ಮಹಾರಾಷ್ಟ್ರದಿಂದ ರಾಧಾ-ಕೃಷ್ಣ ಯೋಜನೆ ಪ್ರಸ್ತಾಪ, ಆಲಮಟ್ಟಿಗೆ ಆತಂಕ
ಮಹಾರಾಷ್ಟ್ರದ ರಾಧಾ-ಕೃಷ್ಣ ಕುಡಿಯುವ ನೀರು ಹಾಗೂ ನೀರಾವರಿ ಯೋಜನೆಯಿಂದಾಗಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಜೀವನಾಡಿಯಾಗಿರುವ ಆಲಮಟ್ಟಿ ಜಲಾಶಯಕ್ಕೆ ಹರಿದುಬರುತ್ತಿರುವ ನೀರು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಲಿದೆ.
ಮಹಾರಾಷ್ಟ್ರ ಸರ್ಕಾರವು ಕೊಲ್ಹಾಪುರ ಜಿಲ್ಲೆಯ ಇಚಲಕರಂಜಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ 'ರಾಧಾ-ಕೃಷ್ಣ ನೀರಾವರಿ ಯೋಜನೆ' ಪ್ರಸ್ತಾಪಿಸಿದೆ. ಆದರೆ, ಇದೇ ಯೋಜನೆ ಈಗ ನೆರೆ ರಾಜ್ಯಗಳ ನಡುವೆ ಮತ್ತೊಂದು ಬೃಹತ್ ಅಂತರರಾಜ್ಯ ನದಿ ನೀರು ಹಂಚಿಕೆ ವಿವಾದಕ್ಕೆ ನಾಂದಿ ಹಾಡುವ ಆತಂಕ ಎದುರಾಗಿದೆ.
ಈ ಯೋಜನೆಯನ್ನು ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಸಂಗ್ರಹವಾಗುವ ನೀರನ್ನು ಬಳಸಿಕೊಂಡು ರೂಪಿಸಲಾಗುತ್ತಿದೆ. ಕೃಷ್ಣಾ ನೀರು ವಿವಾದ ನ್ಯಾಯಾಧಿಕರಣ ಮಹಾರಾಷ್ಟ್ರಕ್ಕೆ ಹಂಚಿಕೆ ಮಾಡಿರುವ ನೀರಿನ ಪಾಲಿನ ಮಿತಿಯೊಳಗೇ ಈ ಯೋಜನೆ ಇರಲಿದೆ, ನಾವು ಯಾವುದೇ ಕಾಯ್ದೆ ಅಥವಾ ನಿಯಮವನ್ನು ಉಲ್ಲಂಘಿಸುತ್ತಿಲ್ಲ ಅನ್ನೋದು ಮಹಾರಾಷ್ಟ್ರ ಸರ್ಕಾರದ ಪ್ರಬಲ ಪ್ರತಿಪಾದನೆ. ಆದರೆ, ಇದೇ ಯೋಜನೆ ಈಗ ಮೂರು ರಾಜ್ಯಗಳ ಮಧ್ಯೆ ದೊಡ್ಡ ರಾಜಕೀಯ ಮತ್ತು ಕಾನೂನು ಸಂಘರ್ಷಕ್ಕೆ ಕಾರಣವಾಗಿದೆ.
ಕೃಷ್ಣಾ ನದಿ ಮಹಾರಾಷ್ಟ್ರದಲ್ಲಿ ಹುಟ್ಟಿ, ಕರ್ನಾಟಕದ ಮೂಲಕ ಹಾದು ಹೋಗಿ, ನಂತರ ತೆಲಂಗಾಣ ಹಾಗೂ ಆಂಧ್ರಪ್ರದೇಶವನ್ನು ಪ್ರವೇಶಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಈಗ ಮಹಾರಾಷ್ಟ್ರದ ಮೇಲ್ಭಾಗದಲ್ಲಿ ಹೊಸದಾಗಿ ನೀರು ಸಂಗ್ರಹಿಸಿ ಎತ್ತುವುದರಿಂದ, ಕರ್ನಾಟಕದ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣ ಕಡಿಮೆಯಾಗುವ ದೊಡ್ಡ ಆತಂಕ ಎದುರಾಗಿದೆ. ಇದರಿಂದ ಕರ್ನಾಟಕ ಮಾತ್ರವಲ್ಲದೆ, ನದಿಯ ಕೆಳಭಾಗದಲ್ಲಿರುವ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೂ ಹರಿಯುವ ನೀರಿನ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗಲಿದೆ.
