
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ
ಸಿದ್ದರಾಮಯ್ಯ ನೇಮಕದಿಂದ ಪಕ್ಷಕ್ಕೆ ಆನೆಬಲ; ಪಕ್ಷ ಸಂಘಟನೆಗೆ ಹೆಚ್ಚು ಒತ್ತು
ಜನಪರ ಹೋರಾಟಗಳನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸಿದ್ದರಾಮಯ್ಯ ಅವರ ಆಯ್ಕೆಯು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ," ಎಂದು ಸುರ್ಜೇವಾಲಾ ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವವನ್ನು ಮತ್ತಷ್ಟು ವಿಸ್ತರಿಸಲು ಹಾಗೂ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಹೈಕಮಾಂಡ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, "ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಪಾಲಿಗೆ ಒಂದು ದೈತ್ಯ ಶಕ್ತಿ. ಕರ್ನಾಟಕದ ಮುಖ್ಯಮಂತ್ರಿಯಾಗಿ ಸುದೀರ್ಘ ಎಂಟು ವರ್ಷಗಳ ಕಾಲ ಆಡಳಿತ ನಡೆಸಿದ ಅವರ ಅಪಾರ ಅನುಭವ, ಮುಂಬರುವ ದಿನಗಳಲ್ಲಿ ದೇಶಾದ್ಯಂತ ಕಾಂಗ್ರೆಸ್ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ನೆರವಾಗಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ನ್ಯಾಯದ ಹೋರಾಟಕ್ಕೆ ಬಲ
ಸಿದ್ದರಾಮಯ್ಯ ಅವರ ಸಾರ್ವಜನಿಕ ಜೀವನದ ಬದ್ಧತೆಯನ್ನು ಶ್ಲಾಘಿಸಿದ ಸುರ್ಜೇವಾಲಾ, "ಅವರು ಕೇವಲ ಒಬ್ಬ ನಾಯಕರಲ್ಲ; ಸಾಮಾಜಿಕ ನ್ಯಾಯದ ಪರವಾದ ಅಚಲ ಬದ್ಧತೆ ಹಾಗೂ ಸಂವಿಧಾನದ ಮೌಲ್ಯಗಳ ಮೇಲೆ ದೃಢ ನಂಬಿಕೆ ಹೊಂದಿರುವ ಮುತ್ಸದ್ದಿ. ಪ್ರಸ್ತುತ ದೇಶದಲ್ಲಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು, ಭಿನ್ನಮತದ ಧ್ವನಿಗಳನ್ನು ಹತ್ತಿಕ್ಕುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಹೋರಾಟಕ್ಕೆ ಸಿದ್ದರಾಮಯ್ಯ ಅವರ ವೈಚಾರಿಕ ಚಿಂತನೆಗಳು ಮತ್ತು ಆಡಳಿತಾತ್ಮಕ ಅನುಭವ ಮತ್ತಷ್ಟು ಶಕ್ತಿ ತುಂಬಲಿವೆ," ಎಂದು ಹೇಳಿದ್ದಾರೆ.
ಕೇಂದ್ರದ ವಿರುದ್ಧ ಹೋರಾಟ ತೀವ್ರ
ಪಕ್ಷದ ಮುಂದಿನ ಕಾರ್ಯತಂತ್ರಗಳ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ಜಂಟಿ ನಾಯಕತ್ವದಲ್ಲಿ ಪಕ್ಷವು ಒಗ್ಗಟ್ಟಿನಿಂದ ಮುನ್ನಡೆಯಲಿದೆ.
ಕೇಂದ್ರದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳು ಮತ್ತು ಬೆಲೆ ಏರಿಕೆಯಿಂದಾಗಿ ಕರ್ನಾಟಕ ಸೇರಿದಂತೆ ದೇಶದ ಸಾಮಾನ್ಯ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಮಾನ್ಯ ಜನರ ಹಿತಾಸಕ್ತಿಗಳನ್ನು ಕಾಪಾಡುವುದು, ಸಾಮಾಜಿಕ ನ್ಯಾಯವನ್ನು ತಳಮಟ್ಟಕ್ಕೆ ವಿಸ್ತರಿಸುವುದು ಮತ್ತು ಸಂವಿಧಾನದ ರಕ್ಷಣೆ ಮಾಡುವುದೇ ನಮ್ಮ ಆದ್ಯತೆ. ಈ ಎಲ್ಲ ಜನಪರ ಹೋರಾಟಗಳನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸಿದ್ದರಾಮಯ್ಯ ಅವರ ಆಯ್ಕೆಯು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ," ಎಂದು ಸುರ್ಜೇವಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

