
ರೇಣುಕಾಸ್ವಾಮಿ ಪ್ರಕರಣದಲ್ಲಿ ಪ್ರದೋಷ್ ಹೇಳಿಕೆ ವೇಳೆ ಕೋರ್ಟ್ ಕಲಾಪದ ವಿಡಿಯೋ ಹರಿದ ಆರೋಪ ಕೇಳಿಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ: ಕಲಾಪದ ವಿಡಿಯೋ ಲೀಕ್, ಆನ್ಲೈನ್ ವಿಚಾರಣೆಗೆ ಬ್ರೇಕ್ ಹಾಕಿದ ಕೋರ್ಟ್
ಮಾಫಿ ಸಾಕ್ಷಿಯ ಹೇಳಿಕೆ ದಾಖಲಿಸುವ ಸೂಕ್ಷ್ಮ ಹಂತದಲ್ಲೇ ನ್ಯಾಯಾಲಯದ ಕಲಾಪದ ದೃಶ್ಯಗಳು ಹೊರಗೆ ಹಂಚಿಕೆಯಾಗುತ್ತಿರುವ ಬಗ್ಗೆ 59ನೇ ಸಿಸಿಎಚ್ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣದ ಅತ್ಯಂತ ಸೂಕ್ಷ್ಮ ಹಂತದ ವಿಚಾರಣೆ ನಡೆಯುತ್ತಿರುವಾಗಲೇ ಕಲಾಪದ ದೃಶ್ಯಗಳು ಯೂಟ್ಯೂಬ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ತೀವ್ರವಾಗಿ ಪರಿಗಣಿಸಿರುವ 59ನೇ ಸಿಸಿಎಚ್ ನ್ಯಾಯಾಲಯವು, ಆರೋಪಿಗಳ ವಿಡಿಯೋ ಕಾನ್ಫರೆನ್ಸ್ (ವಿಸಿ) ವಿಚಾರಣೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.
ವಿಡಿಯೋ ಸೋರಿಕೆ
ಈ ಹೈಪ್ರೊಫೈಲ್ ಕೊಲೆ ಪ್ರಕರಣದಲ್ಲಿ ಈ ಹಿಂದೆ ಹದಿನಾಲ್ಕನೇ ಆರೋಪಿಯಾಗಿದ್ದ ಪ್ರದೋಷ್ ಅವರನ್ನು ನ್ಯಾಯಾಲಯದ ಅನುಮತಿಯ ಮೇರೆಗೆ ಮಾಫಿ ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಪ್ರಕರಣದ ದಿಕ್ಕನ್ನೇ ಬದಲಿಸಬಲ್ಲ ಪ್ರದೋಷ್ ಅವರ ರಹಸ್ಯ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆಯು ಸೆಪ್ಟೆಂಬರ್ 28ರಿಂದಲೇ ನ್ಯಾಯಾಲಯದಲ್ಲಿ ಬಿರುಸಿನಿಂದ ನಡೆಯುತ್ತಿದೆ.