ಕೃಷ್ಣಾ ನದಿಯು ಭಾರತದ ಪರ್ಯಾಯ ದ್ವೀಪದಲ್ಲಿ 2ನೇ ಅತಿದೊಡ್ಡ ನದಿ. ಇದು ಮಹಾರಾಷ್ಟ್ರದ ಮಹಾಬಲೇಶ್ವರದ ಬಳಿ ಉಗಮಿಸಲಿದೆ. ಮಹಾರಾಷ್ಟ್ರದಲ್ಲಿ 303 ಕಿ.ಮೀ ದೂರ ಹರಿದರೆ, ಕರ್ನಾಟಕದಲ್ಲಿ 480 ಕಿ.ಮೀ ಹಾಗೂ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಒಟ್ಟು 1300 ಕಿ.ಮೀ ಹರಿದು ಬಂಗಾಳ ಕೊಲ್ಲಿ ಸೇರಲಿದೆ. ಮಹಾರಾಷ್ಟ್ರ, ಕರ್ನಾಟಕ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಒಟ್ಟು 2,57,000 ಕಿ.ಮೀ ಜಲಾನಯನ ಪ್ರದೇಶ ಒಳಗೊಂಡಿದೆ. ಮಹಾರಾಷ್ಟ್ರದಲ್ಲಿ 68,800 ಕಿ.ಮೀ, ಕರ್ನಾಟಕದಲ್ಲಿ 1,12,600 ಕಿ.ಮೀ ಹಾಗೂ ಆಂಧ್ರಪ್ರದೇಶದಲ್ಲಿ 75,600 ಕಿ.ಮೀ ಆವರಿಸಿದೆ. ನ್ಯಾ. ಬ್ರಿಜೇಶ್‌ಕುಮಾರ್ ನೇತೃತ್ವದ ನ್ಯಾಯಾಧಿಕರಣ-2ರಿಂದ ರಾಜ್ಯಕ್ಕೆ ಒಟ್ಟಾರೆ ಹಂಚಿಕೆಯಾಗಿರುವ ನೀರಿನ ಪ್ರಮಾಣ 911 ಟಿಎಂಸಿ. ಮಹಾರಾಷ್ಟ್ರಕ್ಕೆ 666, ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ 1001 ಟಿಎಂಸಿ ನೀರು ಹಂಚಿಕೆಯಾಗಿದೆ.
ಮಹಾರಾಷ್ಟ್ರ ಸರ್ಕಾರ ಈ 'ರಾಧಾ-ಕೃಷ್ಣ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆ'ಯನ್ನು ಜಾರಿಗೆ ತರಲು ಮುಂದಾಗಿರುವುದರ ಹಿಂದೆ 5 ಪ್ರಮುಖ ಕಾರಣಗಳಿವೆ.
