
ಗ್ರಾಮೀಣ ಭಾಗದ ಕಡೆಗೆ ಗಮನ ಹರಿಸಿ: ವೈದ್ಯಕೀಯ ಪದವೀಧರರಿಗೆ ಸಿಎಂ ಡಿ.ಕೆ. ಶಿವಕುಮಾರ್ ಕರೆ
ರಾಜ್ಯದಲ್ಲಿ 72 ವೈದ್ಯಕೀಯ ಕಾಲೇಜುಗಳಿದ್ದು, ದೇಶದಲ್ಲೇ ಅತಿ ಹೆಚ್ಚು ಕಾಲೇಜುಗಳನ್ನು ಹೊಂದಿದ ಹೆಗ್ಗಳಿಕೆ ಇದೆ. ಪ್ರತಿ ವರ್ಷ 13,940 ವೈದ್ಯರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಲಾಗುತ್ತಿದೆ.
ವೈದ್ಯರು ಜನಸಾಮಾನ್ಯರ ಪಾಲಿಗೆ ಕಣ್ಣಿಗೆ ಕಾಣುವ ದೇವರಾಗಿದ್ದು, ರೋಗಿಗಳು ಎಷ್ಟೇ ಕಷ್ಟದಲ್ಲಿದ್ದರೂ ಅತೀವ ನಂಬಿಕೆ ಹಾಗೂ ವಿಶ್ವಾಸದಿಂದ ವೈದ್ಯರ ಬಳಿ ಬರುತ್ತಾರೆ. ಆ ನಂಬಿಕೆಯನ್ನು ಎಂದಿಗೂ ಉಳಿಸಿಕೊಂಡು ಸೇವೆಯನ್ನು ಮುಂದುವರಿಸಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವೈದ್ಯಕೀಯ ಪದವೀಧರರಿಗೆ ಕಿವಿಮಾತು ಹೇಳಿದ್ದಾರೆ.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) 28ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯಪಾಲರೊಂದಿಗೆ ಸೇರಿ ಯಶಸ್ವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದ ಸಿಎಂ, ಕರ್ನಾಟಕದ ವೈದ್ಯರ ಜಾಗತಿಕ ಗುಣಮಟ್ಟವನ್ನು ಕೊಂಡಾಡಿದರು. ಈ ವೇಳೆ ಅವರು, ವಿದೇಶಗಳಿಗೆ ಪ್ರವಾಸ ಕೈಗೊಂಡಾಗ ಅಲ್ಲಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಭಾರತೀಯರು, ಅದರಲ್ಲೂ ವಿಶೇಷವಾಗಿ ಕರ್ನಾಟಕದ ವೈದ್ಯರು ಸೇವೆ ಸಲ್ಲಿಸುತ್ತಿರುವುದನ್ನು ಕಂಡಿದ್ದೇನೆ. ನಮ್ಮ ವೈದ್ಯರ ಪ್ರತಿಭೆ, ಬದ್ಧತೆ ಮತ್ತು ಕೌಶಲ್ಯಕ್ಕೆ ಜಗತ್ತಿನಲ್ಲಿ ಸರಿಸಾಟಿ ಇಲ್ಲ. ಕರ್ನಾಟಕವು ಕೇವಲ ಐಟಿ ಕ್ಷೇತ್ರದಲ್ಲಿ ಮಾತ್ರವಲ್ಲ, ಮಾನವ ಸಂಪನ್ಮೂಲದಲ್ಲೂ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಕರ್ನಾಟಕದ ಸಾಧನೆಗಳನ್ನು ಅಂಕಿಅಂಶಗಳ ಸಮೇತ ವಿವರಿಸಿದ ಅವರು, ನಮ್ಮ ರಾಜ್ಯದಲ್ಲಿ 72 ವೈದ್ಯಕೀಯ ಕಾಲೇಜುಗಳಿದ್ದು, ದೇಶದಲ್ಲೇ ಅತಿ ಹೆಚ್ಚು ಕಾಲೇಜುಗಳನ್ನು ಹೊಂದಿದ ಹೆಗ್ಗಳಿಕೆ ನಮಗಿದೆ. ಪ್ರತಿ ವರ್ಷ 13,940 ವೈದ್ಯರನ್ನು ಮತ್ತು ಒಟ್ಟಾರೆಯಾಗಿ 72,000 ಆರೋಗ್ಯ ಪದವೀಧರರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದ್ದೇವೆ. ಈ ಬೃಹತ್ ಸಾಧನೆಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯೇ ಆಧಾರಸ್ತಂಭ ಎಂದು ಶ್ಲಾಘಿಸಿದರು.
