DK Shivakumar vs Munirathna|ಆರ್‌. ಅರ್‌. ನಗರ:  ರಾಜಕೀಯ ಜಿದ್ದಿಗೆ  ಸದ್ದಿಲ್ಲದೆ ಮಾಯವಾದ ಮೇಲ್ಸೇತುವೆ ಯೋಜನೆ!
x
ರಾಜರಾಜೇಶ್ವರಿ ನಗರದ ಆರ್ಚ್‌ ಒಳಗೆ ಹಾದು ಹೋಗಿರುವ ಮೇಲ್ಸೇತುವೆ ಪಿಲ್ಲರ್‌ಗಳು

DK Shivakumar vs Munirathna|ಆರ್‌. ಅರ್‌. ನಗರ: ರಾಜಕೀಯ ಜಿದ್ದಿಗೆ ಸದ್ದಿಲ್ಲದೆ ಮಾಯವಾದ ಮೇಲ್ಸೇತುವೆ ಯೋಜನೆ!

Ground Report| ರಾಜರಾಜೇಶ್ವರಿ ನಗರದ ಹಿಡಿತದ ಹಪಾಹಪಿಯಲ್ಲಿ ರಾಜಕಾರಣಿಗಳು ಅಭಿವೃದ್ಧಿ ಮರೆತಿದ್ದಾರೆ. ಶಾಸಕ ಹಾಗೂ ಡಿಸಿಎಂ ನಡುವಿನ ರಾಜಕೀಯಕ್ಕೆ ಮೇಲ್ಸೇತುವೆ ಅನಾಥವಾಗಿದೆ.


Click the Play button to hear this message in audio format

ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಾದ ರಾಜರಾಜೇಶ್ವರಿ ನಗರದಲ್ಲಿ ರಾಜಕೀಯ ಮೇಲಾಟದಿಂದ ಅಭಿವೃದ್ಧಿ ಶೂನ್ಯವಾಗಿದೆ.

ಸ್ಥಳೀಯ ಶಾಸಕ ಮುನಿರತ್ನ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವಿನ ವೈಯಕ್ತಿಕ ದ್ವೇಷದಿಂದ ಇಡೀ ಬಡಾವಣೆಯೇ ಬವಣೆ ಅನುಭವಿಸುತ್ತಿದೆ. ಚಾಲೆಂಜಿಂಗ್‌ ಸ್ಟಾರ್ ದರ್ಶನ್, ಗೋಲ್ಡರ್‌ ಸ್ಟಾರ್‌ ಗಣೇಶ್, ರಕ್ಷಿತ್‌ ಶೆಟ್ಟಿ, ನಟಿ ಅಮೂಲ್ಯ, ರಚಿತಾರಾಮ್‌ ಸೇರಿದಂತೆ ಹಲವು ಸೆಲೆಬ್ರಿಟಿಗಳು ವಾಸವಾಗಿರುವ ಈ ಬಡಾವಣೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಆರಂಭಿಸಲಾದ ಮೇಲ್ಸೇತುವೆ ಕಾಮಗಾರಿಯು ರಾಜಕೀಯ ಜಿದ್ದಿಗೆ ಬಲಿಯಾಗಿದೆ.

ರಾಜರಾಜೇಶ್ವರಿ ನಗರದ ಪ್ರವೇಶ ದ್ವಾರದ ಒಳ ಹಾದು ಹೋಗುವಂತೆ ನಿರ್ಮಿಸಲು ಉದ್ದೇಶಿಸಿದ್ದ ಮೇಲ್ಸೇತುವೆ ಕಾಮಗಾರಿಯಲ್ಲಿ ಈಗ ಕೇವಲ ಪಿಲ್ಲರ್‌ಗಳಷ್ಟೇ ನಿಂತಿವೆ. ಶಾಸಕ-ಸಚಿವರ ಹಗೆತನವು ಬಡಾವಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

2022 ರಲ್ಲಿ ಕೆಂಚನಹಳ್ಳಿಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸಲು ಮೇಲ್ಸೇತುವೆ ನಿರ್ಮಿಸಲು ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಚಾಲನೆ ನೀಡಿತ್ತು. ಕಾಮಗಾರಿಯೂ ವೇಗವಾಗಿ ಸಾಗುತ್ತಿತ್ತು. ಪಿಲ್ಲರ್‌ಗಳು ಎಲೆ ಎತ್ತಿದವು. ಆದರೆ, 2023ರಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಚನೆಯಾಯಿತು. ಅದೇ ವೇಳೆ ಕ್ಷೇತ್ರದಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಪರಾಭವಗೊಂಡು, ಬಿಜೆಪಿಯ ಮುನಿರತ್ನ ಶಾಸಕರಾದರು.

