
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷ್ಯ ನಾಲ್ಕನೇ ದಿನವೂ ಮುಂದುವರಿಯಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ|ಚಾರ್ಜ್ಶೀಟ್ನಿಂದ ಪ್ರದೋಷ್ ಹೆಸರು ಡಿಲೀಟ್
ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಸೆಪ್ಟೆಂಬರ್ 16ರಂದು ಅಂಗೀಕರಿಸಿತ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಚಾರ್ಜ್ಶೀಟ್ನಲ್ಲಿ ಎ-14 ಆರೋಪಿಯಾಗಿದ್ದ ಪ್ರದೋಷ್ ಇದೀಗ ಮಾಫಿ ಸಾಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ಪಟ್ಟಿಯಿಂದ ಆತನ ಹೆಸರನ್ನು ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ. ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಸೆಪ್ಟೆಂಬರ್ 16ರಂದು ಅಂಗೀಕರಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ನಡೆದ ಕಾನೂನು ಪ್ರಕ್ರಿಯೆಯ ಬಳಿಕ ಕರ್ನಾಟಕ ಹೈಕೋರ್ಟ್ ಕೂಡ ಸೆಪ್ಟೆಂಬರ್ 23ರಂದು ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ. ಇದರೊಂದಿಗೆ ಪ್ರದೋಷ್ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣೆ ಎದುರಿಸುವ ಬದಲು ಪ್ರಾಸಿಕ್ಯೂಷನ್ ಪರ ಸಾಕ್ಷಿಯಾಗಿ ಹೇಳಿಕೆ ನೀಡಲಿದ್ದಾರೆ.
ಚಾರ್ಜ್ಶೀಟ್ನಿಂದ ಹೆಸರು ಡಿಲೀಟ್
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಚಾರ್ಜ್ಶೀಟ್ನಲ್ಲಿ ಪ್ರದೋಷ್ ಅವರನ್ನು ಈ ಹಿಂದೆ ಎ-14 ಆರೋಪಿಯಾಗಿ ಹೆಸರಿಸಲಾಗಿತ್ತು. ಆದರೆ ನ್ಯಾಯಾಲಯ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವ ಹಿನ್ನೆಲೆಯಲ್ಲಿ ಆರೋಪಿಗಳ ಪಟ್ಟಿಯಿಂದ ಅವರ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ವಿಚಾರಣೆಯಲ್ಲಿ ಪ್ರದೋಷ್ ನೀಡುವ ಹೇಳಿಕೆಗಳು ಹಾಗೂ ಅವರು ಬಹಿರಂಗಪಡಿಸುವ ಮಾಹಿತಿಗೆ ಮಹತ್ವ ದೊರೆಯುವ ಸಾಧ್ಯತೆಯಿದೆ.
ಷರತ್ತು ಉಲ್ಲಂಘಿಸಿದರೆ ಮತ್ತೆ ಆರೋಪಿಯಾಗುವ ಸಾಧ್ಯತೆ
ಮಾಫಿ ಸಾಕ್ಷಿಯಾಗಿರುವ ಕಾರಣಕ್ಕೆ ಪ್ರದೋಷ್ ಅವರಿಗೆ ಸಂಪೂರ್ಣ ಕಾನೂನು ವಿನಾಯಿತಿ ದೊರೆತಿದೆ ಎಂದರ್ಥವಲ್ಲ. ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಅವರು ಜೈಲಿನಲ್ಲೇ ಇರಬೇಕಾಗುತ್ತದೆ. ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದರೆ, ಸುಳ್ಳು ಸಾಕ್ಷ್ಯ ನೀಡಿದರೆ ಅಥವಾ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿರುವುದು ಕಂಡುಬಂದರೆ ಅವರ ವಿರುದ್ಧ ಮತ್ತೆ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಜೈಲಿನಲ್ಲಿ ಹೆಚ್ಚುವರಿ ನಿಗಾ
ಮಾಫಿ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ ಪ್ರದೋಷ್ ಅವರ ಭದ್ರತೆಗೆ ಜೈಲಿನಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅವರ ಚಲನವಲನಗಳ ಮೇಲೆ 24 ಗಂಟೆಯೂ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ ಎನ್ನಲಾಗಿದೆ. ಹೊರಗಿನಿಂದ ಅವರಿಗೆ ತರುವ ಆಹಾರ, ತಿಂಡಿ ಮತ್ತು ನೀರನ್ನು ಪರಿಶೀಲಿಸಲಾಗುತ್ತಿದ್ದು, ಭೇಟಿಗೆ ಬರುವವರ ವಿವರಗಳನ್ನೂ ದಾಖಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಪ್ರಕರಣದ ವಿಚಾರಣೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರದೋಷ್ ಅವರ ಸುರಕ್ಷತೆ ಮತ್ತು ಭದ್ರತೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.