ಗ್ರಾಮೀಣ ಸೇವೆಯ ಮಹತ್ವ
ವೈದ್ಯಕೀಯ ಪದವೀಧರರು ಕೇವಲ ನಗರಗಳಿಗೆ ಸೀಮಿತವಾಗಬಾರದು ಎಂದು ಎಚ್ಚರಿಸಿದ ಮುಖ್ಯಮಂತ್ರಿಗಳು, ಗ್ರಾಮೀಣ ಭಾಗದ ಜನ ಆರೋಗ್ಯ ಸೇವೆಗಾಗಿ ನಗರಗಳಿಗೆ ವಲಸೆ ಬರುವುದನ್ನು ತಪ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ನೀವು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಹೆಚ್ಚಿನ ಆಸಕ್ತಿ ವಹಿಸಬೇಕು. ಆರೋಗ್ಯ ಕ್ಷೇತ್ರವು ಈಗ ಅತ್ಯಾಧುನಿಕ ಆವಿಷ್ಕಾರಗಳ ಕಾಲದಲ್ಲಿದೆ, ಆ ತಂತ್ರಜ್ಞಾನದ ಫಲ ಗ್ರಾಮೀಣ ಜನರಿಗೂ ತಲುಪಬೇಕು ಎಂದು ಕರೆ ನೀಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಮುಖ್ಯಮಂತ್ರಿ, ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಸ್ವತಃ ವೈದ್ಯರಾಗಿದ್ದು, ಇಲಾಖೆಯನ್ನು ಕಳೆದ 30 ವರ್ಷಗಳಲ್ಲಿ ಕಾಣದಷ್ಟು ಶಿಸ್ತಿನಿಂದ ನಡೆಸುತ್ತಿದ್ದಾರೆ ಎಂದು ಪ್ರಶಂಸಿಸಿದರು. ಅಲ್ಲದೆ, ನಶೆ ಮುಕ್ತ ಕ್ಯಾಂಪಸ್ ಮತ್ತು ನಶೆ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ರಾಮನಗರದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‌ಗೆ ಸರ್ಕಾರ ಅಗತ್ಯವಿರುವ ಎಲ್ಲ ಸಹಕಾರ ನೀಡಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.
ವೈಯಕ್ತಿಕ ಅನುಭವದ ಹಂಚಿಕೆ
ತಮ್ಮ ವಿದ್ಯಾರ್ಥಿ ಜೀವನದ ಮರೆಯಲಾಗದ ಘಟನೆಯನ್ನು ಹಂಚಿಕೊಂಡ ಶಿವಕುಮಾರ್, ನಾನು ವಿದ್ಯಾರ್ಥಿ ದೆಸೆಯಲ್ಲೇ ರಾಜಕೀಯಕ್ಕೆ ಬಂದಿದ್ದರಿಂದ ಪದವಿ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ, 2008ರಲ್ಲಿ 47 ವರ್ಷ ವಯಸ್ಸಾಗಿದ್ದಾಗ ಮೈಸೂರು ವಿವಿಯಲ್ಲಿ ಪದವಿ ಪೂರೈಸಿದೆ. ಆ ದಿನ ನನಗೆ ಸಿಕ್ಕ ಸಂತೋಷಕ್ಕೆ ಪಾರವೇ ಇರಲಿಲ್ಲ. ಇತಿಹಾಸ ಮರುಕಳಿಸುತ್ತದೆ, ಇಂದು ನೀವು ಪದವೀಧರರಾಗಿದ್ದೀರಿ, ನಿಮ್ಮ ಮುಂದೆ ಉತ್ತಮ ಭವಿಷ್ಯವಿದೆ" ಎಂದು ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದರು.
ಬೆಂಗಳೂರಿನ ಬದಲಾದ ಚಿತ್ರಣ
ಅಟಲ್ ಬಿಹಾರಿ ವಾಜಪೇಯಿ ಅವರು ವಿಮಾನ ನಿಲ್ದಾಣದ ಶಂಕುಸ್ಥಾಪನೆಗೆ ಬಂದಿದ್ದ ಕಾಲವನ್ನು ನೆನಪಿಸಿಕೊಂಡ ಸಿಎಂ, ಹಿಂದೆ ಅಂತಾರಾಷ್ಟ್ರೀಯ ನಾಯಕರು ದೆಹಲಿಗೆ ಬಂದು ನಂತರ ಬೇರೆಡೆ ಹೋಗುತ್ತಿದ್ದರು. ಈಗ ಕಾಲ ಬದಲಾಗಿದೆ, ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಇತರ ಭಾಗಗಳಿಗೆ ಹೋಗುತ್ತಿದ್ದಾರೆ. ಬೆಂಗಳೂರು ಇಂದು ಜಾಗತಿಕ ಮ್ಯಾಪ್‌ನಲ್ಲಿ ಪ್ರಮುಖ ಕೇಂದ್ರವಾಗಿದೆ. ಇಲ್ಲಿ 26 ಲಕ್ಷ ಐಟಿ ವೃತ್ತಿಪರರಿದ್ದು, ವೈದ್ಯಕೀಯ ಕ್ಷೇತ್ರದ ಪೂರಕ ವಾತಾವರಣ ಇಲ್ಲಿ ನಿರ್ಮಾಣವಾಗಿದೆ ಎಂದು ಹೇಳಿದರು.

