ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ವನ್ಯಜೀವಿಗಳು ಬಲಿ : ವಾರದಲ್ಲಿ ವರದಿಗೆ ಸಚಿವರ ಸೂಚನೆ
x

ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ವನ್ಯಜೀವಿಗಳು ಬಲಿ : ವಾರದಲ್ಲಿ ವರದಿಗೆ ಸಚಿವರ ಸೂಚನೆ

ವನ್ಯಜೀವಿಗಳ ಸಾವು ಸಂಬಂಧ ಸಮಗ್ರ ತನಿಖೆ ನಡೆಸಿ, ಒಂದು ವಾರದೊಳಗೆ ವಿವರವಾದ ವರದಿ ಸಲ್ಲಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸಚಿವ ರಾಮಲಿಂಗಾರೆಡ್ಡಿ ನಿರ್ದೇಶನ ನೀಡಿದ್ದಾರೆ.


Click the Play button to hear this message in audio format

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಹುಲಿ ಉರುಳಿಗೆ ಸಿಲುಕಿ ಮೃತಪಟ್ಟಿರುವುದು ಹಾಗೂ ಕರಡಿಕಲ್ಲು ಗುಡ್ಡ ಪ್ರದೇಶದಲ್ಲಿ ಕಾಡಾನೆಯ ದಂತ ನಾಪತ್ತೆಯಾಗಿರುವ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ, ಅರಣ್ಯ ಅಧಿಕಾರಿಗಳ ಕರ್ತವ್ಯಲೋಪವನ್ನು ಪರಿಶೀಲಿಸಿ, ಒಂದು ವಾರದೊಳಗೆ ವಿವರವಾದ ವರದಿ ಸಲ್ಲಿಸುವಂತೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ನಿರ್ದೇಶನ ನೀಡಿದ್ದಾರೆ.

ಈ ಕುರಿತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಹುಲಿಯೊಂದು ಉರುಳಿಗೆ ಸಿಲುಕಿ ಮೃತಪಟ್ಟಿರುವುದು ಹಾಗೂ ಕರಡಿಕಲ್ಲು ಗುಡ್ಡ ಪ್ರದೇಶದಲ್ಲಿ ಮೃತಪಟ್ಟ ಕಾಡಾನೆಯ ದಂತ ನಾಪತ್ತೆಯಾಗಿರುವ ಘಟನೆಗಳು ಅತ್ಯಂತ ಗಂಭೀರ ಮತ್ತು ಆತಂಕಕಾರಿ ಸಂಗತಿಗಳಾಗಿವೆ. ಹುಲಿ ಸಂರಕ್ಷಿತ ಪ್ರದೇಶದ ಆಳವಾದ ಅರಣ್ಯ ಭಾಗದಲ್ಲಿಯೇ ಇಂತಹ ಘಟನೆಗಳು ನಡೆದಿರುವುದು ಅರಣ್ಯ ಇಲಾಖೆಯ ಗಸ್ತು ವ್ಯವಸ್ಥೆ, ಮೇಲ್ವಿಚಾರಣೆ ಮತ್ತು ವನ್ಯಜೀವಿಗಳ ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅರಣ್ಯ ಪ್ರದೇಶದೊಳಗೆ ಕಳ್ಳಬೇಟೆಗಾರರು ಪ್ರವೇಶಿಸಿ ಇಂತಹ ಕೃತ್ಯಗಳನ್ನು ಎಸಗಲು ಹೇಗೆ ಸಾಧ್ಯವಾಯಿತು? ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆಯೇ? ಅರಣ್ಯ ಗಸ್ತು ಹಾಗೂ ನಿಗಾ ವ್ಯವಸ್ಥೆಯಲ್ಲಿ ಲೋಪಗಳಿವೆಯೇ? ಇಂತಹ ಘಟನೆಗಳನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೆ? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ದೊರೆಯಬೇಕಾಗಿದೆ. ವನ್ಯಜೀವಿಗಳ ಸಂರಕ್ಷಣೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ. ಅರಣ್ಯ ಪ್ರದೇಶಗಳಲ್ಲಿ ಕಳ್ಳಬೇಟೆ ಮತ್ತು ವನ್ಯಜೀವಿಗಳ ಅಂಗಾಂಗಗಳ ಅಕ್ರಮ ಸಾಗಣೆಯನ್ನು ತಡೆಗಟ್ಟುವುದು ಅರಣ್ಯ ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.


