
ದಯಾಮರಣಕ್ಕೆ ಹೋರಾಟ ನಡೆಸುತ್ತಿರುವ ನಿವೃತ್ತ ಶಿಕ್ಷಕಿ ಎಚ್.ಬಿ. ಕರಿಬಸಮ್ಮ
ದಯಾಮರಣಕ್ಕಾಗಿ 24 ವರ್ಷ ಹೋರಾಡಿದ ದಾವಣಗೆರೆಯ ವೃದ್ಧೆ: ತಾವೇ ಕಷ್ಟಪಟ್ಟು ಕೂಡಿಟ್ಟ ಹಣ ಯೋಧರಿಗೆ ಮೀಸಲು
ನನ್ನ ಸಣ್ಣ ಮನೆಯನ್ನು ಮಾರಿ ಬಂದ ಹಣದಲ್ಲಿ 6 ಲಕ್ಷವನ್ನು ಮೊದಲೇ ಸೈನಿಕರಿಗಾಗಿ ಮೀಸಲಿಟ್ಟಿದ್ದೆ. ನಂತರ ಅದನ್ನು ರೌಂಡ್ ಫಿಗರ್ ಮಾಡಿ 10 ಲಕ್ಷವನ್ನು ಯೋಧರಿಗೆ ನೀಡಿದ್ದೇನೆ ಎಂದು ಎಚ್.ಬಿ. ಕರಿಬಸಮ್ಮ ತಿಳಿಸಿದ್ದಾರೆ.
"ನಾನು ಬದುಕಿರುವಾಗಲೇ ದೇಶದ ಋಣ ತೀರಿಸಬೇಕು..." ಇದು 87 ವರ್ಷದ ನಿವೃತ್ತ ಶಿಕ್ಷಕಿ ಎಚ್. ಬಿ. ಕರಿಬಸಮ್ಮ ಅವರ ಹೃದಯಸ್ಪರ್ಶಿ ಮಾತುಗಳು. ತೀವ್ರ ಅನಾರೋಗ್ಯದಿಂದ ಬಳಲುತ್ತಾ, ಗೌರವಯುತ ಸಾವಿಗಾಗಿ 'ದಯಾಮರಣ'ಕ್ಕೆ ಕಾನೂನು ಹೋರಾಟ ನಡೆಸುತ್ತಿರುವ ಈ ವೃದ್ಧೆ, ತಮ್ಮ ಇಳಿವಯಸ್ಸಿನಲ್ಲೂ ದೇಶಪ್ರೇಮದ ಅತ್ಯುನ್ನತ ಮಾದರಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ತಾವೇ ಕಷ್ಟಪಟ್ಟು ಕೂಡಿಟ್ಟಿದ್ದ ಹಾಗೂ ತಮ್ಮ ಸಣ್ಣ ಮನೆಯನ್ನು ಮಾರಿ ಬಂದ ಒಟ್ಟು 10 ಲಕ್ಷ ರೂ. ಹಣವನ್ನು ಗಡಿ ಕಾಯುವ ಸೈನಿಕರ ಕಲ್ಯಾಣ ನಿಧಿಗೆ ದೇಣಿಗೆಯಾಗಿ ನೀಡುವ ಮೂಲಕ ಇಡೀ ದೇಶವೇ ಇವರಿಗೆ 'ಹ್ಯಾಟ್ಸ್ ಆಫ್' ಎನ್ನುವಂತೆ ಮಾಡಿದ್ದಾರೆ.