ಇಚಲಕರಂಜಿ ನಗರದ ಭೀಕರ ಕುಡಿಯುವ ನೀರಿನ ಅಭಾವ: ಕೊಲ್ಹಾಪುರ ಜಿಲ್ಲೆಯ ಪ್ರಮುಖ ಕೈಗಾರಿಕಾ ಹಾಗೂ 'Textile Hub' ಆಗಿರುವ ಇಚಲಕರಂಜಿ ತೀವ್ರ ಕುಡಿಯುವ ನೀರಿನ ಅಭಾವ ಎದುರಿಸುತ್ತಿದೆ. ಪ್ರಸ್ತುತ ಪಂಚಗಂಗಾ ಮತ್ತು ಕೃಷ್ಣಾ ನದಿಗಳಿಂದ ನೀರು ಪೂರೈಸುತ್ತಿದ್ದರೂ, ನದಿ ನೀರು ಕಲುಷಿತಗೊಳ್ಳುತ್ತಿರುವುದು ಮತ್ತು ಸರಬರಾಜಿನಲ್ಲಿ ತೀವ್ರ ವ್ಯತ್ಯಯ ಉಂಟಾಗುತ್ತಿರುವುದರಿಂದ ನಗರಕ್ಕೆ ಶುದ್ಧ ನೀರು ಸಿಗುತ್ತಿಲ್ಲ.
ಹಳೆಯ ಯೋಜನೆಗಳಿಗೆ ಎದುರಾದ ತೀವ್ರ ವಿರೋಧ: ಈ ರಾಧಾ-ಕೃಷ್ಣ ಯೋಜನೆಗಿಂತ ಮುಂಚೆ ಮಹಾರಾಷ್ಟ್ರ ಸರ್ಕಾರ ಇಚಲಕರಂಜಿಗೆ ನೀರು ತರಲು ಕಾಳಮ್ಮವಾಡಿ, ದಾನೋಳಿ ಹಾಗೂ ಅಮೃತ್ ಯೋಜನೆಯಡಿ ಸುಳುಕೂಡ್ (ದೂಧ್‌ಗಂಗಾ) ಯೋಜನೆಗಳನ್ನು ರೂಪಿಸಿತ್ತು. ಆದರೆ, ಆಯಾ ನದಿ ದಂಡೆಯ ಸ್ಥಳೀಯರು ಮತ್ತು ರೈತರು ಉಗ್ರ ಪ್ರತಿಭಟನೆ ನಡೆಸಿದ್ದರಿಂದ ಆ ಯೋಜನೆಗಳನ್ನು ಕೈಬಿಡಬೇಕಾಯಿತು. ಹೀಗಾಗಿ ಸ್ಥಳೀಯರ ವಿರೋಧವಿಲ್ಲದ ಹೊಸ ಮೂಲವನ್ನು ಹುಡುಕುವುದು ಮಹಾರಾಷ್ಟ್ರಕ್ಕೆ ಅನಿವಾರ್ಯವಾಗಿತ್ತು.
ಯಾವುದೇ ವಿರೋಧವಿಲ್ಲದ 'ಜೂನ್ ದಾನ್ವಾಡ್' ಜಾಗದ ಆಯ್ಕೆ: ತನ್ನದೇ ರಾಜ್ಯದ ನದಿ ದಂಡೆಯ ಗ್ರಾಮಸ್ಥರ ಆಕ್ಷೇಪ ತಪ್ಪಿಸಲು, ಮಹಾರಾಷ್ಟ್ರ ಸರ್ಕಾರ ಕರ್ನಾಟಕ ಗಡಿಯಲ್ಲಿರುವ 'ಕಲ್ಲೋಳ ಬ್ಯಾರೇಜ್'ಗಿಂತ ಸುಮಾರು 1.5 ಕಿಲೋಮೀಟರ್ ದೂರದಲ್ಲಿರುವ 'ಜೂನ್ ದಾನ್ವಾಡ್' ಗ್ರಾಮದ ಪುರಾತನ ರಾಧಾ-ಕೃಷ್ಣ ದೇವಾಲಯದ ಆವರಣದ ನದಿ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದೆ. ಹಾಗಾಗಿಯೇ ಈ ಯೋಜನೆಗೆ 'ರಾಧಾ-ಕೃಷ್ಣ ನೀರು ಪೂರೈಕೆ ಯೋಜನೆ' ಎಂದು ಹೆಸರಿಡಲಾಗಿದೆ.