ಘಟನೆಗಳ ಕುರಿತು ಸಮಗ್ರ ತನಿಖೆ

ಹುಲಿ ಉರುಳಿಗೆ ಸಿಲುಕಿ ಮೃತಪಟ್ಟಿರುವುದರ ಹಿಂದಿನ ನೈಜ ಕಾರಣಗಳು, ಉರುಳನ್ನು ಅರಣ್ಯ ಪ್ರದೇಶದಲ್ಲಿ ಅಳವಡಿಸಿದವರು ಯಾರು?. ಕಾಡಾನೆಯ ದಂತಗಳು ಹೇಗೆ ನಾಪತ್ತೆಯಾಗಿವೆ ಹಾಗೂ ಈ ಘಟನೆಗಳಲ್ಲಿ ಕಳ್ಳಬೇಟೆಗಾರರ ಕೈವಾಡವಿದೆಯೇ ಎಂಬುದರ ಕುರಿತು ವೈಜ್ಞಾನಿಕ ಮತ್ತು ಸಾಕ್ಷ್ಯಾಧಾರಿತ ತನಿಖೆ ನಡೆಸಬೇಕು.

ಎರಡೂ ಘಟನೆಗಳ ನಡುವೆ ಯಾವುದೇ ಸಂಬಂಧವಿದೆಯೇ ಎಂಬುದನ್ನೂ ಪರಿಶೀಲಿಸಬೇಕು. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿರುವುದರಿಂದ, ಲಭ್ಯವಿರುವ ಮರಣೋತ್ತರ ಪರೀಕ್ಷೆ, ಪ್ರಯೋಗಾಲಯ ಪರೀಕ್ಷೆ ಹಾಗೂ ಇತರ ಸಂಬಂಧಿತ ವರದಿಗಳನ್ನು ಪಡೆದು ತನಿಖೆಯಲ್ಲಿ ಪರಿಗಣಿಸಬೇಕು. ಘಟನೆ ನಡೆದ ಸ್ಥಳಗಳನ್ನು ಖುದ್ದಾಗಿ ಪರಿಶೀಲಿಸಿ, ಲಭ್ಯವಿರುವ ಭೌತಿಕ ಸಾಕ್ಷ್ಯಗಳು, ಛಾಯಾಚಿತ್ರಗಳು, ಸಿಬ್ಬಂದಿಯ ಹೇಳಿಕೆಗಳು, ಗಸ್ತು ವುಸ್ತಕಗಳು ಹಾಗೂ ಇತರ ಸಂಬಂಧಿತ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ತನಿಖೆಯ ಸಂದರ್ಭದಲ್ಲಿ ಯಾವುದೇ ಸಾಕ್ಷ್ಯ ನಾಶವಾಗದಂತೆ ಹಾಗೂ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಅವಕಾಶವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.

