
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಇಂದು ಮಹತ್ವದ ದಿನ.
ದರ್ಶನ್‌ಗೆ ಕಂಟಕವಾಗುತ್ತಾ ಪ್ರದೋಷ್ ಹೇಳಿಕೆ? ಇಂದು ಹೈಕೋರ್ಟ್ ಮಹತ್ವದ ತೀರ್ಪು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್‌ಗೆ ಮಾಫಿ ಸಾಕ್ಷಿ ಸ್ಥಾನ ನೀಡಿರುವುದನ್ನು ದರ್ಶನ್ ಪ್ರಶ್ನಿಸಿದ್ದಾರೆ. ಅರ್ಜಿಯ ಕುರಿತು ಹೈಕೋರ್ಟ್ ಬುಧವಾರ ತೀರ್ಪು ನೀಡಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಬುಧವಾರ ಮಹತ್ವದ ದಿನ. ಪ್ರಕರಣದ 14ನೇ ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಹೈಕೋರ್ಟ್ ಬುಧವಾರ ಪ್ರಕಟಿಸಲಿದೆ. ಈ ತೀರ್ಪಿನ ಬಳಿಕ ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿಯಲಿದೆಯೇ ಎಂಬುದು ಸ್ಪಷ್ಟವಾಗಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಮುಂದೆ ಬಂದಿದ್ದಾರೆ. ಈ ಸಂಬಂಧ ಬೆಂಗಳೂರಿನ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 307ರ ಅಡಿಯಲ್ಲಿ ಸಲ್ಲಿಸಿರುವ 11 ಪುಟಗಳ ಅರ್ಜಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀಡುವುದಾಗಿ ಪ್ರದೋಷ್ ತಿಳಿಸಿದ್ದಾರೆ.
ಕೊಲೆ ನಡೆದ ಸಂದರ್ಭ, ಸಾಕ್ಷ್ಯಗಳಿಗೆ ಸಂಬಂಧಿಸಿದ ವಿಚಾರಗಳು ಹಾಗೂ ಪ್ರಕರಣದಲ್ಲಿರುವ ಇತರ ಆರೋಪಿಗಳ ಪಾತ್ರದ ಬಗ್ಗೆ ಸತ್ಯ ಮಾಹಿತಿ ನೀಡುವುದಾಗಿ ಅವರು ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.
ಪ್ರದೋಷ್ ಹೇಳಿಕೆ ದಾಖಲಿಸಲು ಸಿದ್ಧತೆ
ವಿಚಾರಣಾ ನ್ಯಾಯಾಲಯ ಈಗಾಗಲೇ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಪ್ರಕ್ರಿಯೆಗೆ ಅನುಮತಿ ನೀಡಿದೆ. ಅವರ ಹೇಳಿಕೆ ದಾಖಲಿಸಲು ಇಂದು ಸಮಯ ನಿಗದಿಯಾಗಿದ್ದು, ಬೆಳಗ್ಗೆ 11 ಗಂಟೆ ಸುಮಾರಿಗೆ ಜೈಲು ಅಧಿಕಾರಿಗಳು ಪ್ರದೋಷ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ. ಆದರೆ, ಇದಕ್ಕೂ ಮುನ್ನ ದರ್ಶನ್ ಸಲ್ಲಿಸಿರುವ ಅರ್ಜಿಯ ಕುರಿತು ಹೈಕೋರ್ಟ್ ತನ್ನ ತೀರ್ಪು ನೀಡಲಿದೆ. ಹೀಗಾಗಿ ಹೈಕೋರ್ಟ್ ಆದೇಶದ ಬಳಿಕವೇ ಪ್ರದೋಷ್ ಅವರ ಹೇಳಿಕೆ ದಾಖಲಾಗುತ್ತದೆಯೇ ಎಂಬುದು ನಿರ್ಧಾರವಾಗಲಿದೆ.
ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್
ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವ ವಿಚಾರಣಾ ನ್ಯಾಯಾಲಯದ ನಿರ್ಧಾರವನ್ನು ದರ್ಶನ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಪ್ರದೋಷ್ ಅವರ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಗೆ ತಡೆ ನೀಡುವಂತೆ ದರ್ಶನ್ ಪರ ವಕೀಲ ಹಸ್ಮತ್ ಪಾಷಾ ಮನವಿ ಮಾಡಿದ್ದರು. ಅರ್ಜಿಯ ತುರ್ತು ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ಇಂದು ಈ ಅರ್ಜಿಯ ಕುರಿತು ಆದೇಶ ಹೊರಬೀಳಲಿದೆ.
ಪ್ರೊಬೆಷನ್ ವರದಿ ವಿಚಾರದಲ್ಲೂ ಆಕ್ಷೇಪ
ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಮೊದಲು ವಿಚಾರಣಾ ನ್ಯಾಯಾಲಯ ಪ್ರೊಬೆಷನ್ ಅಧಿಕಾರಿಯಿಂದ ವರದಿ ಪಡೆದಿರುವ ಕ್ರಮದ ಬಗ್ಗೆಯೂ ಹೈಕೋರ್ಟ್‌ನಲ್ಲಿ ಚರ್ಚೆ ನಡೆದಿದೆ. ಈ ಕ್ರಮಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ, ವಿಚಾರವನ್ನು ಮರುಪರಿಶೀಲನೆಗಾಗಿ ಕೆಳ ನ್ಯಾಯಾಲಯಕ್ಕೆ ಕಳುಹಿಸುವ ಸಾಧ್ಯತೆಯ ಬಗ್ಗೆ ನ್ಯಾಯಮೂರ್ತಿಗಳು ವಿಚಾರಣೆ ವೇಳೆ ಮೌಖಿಕವಾಗಿ ಪ್ರಸ್ತಾಪಿಸಿದ್ದರು. ಹೊಸದಾಗಿ ಆದೇಶ ನೀಡಲು ವಿಚಾರಣಾ ನ್ಯಾಯಾಲಯಕ್ಕೆ ಅವಕಾಶ ನೀಡುವ ವಿಚಾರವೂ ಚರ್ಚೆಯಾಗಿತ್ತು.
ದರ್ಶನ್ ಪ್ರಕರಣಕ್ಕೆ ಏಕೆ ಮಹತ್ವ?
ಪ್ರದೋಷ್ ಅವರ ಮಾಫಿ ಸಾಕ್ಷಿ ಹೇಳಿಕೆ ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಪ್ರಮುಖವಾಗುವ ಸಾಧ್ಯತೆಯಿದೆ. ವಿಶೇಷವಾಗಿ ಪ್ರಕರಣದ ಘಟನೆಗಳು ಮತ್ತು ಇತರ ಆರೋಪಿಗಳ ಪಾತ್ರದ ಬಗ್ಗೆ ಅವರು ನೀಡುವ ಮಾಹಿತಿ ತನಿಖೆ ಹಾಗೂ ವಿಚಾರಣೆಯಲ್ಲಿ ಮಹತ್ವ ಪಡೆಯಬಹುದು. ಆದರೆ ಪ್ರದೋಷ್ ಅವರ ಹೇಳಿಕೆ ಅಂತಿಮವಾಗಿ ಯಾವ ರೀತಿಯಲ್ಲಿ ಪರಿಗಣನೆಯಾಗುತ್ತದೆ ಎಂಬುದು ನ್ಯಾಯಾಲಯದ ಮುಂದಿನ ಆದೇಶಗಳು ಮತ್ತು ವಿಚಾರಣೆಯ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಇಂದು ಹೈಕೋರ್ಟ್ ನೀಡುವ ತೀರ್ಪು ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಂದಿನ ಬೆಳವಣಿಗೆಗೆ ನಿರ್ಣಾಯಕವಾಗಲಿದೆ.

