x

ಸಂಪುಟ ಕಿಚ್ಚು: ಅತೃಪ್ತರ ಮನೆಗೆ ಸುರ್ಜೇವಾಲ..!; ಸಿಎಂ ಮನೆಯಲ್ಲಿ ಸಭಾಪತಿ; ದರ್ಶನ್‌ಗೆ ಎದುರಾದ ಮತ್ತೊಂದು ಸಂಕಷ್ಟ

ಸಚಿವ ಸ್ಥಾನ ವಂಚಿತರ ಆಕ್ರೋಶ ನಿಯಂತ್ರಣಕ್ಕೆ ಹೈಕಮಾಂಡ್ ಕಸರತ್ತು ಮುಂದುವರಿದಿದೆ; ಸಿಎಂ ನಿವಾಸದಲ್ಲಿ ತಡರಾತ್ರಿ ಸಭಾಪತಿಯೊಂದಿಗೆ ಸಮಾಲೋಚನೆ; ಮಾಫಿ ಸಾಕ್ಷಿಯಾಗಲು ಮುಂದಾದ ಆಪ್ತ ಗೆಳೆಯ ಪ್ರದೋಷ್


Click the Play button to hear this message in audio format

ರಾಜ್ಯದಲ್ಲಿ ನೂತನ ಸರ್ಕಾರ ರಚನೆಯಾದ ಬಳಿಕ, ಸಚಿವ ಸಂಪುಟದ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನದ ಕಿಡಿ ಹೊತ್ತಿಕೊಂಡಿದೆ. ಹಿರಿಯ ಶಾಸಕರು ಮತ್ತು ಸಚಿವ ಸ್ಥಾನದ ಆಕಾಂಕ್ಷಿಗಳು ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಆರೋಪದೊಂದಿಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಪಕ್ಷದ ವರಿಷ್ಠರಲ್ಲಿ ತಲ್ಲಣ ಮೂಡಿಸಿದೆ. ಈ ಪರಿಸ್ಥಿತಿಯನ್ನು ತಿಳಿಗೊಳಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ತುರ್ತಾಗಿ ಬೆಂಗಳೂರಿಗೆ ಆಗಮಿಸಿ ಡ್ಯಾಮೇಜ್ ಕಂಟ್ರೋಲ್ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಸಂಪುಟ ರಚನೆಯಲ್ಲಿ ಜಾತಿ ಸಮೀಕರಣ, ಪ್ರಾದೇಶಿಕ ಪ್ರಾತಿನಿಧ್ಯ ಮತ್ತು ಪಕ್ಷಕ್ಕೆ ನಿಷ್ಠರಾಗಿ ದುಡಿದ ಹಿರಿಯರಿಗೆ ಮಣೆ ಹಾಕುವ ವಿಚಾರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಪಕ್ಷಕ್ಕೆ ದೊಡ್ಡ ಸವಾಲಾಗಿತ್ತು. ಹಿರಿಯ ನಾಯಕರಾದ ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಪ್ರಭಾವಿ ನಾಯಕರು ಸಂಪುಟದಿಂದ ಹೊರಗುಳಿದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ದಶಕಗಳ ಕಾಲ ಪಕ್ಷಕ್ಕಾಗಿ ದುಡಿದ ತಮಗೆ ಮಂತ್ರಿಮಂಡಲದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬುದು ಅತೃಪ್ತ ಶಾಸಕರ ವಾದವಾಗಿದೆ.