ಅಧಿಕಾರಿ, ಸಿಬ್ಬಂದಿಯ ಕರ್ತವ್ಯ ನಿರ್ವಹಣೆಯಲ್ಲಿನ ಲೋಪಗಳ ಪರಿಶೀಲನೆ

ಸಂಬಂಧಪಟ್ಟ ಅರಣ್ಯ ವಲಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿಗಳು, ಬೀಟ್ ಸಿಬ್ಬಂದಿ ಹಾಗೂ ಮೇಲ್ವಿಚಾರಣಾ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಘಟನೆ ನಡೆದ ಪ್ರದೇಶದಲ್ಲಿ, ಕೊನೆಯ ಬಾರಿ ಗಸ್ತು ನಡೆಸಿದ ದಿನಾಂಕ ಮತ್ತು ಸಮಯ, ಗಸ್ತು ಪುಸ್ತಕಗಳು, ಬೀಟ್ ದಾಖಲೆಗಳು, ಸಿಬ್ಬಂದಿಯ ನಿಯೋಜನೆ, ಅರಣ್ಯ ಪ್ರವೇಶದ ಮೇಲ್ವಿಚಾರಣೆ ಹಾಗೂ ಹಿಂದಿನ ದಿನಗಳಲ್ಲಿ ಅಕ್ರಮ ಚಟುವಟಿಕೆಗಳ ಕುರಿತು ಯಾವುದೇ ಮಾಹಿತಿ ಲಭ್ಯವಿತ್ತೇ ಎಂಬುದನ್ನು ಪರಿಶೀಲಿಸಬೇಕು. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಮೇಲ್ವಿಚಾರಣೆಯ ಕೊರತೆ ಅಥವಾ ಕರ್ತವ್ಯಲೋಪ ಕಂಡುಬಂದಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಯ ಜವಾಬ್ದಾರಿಯನ್ನು ನಿಗದಿಪಡಿಸಿ, ಅನ್ವಯಿಸುವ ನಿಯಮಗಳ ಪ್ರಕಾರ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಡಿಸಿಎಫ್‌ಗಳು ಮತ್ತು ಎಸಿಎಫ್‌ಗಳ ಕ್ಷೇತ್ರ ಪರಿಶೀಲನೆ ಕಡ್ಡಾಯ

ರಾಜ್ಯದ ಎಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಅರಣ್ಯ ವಲಯಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಸ್ಥಳದಲ್ಲಿಯೇ ಅರಣ್ಯ ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಅಧಿಕಾರಿಗಳು ಕಚೇರಿಗಳಲ್ಲಿ ಕುಳಿತು ವರದಿಗಳನ್ನು ಪಡೆಯುವುದಕ್ಕೆ ಮಾತ್ರ ಸೀಮಿತವಾಗದೆ, ಅರಣ್ಯ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಗಸ್ತು ವ್ಯವಸ್ಥೆ, ಸಿಬ್ಬಂದಿಯ ಕರ್ತವ್ಯ ನಿರ್ವಹಣೆ, ವನ್ಯಜೀವಿಗಳ ಸುರಕ್ಷತೆ ಹಾಗೂ ಅಕ್ರಮ ಚಟುವಟಿಕೆಗಳ ನಿಯಂತ್ರಣದ ಕುರಿತು ನೇರವಾಗಿ ಪರಿಶೀಲನೆ ನಡೆಸಬೇಕು. ವಿಶೇಷವಾಗಿ ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ಸೂಕ್ಷ್ಮ ಅರಣ್ಯ ಪ್ರದೇಶಗಳಲ್ಲಿ ಗಸ್ತು ವ್ಯವಸ್ಥೆ ಸಮರ್ಪಕವಾಗಿದೆಯೇ, ಸಿಬ್ಬಂದಿ ನಿಗದಿತ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ ಹಾಗೂ ಕಳ್ಳಬೇಟೆ ಮತ್ತು ಇತರ ಅಕ್ರಮ ಚಟುವಟಿಕೆಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬುದನ್ನು ಖುದ್ದಾಗಿ ಖಚಿ ತಪಡಿಸಿಕೊಳ್ಳಬೇಕು. ಈ ಕ್ಷೇತ್ರ ಪರಿಶೀಲನೆಗಳನ್ನು ಇನ್ನು ಮುಂದೆ ನಿರಂತರವಾಗಿ ಮತ್ತು ನಿಯಮಿತವಾಗಿ ನಡೆಸಬೇಕು. ಪರಿಶೀಲನೆಯ ಸಂದರ್ಭದಲ್ಲಿ ಕಂಡುಬರುವ ಲೋಪಗಳನ್ನು ತಕ್ಷಣ ಸರಿಪಡಿಸಬೇಕು. ಹಿರಿಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಅರಣ್ಯ ಪ್ರದೇಶಗಳ ಮೇಲ್ವಿಚಾರಣೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು. ಕ್ಷೇತ್ರ ಭೇಟಿಗಳ ವಿವರ, ಪರಿಶೀಲನೆಯ ಸಂದರ್ಭದಲ್ಲಿ ಕಂಡುಬಂದ ಅಂಶಗಳು ಹಾಗೂ ಕೈಗೊಂಡ ಕ್ರಮಗಳ ಕುರಿತು ಸೂಕ್ತ ದಾಖಲೆಗಳನ್ನು ನಿರ್ವಹಿಸಬೇಕು ಎಂದಿದ್ದಾರೆ.