ಕುಂಟಿತವಾದ ಅಭಿವೃದ್ಧಿ

ರಾಜರಾಜೇಶ್ವರಿ ನಗರದಲ್ಲಿ ಕೈ ಅಭ್ಯರ್ಥಿ ಸೋಲುತ್ತಿದ್ದಂತೆ ಸಾಕಷ್ಟು ರಾಜಕೀಯ ಬೆಳವಣಿಗೆಗಳು ಘಟಿಸಿದವು. ಮುನಿರತ್ನ ವಿರುದ್ಧ ಅತ್ಯಾಚಾರ, ಬೆದರಿಕೆ ಪ್ರಕರಣಗಳು ದಾಖಲಾಗಿ, ಜೈಲು ಪಾಲಾಗಬೇಕಾಯಿತು. ಜಾಮೀನಿನ ಮೇಲೆ ಹೊರಬಂದ ನಂತರ ಪರಾಜಿತ ಅಭ್ಯರ್ಥಿ ಹಾಗೂ ಮುನಿರತ್ನ ನಡುವೆ ವೈಯಕ್ತಿಕ ಮಟ್ಟದಲ್ಲಿ ಆರೋಪ-ಪ್ರತ್ಯಾರೋಪಗಳು ನಡೆದವು. ಇದು ಕ್ರಮೇಣ ಮುನಿರತ್ನ ವರ್ಸಸ್‌ ಡಿ.ಕೆ.ಸಹೋದರರ ಕಾಳಗಕ್ಕೂ ಕಾರಣವಾಯಿತು.

ವಿಪರ್ಯಾಸವೆಂದರೆ ಅಂದಿನಿಂದ ಆರ್‌.ಆರ್‌.ನಗರದ ಅಭಿವೃದ್ಧಿಯೂ ಕ್ಷೀಣಿಸಿತು. ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಸಾಕಷ್ಟು ಬಾರಿ ಸ್ಥಳೀಯ ಶಾಸಕರು ನೇರ ವಾಗ್ದಾಳಿ ನಡೆಸಿದ್ದರು. ನಿಗದಿಯಂತೆ 2024 ಏಪ್ರಿಲ್‌ ತಿಂಗಳಲ್ಲಿ ಮೇಲ್ಸೇತುವೆ ಕಾಮಗಾರಿ ಮುಗಿಯಬೇಕಿತ್ತು. ಆದರೆ, ಅನುದಾನ ಸಿಗದ ಕಾರಣ ಇಂದಿಗೂ ನಾಲ್ಕು ಪಿಲ್ಲರ್ ಬಿಟ್ಟರೆ ಕಾಮಗಾರಿ ಮೇಲೇಳಲೇ ಇಲ್ಲ. ಇದರಿಂದ ಬಡಾವಣೆಯಲ್ಲಿ ವಾಹನ ದಟ್ಟಣೆ ವಿಪರೀತವಾಗಿ, ಜನರು ಹೈರಾಣಾಗಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿ ಅರ್ಧಕ್ಕೆ ನಿಂತಿರುವ ಮೇಲ್ಸೇತುವೆ ಕಾಮಗಾರಿಯ ನೋಟ

ಪೋಲಾದ ಸಾರ್ವಜನಿಕರ ತೆರಿಗೆ ಹಣ

ರಾಜರಾಜೇಶ್ವರಿ ನಗರದ ಮೇಲೆ ಹಿಡಿತ ಸಾಧಿಸುವ ಹಪಾಹಪಿಯಲ್ಲಿ ರಾಜಕಾರಣಿಗಳು ಕ್ಷೇತ್ರದ ಅಭಿವೃದ್ಧಿ ಮರೆತಿದ್ದಾರೆ. ಸ್ಥಳೀಯ ಶಾಸಕರು ಹಾಗೂ ಡಿಸಿಎಂ ನಡುವಿನ ರಾಜಕೀಯ ಜಿದ್ದಾಜಿದ್ದಿನಿಂದ ಜನರ ತೆರಿಗೆ ಹಣವೂ ಪಿಲ್ಲರ್ ರೂಪದಲ್ಲಿ ಪೋಲಾಗಿದೆ ಎಂಬುದು ಸಾರ್ವಜನಿಕರು ಹಾಗೂ ಸಂಘಟನೆಗಳ ಆರೋಪವಾಗಿದೆ. ರಾಜರಾಜೇಶ್ವರಿ ನಗರವು 1980 ರಲ್ಲಿ ನಿರ್ಮಾಣಗೊಂಡ ಬಡಾವಣೆ. ಬಡಾವಣೆಯ ವ್ಯಾಪ್ತಿ ಹಿಗ್ಗಿದಂತೆ ಜನಸಂಖ್ಯೆ ಹಾಗೂ ವಾಹನಗಳ ದಟ್ಟಣೆಯೂ ಹೆಚ್ಚಾಯಿತು.

