ಸುರ್ಜೇವಾಲ ಮಧ್ಯಸ್ಥಿಕೆ ಯಶಸ್ವಿ: ಸಚಿವರಾಗಿಮುಂದುವರಿಯಲು ರಾಮಲಿಂಗಾರೆಡ್ಡಿ ಸಮ್ಮತಿ
x

ಸುರ್ಜೇವಾಲ ಮಧ್ಯಸ್ಥಿಕೆ ಯಶಸ್ವಿ: ಸಚಿವರಾಗಿಮುಂದುವರಿಯಲು ರಾಮಲಿಂಗಾರೆಡ್ಡಿ ಸಮ್ಮತಿ

ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ವಾಪಸ್ ಪಡೆಯಲು ಒಪ್ಪಿದ್ದೇಕೆ? ಎನ್ನುವುದು ಕುತೂಹಲ ಮೂಡಿದ್ದು, ಕಳೆದ 48 ಗಂಟೆಗಳಿಂದ ರಾಜ್ಯ ರಾಜಕೀಯದಲ್ಲಿನ ಅನಿಶ್ಚಿತತೆಗೆ ತೆರೆಬಿದ್ದಂತಾಗಿದೆ.


Click the Play button to hear this message in audio format

ಕಾಂಗ್ರೆಸ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡಿದ್ದ ಸಚಿವ ರಾಮಲಿಂಗಾರೆಡ್ಡಿ ತಮ್ಮ ನಿಲುವನ್ನು ಬದಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಯತ್ನಗಳಿಗೆ ಕರಗದ ರಾಮಲಿಂಗಾ ರೆಡ್ಡಿ ಅವರು, ಅಂತಿಮವಾಗಿ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಧ್ಯಸ್ಥಿಕೆಯಲ್ಲಿ ರಾಜೀನಾಮೆ ಹಿಂಪಡೆಯಲು ಮುಂದಾಗಿದ್ದಾರೆ.

ರಾಮಲಿಂಗಾರೆಡ್ಡಿ ಅವರೊಂದಿಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಒಂದೂವರೆ ಗಂಟೆಗೂ ಅಧಿಕ ಕಾಲ ನಡೆಸಿದ ಸಂಧಾನ ಯಶಸ್ವಿಯಾಗಿದೆ. ಹಿರಿಯ ನಾಯಕನ ರಾಜಕೀಯ ಘನತೆ ಮತ್ತು ಪಕ್ಷದ ಹಿತದೃಷ್ಟಿಯನ್ನು ಮನವರಿಕೆ ಮಾಡುವಲ್ಲಿ ಸುರ್ಜೇವಾಲ ಯಶಸ್ವಿಯಾದರು. ಮುಖ್ಯಮಂತ್ರಿಗಳು ರಾಜೀನಾಮೆಯನ್ನು ಅಂಗೀಕರಿಸಿಲ್ಲ ಎಂದರೆ, ಅದನ್ನು ರಿಜೆಕ್ಟ್‌ ಮಾಡಿದಂತೆ. ಎಲ್ಲಾ ಗೊಂದಲಗಳು ಬಗೆಹರಿದಿವೆ ಎಂದು ಹೇಳಿದರು. ಈ ಮೂಲಕ ಡಿ.ಕೆ.ಶಿವಕುಮಾರ್‌ ಸರ್ಕಾರಕ್ಕೆ ಎದುರಾಗಿದ್ದ ಮೊದಲ ಸಮಸ್ಯೆ ನಿವಾರಣೆಯಾದಂತಾಗಿದೆ. ಈ ನಡುವೆ, ದೀರ್ಘ ಸಭೆಯ ಬಳಿಕ ಸುರ್ಜೇವಾಲ ಮಾತನಾಡಿ, ರಾಮಲಿಂಗಾರೆಡ್ಡಿ ಅವರು ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ. ಅವರು ಸಚಿವ ಸಂಪುಟದಲ್ಲಿ ಮುಂದುವರಿಯಲಿದ್ದಾರೆ ಮತ್ತು ಎಂದಿನಂತೆ ತಮ್ಮ ಸಚಿವಾಲಯದ ಕೆಲಸ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ ಎಂದು ಘೋಷಿಸಿದರು. ಈ ಮೂಲಕ ಕಳೆದ 48 ಗಂಟೆಗಳಿಂದ ರಾಜ್ಯ ರಾಜಕೀಯದಲ್ಲಿನ ಅನಿಶ್ಚಿತತೆಗೆ ತೆರೆಬಿದ್ದಂತಾಗಿದೆ.