50 ವರ್ಷಗಳ ಹಿಂದಿನ ಕನಸು
ಕರಿಬಸಮ್ಮ ಅವರು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರ ಮೂಲಕ ಸೈನಿಕರ ನಿಧಿಗೆ 10 ಲಕ್ಷದ ಚೆಕ್ ಹಸ್ತಾಂತರಿಸಿದ್ದಾರೆ. ಈ ಕುರಿತು ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ ಅವರು, "ಸುಮಾರು 50 ವರ್ಷಗಳ ಹಿಂದೆ ರೇಡಿಯೋದಲ್ಲಿ ಸೈನಿಕರ ಕಷ್ಟದ ಜೀವನದ ಬಗ್ಗೆ ಕೇಳಿದಾಗ, ನನ್ನಿಂದ ಏನಾದರೂ ಸಹಾಯ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿತ್ತು. ಈಗ ನಾನು ದಯಾಮರಣದ ಕಾನೂನಿಗೆ ಹೋರಾಡುತ್ತಿರುವಾಗ ಹಣದ ಅವಶ್ಯಕತೆಯಿತ್ತು. ನನ್ನ ಸಣ್ಣ ಮನೆಯನ್ನು ಮಾರಿ ಬಂದ ಹಣದಲ್ಲಿ 6 ಲಕ್ಷವನ್ನು ಮೊದಲೇ ಸೈನಿಕರಿಗಾಗಿ ಮೀಸಲಿಟ್ಟಿದ್ದೆ. ನಂತರ ಅದನ್ನು ರೌಂಡ್ ಫಿಗರ್ ಮಾಡಿ 10 ಲಕ್ಷವನ್ನು ಯೋಧರಿಗೆ ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಕೈಯಾರೆ ಇದನ್ನು ಕೊಡಬೇಕೆಂಬ ಆಸೆ ಇತ್ತು, ಆದರೆ ಆರೋಗ್ಯ ಕೈಕೊಡುತ್ತಿರುವುದರಿಂದ ಜಿಲ್ಲಾಧಿಕಾರಿಗಳ ಮೂಲಕ ನೀಡಿ ದೇಶದ ಋಣದಿಂದ ಮುಕ್ತಳಾಗಿದ್ದೇನೆ," ಎಂದು ತೃಪ್ತಿ ವ್ಯಕ್ತಪಡಿಸಿದರು.
24 ವರ್ಷಗಳ ದಯಾಮರಣದ ಹೋರಾಟ ಹಾಗೂ ಐತಿಹಾಸಿಕ ಯಶಸ್ಸು
ಕ್ಯಾನ್ಸರ್, ಸ್ಲಿಪ್ ಡಿಸ್ಕ್, ಬಿಪಿ ಮತ್ತು ಶುಗರ್‌ನಂತಹ ತೀವ್ರ ಕಾಯಿಲೆಗಳ ನೋವಿನ ನಡುವೆಯೂ ಕರಿಬಸಮ್ಮ ಅವರು ದೇಶದಲ್ಲಿ ದಯಾಮರಣ ಕಾನೂನು ಜಾರಿಗೆ ಬರಬೇಕೆಂದು ಸತತ 24 ವರ್ಷಗಳ ಕಾಲ ಹೋರಾಟ ನಡೆಸಿದ್ದಾರೆ. ಇವರ ಹೋರಾಟದ ಫಲವಾಗಿ 2018ರಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತು. ಇತ್ತೀಚೆಗೆ ಕರ್ನಾಟಕ ಸರ್ಕಾರ ಕೂಡ ಇದನ್ನು ಜಾರಿಗೆ ತಂದಿದೆ. "ನೋವಿನಿಂದ ನರಳಿ ನರಳಿ ಸಾಯುವ ಬದಲು, ನಾನು ಗಟ್ಟಿಯಾಗಿರುವಾಗಲೇ ಗೌರವಯುತವಾಗಿ ಕಾನೂನಾತ್ಮಕ ಸಾವು (ದಯಾಮರಣ) ಹೊಂದಲು ಬಯಸುತ್ತೇನೆ. ಇದಕ್ಕಾಗಿ ಹೈಕೋರ್ಟ್ ಮತ್ತು ರಾಷ್ಟ್ರಪತಿಗಳಿಗೂ ಅರ್ಜಿ ಸಲ್ಲಿಸಿದ್ದೇನೆ," ಎಂದು ಅವರು ತಮ್ಮ ಅಚಲ ನಿರ್ಧಾರವನ್ನು ಪ್ರಕಟಿಸಿದರು.