ಪರಿಸ್ಥಿತಿ ಕೈಮೀರುತ್ತಿದೆ ಎಂದು ಅರಿತ ಎಐಸಿಸಿ ವರಿಷ್ಠರು, ತಕ್ಷಣವೇ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ. ಸುರ್ಜೇವಾಲ ಅವರು ಮುಖ್ಯಮಂತ್ರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ನಂತರ, ನೇರವಾಗಿ ಅತೃಪ್ತ ನಾಯಕರ ಮನೆ ಬಾಗಿಲಿಗೆ ಹೋಗಿ ಮನವೊಲಿಸುವ ಸಾಹಸ ಮಾಡಿದರು. ತಡರಾತ್ರಿಯವರೆಗೂ ನಡೆದ ಈ ರಾಜಕೀಯ ಹೈಡ್ರಾಮಾದಲ್ಲಿ, ಎಚ್.ಕೆ. ಪಾಟೀಲ್ ಅವರ ಮನೆಗೆ ತೆರಳಿ ಸುರ್ಜೇವಾಲ ಮಾತುಕತೆ ನಡೆಸಿದ್ದು ಮಹತ್ವ ಪಡೆದುಕೊಂಡಿತು. ಪಕ್ಷದ ಭವಿಷ್ಯದ ಹಿತದೃಷ್ಟಿಯಿಂದ ಈಗಿನ ಅಸಮಾಧಾನವನ್ನು ಬದಿಗಿಟ್ಟು ಸಹಕರಿಸುವಂತೆ ಅವರು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಎಂ-ಸಭಾಪತಿ ಭೇಟಿ; ಮಾತುಕತೆ

ರಾಜ್ಯ ರಾಜಕೀಯದಲ್ಲಿ ಸದ್ಯದ ಬೆಳವಣಿಗೆಗಳು ರಾಜ್ಯ ಸರ್ಕಾರದ ಸುಗಮ ಆಡಳಿತಕ್ಕೆ ಹೊಸ ಸವಾಲುಗಳನ್ನು ಒಡ್ಡುತ್ತಿವೆ. ಒಂದು ಕಡೆ ಸಚಿವ ಸಂಪುಟ ರಚನೆಯಲ್ಲಿನ ಜಾತಿ ಸಮೀಕರಣ ಮತ್ತು ಪ್ರಾತಿನಿಧ್ಯದ ಕೊರತೆಯಿಂದಾಗಿ ಹಿರಿಯ ಶಾಸಕರ ಅಸಮಾಧಾನ ಜ್ವಾಲೆಯಾಗಿ ಉರಿಯುತ್ತಿದ್ದರೆ, ಇನ್ನೊಂದೆಡೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರದ ಸುತ್ತ ನಡೆದಿರುವ ರಾಜಕೀಯ ಹೈಡ್ರಾಮಾ ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಂಪುಟದ ಗೊಂದಲಗಳ ನಡುವೆಯೇ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆಗೆ ಸರ್ಕಾರ ಕೈಗೊಂಡಿರುವ ಕ್ರಮ ರಾಜಕೀಯ ವಲಯದಲ್ಲಿ ತೀವ್ರ ಕಳವಳ ಮೂಡಿಸಿದೆ. ಕಾಂಗ್ರೆಸ್ ಹೈಕಮಾಂಡ್ ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್ ಅವರ ಹೆಸರನ್ನು ಸೂಚಿಸಿದ್ದು, ಹೊರಟ್ಟಿ ಅವರು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಸಿಎಂ ಕಚೇರಿಯಿಂದ ಒತ್ತಡ ಹೇರಲಾಗುತ್ತಿದೆ ಎಂದು ಹೇಳಲಾಗಿದೆ. ತಡರಾತ್ರಿ ಬಸವರಾಜ ಹೊರಟ್ಟಿ ಅವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ತಮ್ಮ ನಿವಾಸಕ್ಕೆ ಕರೆಸಿಕೊಂಡು ರಾಜೀನಾಮೆ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಚಿವರಾದ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಯು.ಟಿ. ಖಾದರ್, ಮಾಗಡಿ ಬಾಲಕೃಷ್ಣ ಮತ್ತು ಚಲುವರಾಯಸ್ವಾಮಿ ಉಪಸ್ಥಿತರಿದ್ದರು.

