂರ ಸರಿಯಬೇಕು ಎಂದು ಎಚ್ಚರಿಕೆ ನೀಡಿದರು.
ವಾಕಥಾನ್ ಮತ್ತು ಮಾನವ ಸರಪಳಿ
ಪೊಲೀಸ್ ಪರೇಡ್ ಮೈದಾನದಿಂದ ಆರಂಭವಾದ ಬೃಹತ್ ವಾಕಥಾನ್ ನಗರದ ಪ್ರಮುಖ ರಸ್ತೆಗಳಾದ ಸರ್ಕಾರಿ ಬಾಲಕಿಯರ ಕಾಲೇಜು, ಓಲ್ಡ್ ಎಸ್.ಪಿ. ರಸ್ತೆ, ಏಷಿಯನ್ ಮಾಲ್ ಮೂಲಕ ಸಾಗಿತು. ತಿಮ್ಮಾಪುರಿ ವೃತ್ತದಲ್ಲಿ ನೂರಾರು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ, ನಶೆಯ ವಿರುದ್ಧ ಘೋಷಣೆ ಕೂಗಿದರು. ಈ ದೃಶ್ಯವು ನಗರದ ನಾಗರಿಕರಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.
ಅಭಿಯಾನವು ವಿದ್ಯಾರ್ಥಿಗಳಿಗೆ ಕೆಲವು ಪ್ರಮುಖ ಸಂದೇಶಗಳನ್ನು ನೀಡಿದೆ. ನಿಮ್ಮ ಸ್ನೇಹಿತರು ವ್ಯಸನದತ್ತ ಸಾಗುತ್ತಿದ್ದರೆ ಅವರನ್ನು ಕಡೆಗಣಿಸಬೇಡಿ, ಬದಲಾಗಿ ಅವರಿಗೆ ಸಹಾಯ ಮಾಡಿ. ಮಾರಾಟ ಅಥವಾ ಸೇವನೆಯ ಬಗ್ಗೆ ಅನುಮಾನ ಬಂದರೆ ಕೂಡಲೇ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ. ಕಾಲೇಜುಗಳು ಕೇವಲ ಪಾಠದ ತಾಣಗಳಾಗದೆ, ಯೋಗ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಗಳಾಗಬೇಕು. ವ್ಯಸನಕ್ಕೆ ದಾರಿ ಮಾಡಿಕೊಡುವ ಸಹವಾಸದಿಂದ ದೂರವಿರುವುದು ಪ್ರತಿಯೊಬ್ಬ ವಿದ್ಯಾರ್ಥಿಯ ನೈತಿಕ ಜವಾಬ್ದಾರಿಯಾಗಿದೆ.
ಕಾರ್ಯಕ್ರಮದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಶಶೀಲ ಜಿ. ನಮೋಶಿ ಸೇರಿದಂತೆ ಹಲವು ಗಣ್ಯರು, ಆರೋಗ್ಯ ವಿವಿಯ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರು, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಸಾವಿರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

