ತೆರಿಗೆ ದರೋಡೆ, ಅಭಿವೃದ್ಧಿಯಲ್ಲಿ ಶೂನ್ಯ: ಸರ್ಕಾರ ವಿರುದ್ಧ ಅಶ್ವತ್ಥನಾರಾಯಣ ಕಿಡಿ
x

ತೆರಿಗೆ ದರೋಡೆ, ಅಭಿವೃದ್ಧಿಯಲ್ಲಿ ಶೂನ್ಯ: ಸರ್ಕಾರ ವಿರುದ್ಧ ಅಶ್ವತ್ಥನಾರಾಯಣ ಕಿಡಿ

ಮನೆ ತೆರಿಗೆ, ಘನತ್ಯಾಜ್ಯ ತೆರಿಗೆ, ಬಳಕೆ ಶುಲ್ಕ ಹೀಗೆ ನೂರಾರು ರೀತಿಯಲ್ಲಿ ಜನರಿಂದ ಸಾವಿರಾರು ಕೋಟಿ ರೂಪಾಯಿ ತೆರಿಗೆಯನ್ನು ಸರ್ಕಾರ ದರೋಡೆ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.


Click the Play button to hear this message in audio format

ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಳೆಯು ನಗರದ ಮೂಲಸೌಕರ್ಯದ ಅಸಲಿ ಮುಖವನ್ನು ಅನಾವರಣಗೊಳಿಸಿದೆ. ಕೇವಲ ಒಂದೆರಡು ದಿನದ ಮಳೆಗೆ ಇಡೀ ನಗರ ಜಲಾವೃತವಾಗಿ ಜನಜೀವನ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು, ಈ ಸರ್ಕಾರವು ಜನರ ಬದುಕಿನ ಗ್ಯಾರಂಟಿ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದು ಕೇವಲ ತೆರಿಗೆ ದರೋಡೆ ಮಾಡುವ ಸರ್ಕಾರ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ನಡೆದ ಮಾತನಾಡಿದ ಅವರು, ಮಳೆಯಿಂದಾಗಿ ಸಂಭವಿಸುತ್ತಿರುವ ಸಾವು-ನೋವುಗಳ ಬಗ್ಗೆ ಸರ್ಕಾರದ ನಿರ್ಲಕ್ಷ್ಯವನ್ನು ಕಟುವಾಗಿ ಟೀಕಿಸಿದರು. ಬೌರಿಂಗ್ ಆಸ್ಪತ್ರೆ ಸಮೀಪ ಕಾಂಪೌಂಡ್ ಕುಸಿದು ಏಳು ಮಂದಿ ಮೃತಪಟ್ಟರು, ಶುಕ್ರವಾರ ಸಹ ಒಬ್ಬರು ಮೃತಪಟ್ಟಿದ್ದಾರೆ. ಇವೆಲ್ಲವೂ ಲೆಕ್ಕಕ್ಕೆ ಸಿಕ್ಕ ಸಾವುಗಳು. ಆದರೆ, ರಸ್ತೆ ಗುಂಡಿಗಳಿಗೆ ಬಿದ್ದು, ಮರದ ಕೊಂಬೆಗಳು ಮೈಮೇಲೆ ಬಿದ್ದು ಅಸುನೀಗಿದವರ ಲೆಕ್ಕವೇ ಇಲ್ಲ. ಸರ್ಕಾರಕ್ಕೆ ಜನರ ಸಾವಿನ ಬಗ್ಗೆ ಕಿಂಚಿತ್ತೂ ಕನಿಕರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತೆರಿಗೆ ಸಂಗ್ರಹವಿದೆ, ಆದರೆ ಅಭಿವೃದ್ಧಿಯಿಲ್ಲ

ನಗರದ ಜನರ ಮೇಲೆ ಸರ್ಕಾರವು ಹೊರಿಸುತ್ತಿರುವ ತೆರಿಗೆಯ ಹೊರೆಯನ್ನು ಪ್ರಸ್ತಾಪಿಸಿದ ಅವರು, ಮನೆ ತೆರಿಗೆ, ಘನತ್ಯಾಜ್ಯ ತೆರಿಗೆ, ಬಳಕೆ ಶುಲ್ಕ ಹೀಗೆ ನೂರಾರು ರೀತಿಯಲ್ಲಿ ಜನರಿಂದ ಸಾವಿರಾರು ಕೋಟಿ ರೂಪಾಯಿ ತೆರಿಗೆಯನ್ನು ಸರ್ಕಾರ ದರೋಡೆ ಮಾಡುತ್ತಿದೆ. ಎಲ್ಲದಕ್ಕೂ ಸೆಸ್ ವಿಧಿಸಿ, ಮೂಲಸೌಕರ್ಯ ಅಭಿವೃದ್ಧಿಪಡಿಸುವುದಾಗಿ ಹೇಳುವ ಸರ್ಕಾರ, ವಾಸ್ತವದಲ್ಲಿ ಜನರಿಗೆ ನೀಡುತ್ತಿರುವ ಸೇವೆ ಏನು? ಜನರ ತೆರಿಗೆಯ ಹಣವನ್ನು ಅಭಿವೃದ್ಧಿಗೆ ಬಳಸುವ ಬದಲು ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿದರು.