ಅರಣ್ಯ ಗಸ್ತು ಮತ್ತು ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದು

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ರಾಜ್ಯದ ಇತರ ಪ್ರಮುಖ ಅರಣ್ಯ ಪ್ರದೇಶಗಳಲ್ಲಿಯೂ ಗಸ್ಸು ಮತ್ತು ಭದ್ರತಾ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸಬೇಕು. ಅಗತ್ಯವಿರುವ ಕಡೆಗಳಲ್ಲಿ ಗಸ್ತು ತಂಡಗಳನ್ನು ಬಲಪಡಿಸುವುದು, ಸಿಬ್ಬಂದಿಯನ್ನು ಸೂಕ್ತವಾಗಿ ನಿಯೋಜಿಸುವುದು, ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರ ನಿಗಾ ವಹಿಸುವುದು ಹಾಗೂ ಹಿರಿಯ ಅಧಿಕಾರಿಗಳಿಂದ ನಿಯಮಿತ ಮೇಲ್ವಿಚಾರಣೆಯನ್ನು ಖಚಿತಪಡಿಸಬೇಕು. ಕಳ್ಳಬೇಟೆ, ಉರುಳುಗಳ ಅಳವಡಿಕೆ, ವನ್ಯಜೀವಿಗಳ ಅಂಗಾಂಗಗಳ ಅಕ್ರಮ ಸಾಗಣೆ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿರುವ ಕಡೆಗಳಲ್ಲಿ ತಾಂತ್ರಿಕ ನಿಗಾ ವ್ಯವಸ್ಥೆ ಮತ್ತು ಸ್ಥಳೀಯ ಮಾಹಿತಿ ಸಂಗ್ರಹ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಹೇಳಿದ್ದಾರೆ.

ತನಿಖೆಯ ಪ್ರಗತಿ, ಘಟನೆಗಳ ಸಂಭವನೀಯ ಕಾರಣಗಳು, ಸಂಗ್ರಹಿಸಿದ ಸಾಕ್ಷಗಳು ಕಳ್ಳಬೇಟೆಗಾರರ ಕೈವಾಡದ ಕುರಿತು ಲಭ್ಯವಿರುವ ಮಾಹಿತಿ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯ ನಿರ್ವಹಣೆ, ಪತ್ತೆಯಾದ ಲೋಪಗಳು ಹಾಗೂ ಕೈಗೊಂಡ ಮತ್ತು ಪ್ರಸ್ತಾಪಿತ ಕ್ರಮಗಳ ಕುರಿತು ಒಂದು ವಾರದೊಳಗೆ ಸಮಗ್ರ ಹಾಗೂ ವಿವರವಾದ ವರದಿಯನ್ನು ಸಲ್ಲಿಸಬೇಕು. ಅಲ್ಲದೆ, ರಾಜ್ಯದ ಎಲ್ಲಾ ಡಿಸಿಎಫ್‌ಗಳು ಮತ್ತು ಎಸಿಎಫ್‌ಗಳು ತಮ್ಮ ವ್ಯಾಪ್ತಿಯಲ್ಲಿ ನಡೆಸಿದ ಕ್ಷೇತ್ರ ಪರಿಶೀಲನೆಗಳು ಹಾಗೂ ಅರಣ್ಯ ಭದ್ರತೆಯನ್ನು ಬಲಪಡಿಸಲು ಕೈಗೊಂಡ ಕ್ರಮಗಳ ವಿವರಗಳನ್ನೂ ವರದಿಯಲ್ಲಿ ಸೇರಿಸಬೇಕು. ವನ್ಯಜೀವಿಗಳ ರಕ್ಷಣೆ ಮತ್ತು ಅರಣ್ಯ ಸಂಪತ್ತಿನ ಸಂರಕ್ಷಣೆ ಅರಣ್ಯ ಇಲಾಖೆಯ ಅತ್ಯಂತ ಪ್ರಮುಖ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

Read More
Next Story