ಶುದ್ಧೀಕರಣ ಎಂದರೆ ಅಸ್ಪೃಶ್ಯತೆಯ ಸಮ್ಮತಿ: ದಲಿತರ ಅವಮಾನ ವಿರುದ್ಧ ರಾಹುಲ್ ಗಾಂಧಿ ಸಮರ
x

'ಶುದ್ಧೀಕರಣ' ಎಂದರೆ ಅಸ್ಪೃಶ್ಯತೆಯ ಸಮ್ಮತಿ: ದಲಿತರ ಅವಮಾನ ವಿರುದ್ಧ ರಾಹುಲ್ ಗಾಂಧಿ ಸಮರ

ದೇಶದಲ್ಲಿಂದು ಎರಡು ಸಿದ್ಧಾಂತಗಳ ನಡುವೆ ಯುದ್ಧ ನಡೆಯುತ್ತಿದೆ. ಒಂದು ಕಡೆ ಸಂವಿಧಾನದ ಸಿದ್ಧಾಂತ, ಇನ್ನೊಂದೆಡೆ ಬಿಜೆಪಿ-ಆರ್‌ಎಸ್‌ಎಸ್‌ನ ಸಿದ್ಧಾಂತವಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.


Click the Play button to hear this message in audio format

ದೇಶದಲ್ಲಿಂದು ಎರಡು ಸಿದ್ಧಾಂತಗಳ ನಡುವೆ ಯುದ್ಧ ನಡೆಯುತ್ತಿದೆ. ಒಂದು ಕಡೆ ಸಂವಿಧಾನದ ಸಿದ್ಧಾಂತವಿದ್ದರೆ, ಇನ್ನೊಂದು ಕಡೆ ಬಿಜೆಪಿ-ಆರ್‌ಎಸ್‌ಎಸ್‌ನ ಸಿದ್ಧಾಂತವಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ದಲಿತರು ನಿರಂತರವಾಗಿ ಅವಮಾನ ಮತ್ತು ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತರು ಸಾವಿರಾರು ವರ್ಷಗಳಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇಂದಿಗೂ ಸಮಾಜದಲ್ಲಿ ಬದಲಾವಣೆ ಆಗಿಲ್ಲ ಎಂಬುದಕ್ಕೆ ನಿದರ್ಶನಗಳನ್ನು ನೀಡಿದರು. ದೇಶದ ಹಲವು ಶಾಲೆಗಳಲ್ಲಿ ದಲಿತ ಮಕ್ಕಳನ್ನು ಶೌಚಾಲಯ ಸ್ವಚ್ಛಗೊಳಿಸಲು ಮತ್ತು ನೆಲ ಗುಡಿಸಲು ಬಲವಂತಪಡಿಸಲಾಗುತ್ತದೆ. ಬಾವಿಗಳಿಂದ ನೀರು ಸೇದುವಂತಿಲ್ಲ, ಚಹಾ ಅಂಗಡಿಗಳಲ್ಲಿ ದಲಿತರಿಗೆ ಪ್ರತ್ಯೇಕ ಬಿಸಾಡುವ ಕಪ್‌ಗಳಲ್ಲಿ ಚಹಾ ನೀಡಲಾಗುತ್ತದೆ. ಮದುವೆ ಮೆರವಣಿಗೆಯಲ್ಲಿ ಕುದುರೆ ಏರಿದರೆ ದಲಿತರನ್ನು ಥಳಿಸಲಾಗುತ್ತದೆ, ಹೀಗಾಗಿ ದಲಿತ ಯುವಕರು ಮದುವೆಯ ಮೆರವಣಿಗೆಯಲ್ಲಿ ಹೆಲ್ಮೆಟ್ ಧರಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

