ಸಿಎಂ ಸ್ಥಾನ ; ರೇಷ್ಮೆ ನಗರಿಯಿಂದ ಸಿಎಂ ಸ್ಥಾನ ಅಲಂಕರಿಸಿದ 5ನೇ ರಾಜಕಾರಣಿ ಡಿಕೆಶಿ
x

ಸಿಎಂ ಸ್ಥಾನ ; ರೇಷ್ಮೆ ನಗರಿಯಿಂದ ಸಿಎಂ ಸ್ಥಾನ ಅಲಂಕರಿಸಿದ 5ನೇ ರಾಜಕಾರಣಿ ಡಿಕೆಶಿ

ರಾಮನಗರ ಜಿಲ್ಲೆಯು ರಾಜ್ಯ ರಾಜಕಾರಣಕ್ಕೆ ಕೇವಲ ನಾಯಕರನ್ನಷ್ಟೇ ಅಲ್ಲ, ದಕ್ಷ ಆಡಳಿತಗಾರರನ್ನು ನೀಡಿದ ಇತಿಹಾಸ ಹೊಂದಿದೆ. ಈ ಹಿಂದೆ ಜಿಲ್ಲೆಯಿಂದಲೇ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ನಾಯಕರ ವಿವರ ಇಲ್ಲಿದೆ.


ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ತಿಂಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ನಾಯಕತ್ವ ಬದಲಾವಣೆಯ ಬಿಕ್ಕಟ್ಟು ಸುಖಾಂತ್ಯಗೊಂಡು, ಡಿ.ಕೆ. ಶಿವಕುಮಾರ್ ಅವರ ಪಟ್ಟಾಭಿಷೇಕಕ್ಕೆ ಮುಹೂರ್ತ ನಿಗದಿಯಾಗಿದೆ. ಸಿಎಲ್‌ಪಿ ಸಭೆಯಲ್ಲಿ ಡಿ.ಕೆ. ಶಿವಕುಮಾರ್‌ ಅವರನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡುತ್ತಿದ್ದಂತೆ ಸರ್ಕಾರಕ್ಕೆ ಹೊಸ ಸಾರಥಿ ಕಾಯಂ ಆಗಿದೆ. ಆ ಮೂಲಕ ರಾಮನಗರ ಜಿಲ್ಲೆಯಿಂದ ಮುಖ್ಯಮಂತ್ರಿ ಹುದ್ದೆಗೇರುವ 5ನೇ ರಾಜಕಾರಣಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಡಿ.ಕೆ. ಶಿವಕುಮಾರ್‌ ಪಾತ್ರರಾಗಲಿದ್ದಾರೆ.

ರಾಮನಗರ ಜಿಲ್ಲೆಯು ರಾಜ್ಯ ರಾಜಕಾರಣಕ್ಕೆ ಕೇವಲ ನಾಯಕರನ್ನಷ್ಟೇ ಅಲ್ಲ, ದಕ್ಷ ಆಡಳಿತಗಾರರನ್ನು ನೀಡಿದ ಇತಿಹಾಸ ಹೊಂದಿದೆ. ಈ ಹಿಂದೆ ಜಿಲ್ಲೆಯಿಂದಲೇ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ನಾಯಕರ ವಿವರ ಇಲ್ಲಿದೆ.

ಕೆಂಗಲ್ ಹನುಮಂತಯ್ಯ (ಕಾಂಗ್ರೆಸ್)

ಕರ್ನಾಟಕದ ಮೊದಲ ಚುನಾಯಿತ ಮುಖ್ಯಮಂತ್ರಿ ಎಂಬ ಐತಿಹಾಸಿಕ ಖ್ಯಾತಿ ಕೆಂಗಲ್ ಹನುಮಂತಯ್ಯ ಅವರದ್ದು. ರಾಜ್ಯದ ಹೆಮ್ಮೆಯ ಆಡಳಿತ ಸೌಧವಾದ 'ವಿಧಾನಸೌಧ' ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ರಾಮನಗರ ತಾಲ್ಲೂಕಿನ ಕೆಂಗಲ್‌ ಗ್ರಾಮದವರಾದ ಹನುಮಂತಯ್ಯ ಅವರು, ಅಂದಿನ ಮೈಸೂರು ರಾಜ್ಯದಲ್ಲಿ 1952 ಮತ್ತು 1957ರ ಚುನಾವಣೆಗಳಲ್ಲಿ ರಾಮನಗರ ಕ್ಷೇತ್ರದಿಂದಲೇ ಆಯ್ಕೆಯಾಗಿದ್ದರು. 1952ರ ಮೊದಲ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಹನುಮಂತಯ್ಯ ಅವರು 4 ವರ್ಷ 5 ತಿಂಗಳ ಕಾಲ ಆಡಳಿತ ನಡೆಸಿ ಭದ್ರ ಬುನಾದಿ ಹಾಕಿದ್ದರು.

