ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿಸಾಕ್ಷಿ ಕುರಿತ ವಿಚಾರಣಾ ನ್ಯಾಯಾಲಯ ಆದೇಶಕ್ಕೆ ತಡೆ
x

ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿಸಾಕ್ಷಿ ಕುರಿತ ವಿಚಾರಣಾ ನ್ಯಾಯಾಲಯ ಆದೇಶಕ್ಕೆ ತಡೆ

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ಸದ್ಯಕ್ಕೆ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, ಕಾನೂನಿನ ಚೌಕಟ್ಟಿನಲ್ಲಿ ಮರು ಆದೇಶ ಹೊರಡಿಸುವಂತೆ ನಿರ್ದೇಶನ ನೀಡಿದೆ.


Click the Play button to hear this message in audio format

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್‌ಗೆ ಹೈಕೋರ್ಟ್‌ನಿಂದ ಸಣ್ಣ ಮಟ್ಟದ ಮುನ್ನಡೆ ಸಿಕ್ಕಂತಾಗಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಭಾಗಶಃ ಪುರಸ್ಕರಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್, ಘಟನೆಯ ಆರಂಭದಿಂದ ಕೊನೆಯವರೆಗೂ ದರ್ಶನ್ ಹಾಗೂ ಇತರ ಆರೋಪಿಗಳೊಂದಿಗೆ ಇದ್ದವರು ಎಂದು ಹೇಳಲಾಗಿದೆ. ಪ್ರಕರಣದಲ್ಲಿ ಪ್ರದೋಷ್ ಪ್ರಮುಖ ಕೊಂಡಿಯಾಗಿದ್ದು, ಅವರು ಮಾಫಿ ಸಾಕ್ಷಿ ಆಗುವುದಾಗಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ್ದ 59ನೇ ಸಿಸಿಎಚ್ ನ್ಯಾಯಾಲಯ, ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ದರ್ಶನ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಸದ್ಯಕ್ಕೆ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, ಕಾನೂನಿನ ಚೌಕಟ್ಟಿನಲ್ಲಿ ಮರು ಆದೇಶ ಹೊರಡಿಸುವಂತೆ ನಿರ್ದೇಶನ ನೀಡಿದೆ.

ಹೈಕೋರ್ಟ್ ಆದೇಶದಲ್ಲಿ ಏನಿದೆ?

ಮಾಫಿ ಸಾಕ್ಷಿ ನೀಡುವ ಸಂಬಂಧ ವಿಚಾರಣಾ ನ್ಯಾಯಾಲಯ ನೀಡಿದ್ದ ಹಿಂದಿನ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ವಿಚಾರಣಾ ನ್ಯಾಯಾಲಯವು ಹೊಸದಾಗಿ ವಿಚಾರಣೆ ನಡೆಸುವ ಅಗತ್ಯವಿಲ್ಲ, ಬದಲಿಗೆ ಕಾನೂನಿನಲ್ಲಿರುವ ಲೋಪಗಳನ್ನು ಸರಿಪಡಿಸಿ ಒಂದು ವಾರದೊಳಗೆ ಹೊಸದಾಗಿ ಆದೇಶ ಹೊರಡಿಸಬೇಕು. ಪ್ರದೋಷ್ ಅವರ ಮಾಫಿ ಸಾಕ್ಷಿ ಹೇಳಿಕೆಗೆ ಹೈಕೋರ್ಟ್ ಯಾವುದೇ ತಡೆ ನೀಡಿಲ್ಲ, ಬದಲಿಗೆ ಪ್ರಕ್ರಿಯೆಯನ್ನು ಕಾನೂನುಬದ್ಧವಾಗಿ ನಡೆಸಲು ಸೂಚಿಸಿದೆ.

ದರ್ಶನ್ ಪರ ವಾದವೇನು?

