
ನಕಲಿ ಔಷಧದ ತನಿಖೆಗೆ ಕಾನೂನು ತೊಡಕು; ವಿಶೇಷ ಅಧಿಕಾರ ಕೋರಿ ಗೃಹ ಇಲಾಖೆಗೆ ಎಸ್ಐಟಿ ಮನವಿ
ಔಷಧ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ ನೇರವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವ ಅಧಿಕಾರ ಕೇವಲ ಔಷಧ ನಿಯಂತ್ರಣ ಮಂಡಳಿಗೆ ಮಾತ್ರ ಇದೆ. ರಾಮನಗರದ ನಕಲಿ ಔಷಧ ಜಾಲದ ಬಗ್ಗೆ ಎಸ್ಐಟಿ ಅಧಿಕಾರಿಗಳಿಗೆ ಕೇವಲ ದೂರು ಆಧರಿಸಿ ಕ್ರಮ ಕೈಗೊಳ್ಳುವ ಅಧಿಕಾರವಷ್ಟೇ ಇದೆ.
ರಾಮನಗರ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡೇರಿ ಗ್ರಾಮದ ಫಾರ್ಮ್ಹೌಸ್ನಲ್ಲಿ ಪತ್ತೆಯಾದ ಸುಮಾರು 5 ಕೋಟಿ ರೂ. ಮೌಲ್ಯದ ಬೃಹತ್ ನಕಲಿ ಔಷಧ ದಂಧೆಯ ತನಿಖೆಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಪ್ರಕರಣದ ಗಂಭೀರತೆ ಪರಿಗಣಿಸಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದರೂ ಕಾನೂನಾತ್ಮಕ ಅಡೆತಡೆಯಿಂದ ತನಿಖೆ ಮುಂದುವರಿಸಲು ಸಾಧ್ಯವಾಗದಂತಾಗಿದೆ. ಹಾಗಾಗಿ, ಎಸ್ಐಟಿಗೆ ವಿಶೇಷ ಅಧಿಕಾರ ನೀಡುವಂತೆ ಕೋರಿ ಗೃಹ ಇಲಾಖೆಗೆ ಎಸ್ಐಟಿ ಅಧಿಕಾರಿಗಳು ಪತ್ರ ಬರೆಯಲು ನಿರ್ಧರಿಸಿದ್ದಾರೆ.
ಏನದು ಕಾನೂನು ತೊಡಕು?
ಔಷಧ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ ನೇರವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವ ಅಧಿಕಾರ ಕೇವಲ ಔಷಧ ನಿಯಂತ್ರಣ ಮಂಡಳಿಗೆ ಮಾತ್ರ ಇದೆ. ರಾಮನಗರದ ನಕಲಿ ಔಷಧ ಜಾಲದ ಬಗ್ಗೆ ಎಸ್ಐಟಿ ಅಧಿಕಾರಿಗಳಿಗೆ ಕೇವಲ ದೂರು ಆಧರಿಸಿ ಕ್ರಮ ಕೈಗೊಳ್ಳುವ ಅಧಿಕಾರವಷ್ಟೇ ಇದೆ. ಈ ಪ್ರಕರಣದಲ್ಲಿ ಹಲವು ಕಂಪನಿಗಳ ಹೆಸರಿನಲ್ಲಿ ಐಸಿಯು ಹಂತದ ಆಂಟಿಬಯೋಟಿಕ್ಗಳನ್ನು ನಕಲಿ ಮಾಡಿರುವುದರಿಂದ ಜೀವಾವಧಿವರೆಗೂ ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೆ, ಎಸ್ಐಟಿಗೆ ಕಾಯ್ದೆಯ ಕಾನೂನು ತೊಡಕು ಇರುವುದರಿಂದ ಸಮಗ್ರ ಹಾಗೂ ಪಾರದರ್ಶಕ ತನಿಖೆ ನಡೆಸುವುದು ಅಸಾಧ್ಯವಾಗಿದೆ. ಹೀಗಾಗಿ ಪ್ರಕರಣದಲ್ಲಿ ಪೂರ್ಣ ಪ್ರಮಾಣದ ತನಿಖೆ ನಡೆಸಲು ಎಸ್ಐಟಿಗೆ ವಿಶೇಷ ಅಧಿಕಾರ ನೀಡುವಂತೆ ಗೃಹ ಇಲಾಖೆಗೆ ಮನವಿ ಮಾಡಲು ತೀರ್ಮಾನಿಸಲಾಗಿದೆ.
ಪೋರ್ಟರ್ ಆ್ಯಪ್ ಮೂಲಕ ಪೂರೈಕೆ
ಪ್ರಕರಣದ ಪ್ರಮುಖ ಆರೋಪಿ ಹಾಗೂ ಮೆಡಿಕಲ್ ರೆಪ್ ಆಗಿದ್ದ ಪ್ರಶಾಂತ್ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಈತ ದುಬೈನಲ್ಲಿ ಇದ್ದುಕೊಂಡು ಜಾಲವನ್ನು ನಡೆಸುತ್ತಿದ್ದ ಎನ್ನಲಾಗಿದೆ. ಹಿಮಾಚಲ ಪ್ರದೇಶ ಹಾಗೂ ತೆಲಂಗಾಣದಿಂದ ಕಡಿಮೆ ಬೆಲೆಗೆ ತರಿಸಿಕೊಂಡ ಔಷಧ ಹಾಗೂ ಅವಧಿ ಮೀರಿದ ಪೌಡರ್ಗಳನ್ನು ರಾಮನಗರದ ಫಾರ್ಮ್ಹೌಸ್ನಲ್ಲಿ ರಿ ಪ್ಯಾಕಿಂಗ್ ಮಾಡಿ, ಪೋರ್ಟರ್ ಆ್ಯಪ್ ಮೂಲಕ ಬೆಂಗಳೂರಿನ ವಿವಿಧ ಭಾಗಗಳಿಗೆ ಸರಬರಾಜು ಮಾಡಲಾಗುತ್ತಿತ್ತು.
ಫಾರ್ಮ್ಹೌಸ್ಗೆ ವಾರದಲ್ಲಿ 2-3 ಬಾರಿ ರಹಸ್ಯವಾಗಿ ಕಾರುಗಳು ಬಂದು ಹೋಗುತ್ತಿದ್ದದು ಮತ್ತು ಯಾರಿಗೂ ಒಳಗೆ ಪ್ರವೇಶ ನೀಡದೆ ಕ್ರೂರ ತಳಿಯ ನಾಯಿಯನ್ನು ಕಾವಲಿಗೆ ಇರಿಸಿದ್ದರಿಂದ ಸ್ಥಳೀಯರಿಗೆ ಅನುಮಾನ ಮೂಡಿತ್ತು. ಸ್ಥಳೀಯ ಕೃಷಿ ಕಾರ್ಮಿಕರು ನೀಡಿದ ಸುಳಿವು ಆಧರಿಸಿ ಪೊಲೀಸರು ದಾಳಿ ನಡೆಸಿದಾಗ ದಂಧೆ ಬಯಲಿಗೆ ಬಂದಿದೆ.

