ಬಿಟಿಎಂ ಲೇಔಟ್ ವ್ಯಾಪ್ತಿಯ ಮೂರು ಮೆಟ್ರೋ ನಿಲ್ದಾಣಗಳ ಮರುನಾಮಕರಣಕ್ಕೆ ಸಚಿವ ರಾಮಲಿಂಗಾರೆಡ್ಡಿ ಪ್ರಸ್ತಾವನೆ
x

ಸಚಿವ ರಾಮಲಿಂಗಾರೆಡ್ಡಿ ಅವರು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಪತ್ರ ಬರೆದಿದ್ದಾರೆ. 

ಬಿಟಿಎಂ ಲೇಔಟ್ ವ್ಯಾಪ್ತಿಯ ಮೂರು ಮೆಟ್ರೋ ನಿಲ್ದಾಣಗಳ ಮರುನಾಮಕರಣಕ್ಕೆ ಸಚಿವ ರಾಮಲಿಂಗಾರೆಡ್ಡಿ ಪ್ರಸ್ತಾವನೆ

ಪ್ರಸ್ತುತ ಕೆಲವು ಮೆಟ್ರೋ ನಿಲ್ದಾಣಗಳ ಹೆಸರುಗಳು ನಿಲ್ದಾಣವಿರುವ ನಿಖರವಾದ ಸ್ಥಳ ಅಥವಾ ಆ ಭಾಗದ ಜನರಿಗೆ ಹೆಚ್ಚು ಪರಿಚಿತವಿರುವ ಹೆಸರನ್ನು ಪ್ರತಿನಿಧಿಸುತ್ತಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.


Click the Play button to hear this message in audio format

ಬೆಂಗಳೂರಿನ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೂರು ಪ್ರಮುಖ ಮೆಟ್ರೋ ನಿಲ್ದಾಣಗಳ ಹೆಸರನ್ನು ಬದಲಾಯಿಸುವಂತೆ ಕೋರಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಪತ್ರ ಬರೆದಿದ್ದಾರೆ. ಸಾರ್ವಜನಿಕರ ಗೊಂದಲ ನಿವಾರಣೆ ಹಾಗೂ ಸ್ಥಳೀಯ ಇತಿಹಾಸವನ್ನು ಬಿಂಬಿಸುವ ನಿಟ್ಟಿನಲ್ಲಿ ಈ ಮರುನಾಮಕರಣ ಅಗತ್ಯವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಯಾವೆಲ್ಲಾ ನಿಲ್ದಾಣಗಳ ಹೆಸರು ಬದಲಾವಣೆಗೆ ಸೂಚನೆ?

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೆಪ್ಟೆಂಬರ್ 11ರಂದು ಬರೆದಿರುವ ಅಧಿಕೃತ ಪತ್ರದಲ್ಲಿ, ಪ್ರಸ್ತುತ ಇರುವ ಮೂರು ನಿಲ್ದಾಣಗಳ ಹೆಸರುಗಳನ್ನು ಬದಲಿಸುವಂತೆ ಸೂಚಿಸಲಾಗಿದೆ. ಅದರಂತೆ, 'ಜೆ.ಪಿ ನಗರ ೪ನೇ ಹಂತದ ಮೆಟ್ರೋ ನಿಲ್ದಾಣ'ವನ್ನು 'ಎನ್.ಎಸ್ ಪಾಳ್ಯ ಮೆಟ್ರೋ ನಿಲ್ದಾಣ' ಎಂದು, 'ತಾವರೆಕೆರೆ ಮೆಟ್ರೋ ನಿಲ್ದಾಣ'ವನ್ನು 'ಎಸ್.ಜಿ ಪಾಳ್ಯ ಮೆಟ್ರೋ ನಿಲ್ದಾಣ' ಎಂದು ಹಾಗೂ 'ಡೈರಿ ವೃತ್ತ ಮೆಟ್ರೋ ನಿಲ್ದಾಣ'ವನ್ನು 'ಲಕ್ಕಸಂದ್ರ ಮೆಟ್ರೋ ನಿಲ್ದಾಣ' ಎಂದು ಮರುನಾಮಕರಣ ಮಾಡಲು ಪ್ರಸ್ತಾಪಿಸಲಾಗಿದೆ.

ಮರುನಾಮಕರಣಕ್ಕೆ ಪ್ರಮುಖ ಕಾರಣಗಳೇನು?

ಪ್ರಸ್ತುತ ಕೆಲವು ಮೆಟ್ರೋ ನಿಲ್ದಾಣಗಳ ಹೆಸರುಗಳು ನಿಲ್ದಾಣವಿರುವ ನಿಖರವಾದ ಸ್ಥಳ ಅಥವಾ ಆ ಭಾಗದ ಜನರಿಗೆ ಹೆಚ್ಚು ಪರಿಚಿತವಿರುವ ಹೆಸರನ್ನು ಪ್ರತಿನಿಧಿಸುತ್ತಿಲ್ಲ. ಇದರಿಂದಾಗಿ ನಿಲ್ದಾಣವನ್ನು ಗುರುತಿಸುವಲ್ಲಿ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಗೊಂದಲ ಉಂಟಾಗುವ ಸಾಧ್ಯತೆಯಿದೆ ಎಂಬುದನ್ನು ಸಚಿವರು ಬೊಟ್ಟು ಮಾಡಿದ್ದಾರೆ. ನಿಲ್ದಾಣಗಳಿಗೆ ಹೆಸರಿಡುವಾಗ ಆಯಾ ಪ್ರದೇಶದ ಪ್ರಚಲಿತ ಹೆಸರು, ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಪರಿಗಣಿಸುವುದು ಸೂಕ್ತ. ಸ್ಥಳೀಯವಾಗಿ ಸಾರ್ವಜನಿಕರಿಗೆ ಹೆಚ್ಚು ಪರಿಚಿತವಾಗಿರುವ ಹೆಸರನ್ನು ಇಡುವುದರಿಂದ ಪ್ರಯಾಣಿಕರಿಗೆ ನಿಲ್ದಾಣವನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಸಲಹೆ

ಈ ಮೆಟ್ರೋ ನಿಲ್ದಾಣಗಳು ಪ್ರಸ್ತುತ ಕಾರ್ಯಾಚರಣೆ ಹಾಗೂ ನಿರ್ಮಾಣ ಹಂತದಲ್ಲಿವೆ. ಹೀಗಾಗಿ, ಸೂಚಿತ ಹೆಸರುಗಳನ್ನು ಅಂತಿಮಗೊಳಿಸುವ ಮುನ್ನ ಸ್ಥಳೀಯ ನಿವಾಸಿಗಳು, ಮುಖಂಡರು ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ಪಡೆದುಕೊಳ್ಳಬೇಕು. ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ, ಸ್ಥಳೀಯ ಜನತೆಗೆ ಒಪ್ಪಿಗೆಯಾಗುವಂತೆ ಪರಿಶೀಲನೆ ನಡೆಸಿ ಮರುನಾಮಕರಣದ ಕುರಿತು ಮುಂದಿನ ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ನಿರ್ದೇಶನ ನೀಡಿದ್ದಾರೆ.

Read More
Next Story