ದರ್ಶನ್ ಪರ ವಕೀಲರು ಹೈಕೋರ್ಟ್‌ನಲ್ಲಿ ಬಲವಾದ ವಾದ ಮಂಡಿಸಿದ್ದರು. ಪ್ರಮುಖವಾಗಿ ವಿಚಾರಣಾ ನ್ಯಾಯಾಲಯದ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದರು. ವಿಚಾರಣಾ ನ್ಯಾಯಾಲಯವು ಪ್ರದೋಷ್ ಅವರ ಹಿನ್ನೆಲೆ ತಿಳಿಯಲು ಪ್ರೊಬೇಷನರಿ ಅಧಿಕಾರಿಯಿಂದ ವರದಿ ಪಡೆದಿದ್ದು ಕಾನೂನುಬಾಹಿರ. ಪ್ರೊಬೇಷನರಿ ಅಧಿಕಾರಿಯ ಪಾತ್ರ ಕೇವಲ ಅಪರಾಧಿಗೆ ಶಿಕ್ಷೆ ವಿಧಿಸಿದ ನಂತರ, ಆತನನ್ನು ಸುಧಾರಣಾ ಕ್ರಮವಾಗಿ ಬಿಡುಗಡೆ ಮಾಡಲು ಮಾತ್ರ ಸೀಮಿತ. ಆದರೆ, ಇಲ್ಲಿ ಆರೋಪಿಯನ್ನು ಕ್ಷಮಾದಾನ ಕೊಟ್ಟು ಸಾಕ್ಷಿಯನ್ನಾಗಿ ಮಾಡುವ ಪ್ರಕ್ರಿಯೆಯಲ್ಲಿ ಇಂತಹ ವರದಿ ಕೇಳಿರುವುದು ತಪ್ಪು. ಪ್ರದೋಷ್ ಅವರು ವಿವಾಹಿತರು, ಮಕ್ಕಳಿದ್ದಾರೆ, ಉತ್ತಮ ನಡತೆ ಹೊಂದಿದ್ದಾರೆ ಎಂಬ ಕಾರಣಗಳನ್ನು ಆಧಾರವಾಗಿಟ್ಟುಕೊಂಡು ಅವರಿಗೆ ಕ್ಷಮಾದಾನ ನೀಡಿರುವುದು ಸಾಕ್ಷ್ಯ ಕಾಯ್ದೆಯ ಸೆಕ್ಷನ್ 54ಕ್ಕೆ ವಿರುದ್ಧವಾಗಿದೆ. ಅಪರಾಧ ವಿಚಾರಣೆಯಲ್ಲಿ ಆರೋಪಿಯ ಒಳ್ಳೆಯ ನಡತೆ ಅಥವಾ ಕೌಟುಂಬಿಕ ಹಿನ್ನೆಲೆ ಅಪ್ರಸ್ತುತ ಎಂದು ವಾದಿಸಿದರು.

ಸಿಐಡಿ ಪರ ವಾದವೇನು?

ಸಿಐಡಿ ಪರ ವಕೀಲರು ಈ ಪ್ರಕ್ರಿಯೆಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದರು. "ನಿಯಮಗಳ ಪ್ರಕಾರ ತನಿಖಾಧಿಕಾರಿಗಳು ಅಥವಾ ನ್ಯಾಯಾಲಯ ಮಾಹಿತಿ ಪಡೆದುಕೊಳ್ಳಬಹುದು" ಎಂದು ವಾದಿಸಿದರು. ಆದರೆ, "ಪ್ರಾಸಿಕ್ಯೂಷನ್ ಇಂತಹ ವರದಿಯನ್ನು ಕೇಳಿರಲಿಲ್ಲ, ನ್ಯಾಯಾಲಯವೇ ಸ್ವಯಂಪ್ರೇರಿತವಾಗಿ ವರದಿ ತರಿಸಿಕೊಂಡಿತ್ತು" ಎಂಬುದನ್ನು ಒಪ್ಪಿಕೊಂಡರು.

ಹೈಕೋರ್ಟ್ ಈಗ ವಿಚಾರಣಾ ನ್ಯಾಯಾಲಯಕ್ಕೆ "ಕಾನೂನು ಪ್ರಕಾರ ಮರು ಆದೇಶ ಹೊರಡಿಸಿ" ಎಂದು ಹೇಳಿದೆ. ವಿಚಾರಣಾ ನ್ಯಾಯಾಲಯವು ತನ್ನ ಹಿಂದಿನ ತಪ್ಪುಗಳನ್ನು (ಪ್ರೊಬೇಷನರಿ ವರದಿಯನ್ನು ಆಧರಿಸಿದ್ದು) ಸರಿಪಡಿಸಿಕೊಂಡು ಮತ್ತೆ ಅದೇ ತೀರ್ಮಾನಕ್ಕೆ ಬರುವ ಸಾಧ್ಯತೆಯೂ ಇದೆ. ಒಂದು ವೇಳೆ ಮರು ಆದೇಶದಲ್ಲಿಯೂ ನ್ಯಾಯಾಲಯವು ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಮುಂದುವರಿಸಿದರೆ, ದರ್ಶನ್ ಅವರಿಗೆ ಕಾನೂನಾತ್ಮಕವಾಗಿ ಮತ್ತೆ ದೊಡ್ಡ ಸಂಕಷ್ಟ ಎದುರಾಗಲಿದೆ. ಯಾಕೆಂದರೆ ಪ್ರದೋಷ್ ಅವರು ಕೊಲೆಯ ಒಳಸಂಚಿನ ಪ್ರತಿಯೊಂದು ವಿವರವನ್ನು ಬಲ್ಲವರಾಗಿದ್ದಾರೆ.

Read More
Next Story