
ಸಂಸ್ಥೆಗಳ ನಿರ್ಮಾತೃ, ತಲೆಮಾರುಗಳನ್ನು ಬದಲಿಸಿದ ನಾಯಕ: ರಾಮಕೃಷ್ಣ ಹೆಗಡೆ ನೆನೆದ ಉಪರಾಷ್ಟ್ರಪತಿ
ಉತ್ತರ ಕನ್ನಡ ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ರಾಮಕೃಷ್ಣ ಹೆಗಡೆ ಅವರ ಹೆಸರಿಡಲಾಗುವುದು. ಅಲ್ಲದೇ, ಪ್ರತಿ ವರ್ಷ ‘ರಾಮಕೃಷ್ಣ ಹೆಗಡೆ ಶ್ರೇಷ್ಠ ಪಂಚಾಯಿತಿ ಪ್ರಶಸ್ತಿ’ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.
ರಾಜ್ಯದ ರಾಜಕೀಯ ಇತಿಹಾಸದಲ್ಲಿ ಸುಧಾರಣಾ ಯುಗವನ್ನು ನಾಂದಿ ಹಾಡಿದ ಮಹಾನ್ ರಾಜನೀತಿಜ್ಞ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ 100ನೇ ಜನ್ಮದಿನದ ಸಂಭ್ರಮವು ಬೆಂಗಳೂರಿನ ವಿಧಾನಸೌಧದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಜರುಗಿತು.
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು, ಹೆಗಡೆ ಅವರನ್ನು ‘ಸಂಸ್ಥೆಗಳ ನಿರ್ಮಾತೃ’ ಮತ್ತು ‘ರಾಷ್ಟ್ರ ಪ್ರೇಮಿ’ ಎಂದು ಬಣ್ಣಿಸಿ ಗೌರವ ನಮನ ಸಲ್ಲಿಸಿದರು. ಸಮಾರಂಭದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, "ಮಹಾನ್ ನಾಯಕರು ಒಂದು ಕ್ಷಣವನ್ನು ಮಾತ್ರ ಬದಲಾಯಿಸಬಲ್ಲರು, ಆದರೆ ಹೆಗಡೆ ಅವರಂತಹ ಸಂಸ್ಥೆಗಳನ್ನು ಕಟ್ಟುವ ನಿರ್ಮಾತೃಗಳು ತಲೆಮಾರುಗಳನ್ನೇ ಬದಲಾಯಿಸುತ್ತಾರೆ ಎಂದು ಶ್ಲಾಘಿಸಿದರು. ಹೆಗಡೆ ಅವರ ನಾಯಕತ್ವದಲ್ಲಿ ಕರ್ನಾಟಕವು ಆಡಳಿತದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿ ಹೊರಹೊಮ್ಮಿತ್ತು ಎಂದು ಸ್ಮರಿಸಿದರು.
ವಿಕೇಂದ್ರೀಕರಣದ ಹರಿಕಾರ
ರಾಮಕೃಷ್ಣ ಹೆಗಡೆ ಅವರು ಆಡಳಿತವನ್ನು ಜನಸಾಮಾನ್ಯರಿಗೆ ಹತ್ತಿರವಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಉಪರಾಷ್ಟ್ರಪತಿ ಬಣ್ಣಿಸಿದರು. 1985ರ 'ಕರ್ನಾಟಕ ಜಿಲ್ಲಾ ಪರಿಷತ್, ತಾಲೂಕು ಪಂಚಾಯಿತಿ ಸಮಿತಿ, ಮಂಡಲ ಪಂಚಾಯಿತಿ ಮತ್ತು ನ್ಯಾಯ ಪಂಚಾಯಿತಿ ಕಾಯ್ದೆ'ಯನ್ನು ಜಾರಿಗೆ ತರುವ ಮೂಲಕ ಅಧಿಕಾರವನ್ನು ಜನರ ಕೈಗೆ ನೀಡಿದ ಹೆಗಡೆ ಅವರ ದೂರದೃಷ್ಟಿಯನ್ನು ಅವರು ಕೊಂಡಾಡಿದರು. ಈ ದೃಷ್ಟಿಕೋನವೇ ಮುಂದೆ 73ನೇ ಸಂವಿಧಾನ ತಿದ್ದುಪಡಿಗೆ ಸ್ಫೂರ್ತಿಯಾಗಿ, ದೇಶದಾದ್ಯಂತ ಪಂಚಾಯತ್ ರಾಜ್ ವ್ಯವಸ್ಥೆಗೆ ಸಾಂವಿಧಾನಿಕ ಸ್ಥಾನಮಾನ ಸಿಗುವಂತೆ ಮಾಡಿತು ಎಂಬ ಅಂಶವನ್ನು ಒತ್ತಿ ಹೇಳಿದರು.