ನಾಲ್ಕು ವರ್ಷಗಳ ಹಿಂದೆ ಮೇಲ್ಸೇತುವೆ ನಿರ್ಮಾಣ ಆರಂಭವಾದರೂ ಈವರೆಗೂ ಪ್ರಗತಿ ಕಂಡಿರಲಿಲ್ಲ. ವಾಹನ ದಟ್ಟಣೆ ಹೆಚ್ಚಾದ ಹಿನ್ನೆಲೆ ಸೇತುವೆ ನಿರ್ಮಾಣ ಪರಿಕರಗಳನ್ನು ತೆರವು ಮಾಡುವಂತೆ ಜಿಬಿಎ ಆಯುಕ್ತರಿಗೆ ಮನವಿ ಮಾಡಿದ್ದರಿಂದ ಈಗ ಸಂಚಾರ ಸುಗಮವಾಗಿದೆ. ರಸ್ತೆ ಮಧ್ಯೆ ಇರುವ ಪಿಲ್ಲರ್‌ಗಳನ್ನು ತೆರವುಗೊಳಿಸಿದರೆ ಸಮಸ್ಯೆ ಬಗೆಹರಿಯಲಿದೆ ಎಂದು ರಾಜರಾಜೇಶ್ವರಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಅರುಣಾಚಲಂ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ರಾಜಕೀಯ ನಾಯಕರ 'ಕ್ರೆಡಿಟ್ ವಾರ್'ನಿಂದಾಗಿ ಮೇಲ್ಸೇತುವೆ ಯೋಜನೆ ಹಳ್ಳ ಹಿಡಿದಿದೆ. 71ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡ ಈ ಯೋಜನೆಯಡಿ ನಾಲ್ಕು ವರ್ಷಗಳಿಂದ ಬರೀ ನಾಲ್ಕು ಪಿಲ್ಲರ್ ನಿರ್ಮಿಸಲಾಗಿದೆ. ಆರ್ಚ್‌ ದಾಟಲು ಕನಿಷ್ಠ 20 ನಿಮಿಷ ಬೇಕು. ಬಿಜೆಪಿ ಶಾಸಕರು ಇರುವ ಕಾರಣ ಅನುದಾನ ವಂಚಿಸುವುದು ಸರಿಯಲ್ಲ. ಅದೇ ರೀತಿ ಶಾಸಕರು ಕೂಡ ವ್ಯಕ್ತಿಗತ ದ್ವೇಷ ಬದಿಗಿರಿಸಿ ಕ್ಷೇತ್ರದ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಬೇಕು ಎಂಬುದು ಆರ್‌.ಆರ್.ನಗರ ನಿವಾಸಿಯಾದ ಟೆಕ್ಕಿ ಪವನ್‌ ವರಿಷ್ಠ ಅವರ ಒತ್ತಾಯವಾಗಿದೆ.

ಬೆಂಗಳೂರು ರೈಸಿಂಗ್‌ ಅಭಿಯಾನ

ಬೆಂಗಳೂರಿನ ಅವೈಜ್ಞಾನಿಕ ನಗರ ಯೋಜನೆಗಳ ವಿರುದ್ಧ ನಾಗರಿಕರು ಹಾಗೂ ಸಂಘಟನೆಗಳು ಸಿಡಿದೆದ್ದಿವೆ. ಗ್ರೀನ್‌ಪೀಸ್ ಇಂಡಿಯಾ ಮತ್ತು 'ಬೆಂಗಳೂರು ರೈಸಿಂಗ್' ಅಭಿಯಾನದಡಿ ನೂರಾರು ನಾಗರಿಕರು ಪ್ರತಿಭಟನೆ ನಡೆಸಿದ್ದು, ರಾಜ್ಯ ಸರ್ಕಾರದ ಅನರ್ಥಕಾರಿ ಯೋಜನೆಗಳನ್ನು 'ಮೂರ್ಖ ಯೋಜನೆಗಳು' ಎಂದು ಜರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿಯ ನೆಪದಲ್ಲಿ ಜಾರಿಗೊಳಿಸುವ ಯೋಜನೆಗಳು ವರ್ಷಗಟ್ಟಲೇ ವಿಳಂಬವಾಗುತ್ತಿರುವುದೇ ಬೆಂಗಳೂರಿನ ಸಂಚಾರ ದಟ್ಟಣೆಗೆ ಪ್ರಮುಖ ಕಾರಣ. ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸಲು ನಾಗರಿಕರ ಸಲಹೆ, ಅಭಿಪ್ರಾಯ ಸ್ವೀಕರಿಸಬೇಕು. ಆದರೆ, ಬಂಡವಾಳಶಾಹಿಗಳು, ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ನಾಗರಿಕರ ಸಲಹೆಗಳನ್ನು ಕಡೆಗಣಿಸಲಾಗಿದೆ. ರಾಜ ರಾಜೇಶ್ವರಿ ನಗರದಲ್ಲಿ ನಾಲ್ಕು ವರ್ಷಗಳಿಂದ ಕುಂಟುತ್ತಾ ಸಾಗಿರುವ ಮೇಲ್ಸೇತುವೆ ಯೋಜನೆಯೂ ಇದಕ್ಕೆ ಉತ್ತಮ ನಿದರ್ಶನವಾಗಿದೆ ಎಂದು ಗ್ರೀನ್‌ ಪೀಸ್‌ ಇಂಡಿಯಾ ಸಂಘಟನೆ ಆರೋಪಿಸಿದೆ.