ಸುದೀರ್ಘ ಮಾತುಕತೆಯ ಬಳಿಕ, ಪಕ್ಷದ ನಿರ್ಧಾರ ಮತ್ತು ಮುಂದಿನ ರಾಜಕೀಯ ತಂತ್ರಗಾರಿಕೆಯನ್ನು ಮನವರಿಕೆ ಮಾಡುವಲ್ಲಿ ಸಿಎಂ ಯಶಸ್ವಿಯಾದರು ಎಂದು ಮೂಲಗಳು ತಿಳಿಸಿವೆ. ಅಂತಿಮವಾಗಿ ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಒಪ್ಪಿಗೆ ಸೂಚಿಸಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಮಾಫಿ ಸಾಕ್ಷಿಯಾದ ದರ್ಶನ ಗೆಳೆಯ

ನಟ ದರ್ಶನ್ ತೂಗುದೀಪ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾರೀ ತಿರುವು ಪಡೆದುಕೊಂಡಿದೆ. ದರ್ಶನ್ ಅವರ ಅತ್ಯಾಪ್ತ ಸ್ನೇಹಿತ ಮತ್ತು ಈ ಪ್ರಕರಣದ 14ನೇ ಆರೋಪಿ ಪ್ರದೋಷ್, ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್‌ಗೆ 'ಮಾಫಿ ಸಾಕ್ಷಿ' ಆಗಲು ಅರ್ಜಿ ಸಲ್ಲಿಸಿರುವುದು ದರ್ಶನ್ ಅವರ ಪಾಲಿಗೆ ದೊಡ್ಡ ಸಂಕಷ್ಟವಾಗಿದೆ.

ಪ್ರದೋಷ್ ತನ್ನ ವಕೀಲರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಮುಖ ಮೂರು ಅಂಶಗಳನ್ನು ಒತ್ತಾಯಿಸಿದ್ದಾರೆ. ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ ಎಲ್ಲಾ ಅಸಲಿ ಸಂಗತಿಗಳನ್ನು, ಅಂದರೆ ಹಲ್ಲೆ, ಕೊಲೆ ಮತ್ತು ನಂತರ ನಡೆದ ಸಾಕ್ಷ್ಯ ನಾಶದ ಸಂಪೂರ್ಣ ಸತ್ಯವನ್ನು ನ್ಯಾಯಾಲಯದ ಮುಂದೆ ಹೇಳುತ್ತೇನೆ. ತನಗೆ ಕ್ಷಮಾದಾನ ನೀಡಬೇಕು. ದರ್ಶನ್ ಮತ್ತು ಗ್ಯಾಂಗ್‌ಜೊತೆ ಒಂದೇ ಜೈಲಿನಲ್ಲಿ ಇರಲು ಸಾಧ್ಯವಿಲ್ಲ, ತಮ್ಮ ಮೇಲೆ ಹಲ್ಲೆ ಅಥವಾ ಒತ್ತಡ ಹೇರುವ ಸಾಧ್ಯತೆ ಇದೆ. ಆದ್ದರಿಂದ ಪ್ರತ್ಯೇಕ ಸೆಲ್‌ನಲ್ಲಿ ಇಡಬೇಕು. ಮತ್ತು ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ದರ್ಶನ್ ಗ್ಯಾಂಗ್‌ನಿಂದ ಪ್ರತ್ಯೇಕವಾಗಿ ಹಾಜರಾಗಲು ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರದ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು, ಸಿಆರ್‌ಪಿಸಿ ಸೆಕ್ಷನ್ 307ರಡಿ ಈ ಅರ್ಜಿಯನ್ನು ಪರಿಗಣಿಸುವ ಕುರಿತು ವಾದ ಮಂಡಿಸಿದ್ದಾರೆ. ಯೋಗೀಶ್ ಗೌಡ ಕೊಲೆ ಪ್ರಕರಣ ಸೇರಿದಂತೆ ಹೈಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿ, ಆರೋಪಿಯೊಬ್ಬ ಮಾಫಿ ಸಾಕ್ಷಿಯಾದಾಗ ಪ್ರಕರಣದ ದಿಕ್ಕು ಹೇಗೆ ಬದಲಾಗುತ್ತದೆ ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದಾರೆ. ಆರೋಪಿಗಳಾದ ರವಿಶಂಕರ್ ಮತ್ತು ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಉತ್ಸುಕರಾಗಿರುವುದು ದರ್ಶನ್ ಪಾಳಯದಲ್ಲಿ ನಡುಕ ಹುಟ್ಟಿಸಿದೆ.

Read More
Next Story