ಸರ್ಕಾರಕ್ಕೆ ಮೋಸವಾಗಬಾರದೆಂದು ಸ್ವಯಂ ನಿವೃತ್ತಿ!
ಕರಿಬಸಮ್ಮ ಅವರು ಶಿಕ್ಷಕಿಯಾಗಿ 33 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಬಾಲ್ಯ ವಿವಾಹದ ಕಷ್ಟಗಳು, ಪತಿಯ ಅಕಾಲಿಕ ಮರಣದ ನಡುವೆಯೂ ಛಲ ಬಿಡದೆ ಓದಿ ಶಿಕ್ಷಕಿಯಾದವರು. ಆದರೆ, ಸರ್ಕಾರಿ ದಾಖಲೆಗಳಲ್ಲಿ ತಮ್ಮ ವಯಸ್ಸು 3 ವರ್ಷ ಕಡಿಮೆಯಾಗಿ ದಾಖಲಾಗಿದ್ದನ್ನು ಅರಿತ ಅವರು, "ನಾನು ಸರ್ಕಾರಕ್ಕೆ ಮೋಸ ಮಾಡಬಾರದು" ಎಂಬ ಶುದ್ಧ ಪ್ರಾಮಾಣಿಕತೆಯಿಂದ 1995 ರಲ್ಲೇ ಸ್ವಯಂ ನಿವೃತ್ತಿ (VRS) ಪಡೆದುಕೊಂಡಿದ್ದರು. ಸದ್ಯ ಯಾವುದೇ ಸ್ವಂತ ಕುಟುಂಬದ ಬೆಂಬಲವಿಲ್ಲದೆ, ಆಶ್ರಮ ನಿವಾಸಿಯಾಗಿ ವಾಸಿಸುತ್ತಿದ್ದಾರೆ.
ಮುಂದಿನ ಪೀಳಿಗೆಗೆ ಕರಿಬಸಮ್ಮ ಅವರ ಕರೆ
ದೇಶದ ಯುವ ಜನತೆಗೆ ಸಂದೇಶ ನೀಡಿರುವ ಅವರು, "ನಮ್ಮ ದೇಶ ಅತ್ಯಂತ ಪವಿತ್ರವಾದದ್ದು. ಸನಾತನ ಧರ್ಮ ಮತ್ತು ದೇಶವನ್ನು ಉಳಿಸುವ ಸತ್ಪ್ರಜೆಗಳಾಗಿ ಬಾಳಿ," ಎಂದು ಕರೆ ನೀಡಿದ್ದಾರೆ. ಇದರೊಂದಿಗೆ ಅವರ ಮತ್ತೊಂದು ಕೊನೆಯ ಆಸೆಯೆಂದರೆ ಭಾರತದ ಕರೆನ್ಸಿ ನೋಟುಗಳ ಮೇಲೆ 'ಭಾರತ ಮಾತೆ'ಯ ಚಿತ್ರ ಹಾಗೂ 'ವಂದೇ ಮಾತರಂ' ಎಂದು ಮುದ್ರಿಸಬೇಕು ಎನ್ನುವುದು. ಇದಕ್ಕಾಗಿ ದಾವಣಗೆರೆಯ ವಿವಿಧ ಕಾಲೇಜುಗಳ 10,600 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಹಿ ಸಂಗ್ರಹಿಸಿ ರಿಸರ್ವ್ ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ ಬಾಕಿ ಉಳಿದಿರುವ ಕೆಲಸವನ್ನು ನನ್ನ ವಿದ್ಯಾರ್ಥಿಗಳು ಪೂರ್ಣಗೊಳಿಸಬೇಕೆಂದು ಅವರು ಆಶಿಸಿದ್ದಾರೆ.