ದೀರ್ಘಕಾಲೀನ ಅಗತ್ಯತೆ: ಅಂದರೆ, ಬರುವ 2054ರವರೆಗಿನ ಇಚಲಕರಂಜಿ ನಗರದ ಜನಸಂಖ್ಯೆಯನ್ನು ಅಂದಾಜು ಮಾಡಿ, ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಪರಿಹಾರ ಒದಗಿಸಲು ಈ ಯೋಜನೆಯನ್ನು ಡಿಸೈನ್ ಮಾಡಲಾಗಿದೆ.
ತನ್ನ ಪಾಲಿನ ನೀರಿನ ಪೂರ್ಣ ಬಳಕೆ: ನ್ಯಾಯಾಧೀಕರಣ ತನಗೆ ಹಂಚಿಕೆ ಮಾಡಿರುವ ನೀರಿನ ಪಾಲಿನ ಮಿತಿಯೊಳಗೇ ಈ ಯೋಜನೆ ಬರುತ್ತಿದ್ದು, ಸಿಕ್ಕಿರುವ ಹಕ್ಕಿನ ನೀರನ್ನು ಸದ್ಬಳಕೆ ಮಾಡಿಕೊಳ್ಳುವುದು ತಮ್ಮ ಹಕ್ಕು ಎಂದು ಮಹಾರಾಷ್ಟ್ರ ಪ್ರತಿಪಾದಿಸುತ್ತಿದೆ. ತನ್ನ ಸ್ವಂತ ರಾಜ್ಯದ ಗ್ರಾಮಸ್ಥರ ವಿರೋಧಕ್ಕೆ ತುತ್ತಾಗಿದ್ದ ಸುಳುಕೂಡ್ ಯೋಜನೆಗೆ ಪರ್ಯಾಯವಾಗಿ, ಕರ್ನಾಟಕದ ಗಡಿಗೆ ತೀರಾ ಹತ್ತಿರದಲ್ಲಿ ನೀರು ಎತ್ತಿ ಇಚಲಕರಂಜಿಯ ನೀರಿನ ಅಭಾವ ನೀಗಿಸಲು ಮಹಾರಾಷ್ಟ್ರ ಈಗ ಮುಂದಾಗಿದೆ.
ಆದರೆ, ಈ ರಾಧಾ-ಕೃಷ್ಣ ಯೋಜನೆಯಿಂದ ಕರ್ನಾಟಕಕ್ಕೆ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಕೃಷ್ಣಾ ಜಲಾನಯನ ಪ್ರದೇಶದ ರೈತರಿಗೆ ನೇರವಾಗಿ ಯಾವೆಲ್ಲಾ ದೊಡ್ಡ ಅನಾನುಕೂಲಗಳು ಮತ್ತು ಅಪಾಯಗಳಿವೆ.
ಆಲಮಟ್ಟಿ ಜಲಾಶಯದ ಒಳಹರಿವಿಗೆ ಕಡಿತ: ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಜೀವನಾಡಿಯಾಗಿರುವ ಆಲಮಟ್ಟಿ ಜಲಾಶಯಕ್ಕೆ ಹರಿದುಬರುವ ನೀರು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಗಡಿಗೆ ಸಮೀಪವಿರುವ ಜೂನ್ ದಾನ್ವಾಡ್ ಬಳಿ ಭಾರಿ ಪ್ರಮಾಣದಲ್ಲಿ ನೀರನ್ನು ಎತ್ತಿ, ಎಂ.ಎಸ್.ಇ.ಬಿ (MSEB) ಪಂಪ್-ಹೌಸ್ಗಳ ಮೂಲಕ ಇಚಲಕರಂಜಿಗೆ ಪಂಪ್ ಮಾಡಲು ಯೋಜಿಸಲಾಗಿದೆ. ಮಹಾರಾಷ್ಟ್ರ ಭಾಗದಲ್ಲೇ ನೀರು ಪಂಪ್ ಆಗುವುದರಿಂದ ಆಲಮಟ್ಟಿಗೆ ಬರುವ ಒಳಹರಿವು ಗಣನೀಯವಾಗಿ ಕುಸಿಯಲಿದೆ.
ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಕುಡಿಯುವ ನೀರಿಗೆ ಕುತ್ತು: ಕೃಷ್ಣಾ ನದಿಯು ಕರ್ನಾಟಕವನ್ನು ಪ್ರವೇಶಿಸುವ ಗಡಿಭಾಗದಲ್ಲೇ ನೀರು ಎತ್ತುವುದರಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ರಾಯಬಾಗ, ಕಾಗವಾಡ, ಅಥಣಿ ಮುಂತಾದ ತಾಲೂಕುಗಳ ಬ್ಯಾರೇಜ್‌ಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯಲಿದೆ. ಬೇಸಿಗೆಯಲ್ಲಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ನದಿ ದಂಡೆಯ ನೂರಾರು ಗ್ರಾಮ ಹಾಗೂ ನಗರಗಳಿಗೆ ಕುಡಿಯುವ ನೀರಿನ ಭೀಕರ ಅಭಾವ ಎದುರಾಗಲಿದೆ.
ಗಡಿಭಾಗದ ಕಬ್ಬಿನ ಬೆಳೆಗೆ ಭಾರಿ ನಷ್ಟ: ಚಿಕ್ಕೋಡಿ ಮತ್ತು ಅಥಣಿ ಭಾಗದಲ್ಲಿ ನದಿ ನೀರಾವರಿಯನ್ನೇ ನೆಚ್ಚಿಕೊಂಡು ಅಪಾರ ಪ್ರಮಾಣದಲ್ಲಿ ಕಬ್ಬು ಮತ್ತು ಇತರ ಬೆಳೆಗಳನ್ನು ಬೆಳೆಯಲಾಗುತ್ತದೆ. ಬೇಸಿಗೆಯಲ್ಲಿ ಈಗಾಗಲೇ ನದಿಯಲ್ಲಿ ನೀರು ಕಡಿಮೆಯಿರುತ್ತದೆ. ಇಂತಹ ಸಮಯದಲ್ಲಿ ಮಹಾರಾಷ್ಟ್ರವು ನಿರಂತರವಾಗಿ ನೀರು ಎತ್ತಿದರೆ, ಕರ್ನಾಟಕ ಭಾಗದ ಏತ ನೀರಾವರಿ ಪಂಪ್‌ಸೆಟ್‌ಗಳಿಗೆ ನೀರೇ ಸಿಗದೆ ಬೆಳೆಗಳು ಒಣಗಿ ರೈತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಪಾರದರ್ಶಕತೆಯ ಅಭಾವ ಮತ್ತು ಅಕ್ರಮ ಬಳಕೆಯ ಭೀತಿ: ಕೃಷ್ಣಾ ನೀರು ವಿವಾದಗಳ ನ್ಯಾಯಾಧಿಕರಣದ (KWDT) ತೀರ್ಪಿನ ಪ್ರಕಾರ ಪ್ರತಿಯೊಂದು ರಾಜ್ಯವೂ ತನಗೆ ನಿಗದಿಯಾದಷ್ಟೇ ನೀರನ್ನು ಬಳಸಬೇಕು. ಆದರೆ ಮಹಾರಾಷ್ಟ್ರ ಸರ್ಕಾರವು ಈ ಯೋಜನೆಯ ಸಂಪೂರ್ಣ ತಾಂತ್ರಿಕ ನಕ್ಷೆ, ಜಲಾಶಯದ ಸಾಮರ್ಥ್ಯ ಹಾಗೂ ನೀರು ಎತ್ತುವ ಸಾಮರ್ಥ್ಯದ ಮಾಹಿತಿಯನ್ನು ಕರ್ನಾಟಕದೊಂದಿಗೆ ಹಂಚಿಕೊಂಡೇ ಇಲ್ಲ! ಹೀಗಾಗಿ, ಕುಡಿಯುವ ನೀರಿನ ನೆಪದಲ್ಲಿ ಮಹಾರಾಷ್ಟ್ರ ತನ್ನ ಹಂಚಿಕೆಯ ಪಾಲಿಗಿಂತ ಹೆಚ್ಚಿನ ನೀರನ್ನು ಎತ್ತಿ ಬಳಸಿಕೊಳ್ಳುವ ಭೀತಿ ನಮಗಿದೆ.