‘ಶುದ್ಧೀಕರಣ’ ಎಂಬ ಅಸ್ಪೃಶ್ಯತೆಯ ಆಚರಣೆ

ರಾಹುಲ್ ಗಾಂಧಿ ಅವರು ದಲಿತ ನಾಯಕರ ವಿರುದ್ಧ ನಡೆಯುತ್ತಿರುವ ಅವಮಾನದ ನಿದರ್ಶನಗಳನ್ನು ಮುಂದಿಟ್ಟರು. ರಾಜಸ್ಥಾನದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಟಿಕಾರಾಮ್ ಜುಲ್ಲಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಬಿಜೆಪಿ ನಾಯಕರು ಶುದ್ಧೀಕರಣ ಮಾಡಿದರು. ಅದೇ ರೀತಿ ಜಿತನ್ ರಾಮ್ ಮಾಂಝಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ ನಂತರವೂ ಇಂತಹದೇ ಕೃತ್ಯ ನಡೆಸಲಾಯಿತು. ಅಷ್ಟೇ ಅಲ್ಲದೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗಸ್ಟ್ 8ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಭಾಷಣ ಮಾಡಿದ ನಂತರ, ಬಿಜೆಪಿ ನಾಯಕರು ಅದೇ ಸ್ಥಳದಲ್ಲಿ ಶುದ್ಧೀಕರಣ ನಡೆಸಿದ್ದಾರೆ ಎಂದು ಆರೋಪಿಸಿದರು. "ಯಾರು ಈ ಕೆಲಸ ಮಾಡುತ್ತಿದ್ದಾರೆ? ಅವರೆಲ್ಲರೂ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು. ನಾವು ಇದನ್ನು ಶುದ್ಧೀಕರಣ ಎಂದು ಕರೆಯುತ್ತೇವೆ, ಆದರೆ ವಾಸ್ತವವಾಗಿ ಇದು ಅಸ್ಪೃಶ್ಯತೆಯನ್ನು ಸಮ್ಮತಿಸುವ ಕೃತ್ಯವಾಗಿದೆ" ಎಂದು ಕಿಡಿಕಾರಿದರು.

ಪ್ರಧಾನಿಯವರ ಮೌನಕ್ಕೆ ಪ್ರಶ್ನೆ

ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣದ ನಂತರ ಬಿಜೆಪಿ ನಾಯಕರು ಶುದ್ಧೀಕರಣ ನಡೆಸಿದ್ದಾರೆ. ಇದನ್ನು ಉತ್ತರಾಖಂಡ ಬಿಜೆಪಿ ರಾಜ್ಯಾಧ್ಯಕ್ಷ ಮಹೇಂದ್ರ ಭಟ್ ಅವರು ಬಹಿರಂಗವಾಗಿಯೇ ಸಮರ್ಥಿಸಿಕೊಂಡಿದ್ದಾರೆ. ಇಂತಹ ಘಟನೆ ನಡೆದು 20 ದಿನ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಸಂವಿಧಾನದ ಪ್ರಕಾರ ಅಪರಾಧವಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಯಾಕೆ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದರು. "ನಮ್ಮ ಬೇಡಿಕೆಯೆಂದರೆ, ಹಲ್ದ್ವಾನಿಯಲ್ಲಿ ಈ ಶುದ್ಧೀಕರಣ ನಡೆಸಿದವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಎಫ್‌ಐಆರ್ ದಾಖಲಿಸಲು ಆದೇಶಿಸಬೇಕು. ಇದು ಬಿಜೆಪಿ-ಆರ್‌ಎಸ್‌ಎಸ್‌ನ ಮನಸ್ಥಿತಿಯನ್ನು ತೋರಿಸುತ್ತದೆ. ದಲಿತರು ಘನತೆಯಿಂದ ಬದುಕಬಾರದು ಮತ್ತು ಯಶಸ್ಸು ಕಾಣಬಾರದು ಎಂಬುದು ಅವರ ಗುರಿ. ಖರ್ಗೆ ಅವರಿಗೆ ನ್ಯಾಯ ಸಿಗಬೇಕು, ಇದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಕರ್ತವ್ಯ" ಎಂದು ಒತ್ತಾಯಿಸಿದರು.

ರಾಜಕೀಯ ಸಂಘರ್ಷಕ್ಕೆ ಹೊಸ ತಿರುವು

ರಾಹುಲ್ ಗಾಂಧಿಯವರ ಈ ಹೇಳಿಕೆಗಳು ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ದಲಿತ ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಇಂತಹ ಕೃತ್ಯಗಳು ಸಾಮಾಜಿಕ ಸಾಮರಸ್ಯವನ್ನು ಹಾಳುಮಾಡುತ್ತಿವೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಪಕ್ಷ ಮತ್ತು ಸಂವಿಧಾನವನ್ನು ಬದಲಾಯಿಸಲು ಹೊರಟಿರುವ ಶಕ್ತಿಗಳ ನಡುವಿನ ಸಂಘರ್ಷ ಎಂದರು. ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ನಡೆಸುವ ಶುದ್ಧೀಕರಣದಂತಹ ಕೃತ್ಯಗಳು ಅಸ್ಪೃಶ್ಯತೆಯನ್ನು ಮತ್ತೆ ವೈಭವೀಕರಿಸುವ ಪ್ರಯತ್ನವಾಗಿದೆ. ಇದು ಕೇವಲ ಒಂದು ರಾಜಕೀಯ ಪಕ್ಷದ ವಿರುದ್ಧದ ಮಾತಲ್ಲ, ಬದಲಾಗಿ ದೇಶದ ಅಸಮಾನತೆಯ ವಿರುದ್ಧದ ಧ್ವನಿಯಾಗಿದೆ ಎಂದು ಕಿಡಿಕಾರಿದರು.

Read More
Next Story