
ಹನೂರು ಪ್ರಕರಣ: ಬಿಜೆಪಿ ಅವಧಿಯಲ್ಲೇ 4 ಶೂಟೌಟ್- ರಾಮಲಿಂಗಾ ರೆಡ್ಡಿ ತಿರುಗೇಟು
2011ರಿಂದ 2026ರ ಅವಧಿಯಲ್ಲಿ ಚಾಮರಾಜನಗರ ಅರಣ್ಯ ವಿಭಾಗ ಒಂದರಲ್ಲೇ 300ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 66 ಬಾರಿ ಗುಂಡಿನ ಚಕಮಕಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಬಳಿ ಇತ್ತೀಚೆಗೆ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ನಾಯಕರಿಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬನ್ನೇರುಘಟ್ಟ ಹಾಗೂ ಪಾಲಾರ್ ಭಾಗಗಳಲ್ಲಿ 4 ಶೂಟೌಟ್ ಪ್ರಕರಣಗಳು ನಡೆದು, ಮೂವರು ಮೃತಪಟ್ಟಿದ್ದರು. ಹಾಗಾಗಿ, ಈ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಸಚಿವರು ಹೇಳಿದ್ದಾರೆ.
300ಕ್ಕೂ ಹೆಚ್ಚು ಪ್ರಕರಣಗಳು ದಾಖಲು
2011ರಿಂದ 2026ರ ಅವಧಿಯಲ್ಲಿ ಚಾಮರಾಜನಗರ ಅರಣ್ಯ ವಿಭಾಗ ಒಂದರಲ್ಲೇ 300ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 66 ಬಾರಿ ಗುಂಡಿನ ಚಕಮಕಿ ನಡೆದಿದೆ.
ಪ್ರಸ್ತುತ, ಕಳ್ಳಬೇಟೆ ನಿಗ್ರಹ ಶಿಬಿರಗಳ ಮೇಲೆ ದಾಳಿ ನಡೆಸಿ ಮನೆಗಳಿಗೆ ಹಾನಿ ಮಾಡಿದವರನ್ನು ಪೊಲೀಸರು ಗುರುತಿಸಿದ್ದಾರೆ. ಅವರೆಲ್ಲರೂ ಹಳೆಯ ಪ್ರಕರಣಗಳಲ್ಲಿ ಭಾಗಿಯಾದವರು. ಆದಾಗ್ಯೂ, ತನಿಖಾ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಇಲಾಖೆ ಅಧಿಕಾರಿಗಳ ಲೋಪ ಕಂಡುಬಂದರೆ ಅವರ ವಿರುದ್ಧವೂ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಸದ್ಯ ಕಲಾಪ ನಡೆಯುತ್ತಿರುವುದರಿಂದ ಶೂಟೌಟ್ ಪ್ರಕರಣ ಕುರಿತಂತೆ ಹೆಚ್ಚು ಮಾತನಾಡುವುದಿಲ್ಲ. ಘಟನೆ ಸಂಬಂಧ ಸೋಮವಾರ-ಮಂಗಳವಾರ ವಿಧಾನಮಂಡಲದ ಉಭಯ ಸದನಗಳಲ್ಲಿ ವಿಸ್ತೃತವಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಅಕ್ರಮ ಬಂದೂಕು ಜಪ್ತಿಗೆ ಸೂಚನೆ
ಅರಣ್ಯ ಪ್ರದೇಶದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಲವರು ಪರವಾನಗಿ ಇಲ್ಲದೆ ನಾಡಬಂದೂಕುಗಳನ್ನು ಬಳಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. "ಲೈಸೆನ್ಸ್ ಇಲ್ಲದೆ ಬಂದೂಕು ಇಟ್ಟುಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು. ವನ್ಯಜೀವಿಗಳ ರಕ್ಷಣೆ ಹಾಗೂ ಅರಣ್ಯ ಪರಿಸರ ಕಾಪಾಡುವುದು ಎಷ್ಟು ಮುಖ್ಯವೋ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ." ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಆರೋಪಗಳ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಸಚಿವರು ವಿರೋಧ ಪಕ್ಷಗಳಿಗೆ ಸಲಹೆ ನೀಡಿದ್ದಾರೆ.

