
ದರ್ಶನ್‌ಗೆ ಭಾರಿ ಹಿನ್ನಡೆ; 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಗೆ ಕೋರ್ಟ್ ಒಪ್ಪಿಗೆ
ಪ್ರದೋಷ್ ತನ್ನನ್ನು ಮಾಫಿಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದರ ಆದೇಶ ಮಂಗಳವಾರ ಹೊರ ಬಂದಿದೆ.
ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಪ್ರಕರಣದ 14ನೇ ಆರೋಪಿ ಪ್ರದೋಷ್‌ಗೆ ಮಾಫಿ ಸಾಕ್ಷಿಯಾಗಲು ಸಲ್ಲಿಸಿದ್ದ ಅರ್ಜಿಯನ್ನು 59ನೇ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ (ಸಿಸಿಎಚ್) ಅಂಗೀಕರಿಸಿದೆ. ಇದರಿಂದ ಪ್ರಕರಣದ ತನಿಖೆ ಮತ್ತು ಮುಂದಿನ ವಿಚಾರಣೆಗೆ ಹೊಸ ತಿರುವು ದೊರೆತಿದೆ.
ಪ್ರದೋಷ್ ತನ್ನನ್ನು ಮಾಫಿಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅವರ ಮನವಿಯನ್ನು ಪುರಸ್ಕರಿಸಿ ಮಾಫಿಸಾಕ್ಷಿಯಾಗಲು ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಮಾಫಿಸಾಕ್ಷಿ ಸ್ಥಾನಮಾನ ನೀಡುವ ವೇಳೆ ನ್ಯಾಯಾಲಯ ಪ್ರದೋಷ್‌ಗೆ ಸ್ಪಷ್ಟ ಎಚ್ಚರಿಕೆಯನ್ನೂ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ತಿಳಿದಿರುವ ಎಲ್ಲ ಸತ್ಯಾಂಶಗಳನ್ನು ಯಾವುದೇ ವಿಷಯ ಮುಚ್ಚಿಡದೆ ಸತ್ಯವಾಗಿ ಬಹಿರಂಗಪಡಿಸಬೇಕು ಎಂದು ಸೂಚಿಸಿದೆ.
ಒಂದು ವೇಳೆ ಸತ್ಯಾಂಶವನ್ನು ಮರೆಮಾಚಿದರೆ ಅಥವಾ ಸುಳ್ಳು ಮಾಹಿತಿ ನೀಡಿದರೆ, ಮಾಫಿಸಾಕ್ಷಿ ಸ್ಥಾನಮಾನವನ್ನು ಹಿಂಪಡೆಯಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ. ಅಂತಹ ಸಂದರ್ಭದಲ್ಲಿ ಪ್ರದೋಷ್ ಅವರನ್ನು ಮತ್ತೆ ಆರೋಪಿಯಾಗಿ ಪರಿಗಣಿಸುವ ಸಾಧ್ಯತೆ ಇದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಜೈಲು ಅಧಿಕಾರಿಗಳ ಮೂಲಕ ಆದೇಶ ಪ್ರತಿ
ಪ್ರಸ್ತುತ ಜೈಲಿನಲ್ಲಿರುವ ಪ್ರದೋಷ್‌ಗೆ ನ್ಯಾಯಾಲಯದ ಆದೇಶದ ಪ್ರತಿಯನ್ನು ಜೈಲು ಅಧಿಕಾರಿಗಳ ಮೂಲಕ ತಲುಪಿಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹಲವು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ಸಾಕ್ಷ್ಯ ಮತ್ತು ಆರೋಪಿಗಳ ಪಾತ್ರದ ಕುರಿತು ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆ ಮುಂದುವರಿದಿದೆ.
ದರ್ಶನ್ ವಿರುದ್ಧದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ಈ ಹೈಪ್ರೊಫೈಲ್ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಮಾಫಿಸಾಕ್ಷಿಯಾಗಲು ನ್ಯಾಯಾಲಯ ಅನುಮತಿ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ. ಮಾಫಿಸಾಕ್ಷಿಯಾಗಿ ಪ್ರದೋಷ್ ನ್ಯಾಯಾಲಯದ ಮುಂದೆ ಯಾವ ಮಾಹಿತಿಯನ್ನು ಬಹಿರಂಗಪಡಿಸುತ್ತಾರೆ ಮತ್ತು ಅದು ಪ್ರಕರಣದ ಇತರ ಆರೋಪಿಗಳ ವಿರುದ್ಧದ ಸಾಕ್ಷ್ಯಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದೇ ಇಲ್ಲಿ ಗಮನಾರ್ಹ ಸಂಗತಿ.