ರಾಜರಾಜೇಶ್ವರಿ ನಗರದಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸಲು ವೃಷಭಾವತಿ ಕಾಲುವೆ ಮೇಲೆ ನಿರ್ಮಿಸಲು ಉದ್ದೇಶಿಸಿರುವ ಪ್ರತ್ಯೇಕ ಮೇಲ್ಸೇತುವೆ ಕಾಮಗಾರಿಯೂ ಅರೆಬರೆಯಾಗಿರುವುದು

"ಮೂರ್ಖ ಯೋಜನೆ ಎಂದರೆ ಕೇವಲ ಹಣದ ಪೋಲಲ್ಲ, ಜನರ ಸಮಯದ ವ್ಯರ್ಥ, ಪಾದಚಾರಿಗಳ ಹಕ್ಕಿನ ಅಪಹರಣ ಮತ್ತು ನಗರದ ಹಸಿರು, ಜಲ ಸಂಪತ್ತಿನ ನಾಶ.” ಎಂದು ಗ್ರೀನ್‌ಪೀಸ್ ಇಂಡಿಯಾ ಸಂಘಟನೆಯ ಹವಾಮಾನ ಮತ್ತು ಇಂಧನ ವಿಭಾಗದ ಕ್ಯಾಂಪೇನರ್ ಅಮೃತಾ ಎಸ್.ಎನ್. ದೂರಿದ್ದಾರೆ. ರಾಜರಾಜೇಶ್ವರಿ ನಗರ ಮಾತ್ರವಲ್ಲದೇ ದೊಮ್ಮಸಂದ್ರ ಮೇಲ್ಸೇತುವೆ ಕಾಮಗಾರಿಯೂ ಕುಂಟುತ್ತಾ ಸಾಗಿದ್ದು, ಸಂಚಾರ ದಟ್ಟಣೆಗೆ ಅವಕಾಶ ಮಾಡಿಕೊಟ್ಟಿದೆ. ಮಲ್ಲೇಶ್ವರಂನಲ್ಲಿ ಮೈಸೂರು ಲ್ಯಾಂಪ್‌ ಕಾರ್ಖಾನೆಯ ಜಾಗದಲ್ಲಿ ಕನ್ವೆಕ್ಷನ್‌ ಹಾಲ್‌ ನಿರ್ಮಿಸುವ ಯೋಜನೆಯೂ ಮೂರ್ಖ ಯೋಜನೆಯಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸರ್ಕಾರಿ ಯೋಜನೆಗಳ ವಿಳಂಬಕ್ಕೆ ಕಾರಣರಾಗುವವರನ್ನೇ ಹೊಣೆಗಾರರನ್ನಾಗಿಸಿ ಶಿಕ್ಷಿಸಬೇಕು. ಕಾಮಗಾರಿಗಳ ಸ್ಥಿತಿಗತಿ ಬಹಿರಂಗಪಡಿಸಬೇಕು. ನಗರದ ಅಭಿವೃದ್ಧಿಗೆ ಬಜೆಟ್ ರೂಪಿಸುವಾಗ ಮತ್ತು ಯೋಜನೆ ಸಿದ್ಧಪಡಿಸುವಾಗ ಸ್ಥಳೀಯ ನಿವಾಸಿಗಳ ಅಭಿಪ್ರಾಯ ಪಡೆಯಬೇಕು. ಫ್ಲೈಓವರ್‌ಗಳಿಗಿಂತ ಸುರಕ್ಷಿತ ಪಾದಚಾರಿ ಮಾರ್ಗ ಮತ್ತು ಸಾರ್ವಜನಿಕ ಸಾರಿಗೆಗೆ ಒತ್ತು ನೀಡಬೇಕು. ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯಲ್ಲಿ ಅಭ್ಯರ್ಥಿಗಳು ಈ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.

Read More
Next Story