ಕಾಂಗ್ರೆಸ್ ಸರ್ಕಾರದ ವಿರುದ್ಧ 'ಕಮಿಷನ್' ಬಾಂಬ್ ಸಿಡಿಸಿದ ಗುತ್ತಿಗೆದಾರರು
ಹಿಂದಿನ ಸರ್ಕಾರದ ಅವಧಿಯಲ್ಲಿ ಕಮಿಷನ್ ಪ್ರಮಾಣ 40 ಪರ್ಸೆಂಟ್ ಇತ್ತು, ಆದರೆ ಈಗ ಆ ಪ್ರಮಾಣ ಅದಕ್ಕಿಂತಲೂ ಹೆಚ್ಚಾಗಿದೆ ಎಂಬುದು ಗುತ್ತಿಗೆದಾರರ ಅಳಲು. ರಾಜ್ಯದ ಶೇಕಡಾ 75ರಷ್ಟು ಶಾಸಕರು ಕಮಿಷನ್ ಕೇಳುತ್ತಿದ್ದಾರೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ಇಡೀ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ರಾಜ್ಯ ಗುತ್ತಿಗೆದಾರರ ಸಂಘ, ಇದೀಗ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಅದೇ ಅಸ್ತ್ರವನ್ನು ಪ್ರಯೋಗಿಸಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಹಿಂದಿನ ಸರ್ಕಾರಕ್ಕಿಂತಲೂ ಹೆಚ್ಚಿನ ಕಮಿಷನ್ ದಂಧೆ ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ. 'ದ ಫೆಡರಲ್ ಕರ್ನಾಟಕ' ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪ್ರಸ್ತುತ ಸರ್ಕಾರದ ಕಾರ್ಯವೈಖರಿ ಹಾಗೂ ಶಾಸಕರ ಭ್ರಷ್ಟಾಚಾರದ ಕುರಿತು ಹಲವು ಸ್ಫೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
38 ಸಾವಿರ ಕೋಟಿ ಬಾಕಿ ಬಿಲ್
ರಾಜ್ಯದಲ್ಲಿ ಗುತ್ತಿಗೆದಾರರು ಮಾಡಿರುವ ಕಾಮಗಾರಿಗಳ ಸುಮಾರು ೩೮ ಸಾವಿರ ಕೋಟಿ ರೂಪಾಯಿಗಳ ಬಿಲ್ ಬಾಕಿ ಉಳಿದಿದೆ. ಈ ಹಣವನ್ನು ಬಿಡುಗಡೆ ಮಾಡಲು ಕೇಳಿದರೆ, ಇದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಕಾಮಗಾರಿಗಳು ಎಂಬ ಸಬೂಬು ಹೇಳಲಾಗುತ್ತಿದೆ. ಹಾಗಾದರೆ ಈಗಿನ ಸರ್ಕಾರ ಮಾಡುತ್ತಿರುವುದಾದರೂ ಏನು ಎಂದು ಮಂಜುನಾಥ್ ಪ್ರಶ್ನಿಸಿದ್ದಾರೆ. ಪ್ರಮುಖವಾಗಿ, ಕಾಮಗಾರಿಗಳ ನಿರಾಕ್ಷೇಪಣಾ ಪತ್ರ (ಎನ್ಒಸಿ) ನೀಡಲು ಸಚಿವರು ನೇರವಾಗಿ ಕಮಿಷನ್ ಕೇಳುತ್ತಿದ್ದಾರೆ. ಆಡಳಿತದಲ್ಲಿ ಬ್ರೋಕರ್ಗಳ ಹಾವಳಿ ವಿಪರೀತವಾಗಿದ್ದು, ಅವರು ಹೇಳಿದವರಿಗೆ ಮಾತ್ರ ಕೆಲಸ ಆಗುತ್ತಿದೆ. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರವಿಲ್ಲ ಎಂದು ಹೇಳುವುದು ಕೇವಲ ಬಾಯಿಮಾತಿನ ಘೋಷಣೆಯಾಗಿದೆಯೇ ಹೊರತು, ವಾಸ್ತವದಲ್ಲಿ ಗುತ್ತಿಗೆದಾರರ ರಕ್ತ ಹೀರುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೇ. 75ರಷ್ಟು ಶಾಸಕರಿಂದ ಹಸ್ತಕ್ಷೇಪ, ಹೆಚ್ಚಾದ ಕಮಿಷನ್ ಪ್ರಮಾಣ