ಹೆಗಡೆ ಅವರ ಕುರಿತಾದ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡ ಉಪರಾಷ್ಟ್ರಪತಿಯವರು, ಹಣದ ಬಗ್ಗೆ ಅವರು ನೀಡಿದ್ದ ಸರಳ ವ್ಯಾಖ್ಯಾನವನ್ನು ಸ್ಮರಿಸಿದರು. "ಒಂದು ಒಳ್ಳೆಯ ಮನೆ, ಉತ್ತಮ ಆರೋಗ್ಯ, ಗುಣಮಟ್ಟದ ಶಿಕ್ಷಣ ಮತ್ತು ಒಂದು ಕಾರು ಇರುವುದೇ ಸುಖಮಯ ಜೀವನ. ಇದಕ್ಕಿಂತ ಮಿಗಿಲಾದ ಹಣದಿಂದ ಏನು ಪ್ರಯೋಜನ?" ಎಂಬ ಹೆಗಡೆ ಅವರ ಮಾತುಗಳು ಅವರ ಸರಳತೆ ಮತ್ತು ಜೀವನದ ಕುರಿತಾದ ಅವರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.
ಅಧಿಕಾರ ಎಂದರೆ ನಂಬಿಕೆಯ ಹೊಣೆಗಾರಿಕೆ
ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಿದ ಹೆಗಡೆ ಅವರ ಕ್ರಮವನ್ನು ಅವರು ಶ್ಲಾಘಿಸಿದರು. "ಸಾರ್ವಜನಿಕ ಅಧಿಕಾರ ಎಂದರೆ ಅದು ನಂಬಿಕೆಯ ಒಂದು ಟ್ರಸ್ಟ್ ಅಥವಾ ಹೊಣೆಗಾರಿಕೆ" ಎಂಬ ತತ್ವವನ್ನು ಅವರು ಬಲವಾಗಿ ನಂಬಿದ್ದರು ಎಂದು ರಾಧಾಕೃಷ್ಣನ್ ನುಡಿದರು. "ಬಲಿಷ್ಠ ರಾಜ್ಯಗಳು ಭಾರತವನ್ನು ಬಲಪಡಿಸುತ್ತವೆ, ಬಲಿಷ್ಠ ಸ್ಥಳೀಯ ಸರ್ಕಾರಗಳು ರಾಜ್ಯಗಳನ್ನು ಬಲಪಡಿಸುತ್ತವೆ ಮತ್ತು ಅಧಿಕಾರಯುತ ನಾಗರಿಕರು ಸ್ಥಳೀಯ ಸರ್ಕಾರಗಳನ್ನು ಬಲಪಡಿಸುತ್ತಾರೆ" ಎಂಬ ಹೆಗಡೆ ಅವರ ಚಿಂತನೆಯು ಇಂದಿಗೂ ಪ್ರಸ್ತುತವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಹೆಗಡೆ ಹೆಸರನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಕ್ರಮ - ಸಿಎಂ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ರಾಮಕೃಷ್ಣ ಹೆಗಡೆ ಅವರ ಹೆಸರಿಡಲಾಗುವುದು ಮತ್ತು ಗ್ರಾಮೀಣ ಆಡಳಿತಕ್ಕೆ ಹೆಗಡೆ ನೀಡಿದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಅವರ ಜನ್ಮದಿನದಂದು ‘ರಾಮಕೃಷ್ಣ ಹೆಗಡೆ ಶ್ರೇಷ್ಠ ಪಂಚಾಯಿತಿ ಪ್ರಶಸ್ತಿ’ ನೀಡುವ ಕಾರ್ಯಕ್ರಮ ರೂಪಿಸಲಾಗುವುದು. ಅಲ್ಲದೇ, ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಯೊಂದಕ್ಕೆ ರಾಮಕೃಷ್ಣ ಹೆಗಡೆ ಅವರ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ರಾಮಕೃಷ್ಣ ಹೆಗಡೆ ಅವರು ಕೇವಲ ಅಧಿಕಾರ ನಡೆಸಿದ ನಾಯಕನಲ್ಲ; ಪಂಚಾಯತ್‌ನಿಂದ ಸಂಸತ್ತಿನವರೆಗೆ ಹೊಸ ನಾಯಕತ್ವವನ್ನು ಸೃಷ್ಟಿಸಿದ ನಾಯಕ ಎಂದು ಬಣ್ಣಿಸಿದರು. "ಒಬ್ಬ ನಾಯಕನ ಕೆಲಸ ಕೇವಲ ಹಿಂಬಾಲಕರನ್ನು ಸೃಷ್ಟಿಸುವುದಲ್ಲ. ನಾಯಕರನ್ನು ಸೃಷ್ಟಿಸುವುದೇ ನಿಜವಾದ ನಾಯಕತ್ವ. ರಾಮಕೃಷ್ಣ ಹೆಗಡೆ ಅವರ ಮೂಲ ತತ್ವ ಇದೇ ಆಗಿತ್ತು" ಎಂದು ಹೇಳಿದರು. "ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕರ್ನಾಟಕದ ಪ್ರಯೋಗಗಳು ದೇಶಕ್ಕೆ ಮಾದರಿಯಾಗಿದ್ದವು. ನಂತರ ರಾಜೀವ್ ಗಾಂಧಿ ಸರ್ಕಾರದ ಅವಧಿಯಲ್ಲಿ 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳಿಗೆ ಈ ಚಿಂತನೆ ಪ್ರೇರಣೆಯಾಯಿತು. ಹೆಗಡೆ ಅವರು ಜಾತಿ ಆಧಾರಿತ ರಾಜಕಾರಣಕ್ಕೆ ಸೀಮಿತವಾಗದೆ ಮೌಲ್ಯಾಧಾರಿತ ರಾಜಕಾರಣ ಮತ್ತು ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದ್ದರು. ಅವರ ನಾಯಕತ್ವವನ್ನು ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಜನರು ಒಪ್ಪಿಕೊಂಡಿದ್ದರು. ಅಧಿಕಾರದಲ್ಲಿದ್ದಾಗಲೂ ಜನಸೇವೆ ಮತ್ತು ಅಭಿವೃದ್ಧಿಯನ್ನು ಕೇಂದ್ರವಾಗಿಟ್ಟುಕೊಂಡು ಕೆಲಸ ಮಾಡಿದ್ದರು ಎಂದು ಹೇಳಿದರು.
ಹೆಗಡೆ ಅವರ ಬದುಕೇ ಒಂದು ಡಿಕ್ಷನರಿ
"ರಾಮಕೃಷ್ಣ ಹೆಗಡೆ ಅವರ ಬದುಕು ಒಂದು ಡಿಕ್ಷನರಿಯಿದ್ದಂತೆ. ಅವರ ಆಚಾರ-ವಿಚಾರಗಳನ್ನು ನೋಡಿಕೊಂಡು ನಾವು ಅನೇಕ ವಿಚಾರಗಳನ್ನು ಕಲಿಯಬಹುದು. ಅಧಿಕಾರವನ್ನು ಶಕ್ತಿಯ ಸಂಕೇತವಾಗಿ ಅಲ್ಲ, ಜನಸೇವೆಗೆ ದೊರೆತ ಅವಕಾಶವಾಗಿ ನೋಡಬೇಕು ಎಂಬ ಸಂದೇಶವನ್ನು ಅವರು ನೀಡಿದ್ದರು" ಎಂದು ಹೇಳಿದರು. ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯ ರಾಜ್ಯದ ಬಜೆಟ್ ಗಾತ್ರ ಮತ್ತು ಇಂದಿನ ಬಜೆಟ್ ಗಾತ್ರವನ್ನು ಹೋಲಿಸಿದ ಶಿವಕುಮಾರ್, 1982–87ರ ಅವಧಿಯಲ್ಲಿ ರಾಜ್ಯದ ಬಜೆಟ್ ಗಾತ್ರ ಸುಮಾರು 3,687 ಕೋಟಿ ರೂ. ಇದ್ದರೆ, ಸಿದ್ದರಾಮಯ್ಯ ಸರ್ಕಾರದಲ್ಲಿ ಅಂದಾಜು 4.50 ಲಕ್ಷ ಕೋಟಿ ರೂ. ಮಟ್ಟಕ್ಕೆ ಏರಿದೆ ಎಂದರು.
ಆ ಅವಧಿಯಲ್ಲಿ ರಾಜ್ಯದ ಆದಾಯ ಸಂಗ್ರಹವೂ ಇಂದಿನ ಪ್ರಮಾಣಕ್ಕೆ ಹೋಲಿಸಿದರೆ ಬಹಳ ಕಡಿಮೆ ಇತ್ತು. ಸಣ್ಣ ಯೋಜನೆಗಳೇ ಈಗ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳಾಗಿ ರೂಪುಗೊಳ್ಳುತ್ತಿವೆ ಎಂದು ಹೇಳಿದರು.