ಸಂಧಾನದ ಹಿಂದಿನ 'ಅಲಿಖಿತ' ಒಪ್ಪಂದ?

ರಾಮಲಿಂಗಾರೆಡ್ಡಿ ಅವರು ಕೇವಲ ರಾಜೀನಾಮೆ ವಾಪಸ್ ಪಡೆಯಲು ಒಪ್ಪಿದ್ದೇಕೆ? ಎನ್ನುವುದು ಈಗಿನ ಕುತೂಹಲ. ಮೂಲಗಳ ಪ್ರಕಾರ, ರೆಡ್ಡಿ ಅವರಿಗೆ ಜಲಸಂಪನ್ಮೂಲ ಅಥವಾ ಸಣ್ಣ ನೀರಾವರಿ ಇಲಾಖೆಯ ಹೆಚ್ಚುವರಿ ಜವಾಬ್ದಾರಿಯನ್ನು ನೀಡುವ ಭರವಸೆಯನ್ನು ಹೈಕಮಾಂಡ್ ನೀಡಿದೆ ಎನ್ನಲಾಗಿದೆ. ಆದರೆ, ಸುರ್ಜೇವಾಲ ಅವರು ಈ ಬಗ್ಗೆ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಖಾತೆ ಬದಲಾವಣೆಯ ಗೊಂದಲಗಳನ್ನು ಬಗೆಹರಿಸುವ ಭರವಸೆಯ ಮೇಲೆ ರೆಡ್ಡಿ ಮನವೊಲಿಕೆಗೆ ಒಳಗಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ರಾಮಲಿಂಗಾರೆಡ್ಡಿ ಅವರ ರಾಜಕೀಯ ಪಯಣವು ಪಕ್ಷಕ್ಕೆ ಎಷ್ಟು ಮುಖ್ಯ ಎಂಬುದನ್ನು ಸುರ್ಜೇವಾಲ ಹೇಳಿದ್ದಾರೆ. ಎನ್‌ಎಸ್‌ಯುಐ ಕಾಲದ ಹೋರಾಟಗಳು, ಸತತ 8 ಬಾರಿ ಶಾಸಕರಾಗಿ ಆಯ್ಕೆಯಾದ ದಾಖಲೆ ಮತ್ತು ಅವರ ಸುದೀರ್ಘ ಆಡಳಿತಾತ್ಮಕ ಅನುಭವವು ಪಕ್ಷಕ್ಕೆ ದೊಡ್ಡ ಆಸ್ತಿ ಎಂದು ಹೇಳಿದರು.

ರಾಮಲಿಂಗಾರೆಡ್ಡಿ ತಮ್ಮ ರಾಜೀನಾಮೆ ವಾಪಸ್ ಪಡೆದುಕೊಂಡಿದ್ದಾರೆ. ಅವರು ಸಚಿವ ಸಂಪುಟದಲ್ಲಿ ಮುಂದುವರಿಯಲಿದ್ದಾರೆ. ರಾಮಲಿಂಗಾರೆಡ್ಡಿ ಪಕ್ಷದ ಹಿರಿಯ ನಾಯಕರು. ಹಲವು ಸಲ ಸಚಿವರಾಗಿ ಕೆಲಸ ಮಾಡಿದ್ದಾರೆ. ಸಿಎಂ ಡಿಕೆ ಶಿವಕುಮಾರ್​, ಕೆಪಿಸಿಸಿ ಅಧ್ಯಕ್ಷರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರು ಕಾಂಗ್ರೆಸ್​​ ಆಸ್ತಿ. ಅವರು ರಾಜೀನಾಮೆ ನೀಡಿದ ಬಳಿಕ ನಾವು ಮಾತಾಡಿದ್ದೇವೆ. ಸ್ವಲ್ಪ ತಪ್ಪು ತಿಳುವಳಿಕೆ ಆಗಿತ್ತು. ಇದೀಗ ರಾಜೀನಾಮೆ ವಾಪಸ್ ಪಡೆದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

Read More
Next Story