ಡಾ.ರಾಜ್ ಸ್ಮಾರಕ ವಿವಾದ: ಕ್ಷಮೆ ಕೇಳಿದ್ದು ಬೇರೆಯದ್ದೇ ಕಾರಣಕ್ಕೆ ಎಂದ ನಟ ಚೇತನ್ ಅಹಿಂಸಾ
x

ಡಾ. ರಾಜ್‌ಕುಮಾರ್ ಸ್ಮಾರಕಕ್ಕೆ ಜಾಗ ನೀಡಿದ್ದನ್ನು ಪ್ರಶ್ನಿಸಿದ್ದ ನಟ ಚೇತನ್, ಈಗಲೂ ತಮ್ಮ ಹೇಳಿಕೆಗೆ ಬದ್ಧ ಎಂದಿದ್ದಾರೆ.

ಡಾ.ರಾಜ್ ಸ್ಮಾರಕ ವಿವಾದ: ಕ್ಷಮೆ ಕೇಳಿದ್ದು ಬೇರೆಯದ್ದೇ ಕಾರಣಕ್ಕೆ ಎಂದ ನಟ ಚೇತನ್ ಅಹಿಂಸಾ

ಡಾ. ರಾಜ್‌ಕುಮಾರ್ ಸ್ಮಾರಕಕ್ಕೆ ಜಾಗ ನೀಡಿದ್ದನ್ನು ಪ್ರಶ್ನಿಸಿದ್ದ ನಟ ಚೇತನ್, ಈಗಲೂ ತಮ್ಮ ಹೇಳಿಕೆಗೆ ಬದ್ಧ ಎಂದಿದ್ದಾರೆ. ನಿಂದಿಸಿದವರ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.


Click the Play button to hear this message in audio format

ಕನ್ನಡ ಚಿತ್ರರಂಗದ ಧೀಮಂತ ನಟ ಡಾ. ರಾಜ್‌ಕುಮಾರ್ ಅವರ ಸಮಾಧಿಗೆ ಸರ್ಕಾರ ಎರಡೂವರೆ ಎಕರೆ ಜಾಗ ನೀಡಿರುವುದನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ನಟ ಚೇತನ್ ಅಹಿಂಸಾ, ಆನಂತರ ಉಂಟಾದ ಆಕ್ರೋಶದ ನಡುವೆಯೂ ತಮ್ಮ ನಿಲುವಿಗೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. ಈ ಕುರಿತು 'ದ ಫೆಡರಲ್ ಕರ್ನಾಟಕ' ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಚೇತನ್, ಸಮಾಧಿಗೆ ಅಷ್ಟು ದೊಡ್ಡ ಪ್ರಮಾಣದ ಜಾಗ ನೀಡುವುದರಿಂದ 'ಸ್ಮಾರಕ ರಾಜಕೀಯ' (Monument Politics) ಶುರುವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಡಾ. ರಾಜ್‌ಕುಮಾರ್ ಅವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ ಎಂಬುದು ಸತ್ಯ, ಆದರೆ ಅವರಂತೆಯೇ ಅನೇಕ ನಿರ್ಮಾಪಕರು, ನಿರ್ದೇಶಕರು ಮತ್ತು ನಟರು ಕೂಡ ಈ ರಂಗಕ್ಕಾಗಿ ದುಡಿದಿದ್ದಾರೆ. ಅವರೆಲ್ಲರಿಗೂ ಇದೇ ರೀತಿ ಸ್ಮಾರಕಕ್ಕೆ ಜಾಗ ನೀಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.

ಇದೇ ವೇಳೆ ತಮ್ಮ ಮನೆ ಮುಂದೆ ನಡೆದ ಪ್ರತಿಭಟನೆ ಮತ್ತು ನಿಂದನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಾರಾ ಗೋವಿಂದು ಸೇರಿದಂತೆ ಕೆಲವರು ಅಶ್ಲೀಲ ಪದಗಳಿಂದ ತಮ್ಮನ್ನು ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಕಾನೂನು ಕೈಗೆತ್ತಿಕೊಳ್ಳುವ ರೀತಿ ವರ್ತಿಸಿದವರು ಡಾ. ರಾಜ್ ಅಭಿಮಾನಿಗಳು ಎಂದು ಕರೆಸಿಕೊಳ್ಳಲು ಅಯೋಗ್ಯರು ಎಂದು ಅವರು ಕಿಡಿಕಾರಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಅಶ್ಲೀಲವಾಗಿ ನಿಂದಿಸಿದವರ ವಿರುದ್ಧ ಕಾನೂನು ಹೋರಾಟ ನಡೆಸುವ ಬಗ್ಗೆ ವಕೀಲರೊಂದಿಗೆ ಚರ್ಚಿಸುತ್ತಿರುವುದಾಗಿ ತಿಳಿಸಿದ್ದಾರೆ.

ತಮಗೆ ಡಾ. ರಾಜ್ ಕುಮಾರ್ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಸ್ಪಷ್ಟಪಡಿಸಿದ ಚೇತನ್, ತಾವು ಚಿಕಾಗೋದಿಂದ ಬೆಂಗಳೂರಿಗೆ ಬಂದು ನೆಲೆಸಲು ಡಾ. ರಾಜ್ ಅವರೇ ಸ್ಫೂರ್ತಿ ಎಂದಿದ್ದಾರೆ. ಅವರ ನಟನೆ ಮತ್ತು ಹಾಡುಗಳನ್ನು ಕೇಳುತ್ತಲೇ ಬೆಳೆದಿದ್ದು, ಅವರ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದು ಹೇಳುವ ಮೂಲಕ ತಮ್ಮ ಹೋರಾಟ ಕೇವಲ ಸಮಾಜದ ತಾರತಮ್ಯದ ನೀತಿಯ ವಿರುದ್ಧವೇ ಹೊರತು ವ್ಯಕ್ತಿಯ ವಿರುದ್ಧವಲ್ಲ ಎಂದು ಪುನರುಚ್ಚರಿಸಿದ್ದಾರೆ.

Read More
Next Story