ಬೇಸಿಗೆಯಲ್ಲಿ ಕೃಷ್ಣಾ ನದಿ ಸಂಪೂರ್ಣ ಒಣಗುವ ಅಪಾಯ: ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ತಿಂಗಳ ಬೇಸಿಗೆಯಲ್ಲಿ ನದಿಯಲ್ಲಿ ನೀರು ಕಡಿಮೆಯಿದ್ದಾಗ ಕರ್ನಾಟಕವು ಮಹಾರಾಷ್ಟ್ರದ ಕೋಯ್ನಾ ಅಥವಾ ಕಾಳಮ್ಮವಾಡಿ ಜಲಾಶಯಗಳಿಂದ ನೀರು ಹರಿಸುವಂತೆ ಮನವಿ ಮಾಡಿಕೊಳ್ಳುತ್ತದೆ. ಈಗ ಗಡಿಯಲ್ಲೇ ಬೃಹತ್ ಪಂಪಿಂಗ್ ವ್ಯವಸ್ಥೆ ಬಂದರೆ, ಬೇಸಿಗೆಯಲ್ಲಿ ನದಿ ಪಾತ್ರ ಸಂಪೂರ್ಣವಾಗಿ ಒಣಗಿಹೋಗುವ ಅಪಾಯವಿದೆ.
ಕನ್ನಡಿಗರ ಒತ್ತಾಯ ಮತ್ತು ಮೇಕೆದಾಟು ಹೋಲಿಕೆ
ಇದೇ ಕಾರಣಕ್ಕೆ, ಮಹಾರಾಷ್ಟ್ರದ ಈ ರಾಧಾ-ಕೃಷ್ಣ ನೀರಾವರಿ ಯೋಜನೆಗೆ ಕರ್ನಾಟಕದ ರೈತರು ಹಾಗೂ ಕನ್ನಡ ಪರ ಸಂಘಟನೆಗಳು ಈಗ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.
ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಪ್ರಕಾರ ಯಾವುದೇ ಹೊಸ ಯೋಜನೆಗಳು ಕೆಳಭಾಗದ ರಾಜ್ಯಗಳ ಹಕ್ಕುಗಳಿಗೆ ಧಕ್ಕೆ ತರಬಾರದು. ಆದರೆ ಮಹಾರಾಷ್ಟ್ರವು ಈ ನಿಯಮ ಮೀರಿ ಹೆಚ್ಚಿನ ನೀರನ್ನು ಬಳಸಿಕೊಳ್ಳಬಹುದು ಎಂಬುದು ರೈತರ ಕಳವಳ. ಹೀಗಾಗಿ ಮಹಾರಾಷ್ಟ್ರ ಸರ್ಕಾರವು ಈ ಯೋಜನೆಯ ಸಂಪೂರ್ಣ ತಾಂತ್ರಿಕ ವಿವರಗಳು, ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ, ನೀರಿನ ಬಳಕೆ ಹಾಗೂ ನ್ಯಾಯಾಧಿಕರಣದಿಂದ ಪಡೆದಿರುವ ಅನುಮತಿ ಪತ್ರಗಳನ್ನು ಕೂಡಲೇ ಬಹಿರಂಗಪಡಿಸಬೇಕೆಂದು ಕನ್ನಡ ಸಂಘಟನೆಗಳು ಗಟ್ಟಿಯಾಗಿ ಒತ್ತಾಯಿಸುತ್ತಿವೆ.