ಹಿಂದಿನ ಸರ್ಕಾರದ ಅವಧಿಯಲ್ಲಿ ಕಮಿಷನ್ ಪ್ರಮಾಣ 40 ಪರ್ಸೆಂಟ್ ಇತ್ತು, ಆದರೆ ಈಗ ಆ ಪ್ರಮಾಣ ಅದಕ್ಕಿಂತಲೂ ಹೆಚ್ಚಾಗಿದೆ ಎಂಬುದು ಗುತ್ತಿಗೆದಾರರ ಅಳಲು. ರಾಜ್ಯದ ಶೇಕಡಾ 75ರಷ್ಟು ಶಾಸಕರು ಕಮಿಷನ್ ಕೇಳುತ್ತಿದ್ದಾರೆ. ಪ್ರತಿಯೊಂದು ಕಾಮಗಾರಿ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲೂ ಶಾಸಕರು ಮೂಗು ತೂರಿಸುತ್ತಿದ್ದು, ತಮ್ಮ ಹಿಂಬಾಲಕರಿಗೆ ಟೆಂಡರ್ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ. ಟೆಂಡರ್ ಮಂಜೂರಾದ ತಕ್ಷಣ ಶಾಸಕರ ಬಳಿ ಹೋಗಿ ಮಾತನಾಡಬೇಕು ಹಾಗೂ ಬಿಲ್ ಪಾವತಿಯಾದ ಕೂಡಲೇ ಮೊದಲೇ ನಿಗದಿಯಾದಂತೆ ಕಮಿಷನ್ ಹಣವನ್ನು ತಲುಪಿಸಬೇಕು ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ ಎಂದು ಅವರು ಆರೋಪಿಸಿದ್ದಾರೆ.
ದೇವರ ಮುಂದೆ ಪ್ರಮಾಣದ ಸವಾಲು
ಮುಖ್ಯಮಂತ್ರಿಗಳು ಹಾಗೂ ಡಿ.ಕೆ. ಶಿವಕುಮಾರ್ ಅವರು ಗುತ್ತಿಗೆದಾರರೊಂದಿಗೆ ಕೂಡಲೇ ಒಂದು ಉನ್ನತ ಮಟ್ಟದ ಸಭೆ ಆಯೋಜಿಸಬೇಕು. ಆ ಸಭೆಯಲ್ಲಿ ಯಾವೆಲ್ಲಾ ಸಚಿವರು ಮತ್ತು ಶಾಸಕರು ಲಂಚ ಕೇಳುತ್ತಿದ್ದಾರೆ ಎಂಬ ಸಂಪೂರ್ಣ ಪಟ್ಟಿಯನ್ನು ನಾವು ನೀಡುತ್ತೇವೆ ಎಂದು ಮಂಜುನಾಥ್ ಸವಾಲು ಹಾಕಿದ್ದಾರೆ. ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಲಾಗುತ್ತಿದ್ದು, ಈ ಅವಧಿಯೊಳಗೆ ಬಾಕಿ ಇರುವ ಬಿಲ್ಗಳನ್ನು ಬಿಡುಗಡೆ ಮಾಡದಿದ್ದರೆ, ಲಂಚ ಪಡೆದ ಸಚಿವರು ಹಾಗೂ ಶಾಸಕರ ಹೆಸರಿನ ಪಟ್ಟಿಯನ್ನು ಬಹಿರಂಗಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ತಾವು ಬಿಡುಗಡೆ ಮಾಡುವ ಪಟ್ಟಿಯಲ್ಲಿರುವ ನಾಯಕರು ಲಂಚ ಪಡೆದಿಲ್ಲ ಎಂದಾದರೆ, ಅವರು ತಮ್ಮ ಮನೆ ದೇವರ ಮುಂದೆ ಬಂದು ಪ್ರಮಾಣ ಮಾಡಲಿ, ನಾವೂ ಕೂಡ ಪ್ರಮಾಣ ಮಾಡಲು ಸಿದ್ಧರಿದ್ದೇವೆ ಎಂದು ಸವಾಲೆಸೆದಿರುವ ಅವರು, ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಗುತ್ತಿಗೆದಾರರು ಒಗ್ಗೂಡಿ ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದ್ದಾರೆ.