ರಾಮಕೃಷ್ಣ ಹೆಗಡೆ (ಜನತಾ ಪಕ್ಷ)

ರಾಜ್ಯದಲ್ಲಿ 1983ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಾಗ ಜನತಾ ಪಕ್ಷದಿಂದ ರಾಮಕೃಷ್ಣ ಹೆಗಡೆ ಅವರಿಗೆ ಮುಖ್ಯಮಂತ್ರಿಯಾಗುವ ಯೋಗ ಒದಗಿಬಂತು. ಆ ಸಮಯದಲ್ಲಿ ಅವರು ಯಾವುದೇ ಸದನದ ಸದಸ್ಯರಾಗಿರಲಿಲ್ಲ. ಆಗ ಕನಕಪುರ ಕ್ಷೇತ್ರದಿಂದ ಜನತಾ ಪರಿವಾರದ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಗೆದ್ದಿದ್ದ ಪಿ.ಜಿ.ಆರ್. ಸಿಂಧ್ಯ ಅವರು ಹೆಗಡೆ ಅವರಿಗಾಗಿ ತಮ್ಮ ಸ್ಥಾನವನ್ನು ತ್ಯಾಗ ಮಾಡಿದರು. ಆ ವರ್ಷ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಹೆಗಡೆ ಅವರು ಒಂದು ವರ್ಷದ ಕಾಲ ಆಡಳಿತ ನಡೆಸಿದರು.

ಎಚ್.ಡಿ. ದೇವೇಗೌಡ (ಜನತಾ ದಳ)

1994ರ ಐತಿಹಾಸಿಕ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡ ಅವರು ಮೊದಲ ಬಾರಿಗೆ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಚಂಡ ಗೆಲುವು ಸಾಧಿಸಿದರು. ರಾಜ್ಯದಲ್ಲಿ ಜನತಾ ದಳ 115 ಸ್ಥಾನಗಳ ಸ್ಪಷ್ಟ ಬಹುಮತ ಪಡೆದಾಗ ದೇವೇಗೌಡರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿತು.

17 ತಿಂಗಳುಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸಿದ ಅವರು, ಬದಲಾದ ರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶದ ಅತ್ಯುನ್ನತ 'ಪ್ರಧಾನಮಂತ್ರಿ' ಹುದ್ದೆಗೇರಿ ಇಡೀ ದೇಶವೇ ರಾಮನಗರದತ್ತ ತಿರುಗಿ ನೋಡುವಂತೆ ಮಾಡಿದರು.

ಎಚ್.ಡಿ. ಕುಮಾರಸ್ವಾಮಿ (ಜೆಡಿಎಸ್)

ರಾಮನಗರ ಜಿಲ್ಲೆಯಿಂದ ಎರಡು ಬಾರಿ ಮುಖ್ಯಮಂತ್ರಿ ಹುದ್ದೆಗೇರಿದ ಅಪರೂಪದ ಹಿರಿಮೆ ಎಚ್.ಡಿ. ಕುಮಾರಸ್ವಾಮಿ ಅವರದ್ದು. ತಮ್ಮ ತಂದೆಯ ಅದೃಷ್ಟದ ಕ್ಷೇತ್ರವಾದ ರಾಮನಗರದಿಂದಲೇ 2004ರಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾದರು. ತದನಂತರ 12ನೇ ವಿಧಾನಸಭೆಯಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ 20 ತಿಂಗಳು ಮುಖ್ಯಮಂತ್ರಿಯಾಗಿ ಜನಪ್ರಿಯ ಆಡಳಿತ ನೀಡಿದರು. ಬಳಿಕ 2018ರ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಗೆದ್ದು, ಚನ್ನಪಟ್ಟಣ ಉಳಿಸಿಕೊಂಡರು.

ಅಂದು ಸೃಷ್ಟಿಯಾದ ಅತಂತ್ರ ಪರಿಸ್ಥಿತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ 14 ತಿಂಗಳು ಅಧಿಕಾರ ನಡೆಸಿದ್ದರು.

5ನೇ ನಾಯಕನಾಗಿ ಡಿಕೆಶಿ ಇತಿಹಾಸ

ರಾಮನಗರ ಜಿಲ್ಲೆಯು ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ಕುಮಾರಸ್ವಾಮಿ ಅವರವರೆಗೆ ಸಾಲು ಸಾಲು ಮುಖ್ಯಮಂತ್ರಿಗಳನ್ನು ಕಂಡಿದೆ. ಇದೀಗ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೇ ಹೆಸರಾದ ಡಿ.ಕೆ. ಶಿವಕುಮಾರ್ ಸಿಎಂ ಗಾದಿಗೇರುತ್ತಿರುವುದು ಜಿಲ್ಲೆಯ ರಾಜಕೀಯ ಪ್ರಾಬಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಸಿದ್ದರಾಮಯ್ಯ ಅವರ ರಾಜೀನಾಮೆ ಬೆನ್ನಲ್ಲೇ ಹೊಸ ಸರ್ಕಾರ ರಚನೆಯ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ರಾಮನಗರದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಡಿಕೆಶಿ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಲು ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡುವುದು ಈಗಾಗಲೇ ನಿಶ್ಚಿತವಾಗಿದೆ ಎನ್ನಲಾಗಿದೆ.

Read More
Next Story