ಮುಂಗಾರು ಮಳೆಗಾಲಕ್ಕೂ ಮುನ್ನ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಸರ್ಕಾರವು ಗಮನವೇ ಹರಿಸಿಲ್ಲ. ಮಾರತಹಳ್ಳಿ, ಸಿಲ್ಕ್ ಬೋರ್ಡ್, ಕೆ.ಆರ್. ಸರ್ಕಲ್‌ನಂತಹ ಪ್ರಮುಖ ಜಂಕ್ಷನ್‌ಗಳು ಪ್ರತಿ ಮಳೆಗೂ ಜಲಾವೃತವಾಗುತ್ತವೆ. ಇಡೀ ಬೆಂಗಳೂರು ಮುಳುಗುವಂತೆ ಸರ್ಕಾರ ಮಾಡಿದೆ. ಮಳೆಗಾಲದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಹಣದ ಕೊರತೆಯೇನೂ ಇಲ್ಲ. ಆದರೆ ಆಡಳಿತ ನಡೆಸುವ ಇಚ್ಛಾಶಕ್ತಿಯ ಕೊರತೆಯಿದೆ. ಬೆಸ್ಕಾಂ ಮತ್ತು ಜಲಮಂಡಳಿಗಳ ಮೂಲಕ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯ ಬರುತ್ತಿದ್ದರೂ, ಆ ಹಣ ಸದುಪಯೋಗವಾಗುತ್ತಿಲ್ಲ ಎಂದು ದೂರಿದರು.

‘ಕುರ್ಚಿ ಕಚ್ಚಾಟದಲ್ಲಿ ಮರೆತ ಜನಸೇವೆ’

ರಾಜ್ಯ ಸರ್ಕಾರದ ಆಂತರಿಕ ಭಿನ್ನಾಭಿಪ್ರಾಯ ಮತ್ತು ಅಧಿಕಾರದ ಕಚ್ಚಾಟವೇ ನಗರದ ದುಸ್ಥಿತಿಗೆ ಕಾರಣ. ಜನರ ಕಾಳಜಿಗಿಂತ ಇಲ್ಲಿ ಕುರ್ಚಿ ಉಳಿಸಿಕೊಳ್ಳುವ ಮತ್ತು ಹಿಡಿಯುವ ಕಚ್ಚಾಟವೇ ದೊಡ್ಡದಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನರು ಕೇವಲ ಮಳೆನೀರು ಮತ್ತು ಕಣ್ಣೀರನ್ನೇ ಕಾಣುತ್ತಿದ್ದಾರೆ. ನೆಮ್ಮದಿಯಾಗಿ ಬದುಕುವ ಪರಿಸ್ಥಿತಿ ಇಲ್ಲವಾಗಿದೆ. ಸರ್ಕಾರ ಎಲ್ಲ ರೀತಿಯಲ್ಲೂ ವಿಫಲವಾಗಿದೆ ಎಂದು ಅವರು ಟೀಕಿಸಿದರು.

ಸರ್ಕಾರವು ಅಬ್ಬರದಿಂದ ಪ್ರಚಾರ ಮಾಡುತ್ತಿರುವ 'ಬ್ರ್ಯಾಂಡ್ ಬೆಂಗಳೂರು' ಕಲ್ಪನೆಯನ್ನು ವ್ಯಂಗ್ಯವಾಡಿದ ಅವರು, ಇದು ಬ್ರ್ಯಾಂಡ್ ಬೆಂಗಳೂರು ಅಲ್ಲ, ಇದು ಅವ್ಯವಸ್ಥೆಯ ಬೆಂಗಳೂರು. ಬ್ರ್ಯಾಂಡ್ ಹೆಸರನ್ನು ಇಟ್ಟುಕೊಂಡು ಮಾರುಕಟ್ಟೆಯಲ್ಲಿ ಸಂಚರಿಸುವ ಸರ್ಕಾರ, ವಾಸ್ತವದಲ್ಲಿ ಮೂಲಸೌಕರ್ಯ ಒದಗಿಸಲು ಸೋತಿದೆ. ಬೆಂಗಳೂರು ದಕ್ಷಿಣ ಮತ್ತು ಉತ್ತರ ಭಾಗದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಈ ಸರ್ಕಾರ ಶೂನ್ಯ ಸಾಧನೆ ಮಾಡಿದೆ ಎಂದು ಕಿಡಿಕಾರಿದರು.

Read More
Next Story