MLA Iqbal Hussain suffers heart attack; will undergo open heart surgery soon
x

ಸಿಎಂ ಡಿ.ಕೆ. ಶಿವಕುಮಾರ್‌ ಆಸ್ಪತ್ರೆಗೆ ತೆರಳಿ ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ಅವರ ಆರೋಗ್ಯ ವಿಚಾರಿಸಿದರು. 

ಶಾಸಕ ಇಕ್ಬಾಲ್ ಹುಸೇನ್‌ಗೆ ಹೃದಯಾಘಾತ; ಶೀಘ್ರದಲ್ಲೇ ಓಪನ್ ಹಾರ್ಟ್ ಸರ್ಜರಿ

ಇಕ್ಬಾಲ್ ಹುಸೇನ್‌ಗೆ ಎದೆನೋವು ಕಾಣಿಸಿಕೊಂಡಿತ್ತು, ಈಗ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಯಾರೂ ಗಾಬರಿಪಡುವ ಅಗತ್ಯವಿಲ್ಲ. ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.


Click the Play button to hear this message in audio format

ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಪ್ತ ಎಚ್.ಎ. ಇಕ್ಬಾಲ್ ಹುಸೇನ್ ಅವರಿಗೆ ಲಘು ಹೃದಯಾಘಾತ ಸಂಭವಿಸಿದೆ. ಬೆಂಗಳೂರಿನ ತಮ್ಮ ನಿವಾಸದಲ್ಲಿದ್ದಾಗ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ವೈಟ್‌ಫೀಲ್ಡ್‌ನ ವೈದೇಹಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಹೃದಯದಲ್ಲಿ 3 ಬ್ಲಾಕ್‌ಗಳು ಪತ್ತೆ

ಶಾಸಕರಿಗೆ ಚಿಕಿತ್ಸೆ ನೀಡುತ್ತಿರುವ ಹಿರಿಯ ಹೃದ್ರೋಗ ತಜ್ಞ ಡಾ. ವಿ.ಕೆ. ಶ್ರೀನಿವಾಸ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, "ಶಾಸಕ ಇಕ್ಬಾಲ್ ಹುಸೇನ್‌ಗೆ ಮಧುಮೇಹ ಸಮಸ್ಯೆಯೂ ಇದೆ. ಎದೆನೋವು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ತರಲಾಗಿದ್ದು, ಆಂಜಿಯೋಗ್ರಾಮ್ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಅವರ ಹೃದಯದ ರಕ್ತನಾಳಗಳಲ್ಲಿ ಮೂರು ಪ್ರಮುಖ ಬ್ಲಾಕ್‌ಗಳು ಇರುವುದು ಪತ್ತೆಯಾಗಿದೆ. ಸದ್ಯ ತುರ್ತು ಚಿಕಿತ್ಸೆಯಾಗಿ ಸ್ಟಂಟ್ ಅಳವಡಿಸಲಾಗಿದ್ದು, ಮುಂದಿನ ಎರಡು-ಮೂರು ದಿನಗಳಲ್ಲಿ ಅವರಿಗೆ ಓಪನ್ ಹಾರ್ಟ್ ಸರ್ಜರಿ ಮಾಡಲಾಗುವುದು. ಶಾಸಕರ ಕುಟುಂಬಸ್ಥರು ಕೂಡ ಸರ್ಜರಿಗೆ ಒಪ್ಪಿಗೆ ನೀಡಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.

ಆಸ್ಪತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ

ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಅವರ ಆರೋಗ್ಯ ವಿಚಾರಿಸಿದರು. ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಹಾಗೂ ಕುಣಿಗಲ್ ಶಾಸಕ ಡಾ. ಎಚ್.ಡಿ. ರಂಗನಾಥ್ ಕೂಡ ಈ ಸಂದರ್ಭದಲ್ಲಿ ಸಿಎಂ ಅವರೊಂದಿಗಿದ್ದರು. ವೈದ್ಯರೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, "ಇಕ್ಬಾಲ್ ಹುಸೇನ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು, ಈಗ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಯಾರೂ ಗಾಬರಿಪಡುವ ಅಗತ್ಯವಿಲ್ಲ. ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ" ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ರಾಜಕೀಯ ಹಿನ್ನೆಲೆ

ಶಾಸಕ ಇಕ್ಬಾಲ್ ಹುಸೇನ್ ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡವರು. ಕಳೆದ ಹಲವು ತಿಂಗಳುಗಳಿಂದ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳ ನಡುವೆಯೂ "ಡಿ.ಕೆ. ಶಿವಕುಮಾರ್ ಅವರೇ ಮುಂದಿನ ಸಿಎಂ" ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಾ ಸುದ್ದಿಯಲ್ಲಿದ್ದರು. ಸದ್ಯ ಅವರ ಆರೋಗ್ಯ ಏರುಪೇರಾಗಿರುವ ಕಾರಣ ರಾಮನಗರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದ್ದು, ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತಿದ್ದಾರೆ.

Read More
Next Story