ಕಾಂಗ್ರೆಸ್ ತೊರೆಯುವ ಪ್ರಶ್ನೆಯೇ ಇಲ್ಲ: ಮಾಜಿ ಸಚಿವ ಕೆ.ಎನ್. ರಾಜಣ್ಣ ಸ್ಪಷ್ಟನೆ
x

ಕಾಂಗ್ರೆಸ್ ತೊರೆಯುವ ಪ್ರಶ್ನೆಯೇ ಇಲ್ಲ: ಮಾಜಿ ಸಚಿವ ಕೆ.ಎನ್. ರಾಜಣ್ಣ ಸ್ಪಷ್ಟನೆ

ಪಕ್ಷ ನನಗೆ ಎಲ್ಲವನ್ನೂ ನೀಡಿದೆ, ಹೀಗಾಗಿ ನಾನು ಪಕ್ಷದೊಂದಿಗೆ ಅಚಲವಾಗಿರುತ್ತೇನೆ. ಸಿದ್ಧಾಂತದ ವಿಷಯದಲ್ಲಿ ಎಂದಿಗೂ ಕಾಂಗ್ರೆಸ್‌ಗೆ ನಿಷ್ಠನಾಗಿರುತ್ತೇನೆ ಎಂದು ಕೆ.ಎನ್‌.ರಾಜಣ್ಣ ಹೇಳಿದ್ದಾರೆ.


Click the Play button to hear this message in audio format

ತಾವು ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ ಮತ್ತು ಬೇರೆ ಯಾವುದೇ ಪಕ್ಷಕ್ಕೆ ಸೇರುವ ಆಲೋಚನೆಯೂ ಇಲ್ಲ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಸ್ಪಷ್ಟಪಡಿಸಿದ್ದಾರೆ.

ಮಧುಗಿರಿಯಲ್ಲಿ ಮಾತನಾಡಿದ ಅವರು, ತಳಸಮುದಾಯಗಳಿಗೆ ನ್ಯಾಯ ಒದಗಿಸುವ ಸಾಮರ್ಥ್ಯವಿರುವುದು ಕಾಂಗ್ರೆಸ್‌ಗೆ ಮಾತ್ರ. ಸಾಮಾನ್ಯ ಕ್ಷೇತ್ರದಲ್ಲಿ ಎಸ್‌ಟಿ ಸಮುದಾಯಕ್ಕೆ ಸೇರಿದ ನನಗೆ ಟಿಕೆಟ್ ನೀಡಿ, ರಾಜಕೀಯ ಬಲ ತುಂಬಿದ್ದು ಕಾಂಗ್ರೆಸ್ ಪಕ್ಷ. ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರ್ಮಸಿಂಗ್‌ರಂತಹ ನಾಯಕರಿಗೆ ಸಿಎಂ ಸ್ಥಾನ ನೀಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ, ಹೀಗಾಗಿ ನಾನು ಪಕ್ಷದೊಂದಿಗೆ ಅಚಲವಾಗಿರುತ್ತೇನೆ. ಸಿದ್ಧಾಂತದ ವಿಷಯದಲ್ಲಿ ಎಂದಿಗೂ ಕಾಂಗ್ರೆಸ್‌ಗೆ ನಿಷ್ಠನಾಗಿರುತ್ತೇನೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ನಾಯಕತ್ವದ ಮೇಲೆ ವಿಶ್ವಾಸ

ರಾಜ್ಯ ರಾಜಕೀಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದುರ್ಬಲ ಆಗುತ್ತಿದ್ದಾರೆ ಎನ್ನುವುದು ಸುಳ್ಳು. ಅವರು ದುರ್ಬಲವಾದರೆ ಇಡೀ ಕಾಂಗ್ರೆಸ್ ಪಕ್ಷವೇ ದುರ್ಬಲವಾದಂತೆ. ಅಹಿಂದ ವರ್ಗದ ಮತಗಳನ್ನು ಸೆಳೆಯುವ ಮತ್ತು ತಳಸಮುದಾಯಗಳ ಧ್ವನಿಯಾಗಿ ನಿಲ್ಲುವ ಅಪ್ರತಿಮ ಶಕ್ತಿ ಸಿದ್ದರಾಮಯ್ಯ ಅವರಿಗೆ ಮಾತ್ರ ಇದೆ. ಬಿಜೆಪಿಯಲ್ಲಿ ಬಿ.ಎಸ್‌.ಯಡಿಯೂರಪ್ಪ ಮತ್ತು ಜೆಡಿಎಸ್‌ನಲ್ಲಿ ಎಚ್‌.ಡಿ.ದೇವೇಗೌಡರು ಮಾತ್ರ ಮತಗಳನ್ನು ಸೆಳೆಯುವ ಶಕ್ತಿ ಹೊಂದಿದ್ದಾರೆ. ಅದೇ ರೀತಿ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರದ್ದು ಅನಿವಾರ್ಯ ನಾಯಕತ್ವ ಎಂದು ತಿಳಿಸಿದ್ದಾರೆ. ಪಕ್ಷದ ವಲಯದಲ್ಲಿ 10 ಲಕ್ಷ ಜನಸಂಖ್ಯೆಗೆ ಒಂದು ಲೋಕಸಭಾ ಕ್ಷೇತ್ರ ಮಾಡುವ ಚಿಂತನೆ ಇದೆ. ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡು ಮಧುಗಿರಿ ಉಪವಿಭಾಗದ ತಾಲೂಕುಗಳು ಲೋಕಸಭಾ ವ್ಯಾಪ್ತಿಗೆ ಬಂದರೆ, ನಾನು ಖಂಡಿತವಾಗಿಯೂ ಲೋಕಸಭೆಗೆ ಸ್ಪರ್ಧಿಸುತ್ತೇನೆ ಎಂದು ತಮ್ಮ ರಾಜಕೀಯ ಆಕಾಂಕ್ಷೆಯನ್ನು ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕರ ಕುರಿತು ಗೌರವ

ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಎಚ್.ಡಿ. ದೇವೇಗೌಡರು ಕೈಗೊಂಡ ಶ್ರಮವನ್ನು ಮರೆಯುವಂತಿಲ್ಲ. ಅವರ ಬಗ್ಗೆ ನನಗೆ ವಿಶೇಷ ಗೌರವವಿದೆ. ರಾಜಕೀಯ ಚರ್ಚೆಗಳ ಹೊರತಾಗಿ, ಕ್ಷೇತ್ರದಲ್ಲಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತು ರಾಜಣ್ಣ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜನಪ್ರತಿನಿಧಿಗಳಾಗಿ ನಾವು ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಬಾರದು. ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ, ತಹಶೀಲ್ದಾರ್ ಮತ್ತು ಇಒ ಪ್ರತಿದಿನ ಸಭೆ ನಡೆಸಿ, ಯಾವ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ ಎಂದು ಗುರುತಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಲೋಪವಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಅಸಹಾಯಕ ಮತ್ತು ಧ್ವನಿ ಇಲ್ಲದ ಸಮಾಜಕ್ಕೆ ಧ್ವನಿ ನೀಡುವುದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ದೀನದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಏಳಿಗೆಗಾಗಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಹೋರಾಟಗಳಲ್ಲಿ ತಾನು ಸಕ್ರಿಯವಾಗಿ ಭಾಗಿಯಾಗುವುದಾಗಿ ಪುನರುಚ್ಚರಿಸಿದರು.

Read More
Next Story