ಇಂತಹ ಅತ್ಯಂತ ಸೂಕ್ಷ್ಮ ಹಾಗೂ ಮಹತ್ವದ ಘಟ್ಟದಲ್ಲಿ, ನ್ಯಾಯಾಲಯದ ಒಳಗೆ ನಡೆಯುತ್ತಿರುವ ಗೌಪ್ಯ ಕಲಾಪದ ದೃಶ್ಯಗಳು ಮತ್ತು ವಿಚಾರಣೆಯ ವಿವರಗಳು ಕೆಲವು ಯೂಟ್ಯೂಬ್ ಚಾನೆಲ್ಗಳು ಹಾಗೂ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಬಹಿರಂಗವಾಗಿವೆ. ಕಲಾಪದ ದೃಶ್ಯಗಳನ್ನು ರೆಕಾರ್ಡ್ ಮಾಡುವುದು ಹಾಗೂ ಪ್ರಸಾರ ಮಾಡುವುದು ಕಾನೂನುಬಾಹಿರವಾಗಿದ್ದರೂ, ನಿಯಮಗಳನ್ನು ಗಾಳಿಗೆ ತೂರಿ ವಿಡಿಯೋ ಹಂಚಿಕೊಂಡಿರುವುದು ನ್ಯಾಯಪೀಠದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಆನ್ಲೈನ್ ವಿಚಾರಣೆಗೆ ಬಿದ್ದ ಬ್ರೇಕ್
ವಿಚಾರಣೆಯ ವಿಡಿಯೋಗಳು ನಿರಂತರವಾಗಿ ಜಾಲತಾಣಗಳಲ್ಲಿ ದುರ್ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಎಚ್ಚೆತ್ತುಕೊಂಡಿರುವ ನ್ಯಾಯಾಲಯವು ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯ ಮೂಲಕ ಆರೋಪಿಗಳು ಹಾಜರಾಗುವುದಕ್ಕೆ ತಾತ್ಕಾಲಿಕ ತಡೆ ನೀಡಿದೆ. ಇದುವರೆಗೆ ಜೈಲಿನಲ್ಲಿರುವ ಪ್ರಮುಖ ಆರೋಪಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಕರಣದ ಇತರ ಆರೋಪಿಗಳು ಭದ್ರತೆಯ ಹಿತದೃಷ್ಟಿಯಿಂದ ಆನ್ಲೈನ್ ಮೂಲಕವೇ ವಿಚಾರಣೆಗೆ ಹಾಜರಾಗುತ್ತಿದ್ದರು. ಸೆಪ್ಟೆಂಬರ್ 28ರಂದು ಪ್ರದೋಷ್ ಹೇಳಿಕೆ ದಾಖಲಿಸುವ ಸಂದರ್ಭದಲ್ಲೂ ಈ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕವೇ ಭಾಗವಹಿಸಿದ್ದರು. ಆದರೆ, ಇದೀಗ ವಿಡಿಯೋ ಕಾನ್ಫರೆನ್ಸ್ಗೆ ನಿರ್ಬಂಧ ವಿಧಿಸಿರುವುದರಿಂದ ಮುಂದಿನ ಕಲಾಪಗಳಲ್ಲಿ ಜೈಲಿನಲ್ಲಿರುವ ಆರೋಪಿಗಳು ವಿಚಾರಣೆಗೆ ಹಾಜರಾಗುವ ವಿಧಾನದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ.
ಕಠಿಣ ಕಾನೂನು ಕ್ರಮದ ಎಚ್ಚರಿಕೆ
ನ್ಯಾಯಾಲಯದ ಕಲಾಪದ ದೃಶ್ಯಗಳನ್ನು ಯಾವುದೇ ಕಾರಣಕ್ಕೂ ರೆಕಾರ್ಡ್ ಮಾಡಬಾರದು ಮತ್ತು ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ನ್ಯಾಯಪೀಠವು ಈ ಹಿಂದೆಯೇ ಸ್ಪಷ್ಟ ಎಚ್ಚರಿಕೆ ನೀಡಿತ್ತು. ಆದಾಗ್ಯೂ, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ವಿಚಾರಣೆಯ ದೃಶ್ಯಗಳನ್ನು ಬಹಿರಂಗಪಡಿಸಿರುವುದು ನ್ಯಾಯಾಂಗ ಪ್ರಕ್ರಿಯೆಯ ಉಲ್ಲಂಘನೆಯಾಗಿದೆ. ವಿಡಿಯೋ ಹಂಚಿಕೊಂಡಿರುವುದು ದೃಢಪಟ್ಟರೆ, ಸಂಬಂಧಪಟ್ಟ ಯೂಟ್ಯೂಬ್ ಚಾನೆಲ್ಗಳು ಮತ್ತು ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಗಳಿದ್ದು, ಶೀಘ್ರದಲ್ಲೇ ಅಂತಹ ಖಾತೆಗಳಿಗೆ ನೋಟಿಸ್ ಜಾರಿಯಾಗುವ ಮುನ್ಸೂಚನೆ ಲಭ್ಯವಾಗಿದೆ. ಮಾಫಿ ಸಾಕ್ಷಿಯ ಹೇಳಿಕೆ ದಾಖಲಾತಿ ಮುಂದುವರಿದಿರುವಾಗಲೇ ನಡೆದಿರುವ ಈ ವಿಡಿಯೋ ಸೋರಿಕೆ ಪ್ರಕರಣವು ಮುಂದಿನ ವಿಚಾರಣೆಗಳಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

